ಸೋಮವಾರಪೇಟೆ,ಏ.28: ಸಮೀಪದ ಗಣಗೂರು ಗ್ರಾಮದಲ್ಲಿ ಸಹೋದರರ ನಡುವೆ ಕಲಹ ಏರ್ಪಟ್ಟು ಓರ್ವ ಗಂಭೀರ ಗಾಯಗಳೊಂದಿಗೆ ಮಡಿಕೇರಿಯ ಜಿಲ್ಲಾಸ್ಪತ್ರೆಗೆ ದಾಖಲಾಗಿರುವ ಘಟನೆ ಇಂದು ಸಂಜೆ ನಡೆದಿದೆ.
ಗಣಗೂರು ಗ್ರಾಮ ನಿವಾಸಿ ಮಂಜುನಾಥ್ ಮತ್ತು ಪಾರ್ವತಮ್ಮ ದಂಪತಿಗಳ ಪುತ್ರರಾದ ಅಭಿಲಾಷ್ ಮತ್ತು ಮಣಿಕಂಠ ಎಂಬವರುಗಳ ನಡುವೆ ಕ್ಷುಲ್ಲಕ ವಿಚಾರಕ್ಕೆ ಗಲಾಟೆ ಏರ್ಪಟ್ಟಿದ್ದು, ಈ ಸಂದರ್ಭ ಮಣಿಕಂಠ ತನ್ನ ತಮ್ಮ ಅಭಿಲಾಷ್ ಮೇಲೆ ಕತ್ತಿಯಿಂದ ಹಲ್ಲೆ ನಡೆಸಿದ್ದಾನೆ.
ಪರಿಣಾಮ ಅಭಿಲಾಷ್‍ನ ಕಣ್ಣು, ಮುಖ, ತಲೆಯ ಹಿಂಭಾಗ, ಕೈ-ಕಾಲಿಗೆ ಗಂಭೀರ ಸ್ವರೂಪದಲ್ಲಿ ಪೆಟ್ಟಾಗಿದ್ದು, ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ನೀಡಿದ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಡಿಕೇರಿಯ ಜಿಲ್ಲಾಸ್ಪತ್ರೆಗೆ ಸಾಗಿಸಲಾಗಿದೆ.
ಸಹೋದರನಿಂದ ಹಲ್ಲೆಗೊಳಗಾದ ಅಭಿಲಾಷ್, ಗಂಭೀರ ಸ್ವರೂಪದ ಗಾಯಗಳೊಂದಿಗೆ ಮನೆಯಲ್ಲಿ ಬಿದ್ದಿದ್ದ ವಿಷಯವನ್ನು ಸ್ಥಳೀಯರು ಸೋಮವಾರಪೇಟೆ ಪೊಲೀಸ್ ಠಾಣಾಧಿಕಾರಿ ಶಿವಶಂಕರ್ ಅವರ ಗಮನಕ್ಕೆ ತಂದಿದ್ದು, ತಕ್ಷಣ ಸ್ಥಳಕ್ಕಾಗಮಿಸಿದ ಠಾಣಾಧಿಕಾರಿಗಳು ಪಟ್ಟಣದ ಆಟೋವೊಂದಕ್ಕೆ ಕರೆ ಮಾಡಿ ಗಾಯಾಳುವನ್ನು ಸೋಮವಾರಪೇಟೆ ಆಸ್ಪತ್ರೆಗೆ ಸಾಗಿಸಿದ್ದಾರೆ.
ತಾಯಿಯನ್ನು ನೋಡಿಕೊಳ್ಳುತ್ತಿಲ್ಲ ಎಂಬ ವಿಷಯದ ಬಗ್ಗೆ ಸಹೋದರರ ನಡುವೆ ಗಲಾಟೆ ನಡೆದಿದ್ದು, ಹಲ್ಲೆ ನಡೆಸಿದ ಆರೋಪಿ ಮಣಿಕಂಠನನ್ನು ಪೊಲೀಸರು ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ. ಸೋಮವಾರಪೇಟೆ ಆಸ್ಪತ್ರೆಗೆ ವೃತ್ತ ನಿರೀಕ್ಷಕ ನಂಜುಂಡೇಗೌಡ ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ.