ಪೊನ್ನಂಪೇಟೆ, ಏ. 28 : ದಕ್ಷಿಣ ಕೊಡಗಿನಲ್ಲಿ ಜಾನುವಾರುಗಳ ಮೇಲೆ ವ್ಯಾಘ್ರನ ದಾಳಿ ಮುಂದುವರೆದಿದ್ದು, ಇಂದು ಬೆಳಗಿನ ಜಾವ 3 ಗಂಟೆಯ ಸುಮಾರಿಗೆ ಬಲ್ಯಮಂಡೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ತೂಚಮಕೇರಿ ಗ್ರಾಮದ ಚಿಂಡಮಾಡ ಬಾಬು ಮಂದಣ್ಣ ಅವರ ಹಸುವನ್ನು ಕೊಂದು ಹಾಕಿದೆ. ಹಾಲು ಕರೆಯುವ ಹಸು ಹುಲಿ ದಾಳಿಗೆ ಬಲಿಯಾಗಿದ್ದು ತಾಯಿಯನ್ನು ಕಳೆದುಕೊಂq 2 ತಿಂಗಳ ಕರುವಿನ ಮೂಕ ರೋಧನ ಮನ ಕಲಕುವಂತಿತ್ತು. ವಿಷಯ ತಿಳಿದ ಅರಣ್ಯ ಇಲಾಖೆಯ ಅಧಿಕಾರಿಗಳು ಸಿಬ್ಬಂದಿಗಳೊಂದಿಗೆ ಘಟನೆ ನಡೆದ ಸ್ಥಳಕ್ಕೆ ಆಗಮಿಸಿ ಹಸುವಿನ ಮೇಲೆ ಹುಲಿ ದಾಳಿ ನಡೆಸಿದ ಸ್ಥಳದ ಸುತ್ತಮುತ್ತ ಹುಲಿಯ ಹೆಜ್ಜೆ ಗುರುತಿನ ಜಾಡು ಹಿಡಿದು ಹುಲಿ ಹಿಡಿಯುವ (ಮೊದಲ ಪುಟದಿಂದ) ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿದ್ದರು. ಪಕ್ಕದಲ್ಲಿರುವ ಸಣ್ಣ ಕಾಡಿನಲ್ಲಿ ಹುಡುಕಾಟದಲ್ಲಿ ತೊಡಗಿದ್ದ ಸಂದರ್ಭದಲ್ಲಿ ಸಿಬ್ಬಂದಿಯೊಬ್ಬರ ಎದುರಿಗೆ ಹುಲಿ ದಿಢೀರನೆ ಪ್ರತ್ಯಕ್ಷವಾಗಿ, ತಕ್ಷಣ ಮರೆಯಾಗಿದೆ. ಇದರಿಂದಾಗಿ ಹುಲಿಯ ಇರುವಿಕೆಯನ್ನು ಖಚಿತ ಪಡಿಸಿಕೊಂಡ ಅಧಿಕಾರಿಗಳು ಪಕ್ಕದಲ್ಲಿ ನಡಿಕೇರಿಯಲ್ಲಿ ಹುಲಿ ಹಿಡಿಯುವ ಕಾರ್ಯಾಚರಣೆಗಾಗಿ ಬಂದಿದ್ದ ಆನೆಗಳನ್ನು ಕರೆಸಿಕೊಂಡು ಬಿರುಸಿನ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಸಂಜೆ 6 ಗಂಟೆ ವರೆಗೂ ಕಾರ್ಯಾಚರಣೆ ನಡೆಸಿದ ತಂಡಕ್ಕೆ ಹುಲಿ ಕಾಣಿಸಿಕೊಳ್ಳಲಿಲ್ಲ. ನಂತರ ಎರಡು ಬೋನುಗಳನ್ನು ಬೇರೆ ಬೇರೆ ಸ್ಥಳಗಳಲ್ಲಿ ಇಟ್ಟು ಒಂದರಲ್ಲಿ ಹುಲಿ ದಾಳಿಯಿಂದ ಸತ್ತ ಹಸುವಿನ ಮಾಂಸ ಹಾಗೂ ಇನ್ನೊಂದರಲ್ಲಿ ಜೀವಂತ ಆಡನ್ನು ಕಟ್ಟಿಹಾಕುವ ಮೂಲಕ ಹುಲಿ ಸೆರೆಗೆ ಬಲೆ ಬೀಸಲಾಗಿದೆ. ಬೋನುಗಳ ಮುಂದೆ ಹುಲಿಯ ಚಲನ ವಲನ ವೀಕ್ಷಿಸಲು ಕ್ಯಾಮೆರಾ ಅಳವಡಿಸಲಾಗಿದೆ. ಅರಣ್ಯ ರಕ್ಷಕರು, ರ್ಯಾಪಿಡ್ ರೆಸ್ಪಾನ್ಸ್ ಟೀಮ್, ಆನೆ ಕಾವಾಡಿಗಳು ಸೇರಿದಂತೆ ಸುಮಾರು 40 ಕ್ಕೂ ಹೆಚ್ಚು ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಸ್ಥಳದಲ್ಲಿ ಡಿಎಫ್‍ಓ ಶಿವಶಂಕರ್, ಎಎಸ್‍ಎಫ್ ಶ್ರೀಪತಿ, ಆರ್‍ಎಫ್‍ಓ ಅರಮಣಮಾಡ ತೀರ್ಥ ಹಾಗೂ ಅಶೋಕ್, ನಾಗರಹೊಳೆ ಹುಲಿ ಸಂರಕ್ಷಣೆ ಆನೆ ಪ್ರಭಾರಕ ಮುಜೀಬ್ ರೆಹಮಾನ್, ಡಿಆರ್‍ಎಫ್‍ಓ ದಿವಾಕರ್ ಹಾಗೂ ಮಂಜುನಾಥ್, ಅರಣ್ಯ ರಕ್ಷಕರು, ಆರ್‍ಆರ್.ಟಿ ತಂಡ ಹಾಗೂ ಆನೆ ಕಾವಾಡಿಗಳು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದಾರೆ. -ಚನ್ನನಾಯಕ