ಗೋಣಿಕೊಪ್ಪಲು, ಏ. 28: ಪ್ರತಿಯೊಂದು ಜೀವಿಯಲ್ಲೂ ಭಗವಂತನಿದ್ದಾನೆ. ಯಾರೊಬ್ಬರೂ ಹಸಿವಿನಿಂದ ಇರಬಾರದು. ನಿಮ್ಮ ಆಟೋದಲ್ಲಿ ಸಂಚರಿಸುವ ಪ್ರಯಾಣಿಕರಲ್ಲಿ ಎಲ್ಲರಲ್ಲೂ ಭಗವಂತನನ್ನು ಕಾಣಿ ಎಂದು ಪೆÇನ್ನಂಪೇಟೆಯ ಶ್ರೀ ರಾಮಕೃಷ್ಣ ಶಾರದಾಶ್ರಮದ ಅಧ್ಯಕ್ಷ ಶ್ರೀ ಬೋಧಸ್ವರೂಪಾನಂದಜೀ ಮಹರಾಜ್ ನುಡಿದರು.

ಆಶ್ರಮದ ವತಿಯಿಂದ ಗೋಣಿಕೊಪ್ಪಲಿನ ಆಟೋ ಚಾಲಕರುಗಳಿಗೆ ದಿನನಿತ್ಯ ಗೃಹೋಪಯೋಗಿ ವಸ್ತುಗಳ ಕಿಟ್, ಸ್ಯಾನಿಟೈಸರ್ ಮತ್ತು ಮಾಸ್ಕ್ ನೀಡಿದರು. ಪ್ರಪಂಚಕ್ಕೆ ಮಾಹಾಮಾರಿ ಯಾಗಿರುವ ಕೊರೊನಾದ ವಿಷಮಸ್ಥಿತಿಯಲ್ಲಿ ದೇಶವಿದೆ. ಇಂತಹ ಸಂದರ್ಭ ಯಾವ ಕೆಲಸವೂ ಸಮರ್ಪಕವಾಗಿ ನಡೆಯುತ್ತಿಲ್ಲ. ಜನಜೀವನ ಕಷ್ಟದಲ್ಲಿ ಸಾಗುತ್ತಿದೆ. ಆಟೋ ಚಾಲಕರು ಮತ್ತು ದಿನನಿತ್ಯ ಕೆಲಸದಿಂದಲೇ ಜೀವನ ಸಾಗಿಸುವಂತಹವರಿಗೆ ಆಶ್ರಮದ ವತಿಯಿಂದ ಸಾಧ್ಯವಾದಷ್ಟು ಸಹಾಯ ಮಾಡುತ್ತಿರುವುದಾಗಿ ನುಡಿದರು.

ಈಗಾಗಲೇ ಮಡಿಕೇರಿಯ ಆಟೋ ಚಾಲಕರಿಗೆ, ಜಿಲ್ಲೆಯ ಹಲವು ಗ್ರಾಮಗಳ ಬಡವರಿಗೆ ಆಶ್ರಮದಿಂದ ಆಹಾರದ ಕಿಟ್, ಮಾಸ್ಕ್ ಮತ್ತು ಸ್ಯಾನಿಟೈಸರ್ ಒದಗಿಸಲಾಗಿದೆ ಮತ್ತು ಈ ಹಿಂದಿನ ಎರಡು ವರ್ಷಗಳಲ್ಲಿ ಪ್ರವಾಹ ಮತ್ತು ಭೂಕುಸಿತ ಸಂದರ್ಭ ಆಶ್ರಮದ ವತಿಯಿಂದ ಒಂದು ಕೋಟಿ ಹದಿನೈದು ಲಕ್ಷ ರೂಪಾಯಿಗಳ ಸಹಾಯ ನೀಡಿರುವುದಾಗಿ ತಿಳಿಸಿದರು.

ಆಟೋ ಚಾಲಕರ ಸಂಘದ ಗೌರವಾಧ್ಯಕ್ಷ ಸಿ.ಕೆ. ಬೋಪಣ್ಣ ಮಾತನಾಡಿ, ಈಗಿನ ಕ್ಲಿಷ್ಟಕರ ಸಂದರ್ಭದಲ್ಲಿ ಆಶ್ರಮದ ವತಿಯಿಂದ ನೀಡುತ್ತಿರುವ ಸಹಾಯಹಸ್ತ ಆಟೋ ಚಾಲಕರಿಗೆ ಬಹಳಷ್ಟು ಉಪಕಾರವಾಗಲಿದೆ. ಅದಕ್ಕಾಗಿ ನಾನು ಧನ್ಯವಾದ ಸಮರ್ಪಿಸುತ್ತೇನೆ ಎಂದರು.

ಕೊಡಗು ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ಉಪಾಧ್ಯಕ್ಷ ಎಂ.ಪಿ. ಕೇಶವ ಕಾಮತ್ ಮಾತನಾಡಿ, ಶ್ರೀ ರಾಮಕೃಷ್ಣ ಆಶ್ರಮವು ಜನರ ಸಂಕಷ್ಟದ ಸಮಯದಲ್ಲಿ ಅವರಿಗೆ ಬೇಕಾದ ಸಹಾಯಹಸ್ತ ನೀಡುತ್ತಿದೆ.

ಶ್ರೀ ಬೋಧಸ್ಪರೂಪಾನಂದರು ಅಧ್ಯಕ್ಷರಾದ ನಂತರ ಜಿಲ್ಲೆಯ ಪ್ರತಿಯೊಬ್ಬರ ಕಷ್ಟದ ಸಂದರ್ಭ ಸ್ಪಂದಿಸಿದ್ದಾರೆ ಎಂದರು.

180 ಆಟೋ ಚಾಲಕರಿಗೆ ಆಹಾರದ ಕಿಟ್, ಮಾಸ್ಕ್ ಮತ್ತು ಸ್ಯಾನಿಟೈಸರ್ ವಿತರಿಸಲಾಯಿತು. ಈ ಸಂದರ್ಭ ಆಟೋ ಚಾಲಕರ ಸಂಘದ ಅಧ್ಯಕ್ಷ ಜಿಮ್ಮಾ ಸುಬ್ಬಯ್ಯ, ಕಾರ್ಯದರ್ಶಿ ಅಶ್ವತ್ಥ್, ಮಾಜಿ ಅಧ್ಯಕ್ಷ ದೇವಪ್ಪ ಮತ್ತು ಸದಸ್ಯರು ಉಪಸ್ಥಿತರಿದ್ದರು.