ಸಿದ್ದಾಪುರ, ಏ. 29: ಕಾಡಾನೆಗಳನ್ನು ಕಾಡಿಗೆ ಅಟ್ಟಲು ತೆರಳಿದ ಅರಣ್ಯ ಇಲಾಖೆ ಅಧಿಕಾರಿ ಗಳನ್ನು ಹಾಗೂ ಸಿಬ್ಬಂದಿಗಳನ್ನು ಕಾಡಾನೆಗಳು ಬೆನ್ನಟ್ಟಿದ ಪ್ರಸಂಗ ಬುಧವಾರದಂದು ನಡೆದಿದೆ. ವೀರಾಜಪೇಟೆ ಉಪವಲಯ ಅರಣ್ಯ ವ್ಯಾಪ್ತಿಗೆ ಒಳಪಡುವ ಹಂಚಿಕಾಡು ಗೌತಮ್ ಪೆÇನ್ನಪ್ಪ ಹಾಗೂ ಗೌರಿ ಕಾಡು ಬಿಬಿಟಿಸಿ ಎಮ್ಮೆ ಗುಂಡಿ, ಇಂಜಿಲಗೆರೆ, ತೂಪನಕೊಳ್ಳಿ ಕಾಫಿ ತೋಟಗಳಲ್ಲಿ ಬೀಡುಬಿಟ್ಟಿದ್ದ ಕಾಡಾನೆ ಗಳನ್ನು ಕಾಡಿಗಟ್ಟುವ ಕಾರ್ಯಾ ಚರಣೆಯನ್ನು ಕೈಗೊಳ್ಳಲಾಗಿತ್ತು.ಕಾಡಾನೆಗಳನ್ನು ಅರಣ್ಯಕ್ಕೆ ಓಡಿಸಲು ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಪಟಾಕಿ ಸಿಡಿಸಿ ಕಾರ್ಯಾಚರಣೆ ನಡೆಸಿದರು. ಪಟಾಕಿ ಶಬ್ಧಕ್ಕೆ ರೋಷ ಗೊಂಡ ಕಾಡಾನೆಗಳು ಅರಣ್ಯ ಇಲಾಖೆ ಅಧಿಕಾರಿಗಳನ್ನು ಹಾಗೂ ಸಿಬ್ಬಂದಿ ಗಳನ್ನು ಎರಡು ಬಾರಿ ಬೆನ್ನಟ್ಟಿ ದಾಳಿಗೆ ಮುಂದಾದವು. ಕಾಡಾನೆಗಳ ದಾಳಿ ಯಿಂದ ತಪ್ಪಿಸಿಕೊಳ್ಳಲು ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಎದ್ದು ಬಿದ್ದು ಓಡಿ ಹೋಗಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅರಣ್ಯ ಸಿಬ್ಬಂದಿಗಳು ಸಾಕಷ್ಟು ಬಾರಿ ಪ್ರಯತ್ನಪಟ್ಟು ಕಾರ್ಯಾಚರಣೆ ನಡೆಸಿದರೂ ಕಾಡಾನೆಗಳು ತೋಟಗಳನ್ನು ಬಿಟ್ಟು ತೆರಳಲು ಹಿಂದೇಟು ಹಾಕಿದ್ದೂ ಅಲ್ಲದೆ ಕಾಫಿ ತೋಟದೊಳಗೆ ಸುತ್ತಾಡುತ್ತಾ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿಗಳಿಗೆ ಸುಸ್ತು ಬರುವ ರೀತಿಯಲ್ಲಿ ಸುತ್ತಾಡಿಸಿದ ಘಟನೆ ನಡೆಯಿತು.
ಕೆಲವು ಕಾಡಾನೆಗಳು ಕಾಫಿ ತೋಟಗಳಲ್ಲಿ ಬೀಡುಬಿಟ್ಟು ಅಲ್ಲೇ ಮರಿ ಹಾಕಿವೆ. ಈ ಹಿನ್ನೆಲೆಯಲ್ಲಿ ತೋಟವನ್ನು ಬಿಟ್ಟು ತೆರಳಲು ಹಿಂದೇಟು ಹಾಕುತ್ತಿವೆ. ಅಲ್ಲದೆ ಇದೀಗ ಕಾಫಿ ತೋಟಗಳಲ್ಲಿ ಹಲಸಿನ ಕಾಯಿ ತಿನ್ನಲು ಬರುತ್ತಿದ್ದು ಇದರಿಂದಾಗಿ ಕಾಡಿನತ್ತ ತೆರಳುತ್ತಿಲ್ಲ. ಮಿತಿಮೀರಿದ ಕಾಡಾನೆಗಳ ಹಾವಳಿ ಯಿಂದಾಗಿ ಗ್ರಾಮಸ್ಥರು ಹಾಗೂ ಕಾರ್ಮಿಕರು ಭಯಭೀತರಾಗಿದ್ದಾರೆ.