ಪ್ರವಾಸಿಗರು ತವರಿಗೆ ತೆರಳಲು ಅನುಮತಿ
ನವದೆಹಲಿ, ಏ. 29: ಮಹತ್ವದ ಬೆಳವಣಿಗೆಯಲ್ಲಿ ಕೊರೊನಾ ವೈರಸ್ ಲಾಕ್‍ಡೌನ್ ಹೇರಿರುವ ಕೇಂದ್ರ ಸರ್ಕಾರ ಮತ್ತೊಂದು ವಿನಾಯಿತಿ ನೀಡಿದ್ದು, ವಿವಿಧ ರಾಜ್ಯಗಳಲ್ಲಿ ಉಳಿದುಕೊಂಡಿರುವ ವಿದ್ಯಾರ್ಥಿಗಳು, ವಲಸೆ ಕಾರ್ಮಿಕರು, ಪ್ರವಾಸಿಗರು ತವರಿಗೆ ತೆರಳಲು ಅನುಮತಿ ನೀಡಿದೆ. ಸಂಕಷ್ಟದಲ್ಲಿರುವ ವಲಸೆ ಕಾರ್ಮಿಕರು, ವಿದ್ಯಾರ್ಥಿಗಳ ಸಂಚಾರಕ್ಕೆ ಗೃಹ ಸಚಿವಾಲಯ ಅನುಮತಿ ನೀಡಿದ್ದು, ಈ ಬಗ್ಗೆ ಇಂದು ನಿಯಮಾವಳಿಗಳನ್ನು ಬಿಡುಗಡೆ ಮಾಡಿದೆ. ಲಾಕ್‍ಡೌನ್ ಪರಿಣಾಮವಾಗಿ ದೇಶದ ವಿವಿಧ ಭಾಗಗಳಲ್ಲಿ ಸಂಕಷ್ಟಕ್ಕೆ ಸಿಲುಕಿರುವ ವಲಸೆ ಕಾರ್ಮಿಕರು ಹಾಗೂ ವಿದ್ಯಾರ್ಥಿಗಳು ತಮ್ಮ ಮನೆಗಳನ್ನು ತಲುಪಲು ವಿಶೇಷ ಸಾರಿಗೆ ವ್ಯವಸ್ಥೆ ಮಾಡುವಂತೆ ಕೇಂದ್ರ ಗೃಹ ಇಲಾಖೆ ಎಲ್ಲಾ ರಾಜ್ಯ ಸರ್ಕಾರಗಳಿಗೆ ಸೂಚನೆ ನೀಡಿದೆ. ಒಂದು ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶದಿಂದ ಮತ್ತೊಂದು ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶಕ್ಕೆ ಹೋಗಲು ಬಯಸುವ ನಿರ್ದಿಷ್ಟ ವಲಸೆ ಕಾರ್ಮಿಕರು ಹಾಗೂ ವಿದ್ಯಾರ್ಥಿಗಳ ಗುಂಪನ್ನು ಆಯಾ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಗಳು ಪರಸ್ಪರ ಸಹಕಾರದ ಮೂಲಕ ಸುರಕ್ಷಿತವಾಗಿ ಮನೆ ತಲುಪಿಸುವ ಕಾರ್ಯ ಮಾಡಬೇಕು ಮತ್ತು ಸಂಕಷ್ಟದಲ್ಲಿ ಸಿಲುಕಿರುವ ವಲಸೆ ಕಾರ್ಮಿಕರು ಹಾಗೂ ವಿದ್ಯಾರ್ಥಿಗಳಿಗೆ ವಿಶೇಷ ಬಸ್ ವ್ಯವಸ್ಥೆ ಮಾಡುವ ಮೂಲಕ ಅವರನ್ನು ಅವರ ಮಾತೃ ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶಗಳಿಗೆ ಕಳುಹಿಸಿಕೊಡುವ ವ್ಯವಸ್ಥೆಯನ್ನು ಮಾಡಲು ವಿಶೇಷ ನೋಡಲ್ ಅಧಿಕಾರಿಗಳನ್ನು ನೇಮಿಸುವಂತೆಯೂ ಗೃಹ ಸಚಿವಾಲಯ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ನೌಕರರ ವೇತನ ಪಾವತಿ ವಿಳಂಬ
ಬೆಂಗಳೂರು, ಏ. 29: ಈಗಾಗಲೇ ಲಾಕ್‍ಡೌನ್ ಹಿನ್ನೆಲೆ ರಾಜ್ಯ ಸರ್ಕಾರದ ಖಜಾನೆ ಖಾಲಿಯಾಗಿದ್ದು, ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಹಿನ್ನೆಲೆ ಸರ್ಕಾರಿ ನೌಕರರಲ್ಲಿ ತಮ್ಮ ವೇತನ ಪಾವತಿ ವಿಳಂಬವಾಗುವ ಆತಂಕ ಎದುರಾಗಿದೆ. ಕೊರೊನಾ ಲಾಕ್‍ಡೌನ್‍ನಿಂದ ಸರ್ಕಾರದ ಖಜಾನೆ ಬಹುತೇಕ ಖಾಲಿಯಾಗಿದ್ದು, ಬೊಕ್ಕಸ ತುಂಬಿಸುವ ಎಲ್ಲಾ ತೆರಿಗೆ ಮೂಲ ಬರಿದಾಗಿದೆ. ಹೀಗಾಗಿ ಸರ್ಕಾರದ ಆದಾಯಕ್ಕೆ ಕೊಡಲಿ ಏಟು ಬಿದ್ದಿದ್ದು, ಇರುವ ಸಂಪನ್ಮೂಲವನ್ನು ಆದ್ಯತೆ ಮೇರೆಗೆ ಕೊರೊನಾ ನಿಯಂತ್ರಣಕ್ಕೆ ಬಳಸಲಾಗುತ್ತಿದೆ. ಹೀಗಾಗಿ ಸರ್ಕಾರಕ್ಕೆ ಆರ್ಥಿಕ ಸಂಕಷ್ಟದ ತಲೆನೋವು ದೊಡ್ಡ ಮಟ್ಟಿಗೆ ಕಾಡುತ್ತಿದ್ದು, ಈ ಆರ್ಥಿಕ ಸಂಕಷ್ಟದ ಹಿನ್ನೆಲೆ ಸರ್ಕಾರಿ ನೌಕರರ ವೇತನ ಪಾವತಿ ವಿಳಂಬವಾಗುತ್ತಾ ಎಂಬ ಆತಂಕ ನೌಕರರನ್ನು ಕಾಡುತ್ತಿದೆ. ರಾಜ್ಯದಲ್ಲಿ ಸುಮಾರು 5,12,521 ಸರ್ಕಾರಿ ನೌಕರರು ಇದ್ದು, 2020-21ರ ಹಣಕಾಸು ವರ್ಷದಲ್ಲಿ ಸುಮಾರು 33,000 ಕೋಟಿ ರೂಪಾಯಿಯಷ್ಟು ಮೊತ್ತ ಸರ್ಕಾರಿ ನೌಕರರಿಗೆ ವೇತನ ನೀಡಲು ಅಗತ್ಯ ಇದೆ ಎಂದು ಅಂದಾಜಿಸಲಾಗಿದೆ.
ಅಬಕಾರಿಗೆ ರೂ. 2,050 ಕೋಟಿ ನಷ್ಟ
ಬೆಂಗಳೂರು, ಏ. 29: ಲಾಕ್‍ಡೌನ್‍ನಿಂದಾಗಿ ದೇಶದ ಆರ್ಥಿಕತೆ ಪಾತಾಳಕ್ಕೆ ಕುಸಿದಿದೆ. ಈ ಮಧ್ಯೆ ಮಾ. 24 ಲಾಕ್‍ಡೌನ್ ಮಾಡಲಾಗಿದ್ದು, ಮೇ 3 ರವರೆಗೆ ಮುಂದುವರೆಯಲಿದ್ದು ಕರ್ನಾಟಕದ ಮದ್ಯದಂಗಡಿಗಳನ್ನು ಬಂದ್ ಮಾಡಿರುವುದರಿಂದ ಈ ಅವಧಿಯಲ್ಲಿ ರಾಜ್ಯ ಅಬಕಾರಿ ಇಲಾಖೆಗೆ ಅಂದಾಜು ರೂ. 2,050 ಕೋಟಿ ನಷ್ಟವಾಗಿದೆ. ದಿನವೊಂದಕ್ಕೆ ಸುಮಾರು 50 ಕೋಟಿ ರೂಪಾಯಿ ನಷ್ಟವಾಗುತ್ತಿದ್ದು ಇನ್ನು 41 ದಿನಕ್ಕೆ ಹೋಲಿಸಿದರೆ ಸರಾಸರಿ ಅಂದಾಜು 2,050 ಕೋಟಿ ರೂಪಾಯಿ ನಷ್ಟವಾಗಿದೆ ಎಂದು ಹಿರಿಯ ಅಬಕಾರಿ ಅಧಿಕಾರಿ ಮಾಹಿತಿ ನೀಡಿದ್ದಾರೆ. ಮೇ 3 ರ ನಂತರ ಮದ್ಯದಂಗಡಿಗಳನ್ನು ತೆರೆಯಲಾಗುತ್ತದೆಯೋ ಎಂಬ ಬಗ್ಗೆ ಇನ್ನು ಸ್ಪಷ್ಟತೆ ಇಲ್ಲ. ಲಾಕ್‍ಡೌನ್ ತೆರೆದ ನಂತರ ಮದ್ಯದಂಗಡಿ ತೆರೆಯುವ ಸಾಧ್ಯತೆಯಿದೆ. ಇನ್ನು ರಾಜ್ಯ ಸರ್ಕಾರ ಈ ಬಗ್ಗೆ ನಿರ್ಧಾರ ಕೈಗೊಳ್ಳಬೇಕಿದೆ ಎಂದು ಹೇಳಿದ್ದಾರೆ.
ಭಾರತೀಯರನ್ನು ಕರೆತರಲು ಸೇನೆ ಸಿದ್ಧ
ನವದೆಹಲಿ, ಏ. 29: ಗಲ್ಫ್ ರಾಷ್ಟ್ರಗಳಲ್ಲಿ ಸಿಲುಕಿಕೊಂಡಿರುವ ಭಾರತೀಯರನ್ನು ವಾಪಸ್ ಕರೆತರಲು ನೌಕಾಪಡೆ, ವಾಯುಪಡೆ ಸಜ್ಜುಗೊಂಡಿದೆ. ಕೊರೊನಾ ವೈರಸ್ ಹಿನ್ನೆಲೆ ಭಾರತಕ್ಕೆ ಬರಲು ಸಾಧ್ಯವಾಗದೇ ಹಲವು ಮಂದಿ ಗಲ್ಫ್ ರಾಷ್ಟ್ರಗಳಲ್ಲೇ ಸಿಲುಕಿಕೊಂಡಿದ್ದಾರೆ. ಮೇ 3 ವರೆಗೆ ಲಾಕ್‍ಡೌನ್ ಘೋಷಣೆ ಮಾಡಿರುವ ಭಾರತ ಸರ್ಕಾರ ದೇಶದ ಒಳಗೆ ಹಾಗೂ ವಿದೇಶಗಳ ಸಂಚಾರಕ್ಕೆ ನಿರ್ಬಂಧ ವಿಧಿಸಿದೆ. ಈ ನಡುವೆ ಗಲ್ಫ್ ರಾಷ್ಟ್ರಗಳಲ್ಲಿ ಸಿಲುಕಿರುವ ಭಾರತೀಯರನ್ನು ವಾಪಸ್ ಕರೆತರಲು ರಕ್ಷಣಾ ಪಡೆಗಳ ಮುಖ್ಯಸ್ಥ, ಸೇನೆ, ವಾಯುಪಡೆ, ನೌಕಾಪಡೆಗಳ ಮುಖ್ಯಸ್ಥರೊಂದಿಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸಭೆಯಲ್ಲಿ ಸೂಚನೆ ನೀಡಲಾಗಿದೆ. ನೌಕಾಪಡೆ ಹಾಗೂ ವಾಯುಪಡೆ ಅಧಿಕಾರಿಗಳಿಗೆ ಅಗತ್ಯವಿರುವ ಉಪಕರಣಗಳೊಂದಿಗೆ ಸಿದ್ಧವಾಗಿರುವುದಕ್ಕೆ ಸೂಚನೆ ನೀಡಲಾಗಿದೆ. ಈ ಬಗ್ಗೆ ವಿದೇಶಾಂಗ ಸಚಿವ ಎಸ್ ಜೈಶಂಕರ್ ಮಾಹಿತಿ ನೀಡಿದ್ದು, ಗಲ್ಫ್ ರಾಷ್ಟ್ರಗಳಲ್ಲಿರುವ ಭಾರತೀಯ ಅಧಿಕಾರಿಗಳಿಗೆ, ವಾಪಸ್ಸಾಗಲು ಬಯಸುತ್ತಿರುವ ಅಲ್ಲಿನ ಭಾರತೀಯರ ನೋಂದಣಿ ಮಾಡಿಕೊಳ್ಳುವಂತೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಸೋಂಕು ನಿಯಂತ್ರಣಕ್ಕೆ ರೂ. 86.25 ಕೋಟಿ
ಬೆಂಗಳೂರು, ಏ. 29: ಕೊರೊನಾ ನಿಯಂತ್ರಿಸಲು ರಾಜ್ಯ ಸರ್ಕಾರ, ರಾಜ್ಯ ವಿಪತ್ತು ನಿರ್ವಹಣಾ ನಿಧಿಯಿಂದ 86.25 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿದೆ. ಕೊರೊನಾ ವೈರಸ್ ಹರಡುವಿಕೆಯನ್ನು ಕೇಂದ್ರ ಸರ್ಕಾರ ರಾಷ್ಟ್ರೀಯ ವಿಪತ್ತು ಎಂದು ಘೋಷಣೆ ಮಾಡಿರುವುದರಿಂದ ಕೊರೊನಾ ನಿಯಂತ್ರಿಸಲು ಕೇಂದ್ರ ಸರ್ಕಾರ ನೀಡಿರುವ ಮಾರ್ಗಸೂಚಿ ಅನ್ವಯ ಎಲ್ಲ ಜಿಲ್ಲೆಗಳಿಗೂ ವಿಪತ್ತು ನಿರ್ವಹಣಾ ನಿಧಿಯಿಂದ ಹಣ ಬಿಡುಗಡೆ ಮಾಡಲಾಗಿದೆ. ಈ ಹಣವನ್ನು ಕೊರೊನಾ ನಿಯಂತ್ರಣಕ್ಕೆ ಮಾತ್ರ ಬಳಸುವಂತೆ ಸೂಚಿಸಲಾಗಿದ್ದು, ಹಣ ಬಳಕೆಯ ಕುರಿತು ಸರ್ಕಾರಕ್ಕೆ ಪ್ರಮಾಣ ಪತ್ರ ಸಲ್ಲಿಸಬೇಕು. ಅವ್ಯವಹಾರವಾದರೆ ಜಿಲ್ಲಾಧಿಕಾರಿಗಳನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಬಾಲ್ಯ ವಿವಾಹ : ಬಾಲಕಿ ಆತ್ಮಹತ್ಯೆ
ತುಮಕೂರು, ಏ. 29: ತನ್ನನ್ನು ಒತ್ತಾಯಪೂರ್ವಕವಾಗಿ ಬಾಲ್ಯವಿವಾಹಕ್ಕೆ ಗುರಿಪಡಿಸಿದ್ದರಿಂದ ಬೇಸತ್ತು 16 ವರ್ಷದ ಯುವತಿ ಆತ್ಮಹತ್ಯೆಗೆ ಶರಣಾಗಿದ್ದಾಳೆ. ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ರಂಗನಾಥಪುರ ಗ್ರಾಮದಲ್ಲಿ ಈ ಘಟನೆ ವರದಿಯಾಗಿದ್ದು, ತನ್ನ ಇಚ್ಛೆಗೆ ವಿರುದ್ಧವಾಗಿ ನಡೆದ ಬಾಲ್ಯವಿವಾಹವನ್ನು ವಿರೋಧಿಸಿ 16 ರ ಬಾಲಕಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ಪ್ರಕರಣವನ್ನು ಮುಚ್ಚಿಹಾಕುವುದಕ್ಕೆ ಸ್ವತಃ ಶಿರಾ ಪೊಲೀಸರೇ ಯತ್ನಿಸಿದ್ದರಾದರೂ ನಂತರದ ಬೆಳವಣಿಗೆಯಲ್ಲಿ ವಧು-ವರರಿಬ್ಬರ ಪೋಷಕರನ್ನು (4 ಆರೋಪಿಗಳು) ಬಂಧಿಸಿದ್ದಾರೆ. ಪ್ರಕರಣದ ಆರೋಪಿ ವರ ತಪ್ಪಿಸಿಕೊಂಡಿದ್ದಾನೆ, ಮೃತ ಬಾಲಕಿಯನ್ನು ಸುಧಾ ಎಂದು ಗುರುತಿಸಲಾಗಿದ್ದು, ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿದ್ದರು. ಈಕೆಯ ಬಾಲ್ಯವಿವಾಹವನ್ನು ಸಂಬಂಧಿಕರಾಗಿದ್ದ ಮಧು ಎಂಬಾತನೊಂದಿಗೆ ಮಾಡಲಾಗಿತ್ತು. ಇದನ್ನು ವಿರೋಧಿಸಿ ಯುವತಿ ನೇಣು ಬಿಗಿದುಕೊಂಡಿದ್ದಳು. ತಕ್ಷಣವೇ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಆಕೆ ಬದುಕಿ ಉಳಿಯಲಿಲ್ಲ.
ಖ್ಯಾತ ನಟ ಇರ್ಫಾನ್ ಖಾನ್ ಇನ್ನಿಲ್ಲ
ನವದೆಹಲಿ, ಏ. 29: ಭಾರತೀಯ ಚಿತ್ರರಂಗದ ಖ್ಯಾತ ನಟ ಇರ್ಫಾನ್ ಖಾನ್ ಅವರು ತಾ. 29, 2020 ರಂದು ಬೆಳಿಗ್ಗೆ ನಿಧನರಾಗಿದ್ದು ಮುಂಬೈನ ಅಂಧೇರಿಯಲ್ಲಿರುವ ವರ್ಸೋವಾ ಕಬ್ರಾಸ್ತಾನ್‍ನಲ್ಲಿ ಮಧ್ಯಾಹ್ನ 3 ಗಂಟೆಗೆ ಅವರ ಕುಟುಂಬ, ನಿಕಟವರ್ತಿಗಳ ಸಮ್ಮುಖದಲ್ಲಿ ಅಂತ್ಯ ಸಂಸ್ಕಾರ ನೆರವೇರಿದೆ. ದೇಶಾದ್ಯಂತ ಕೊರೊನಾ ಲಾಕ್‍ಡೌನ್ ಇದ್ದ ಕಾರಣ ಕುಟುಂಬ ಸದಸ್ಯರು ಸೇರಿದಂತೆ ಕೇವಲ 20 ಮಂದಿಗೆ ಮಾತ್ರವೇ ಅಂತಿಮ ವಿಧಿಗಳಿಗೆ ಹಾಜರಾಗಲು ಅವಕಾಶ ನೀಡಲಾಗಿದೆ ಎಂದು ವರದಿಯಾಗಿದೆ. ಅವರ ಸಂಬಂಧಿಕರು ಮತ್ತು ಆಪ್ತರು ಅಂತಿಮ ನಮನ ಸಲ್ಲಿಸಿದರು. ಒಂದರ ನಂತರ ಒಂದರಂತೆ 5-5ರ ಗುಂಪಿನಲ್ಲಿ ಅಂತಿಮ ದರ್ಶನ ಪಡೆಯಲು ಅವರಿಗೆ ಅವಕಾಶ ಕಲ್ಪಿಸಲಾಗಿತ್ತು. ಬಾಲಿವುಡ್ ನಟ ಇರ್ಫಾನ್ ಖಾನ್ ನಿಧನಕ್ಕೆ ರಾಷ್ಟ್ರಪತಿ ರಾಮನಾಥ್ ಕೋವಿಂದ್, ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ.