ವೀರಾಜಪೇಟೆ, ಏ. 29: ವೀರಾಜಪೇಟೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಕೊರೊನಾ ವೈರಸ್ ಹರಡುವ ಮುಂಜಾಗರೂಕತಾ ಕ್ರಮವಾಗಿ ಕಳೆದ 25 ದಿನಗಳ ಹಿಂದೆ ಫೀವರ್ ಕ್ಲಿನಿಕ್ ಘಟಕವನ್ನು ಪ್ರತ್ಯೇಕವಾಗಿ ಪ್ರಾರಂಭಿಸಲಾಗಿದ್ದು, ಈ ಘಟಕದಲ್ಲಿ ಇಂದಿನ ತನಕ ಒಟ್ಟು 776 ಮಂದಿಯ ಜ್ವರ ತಪಾಸಣೆ ಮಾಡಿಸಿದ್ದು, ಈ ಪೈಕಿ 257 ಮಂದಿಗೆ ಸಾಧಾರಣ ಜ್ವರ ಇರುವುದು ಪತ್ತೆಯಾಗಿದ್ದು, ಎಲ್ಲರಿಗೂ ಚಿಕಿತ್ಸೆ ನೀಡಲಾಗಿದೆ. ಎಲ್ಲರೂ ಜ್ವರದಿಂದ ಗುಣಮುಖರಾಗಿದ್ದಾರೆ. ಇವರುಗಳಲ್ಲಿ ಯಾರಿಗೂ ಕೊರೊನಾ ವೈರಸ್‍ನ ಸೋಂಕು ಆಗಲಿ ಅದರ ಲಕ್ಷಣಗಳಾಗಲಿ ಕಂಡು ಬಂದಿಲ್ಲ ಎಂದು ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ವಿಶ್ವನಾಥ್ ಸಿಂಪಿ ತಿಳಿಸಿದರು.

ಕೊರೊನಾ ವೈರಸ್ ಹರಡುವ ಭೀತಿಯ ಹಿನ್ನೆಲೆ ಇಲ್ಲಿನ ಸಾರ್ವಜನಿಕ ಆಸ್ಪತ್ರೆಯಲ್ಲಿ 84 ದಿನಗಳ ಹಿಂದೆಯೇ ಪ್ರತ್ಯೇಕವಾಗಿ ಹತ್ತು ಬೆಡ್‍ಗಳ ಕೊರೊನಾ ವಾರ್ಡ್‍ನ್ನು ತೆರೆಯಲಾಗಿದ್ದು, ಸೋಂಕು ಪತ್ತೆ ಪರೀಕ್ಷೆಗೂ ವಾರ್ಡ್ ಪಕ್ಕದಲ್ಲಿಯೇ ಪ್ರತ್ಯೇಕ ಕೊಠಡಿಯನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ಅವರು ತಿಳಿಸಿದರು.

ಈಗಾಗಲೇ ಆಸ್ಪತ್ರೆಗೆ ವೀರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಅವರ ಸಲಹೆ ವೈದ್ಯರ ಬೇಡಿಕೆ ಮೇರೆಗೆ ಆರೋಗ್ಯ ಸೇವಾ ನಿರತರು ಬಳಸಲು 125 ಪಿ.ಪಿ.ಇ ಕಿಟ್‍ಗಳು (ರಕ್ಷಾ ಕವಚ) 4500 ಮಾಸ್ಕ್‍ಗಳು, ಸೇವಾ ನಿರತರ ವೈದ್ಯರುಗಳು, ದಾದಿಯರು ಬಳಸುವ ಎನ್.95ನ ಗುಣಮಟ್ಟದ 250 ಮಾಸ್ಕ್‍ಗಳು, ಶುಚಿತ್ವದ ಸೇವೆಗೆ ಅಗತ್ಯವಾದ 950 ಲೀಟರ್‍ಗಳಷ್ಟು ಸ್ಯಾನಿಟೈಸರ್ ದ್ರಾವಣ ಇತರ ಅಗತ್ಯ ಸಲಕರಣೆಗಳು ಪೂರೈಕೆಯಾಗಿದೆ. ಇತರ ರೋಗಗಳಿಗೂ ಆಸ್ಪತ್ರೆಯಲ್ಲಿ ಔಷಧಿಗಳು ಸಿದ್ಧ ದಾಸ್ತಾನಿನಲ್ಲಿದೆ ಎಂದು ಡಾ. ಸಿಂಪಿ ತಿಳಿಸಿದರು.