ಕುಶಾಲನಗರ, ಏ. 29: ಯುವತಿಯೋರ್ವಳು ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಕುಶಾಲನಗರದ ಮಾದಾಪಟ್ಟಣ ಗ್ರಾಮದಲ್ಲಿ ತಾ. 27ರ ರಾತ್ರಿ ನಡೆದಿದೆ. ಮಾದಾಪಟ್ಟಣ ಗ್ರಾಮದ ಜಗದೀಶ್ ಎಂಬವರ ಪುತ್ರಿ ಪವಿತ್ರ(20) ಎಂಬಾಕೆ ಬಚ್ಚಲು ಮನೆ ಆವರಣದಲ್ಲಿ ಛಾವಣಿಗೆ ಸೀರೆಯಿಂದ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ತನ್ನ ಸಾವಿಗೆ ಯಾರೂ ಕಾರಣರಲ್ಲ ಎಂದು ಪತ್ರ ಬರೆದಿಟ್ಟಿರುವುದು ಪತ್ತೆಯಾಗಿದೆ. ಈ ಸಂಬಂಧ ಕುಶಾಲನಗರ ನಗರ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸೋಮವಾರಪೇಟೆ: ಜೀವನದಲ್ಲಿ ಜಿಗುಪ್ಸೆ ಹೊಂದಿದ ಅವಿವಾಹಿತ ಯುವಕನೋರ್ವ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸಮೀಪದ ಐಗೂರು ಗ್ರಾಮದಲ್ಲಿ ನಿನ್ನೆ ರಾತ್ರಿ ನಡೆದಿದ್ದು, ಇಂದು ಬೆಳಕಿಗೆ ಬಂದಿದೆ.

ಐಗೂರು ನಿವಾಸಿ ವೇಲಾಯುಧ ಮತ್ತು ಅಮ್ಮಣ್ಣಿ ಅವರುಗಳ ಪುತ್ರ ಸುನಿಲ್ (27) ಎಂಬಾತನೇ ನೇಣಿಗೆ ಶರಣಾದ ಯುವಕ. ಕಳೆದ 3 ವರ್ಷಗಳಿಂದ ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಸುನಿಲ್, ನಿನ್ನೆ ರಾತ್ರಿ ಐಗೂರಿನ ಮೇಘನ್ ಎಂಬವರ ಗದ್ದೆ ಬದಿಯಲ್ಲಿರುವ ಮರಕ್ಕೆ ಸೀರೆಯಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ನಿನ್ನೆ ರಾತ್ರಿ 11 ಗಂಟೆಯಾದರೂ ಮನೆಗೆ ಆಗಮಿಸದ ಸುನಿಲ್‍ನನ್ನು ಅಕ್ಕಪಕ್ಕ ಹುಡುಕಾಡಿದರೂ ಯಾವದೇ ಸುಳಿವು ಸಿಕ್ಕಿರಲಿಲ್ಲ. ಇಂದು ಬೆಳಿಗ್ಗೆ ಗದ್ದೆ ಬದಿಯ ಮರದಡಿ ಮೊಬೈಲ್ ರಿಂಗಣಿಸುತ್ತಿದ್ದ ಶಬ್ದಕೇಳಿ ಅತ್ತ ತೆರಳಿದ ಸ್ಥಳೀಯರಿಗೆ ನೇಣು ಬಿಗಿದುಕೊಂಡಿರುವ ಸ್ಥಿತಿಯಲ್ಲಿದ್ದ ಮೃತದೇಹ ಕಂಡುಬಂದಿದೆ.

ತಕ್ಷಣ ಸೋಮವಾರಪೇಟೆ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಠಾಣಾಧಿಕಾರಿ ಶಿವಶಂಕರ್ ಅವರು ತೆರಳಿ ಪರಿಶೀಲನೆ ನಡೆಸಿದ್ದಾರೆ. ಸೋಮವಾರಪೇಟೆಯ ಶವಾಗಾರದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಮೃತದೇಹವನ್ನು ವಾರಸುದಾರರಿಗೆ ಹಸ್ತಾಂತರಿಸಲಾಯಿತು.

ಐಗೂರಿನ ನವೀನ್ ಎಂಬವರ ಲೈನ್‍ಮನೆಯಲ್ಲಿ ವಾಸವಿದ್ದು, ಕೂಲಿ ಕೆಲಸ ಮಾಡಿಕೊಂಡಿದ್ದ ಸುನಿಲ್, ಕಳೆದ 3 ವರ್ಷಗಳಿಂದ ತೀವ್ರ ಹೊಟ್ಟೆನೋವಿನಿಂದ ಬಳಲುತ್ತಿದ್ದ. ಇದರಿಂದಾಗಿಯೇ ಜೀವನದಲ್ಲಿ ಜಿಗುಪ್ಸೆ ಹೊಂದಿ ನೇಣಿಗೆ ಶರಣಾಗಿದ್ದಾನೆ ಎಂದು ಮೃತನ ಸಹೋದರ ಸುರೇಶ್ ನೀಡಿದ ದೂರಿನನ್ವಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶನಿವಾರಸಂತೆ: ಕೊಡ್ಲಿಪೇಟೆ ಹೋಬಳಿಯ ತೋಟದ ಲೈನ್‍ಮನೆಯಲ್ಲಿ ವಾಸವಿದ್ದ ಖಾಯಿಲೆಯಿಂದ ಬಳಲುತ್ತಿದ್ದ ಅಪ್ರಾಪ್ತ ಬಾಲಕಿ ಅರ್ವಿನಾ ಖತುನ್ (15) ಕಾಫಿ ತೋಟದೊಳಗಡೆ ಪಾನುವಾಳ ಮರಕ್ಕೆ ತನ್ನ ವೇಲ್‍ನಿಂದ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ಬಗ್ಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.