ಗೋಣಿಕೊಪ್ಪ ವರದಿ, ಏ. 30 : ಗಾಯಗೊಂಡು ನಿತ್ರಾಣದಲ್ಲಿದ್ದ ಕಾಡು ಕೋಣ ರಕ್ಷಣೆಗೆ ನಡೆದ ಕಾರ್ಯಾಚರಣೆ ಸಂದರ್ಭ ಕಾಡು ಕೋಣ ಸಾವಿಗೀಡಾದ ಘಟನೆ ಸಂಭವಿಸಿದೆ. ಕೋಣಕ್ಕೆ ಸುಮಾರು 5 ವರ್ಷವಿರಬಹುದು ಎಂದು ಅಂದಾಜಿಸಲಾಗಿದೆ.ವೀರಾಜಪೇಟೆ ತಾಲೂಕಿನ ಕೆ. ಬಾಡಗ ಗ್ರಾಮದ ಪೇರ್ಮಾಡು ಶ್ರೀ ಈಶ್ವರ ದೇವಸ್ಥಾನ ಸಮೀಪದ ಪೆಮ್ಮಣಮಾಡ ನವೀನ್ ಎಂಬವರ ತೋಟದಲ್ಲಿ ಸೇರಿಕೊಂಡಿದ್ದ ಕಾಡು ಕೋಣವನ್ನು ರಕ್ಷಿಸಿ ಮೈಸೂರು ಮೃಗಾಲಯಕ್ಕೆ ಕೊಂಡೊಯ್ಯಲು ಗುರುವಾರ ಕಾರ್ಯಾಚರಣೆ ನಡೆಸಲಾಯಿತು. ಬೆಳಗ್ಗೆಯಿಂದ ನಡೆದ ಕಾರ್ಯಾಚರಣೆಯಲ್ಲಿ ಅರವಳಿಕೆ ನೀಡಿ ಹಿಡಿಯಲು ಅರಣ್ಯ ಇಲಾಖೆ ಸಿಬ್ಬಂದಿಗಳು ಮುಂದಾದರು. ಈ ಸಂದರ್ಭ ಅರಿವಳಿಕೆ ನೀಡಿದ ನಂತರ ಕೋಣ ಗುಂಡಿಗೆ ಬಿದ್ದು ಕಾರ್ಯಾಚರಣೆಗೆ ತೊಡಕುಂಟಾಯಿತು. ನಂತರ ಕ್ರೇನ್ ಮೂಲಕ ಮೇಲೆತ್ತುವ ಪ್ರಯತ್ನ ನಡೆಸಿತ್ತಾದರೂ ಕೊನೆಯ ಕ್ಷಣದಲ್ಲಿ ಕೋಣ ಸಾವಿಗೀಡಾಯಿತು. ಕೋಣದ ಕಾಲು ಭಾಗದಲ್ಲಿ ಗಾಯವಾಗಿದ್ದು, ಕೊಳೆತು ದುರ್ವಾಸನೆ ಬೀರುತ್ತಿತ್ತು. ಮೈಸೂರು ಮೃಗಾಲಯ ಪಶುವೈದ್ಯ ಡಾ. ಮದನ್ ಹಾಗೂ ತಂಡ ಪಾಲ್ಗೊಂಡಿದ್ದರು. ಕೋಣವನ್ನು ಮೃಗಾಲಯ ಪುನಶ್ಚೇತನ ಕೇಂದ್ರಕ್ಕೆ ಕೊಂಡೊಯ್ದು ಚಿಕಿತ್ಸೆ ನೀಡಬೇಕೆಂಬ ನಿರೀಕ್ಷೆ ಹುಸಿಯಾಯಿತು. ಗಾಯಕ್ಕೆ ಕಾರಣ ಇನ್ನೂ ತಿಳಿದು ಬಂದಿಲ್ಲ. ನಾಗರಹೊಳೆ ಉದ್ಯಾನವನ ನಿರ್ದೇಶಕ ಮಹೇಶ್ ಕುಮಾರ್ ಇದ್ದರು.