ಮಡಿಕೇರಿ, ಏ. 28: ಕೊರೊನಾ ಹಿನ್ನೆಲೆ ನ್ಯಾಯಾಂಗ ಇಲಾಖೆಯಲ್ಲಿ ಸ್ಥಗಿತಗೊಂಡಿರುವ ದೈನಂದಿನ ಚಟುವಟಿಕೆಗಳನ್ನು ಮೇ 4 ರಿಂದ ಶೇ. 50 ರಷ್ಟು ಸಿಬ್ಬಂದಿಗಳನ್ನು ಸರದಿಯಲ್ಲಿ ತೊಡಗಿಸಿಕೊಂಡು ಕರ್ತವ್ಯ ನಿರ್ವಹಿಸಬೇಕೆಂದು ಕರ್ನಾಟಕ ಉಚ್ಚ ನ್ಯಾಯಾಲಯವು ಜಿಲ್ಲಾ ನ್ಯಾಯಾಲಯಗಳಿಗೆ ನಿರ್ದೇಶಿಸಿರುವುದಾಗಿ ವಿಶ್ವಸನೀಯ ಮೂಲಗಳಿಂದ ಗೊತ್ತಾಗಿದೆ. ಇಂದು ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳಾದ ಓಕ್ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ಜಿಲ್ಲಾ ನ್ಯಾಯಾಧೀಶರುಗಳೊಂದಿಗೆ ಚರ್ಚಿಸಿ, ಈ ಸಂದೇಶ ರವಾನಿಸಿದ್ದು, ಇದುವರೆಗೆ ಸ್ಥಗಿತಗೊಂಡಿರುವ ಕಡತಗಳನ್ನು ಶೀಘ್ರ ವಿಲೇವಾರಿಗೂ ಸೂಚಿಸಿದ್ದಾರೆ.ವಕೀಲರಿಗೂ ಅವಕಾಶ: ನ್ಯಾಯಾಲಯ ಕಲಾಪಕ್ಕೆ ತೀರಾ ಅವಶ್ಯಕ ಇರುವ ಪ್ರಕರಣಗಳಲ್ಲಿ ಸಂಬಂಧಿಸಿದ ಕಕ್ಷಿದಾರರು ಹಾಗೂ ಅಂತಹವರ ಪರ ವಕಾಲತ್ತು ವಹಿಸಿರುವ ವಕೀಲರು ಮಾತ್ರ ಹಾಜರಿದ್ದು, ತಮ್ಮ ವಾದ ಮಂಡಿಸಲು ಅವಕಾಶವಿರಲಿದೆ ಎಂದು ಈ ಮೂಲದಿಂದ ತಿಳಿದು ಬಂದಿದೆ. ಅಲ್ಲದೆ ನ್ಯಾಯಾಲಯ ಸಿಬ್ಬಂದಿಗಳಲ್ಲಿ ಶೇ. 50 ರಂತೆ ಸರದಿಯಲ್ಲಿ ಕರ್ತವ್ಯಕ್ಕೆ ಹಾಜರಾಗಬೇಕಿದೆ.

ಇರುವಷ್ಟು ನ್ಯಾಯಾಂಗ ಇಲಾಖೆಯ ಸಿಬ್ಬಂದಿಗಳಲ್ಲಿ ಒಂದು ದಿವಸ ಶೇ. 50 ರಷ್ಟು ಮಂದಿ ಮಾತ್ರ ಕರ್ತವ್ಯಕ್ಕೆ ಹಾಜರಾದರೆ, ಮರು ದಿವಸ ಇನ್ನುಳಿದ ಶೇ. 50 ಮಂದಿ ಕೆಲಸ ನಿರ್ವಹಿಸುವ ಮೂಲಕ ಕಚೇರಿಗಳಲ್ಲಿ ಜನಸಂದಣಿಯಾಗದಂತೆ ನಿಗಾ ವಹಿಸಬೇಕೆಂದು ನಿರ್ದೇಶನ ನೀಡಲಾಗಿದೆ.

ಕಾರಾಗೃಹಕ್ಕೂ ಅನ್ವಯ: ಈ ಹಿಂದಿನ ನಿರ್ದೇಶನದಂತೆ ಜಿಲ್ಲಾ ಕಾರಾಗೃಹಗಳಲ್ಲಿ 7 ವರ್ಷಕ್ಕಿಂತ ಕಡಿಮೆ ಪ್ರಮಾಣದ ಶಿಕ್ಷೆಗೆ ಒಳಗಾಗಿರುವ ಬಂಧಿಗಳಿಗೆ ಮಾನವೀಯ ನೆಲೆಯಲ್ಲಿ ತಾತ್ಕಾಲಿಕ ಬಿಡುಗಡೆ ಅಥವಾ ಪೆರೋಲ್ ರಜೆಯಲ್ಲಿ ಮನೆಗಳಿಗೆ ಕಳುಹಿಸುವ ಅವಕಾಶವೂ ಪ್ರಸ್ತುತ ಸನ್ನಿವೇಶದಲ್ಲಿ ಇರುವುದಾಗಿ ಈ ಮೂಲಗಳು ಖಚಿತಪಡಿಸಿವೆ.

ಈ ಬಗ್ಗೆ ಜಿಲ್ಲಾ ಕಾನೂನು ನೆರವು ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಯಾಗಿರುವ ನ್ಯಾಯಾಧೀಶೆ ನೂರಿನ್ನೀಸಾ ಅವರನ್ನು ‘ಶಕ್ತಿ’ ಪ್ರತಿಕ್ರಿಯೆ ಬಯಸಿದಾಗ, ಇಂತಹ ಅವಕಾಶವನ್ನು ತಾತ್ಕಾಲಿಕವಾಗಿ ಕಲ್ಪಿಸಲಾಗಿದೆ ಎಂದರು. ಜಿಲ್ಲೆಯಲ್ಲಿ ಇದುವರೆಗೆ 22 ಮಂದಿ ಪ್ರಯೋಜನ ಪಡೆದಿದ್ದು, ಇನ್ನು ಅವಶ್ಯಕತೆ ಮೇರೆಗೆ ಅಗತ್ಯವಿರುವವರು ಷರತ್ತಿಗೆ ಒಳಪಟ್ಟು ಬಿಡುಗಡೆ ಪಡೆಯಬಹುದು ಎಂದರು.