ಬಲಗೈಯಲ್ಲಿ ಕೊಟ್ಟದ್ದು ಎಡಗೈ ಗೂ ಗೊತ್ತಾಗಬಾರದು ಎಂದು ಕೆಲವರು ಜನಸೇವೆಯನ್ನು ಮಾಡುತ್ತಾರೆ. ಇನ್ನು ಕೆಲವರು ಸುದ್ದಿ ಮಾಧ್ಯಮಗಳಲ್ಲಿ ಯಾವ ಕಾರಣಕ್ಕೂ ನಮ್ಮ ಸೇವೆ ಬರಬಾರದು ಎಂದು ಭಾವಿಸಿರುತ್ತಾರೆ. ಇನ್ನು ಕೆಲವರಿರುತ್ತಾರೆ ಕೇವಲ ತೋರಿಕೆಗೆ ಮತ್ತು ಪ್ರಚಾರಕ್ಕೆ ಮಾತ್ರ ಸೇವೆಯಲ್ಲಿರುತ್ತಾರೆ. ಇದನ್ನು ಕಂಡೇ ಸುದ್ದಿಗಾಗಿ ಸೇವೆ ಮಾಡಬೇಡ. ಸೇವೆ ಮಾಡಿ ಸುದ್ದಿಯಾಗಬೇಡ. ಸದ್ದಿಲ್ಲದೇ ಸೇವೆ ಮಾಡೆಂದು ನಡೆದಾಡುವ ದೇವರು ಶ್ರೀ ಶಿವಕುಮಾರ ಸ್ವಾಮೀಜಿಗಳು ಹೇಳಿದ್ದರು. ಒಬ್ಬರು ಒಂದು ದೇವಾಲಯಕ್ಕೆ ಟ್ಯೂಬ್ ಲೈಟ್ ಒಂದನ್ನು ಉಡುಗೊರೆ ಯಾಗಿ ಕೊಟ್ಟಿದ್ದರಂತೆ. ಆದರೆ ಅದರಲ್ಲಿ ರಾತ್ರಿ ವೇಳೆ ಬೆಳಕೇ ಬರುತ್ತಿರಲಿಲ್ಲ ವಂತೆ. ಏಕೆಂದರೆ, ಆ ಟ್ಯೂಬ್ ಲೈಟ್ ಸುತ್ತಲೂ ಉಡುಗೊರೆಯಾಗಿ ಕೊಟ್ಟವರೆಲ್ಲರ ಹೆಸರು, ಕುಲ, ಗೋತ್ರ ಎಲ್ಲವನ್ನೂ ಬರೆದು ಬಿಟ್ಟಿದ್ದರಂತೆ. ಆದರೆ ಕಳೆದ ಹಲವು ವರ್ಷಗಳಿಂದ ಸೇವೆಯನ್ನೇ ಸಾಧನೆಯಾಗಿಸಿಕೊಂಡಿರುವ, ಪ್ರಚಾರವನ್ನು ಎಲ್ಲಿಯೂ ಬಯಸದೇ ಪ್ರಾಮಾಣಿಕವಾದ ಸೇವೆಯಲ್ಲಿ ತೊಡಗಿಸಿ ಕೊಂಡಿರುವ ದಂಪತಿಗಳು ನಮ್ಮೊಳಗೆ ಇರುವುದು ನಿಜಕ್ಕೂ ಹೆಮ್ಮೆಯ ಸಂಗತಿ. ಆ ಕುಟುಂಬ ಬೇರ್ಯಾವುದು ಅಲ್ಲ. ಕುಶಾಲನಗರ ಪ.ಪಂ.ಸದಸ್ಯೆ ರೂಪ ಉಮಾಶಂಕರ್ ಹಾಗೂ ಸಮಾಜ ಸೇವಕ ಉಮಾಶಂಕರ್. ಇವರು ಕೂಡ್ಲೂರಿ ನಲ್ಲಿ ನೆಲೆಸಿದ್ದು, ಕುಶಾಲನಗರ ಭಾಗದ ಯಾವುದೇ ಸಾಮಾಜಿಕ ಸೇವೆಯಲ್ಲಿ ಮುಂಚೂಣಿಯಲ್ಲಿ ಇರುತ್ತಾರೆ. ಆದರೆ ಪ್ರಚಾರದಿಂದ ದೂರವೇ ಸರಿಯುತ್ತಾರೆ. ಕೊರೊನಾ ಎಂಬ ಮಾರಿಯಿಂದಾಗಿ ದೇಶವೇ ಲಾಕ್‍ಡೌನ್ ಆದಾಗಿನಿಂದ ಜನರೆಲ್ಲರೂ ಮನೆಯಲ್ಲಿದ್ದರೂ ಕೂಡ ಯಾವುದೇ ರೋಗರುಜಿನಗಳಿಗೆ ಅಂಜದೇ, ತಮ್ಮನ್ನು ತಾವು ಮುಂಜಾನೆಯಿಂದ ಮುಸ್ಸಂಜೆಯವರೆಗೂ ರಸ್ತೆ, ಚರಂಡಿ, ಬೀದಿಗಳ ಸ್ವಚ್ಛತೆಗೆ ಮೈಯೊಡ್ಡಿ ನಿಲ್ಲುವ ಪೌರ ಕಾರ್ಮಿಕರೆಂಬ ಕಾಯಕ ಯೋಗಿಗಳನ್ನು ಸಾಮೂಹಿಕ ವಾಗಿ ತಮ್ಮ ಮನೆಗೆ ಬರಮಾಡಿಕೊಂಡ ಈ ದಂಪತಿಗಳು ತಮ್ಮ ಕೈಯಾರೆ ಬಡಿಸಿ ಈ ಯೋಗಿಗಳಿಗೆ ಆತಿಥ್ಯ ಗೈದಿದ್ದಾರೆ. ಸಾಮಾಜಿಕ ಅಂತರವನ್ನು ಕಾಯ್ದುಕೊಂಡೇ ಈ ಯೋಗಿಗಳನ್ನು ಸತ್ಕರಿಸಿದ ರೀತಿಯನ್ನು ಕಂಡ ಕಾಯಕ ಯೋಗಿಗಳಲ್ಲಿ ಭಾವುಕತೆ ಮನೆ ಮಾಡಿತ್ತು. ಹಾಗೆಯೇ ಬಿಸಿಲು, ಛಳಿ ಎನ್ನದೇ ಹೆದ್ದಾರಿಗಳು ಹಾಗೂ ಗಡಿಗಳಲ್ಲಿ ಕುಶಾಲನಗರ ಭಾಗದಲ್ಲಿ ಕರ್ತವ್ಯದಲ್ಲಿರುವ ಪೆÇಲೀಸರಿಗೆ ಬೆಳಿಗ್ಗೆ-ಸಂಜೆ ಕಾಫಿ-ಚಹಾ, ಮಧ್ಯಾಹ್ನದ ಬಿಸಿಲನ ವೇಳೆ ತಂಪು ಪಾನೀಯ ವಾದ ಮಜ್ಜಿಗೆಯನ್ನು ವಿತರಿಸುತ್ತಿದ್ದಾರೆ. ಹಾಗೆಯೇ ಆರೋಗ್ಯ ಸೇನಾನಿಗಳನ್ನು ಕೂಡ ಆಹ್ವಾನಿಸಿ ಆತಿಥ್ಯ ಮಾಡುವ ಹಂಬಲದಲ್ಲಿರುವ ಈ ದಂಪತಿಗಳ ಸೇವೆ ನಿಜಕ್ಕೂ ಮಾದರಿ.