ಮಡಿಕೇರಿ, ಏ. 29: ಕೊಡಗು ಜಿಲ್ಲೆಯಲ್ಲಿ ಕಳೆದ ವರ್ಷದ ಮಳೆಗಾಲದ ಸಂದರ್ಭದಲ್ಲಿ ಭಾರೀ ಪ್ರಾಕೃತಿಕ ದುರಂತ ಸಂಭವಿಸಿ ಹಲವಾರು ಜನ ಜೀವ ಕಳೆದುಕೊಂಡಿರುವ ತೋರ ವಿಭಾಗದಲ್ಲಿ ನೂತನ ಸೇತುವೆ ನಿರ್ಮಾಣಕ್ಕೆ ಕಾಮಗಾರಿ ಆರಂಭಿಸಲಾಗಿದ್ದು, ಈಗಿನ ಮಟ್ಟಿಗೆ ಈ ಕೆಲಸ ಅರ್ಧದಲ್ಲಿ ನಿಂತು ಹೋಗಿದೆ.ಕಳೆದ ಹಲವು ತಿಂಗಳ ಹಿಂದೆಯಷ್ಟೆ ಈ ಸೇತುವೆ ಕಾಮಗಾರಿಗೆ ಚಾಲನೆ ನೀಡಲಾಗಿದ್ದು, ನಂತರದ ದಿನಗಳಲ್ಲಿ ಕೊರೊನಾ ಆತಂಕದ ಹಿನ್ನೆಲೆಯಲ್ಲಿ ಎದುರಾದ ಲಾಕ್‍ಡೌನ್‍ನಿಂದಾಗಿ ಈ ಕೆಲಸ ಅರ್ಧದಲೇ ನಿಂತು ಹೋಗಿದೆ. ಇನ್ನೇನು ಸದ್ಯದಲ್ಲೇ ಮತ್ತೊಂದು ಮಳೆಗಾಲ ಎದುರಾಗುವ ಸಮಯ ಸನ್ನಿಹಿತವಾಗಿದ್ದು, ಈ ಸೇತುವೆ ಕೆಲಸವನ್ನು ಪೂರ್ಣಗೊಳಿಸದಿದ್ದರೆ ಈ ವಿಭಾಗದ ಜನತೆ ಮಳೆಗಾಲದಲ್ಲಿ ಭಾರೀ ಸಂಕಷ್ಟವನ್ನು ಎದುರಿಸಬೇಕಾಗಿ ಬರುವಂತಾಗಲಿದೆ.ಕೆದಮುಳ್ಳೂರುವಿನಿಂದ ತೋರ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ (ಮೊದಲ ಪುಟದಿಂದ) ನಡುವೆ ಈ ಕಾಮಗಾರಿ ಸ್ಥಗಿತಗೊಂಡಿದೆ. ಕಳೆದ ವರ್ಷದ ಮಹಾಮಳೆ ಯಿಂದಾಗಿ ಈ ಹಳೆಯ ಸೇತುವೆ ಮುಳುಗಡೆ ಯಾದಂತಾಗಿದ್ದು, ಇದನ್ನು ಎತ್ತರಿಸಲು ಉದ್ದೇಶಿಸಿ ರೂ. 75 ಲಕ್ಷ ವೆಚ್ಚದ ಹೊಸ ಸೇತುವೆ ನಿರ್ಮಾಣಕ್ಕೆ ಚಾಲನೆ ನೀಡಲಾಗಿತ್ತು.

1955-56ನೇ ಇಸವಿಯ ಸಂದರ್ಭ ಆಗಿನ ಕೂರ್ಗ್ ಗೌರ್ಮೆಂಟ್ ಅಸ್ತಿತ್ವದಲ್ಲಿ ಇದ್ದ ಸಂದರ್ಭ ಈ ಸೇತುವೆ ನಿರ್ಮಾಣ ವಾಗಿದ್ದು, ಕಿರಿದಾಗಿದ್ದರೂ ಗಟ್ಟಿಮುಟ್ಟಾಗಿತ್ತು. ಆಗಿನ ಮುಖ್ಯಮಂತ್ರಿ ಸಿ.ಎಂ. ಪೂಣಚ್ಚ ಅವರು ಸೇತುವೆಯನ್ನು ಉದ್ಘಾಟಿಸಿದ್ದರು. ಆದರೆ ಕಳೆದ ವರ್ಷ ಎದುರಾದ ದುರಂತದಿಂದ ಈ ಸೇತುವೆಯನ್ನು ಒಡೆದು ಎತ್ತರದ ಸೇತುವೆ ನಿರ್ಮಿಸಲು ನಿರ್ಧರಿಸಲಾಗಿತ್ತು. ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಅವರು ಕಾಮಗಾರಿಗೆ ಚಾಲನೆ ನೀಡಿದ್ದರು.

ಕೆಲಸ ಪ್ರಾರಂಭಗೊಂಡು ಕುಶಾಲನಗರದ ಗುತ್ತಿಗೆದಾರರು ಇದನ್ನು ನಿರ್ವಹಿಸುತ್ತಿದ್ದರು. ಹಳೆಯ ಕಾಲದ ಗಟ್ಟಿಮುಟ್ಟಾದ ಸೇತುವೆಯನ್ನು ಒಡೆದು ಹಾಕಲು ಸುಮಾರು 25 ದಿನ ಬೇಕಾಗಿತ್ತು. ಕಾಮಗಾರಿ ನಡೆಯುತ್ತಿದ್ದ ಬೆನ್ನಲ್ಲೇ ಯುಗಾದಿ ಹಬ್ಬ ಎದುರಾಗಿ ಪರ ಜಿಲ್ಲೆಯ ಕಾರ್ಮಿಕರು ತಮ್ಮ ಊರಿಗೆ ತೆರಳಿದ್ದು ಮತ್ತೆ ಆಗಮಿಸಿರಲಿಲ್ಲ. ಈ ನಡುವೆ ಕೊರೊನಾ ಪರಿಸ್ಥಿತಿ ಎದುರಾಗಿ ಲಾಕ್‍ಡೌನ್ ನಿರ್ಬಂಧದಿಂದಾಗಿ ಕಾಮಗಾರಿ ಅರ್ಧದಲ್ಲೇ ನಿಂತು ಹೋಗಿರುವುದಾಗಿ ಸ್ಥಳೀಯ ಬೆಳೆಗಾರ ಮಾತಂಡ ಮೊಣ್ಣಪ್ಪ ಅವರು ತಿಳಿಸಿದ್ದಾರೆ.

ಇದೀಗ ಏಪ್ರಿಲ್ ತಿಂಗಳು ಕಳೆದಿದ್ದು, ಮಳೆಗಾಲಕ್ಕೆ ತಿಂಗಳ ಅವಧಿ ಮಾತ್ರ ಬಾಕಿ ಉಳಿದಿದೆ. ಈ ಅವಧಿಯೊಳಗೆ ಸೇತುವೆ ಕೆಲಸ ಪೂರ್ಣಗೊಳ್ಳದಿದ್ದರೆ ಈ ವಿಭಾಗದ ಜನತೆ ಮಳೆಗಾಲದಲ್ಲಿ ತೀವ್ರ ಸಂಕಷ್ಟಪಡಬೇಕಾಗಿದ್ದು, ಜಿಲ್ಲಾಡಳಿತ ಈ ಬಗ್ಗೆ ಗಮನ ಹರಿಸಬೇಕೆಂದು ಅವರು ವಿನಂತಿಸಿದ್ದಾರೆ.

ಸದ್ಯಕ್ಕೆ ನಿರ್ಮಿಸಿರುವ ತಾತ್ಕಾಲಿಕ ರಸ್ತೆಯಲ್ಲಿ ಸಣ್ಣ ವಾಹನ ಮಾತ್ರ ಸಂಚರಿಸಲು ಸಾಧ್ಯವಿದೆ. ಮಳೆ ಎದುರಾದಲ್ಲಿ ಇದೂ ಸಾಧ್ಯವಾಗದು. ಸೇತುವೆ ಪೂರ್ಣವಾಗದಿದ್ದರೆ ಮಳೆಗಾಲಕ್ಕೆ ಬದಲಿ ರಸ್ತೆ ಇಲ್ಲದಂತಾಗಲಿದೆ.

ಸಾರ್ವಜನಿಕರು ಸುಮಾರು 15 ರಿಂದ 20 ಕಿ.ಮೀ. ಹೆಚ್ಚು ಅಂತರ ಕ್ರಮಿಸಿ ಆರ್ಜಿ, ಬೇಟೋಳಿ, ಪೆಗ್ಗಳ ಮೂಲಕ ತೆರಳಬೇಕಾದ ದುಸ್ಥಿತಿ ಎದುರಾಗಲಿದೆ. ಈ ಹಿನ್ನೆಲೆಯಲ್ಲಿ ಇದೀಗ ಲಾಕ್‍ಡೌನ್ ನಿರ್ಬಂಧ ಸಡಿಲಿಕೆಯಾಗಿರುವುದರಿಂದ ಈ ಕೆಲಸದ ಬಗ್ಗೆ ತ್ವರಿತವಾಗಿ ಜಿಲ್ಲಾಡಳಿತ ಗಮನ ಹರಿಸಬೇಕಿರುವ ಅನಿವಾರ್ಯತೆಯಿದೆ.

ಕಳೆದ ವರ್ಷದಂತೆ ಈ ಬಾರಿಯೂ ಈ ವ್ಯಾಪ್ತಿಗೆ ಮಳೆ ಹೆಚ್ಚಾದರೆ ಹೆಚ್ಚಿನ ಸಮಸ್ಯೆ-ಅಪಾಯ ಉಂಟಾಗಲಿದೆ ಎಂದು ಮೊಣ್ಣಪ್ಪ ಅಭಿಪ್ರಾಯ ವ್ಯಕ್ತಪಡಿಸಿದ್ದು, ಸಂಕಷ್ಟದ ಸ್ಥಿತಿಯ ನಡುವೆಯೂ ಇದರತ್ತ ಗಮನ ಹರಿಸಬೇಕಿರುವುದು ಅತ್ಯಗತ್ಯವೆಂದಿದ್ದಾರೆ.