ಮಡಿಕೇರಿ, ಏ. 29: ಲಾಕ್ ಡೌನ್ ಸಂಬಂಧ ಕೇಂದ್ರ ಒಳಾಡಳಿತ ಸಚಿವಾಲಯ ಮತ್ತು ರಾಜ್ಯ ಸರ್ಕಾರಗಳು ಹೊರಡಿಸಿರುವ ಮಾರ್ಗಸೂಚಿಗಳಲ್ಲಿ ಕಾರ್ಯ ನಿರ್ವಹಿಸಲು ಅನುಮತಿಸಿರುವ ಕಂಪೆನಿಗಳು, ಇಲಾಖೆಗಳು, ಕಾರ್ಖಾನೆ ಮತ್ತು ಇತರ ಕಚೇರಿ ಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ನೌಕರರು ಹಾಲಿ ಕೊಡಗು ಜಿಲ್ಲೆಯಲ್ಲಿದ್ದು ಕರ್ತವ್ಯದ ಸ್ಥಳಗಳಿಗೆ (ಅಂದರೆ ರಾಜ್ಯದ ಇತರ ಜಿಲ್ಲೆಗಳಿಗೆ ಮತ್ತು ಹೊರ ರಾಜ್ಯದ ಸ್ಥಳಗಳಿಗೆ) ತೆರಳಲು ಅವಕಾಶ ಕೋರುತ್ತಿರು ವುದರಿಂದ ಕೆಲವು ಷರತ್ತುಗಳೊಂದಿಗೆ ಜಿಲ್ಲಾಧಿಕಾರಿಗಳು ಅನುಮತಿ ಕಲ್ಪಿಸಿದ್ದಾರೆ. ಕೊಡಗು ಜಿಲ್ಲೆಯಿಂದ ಇತರ ರಾಜ್ಯ, ಜಿಲ್ಲಾ ವ್ಯಾಪ್ತಿಯ ಸ್ಥಳಗಳಿಗೆ ತೆರಳುವವರು ಸಂಬಂಧಪಟ್ಟ ಇಲಾಖೆ/ಕಂಪೆನಿ/ಕಾರ್ಖಾನೆ ಮತ್ತು ಇತರ ಕಚೇರಿಗಳಿಂದ ಕರ್ತವ್ಯಕ್ಕೆ ಮರು ಹಾಜರಾಗುವ ಬಗ್ಗೆ ಹೊರಡಿಸಲಾದ ಪತ್ರ ಮತ್ತು ಕಚೇರಿಯಿಂದ ನೀಡಲಾದ ಛಾಯಾಚಿತ್ರವಿರುವ ಗುರುತಿನ ಚೀಟಿಯನ್ನು ಕೊಡಗು ಜಿಲ್ಲೆಯ ಚೆಕ್ ಪೆÇೀಸ್ಟ್‍ಗಳಲ್ಲಿ ಹಾಜರುಪಡಿಸಿದಲ್ಲಿ ಮಾತ್ರ ತೆರಳಲು ಅವಕಾಶ ಮಾಡಿ ಕೊಡಲಾಗುವುದು. ಇದಕ್ಕೆ ಪ್ರತ್ಯೇಕ ಪಾಸ್/ಅನುಮತಿ ಪತ್ರದ ಅಗತ್ಯ ಇರುವುದಿಲ್ಲ. ಮೇಲಿನಂತೆ ಕಲ್ಪಿಸಲಾದ ಅವಕಾಶ ಕೊಡಗು ಜಿಲ್ಲೆಯಿಂದ ಹೊರ ತೆರಳಲು ಮಾತ್ರ ಅನ್ವಯಿಸುತ್ತಿದ್ದು, ನೌಕರರು ಹೊರ ರಾಜ್ಯ/ಜಿಲ್ಲೆಗಳಿಗೆ ಪ್ರವೇಶಿಸಲು ಅವಕಾಶ ಇರುವ ಬಗ್ಗೆ ಪರಿಶೀಲಿಸಿಕೊಂಡು, ಪ್ರವೇಶಕ್ಕೆ ಪ್ರತ್ಯೇಕ ಅನುಮತಿ ಅವಶ್ಯಕತೆ ಇದ್ದಲ್ಲಿ ಸಂಬಂಧಪಟ್ಟ ರಾಜ್ಯ/ಜಿಲ್ಲೆಗಳ ಸಕ್ಷಮ ಪ್ರಾಧಿಕಾರಗಳಿಂದ ಅನುಮತಿ ಪತ್ರ/ನಿರಾಕ್ಷೇಪಣಾ ಪತ್ರ ಪಡೆದುಕೊಂಡು ತೆರಳುವುದು ಸಂಬಂಧಪಟ್ಟವರ ಜವಾಬ್ದಾರಿಯಾಗಿರುತ್ತದೆ. ಜಿಲ್ಲೆಯಿಂದ ಒಂದು ಬಾರಿ ತೆರಳಲು ಮಾತ್ರ ನೀಡಲಾಗಿದ್ದು, ಲಾಕ್ ಡೌನ್ ಅವಧಿ ಮುಕ್ತಾಯ ದವರೆಗೆ ಅಥವಾ ಮುಂದಿನ ಆದೇಶದವರೆಗೆ ಈ ಜಿಲ್ಲೆಗೆ ಹಿಂತಿರುಗಲು ಅವಕಾಶ ಇರುವುದಿಲ್ಲ. ಮತ್ತು ನೌಕರರೊಂದಿಗೆ ಕುಟುಂಬದ ಇತರ ಸದಸ್ಯರುಗಳು ಸಂಚರಿಸಲು ಅವಕಾಶ ಇರುವುದಿಲ್ಲ. ಕುಟುಂಬದ ಸದಸ್ಯರು ತೆರಳಬೇಕಾದಲ್ಲಿ ಸಂಬಂಧಪಟ್ಟ ರಾಜ್ಯ/ಜಿಲ್ಲೆಗಳನ್ನು ಪ್ರವೇಶಿಸಲು ಸಕ್ಷಮ ಪ್ರಾಧಿಕಾರಗಳಿಂದ ಅನುಮತಿ ಪತ್ರ/ನಿರಾಕ್ಷೇಪಣಾ ಪತ್ರ ಪಡೆಯುವುದು ಕಡ್ಡಾಯವಾಗಿರುತ್ತದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.