ಮಡಿಕೇರಿ, ಏ. 29 : ಜಿಲ್ಲೆಯಲ್ಲಿ ಜೂನ್ ತಿಂಗಳಿಂದ ಮುಂಗಾರು ಮಳೆ ಆರಂಭವಾಗಲಿದ್ದು, ಈಗಿನಿಂದಲೇ ಅಗತ್ಯ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಸೂಚಿಸಿದ್ದಾರೆ. ನಗರದ ಜಿ.ಪಂ.ಸಭಾಂಗಣದಲ್ಲಿ ಮುಂಗಾರು ಮಳೆ ಪೂರ್ವ ತಯಾರಿ ಬಗ್ಗೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮುಂಗಾರು ಮಳೆ ಸಮೀಪಿಸುತ್ತಿದ್ದು, ಮಳೆಗಾಲದಲ್ಲಿ ವಿವಿಧ ಇಲಾಖೆಗೆ ಅವಶ್ಯವಿರುವ ಸುರಕ್ಷತಾ ಸಾಮಗ್ರಿಗಳು, ಲೈಫ್ ಜಾಕೆಟ್, ಗಂಬೂಟ್, ಬೋಟ್ ಹೀಗೆ ಅಗತ್ಯ ಸಲಕರಣೆಗಳಿಗೆ ಸಂಬಂಧಿಸಿದಂತೆ ಬೇಡಿಕೆಯ ಪಟ್ಟಿಯನ್ನು ಸಲ್ಲಿಸುವಂತೆ ಈ ಹಿಂದೆ ತಿಳಿಸಲಾಗಿತ್ತು, ಅದರಂತೆ ಅಗತ್ಯ ಸಲಕರಣೆಗಳನ್ನು ದಾಸ್ತಾನು ಮಾಡಿಕೊಂಡು ಮುಂಗಾರು ಮಳೆಗೆ ಸಜ್ಜುಗೊಳ್ಳಬೇಕಿದೆ ಎಂದು ಅವರು ತಿಳಿಸಿದರು. ಲೋಕೋಪಯೋಗಿ, ಪಂಚಾಯತ್ ರಾಜ್ ಎಂಜಿನಿಯರಿಂಗ್, ಪಿಎಂಜಿಎಸ್‍ವೈ ಹಾಗೂ ಇತರ ಆದ್ಯತೆ ಇಲಾಖೆಗಳು ಟಾಸ್ಕ್‍ಪೋರ್ಸ್‍ನ್ನು ರಚಿಸಿಕೊಂಡು ಮುಂಗಾರು ಮಳೆಯನ್ನು ಎದುರಿಸಲು ಸನ್ನದ್ಧವಾಗಬೇಕು ಎಂದು ಅವರು ಸೂಚಿಸಿದರು. ತಹಶೀಲ್ದಾರ್‍ಗಳು ತಮ್ಮ ಖಾತೆಯಲ್ಲಿ 1 ಕೋಟಿ ರೂ. ಮೊತ್ತವನ್ನು ಉಳಿಸಿಕೊಂಡು, ಮುಂಗಾರು ಮಳೆಗಾಲದಲ್ಲಿ ಅಗತ್ಯವಿರುವ ಸೇವೆಗಳಿಗೆ ವಿನಿಯೋಗಿಸಬೇಕು ಎಂದು ಜಿಲ್ಲಾಧಿಕಾರಿ ಅವರು ನಿರ್ದೇಶನ ನೀಡಿದರು.
ಮಳೆಗಾಲದಲ್ಲಿ ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಗ್ರಾ.ಪಂ ಅಧ್ಯಕ್ಷರು, ಉಪಾಧ್ಯಕ್ಷರು, ಆಶಾ ಕಾರ್ಯಕರ್ತೆಯರು ಹಾಗೂ ಸಂಬಂಧಪಟ್ಟ ಅಧಿಕಾರಿಗಳ ವಿಶೇಷ ಗ್ರಾಮ ಸಭೆಯನ್ನು ಸಾಮಾಜಿಕ ಅಂತರ ಕಾಯ್ದುಕೊಂಡು ನೋಡಲ್ ಅಧಿಕಾರಿಗಳು ನಡೆಸಬೇಕೆಂದು ತಾ.ಪಂ ಇ.ಒಗಳಿಗೆ ನಿರ್ದೇಶನ ನೀಡಿದರು.
ಸೂಕ್ಷ್ಮ ಪ್ರದೇಶಗಳನ್ನು ಗುರುತಿಸುವುದು ಪರಿಹಾರ ಕೇಂದ್ರಗಳನ್ನು ತೆರೆಯಲು ವಿದ್ಯಾರ್ಥಿ ನಿಲಯಗಳು, ರೆಸಾರ್ಟ್‍ಗಳು, ಸಮುದಾಯ (ಮೊದಲ ಪುಟದಿಂದ) ಭವನಗಳನ್ನು ಮುನ್ನೆಚ್ಚರಿಕೆ ದೃಷ್ಠಿಯಿಂದ ಈಗಲೇ ಗುರುತಿಸಿ ಅವಶ್ಯ ಬಂದಾಗ ಬಳಸಿಕೊಳ್ಳಲು ಕ್ರಮವಹಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮುಂಗಾರು ಮಳೆಗಾಲದಲ್ಲಿ ಆರೋಗ್ಯ ಇಲಾಖೆಯು ಅವಶ್ಯವಿರುವ ಔಷಧಿಗಳು, ತುರ್ತು ವೈದ್ಯಕೀಯ ಸೇವೆಗಳು, ತುರ್ತು ಚಿಕಿತ್ಸಾ ವಾರ್ಡ್‍ಗಳು ಕಾರ್ಯನಿರ್ವಹಿಸಲು ಬೇಕಾದಂತಹ ವ್ಯವಸ್ಥೆಗಳನ್ನು ಕಲ್ಪಿಸಲು ಕ್ರಮ ವಹಿಸುವಂತೆ ವೈದ್ಯಕೀಯ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಹೇಳಿದರು.
ಮಳೆಗಾಲದಲ್ಲಿ ಪಡಿತರ ವಿತರಣೆಗೆ ಯಾವುದೇ ತೊಂದರೆಯಾಗದಂತೆ ಗಮನಹರಿಸಬೇಕು. ಸೀಮೆಎಣ್ಣೆ ದಾಸ್ತಾನನ್ನು ಮಾಡಿಕೊಳ್ಳಬೇಕು. ಪಡಿತರ ಕಿಟ್‍ಗಳನ್ನು ವಿತರಿಸಲು ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪ ನಿರ್ದೇಶಕರಿಗೆ ನಿರ್ದೇಶನ ನೀಡಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಡಿ.ಪನ್ನೇಕರ್ ಅವರು ಮುಂಗಾರು ಮಳೆಗಾಲದಲ್ಲಿ ಇಲಾಖಾ ಅಧಿಕಾರಿಗಳು ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಕುರಿತು ಮಾಹಿತಿ ನೀಡಿದರು.
ಜಿ.ಪಂ. ಸಿಇಒ ಕೆ.ಲಕ್ಷ್ಮೀಪ್ರಿಯ ಮಾತನಾಡಿ ಹೆಚ್ಚಿನ ಮಳೆಯಾಗುವ ಗ್ರಾ.ಪಂ. ವ್ಯಾಪ್ತಿಯಲ್ಲಿ ಸುರಕ್ಷತೆಗೆ ಒತ್ತು ನೀಡುವತ್ತಾ ಗಮನಹರಿಸುವಂತೆ ಸೂಚಿಸಲಾಗಿದೆ ಎಂದರು.
ಹೆಚ್ಚುವರಿ ಜಿಲ್ಲಾಧಿಕಾರಿ ಡಾ. ಸ್ನೇಹ, ಉಪ ವಿಭಾಗಾಧಿಕಾರಿ ಟಿ. ಜವರೇಗೌಡ, ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ಪ್ರಭಾಕರನ್, ಶಿವಶಂಕರ್, ಜಿ.ಪಂ.ಯೋಜನಾ ನಿರ್ದೇಶಕ ಗುಡೂರು ಭೀಮಸೇನ, ಜಿಲ್ಲಾ ಮಟ್ಟದ ಅಧಿಕಾರಿಗಳು, ತಹಶೀಲ್ದಾರ್‍ರರು, ತಾ.ಪಂ. ಇಒಗಳು ಇತರರು ಇದ್ದರು.