ಮಡಿಕೇರಿ, ಏ. 28: ಮೇಲಿನ ಚಿತ್ರದಲ್ಲಿ ಅರಣ್ಯ ಇಲಾಖೆಯ ಸಮವಸ್ತ್ರ ಧರಿಸಿರುವ ಇಲಾಖೆಯ ಅಧಿಕಾರಿಯ ‘ಪೋಜ್’ನಲ್ಲಿರುವ ಈ ಚಿತ್ರ ಇದೀಗ ಬಿಸಿ ಬಿಸಿ ಚರ್ಚೆಗೆ ಗ್ರಾಸವಾಗಿದೆ.
ಕರ್ನಾಟಕ ಸ್ಟೇಟ್ ಫಾರೆಸ್ಟ್ (ಕೆಎಸ್ಎಫ್) ಎಂದು ಸ್ಪಷ್ಟವಾಗಿ ಈ ಚಿತ್ರದಲ್ಲಿ ಕಾಣುತ್ತಿದೆ. ಮಾತ್ರವಲ್ಲ ಭುಜದ ಮೇಲೆ ಡಬಲ್ ಸ್ಟಾರ್ ಕೂಡ ಇದೆ. ಈ ಮಾನ್ಯತೆ ಇರುವ ಸಮವಸ್ತ್ರ ಉಪವಲಯ ಅರಣ್ಯಾಧಿಕಾರಿಯ ಗ್ರೇಡ್ನದ್ದಾಗಿದೆ. ಆದರೆ ಈ ಸಮವಸ್ತ್ರದಲ್ಲಿ ಗಂಭೀರ ಮುಖಭಾವದಲ್ಲಿರುವ ಯುವ ಅಧಿಕಾರಿ ಅರಣ್ಯ ಇಲಾಖೆಯ ಶಾಶ್ವತ ಅಧಿಕಾರಿಯಲ್ಲ.
ಈತ ಕೇವಲ ಹೊರಗುತ್ತಿಗೆ ಆಧಾರದಲ್ಲಿ ಮಾತ್ರ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದು; ಸೋಮವಾರ ಪೇಟೆ ವಲಯ ಅರಣ್ಯಾಧಿ ಕಾರಿಯವರ ಚಾಲಕ ನಾಗಿದ್ದಾನೆ. ಯಾವದೇ ಸಂದರ್ಭದಲ್ಲಿ ಈ ಹೊರಗುತ್ತಿಗೆ ರದ್ದಾಗಬಹುದಾಗಿದೆ. ಆದರೆ; ಈತ ಉಪ ವಲಯ ಅರಣ್ಯಾಧಿಕಾರಿಯ ಸಮವಸ್ತ್ರ ದೊಂದಿಗೆ ಕಾಣಿಸಿ ಕೊಂಡಿರುವ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ಹಾಗೂ ಇಲಾಖೆಯ ನಡುವೆ ‘ವೈರಲ್’ ಆಗುತ್ತಿದ್ದು; ಇದು ಕಾವೇರಿದ ಚರ್ಚೆಗೆ ಗ್ರಾಸವಾಗಿದೆ. ಈತನಿಗೆ ಈ ಸಮವಸ್ತ್ರ ಎಲ್ಲಿ ದೊರೆಯಿತು? ಯಾತಕ್ಕಾಗಿ ಇದನ್ನು ಧರಿಸಿ ಪೋಜ್ ನೀಡಿದ್ದಾನೆ? ಇದರ ಹಿಂದೆ ಇನ್ನೇನಾದರೂ ಉದ್ದೇಶ ವಿರಬಹುದೇ ಎಂಬ ಪ್ರಶ್ನೆಗಳು ಕೇಳಿಬರುತ್ತಿವೆ.
ಈ ಕುರಿತು ಸೋಮವಾರಪೇಟೆ ವಿಭಾಗದ ಎಸಿಎಫ್ ನೆಹರು ಅವರಲ್ಲಿ ವಿಚಾರಿಸಿದಾಗ ಇಲಾಖೆಯ ವಸತಿಗೃಹದಲ್ಲಿ ಸಂಬಂಧಿತ ಅಧಿಕಾರಿ ತೂಗು ಹಾಕಿದ್ದ ಸಮವಸ್ತ್ರವನ್ನು ಹಾಕಿಕೊಂಡು ಈತ ‘ಪೋಜ್’ ನೀಡಿ ಫೋಟೋ ಕ್ಲಿಕ್ಕಿಸಿ ಕೊಂಡಿದ್ದಾನೆ. ಇಷ್ಟಕ್ಕೂ ಇದು ವರ್ಷಗಳ ಹಿಂದಿನದ್ದು. ಇದೀಗ ಹೇಗೋ ವೈರಲ್ ಆಗಿದೆ ಎಂಬ ಸಮಜಾಯಿಷಿಕೆ ನೀಡಿದ್ದಾರೆ. ಆದರೆ ವ್ಯಕ್ತಿಗಳು ಅವರ ಆಸಕ್ತಿ ‘ಕ್ರೇಜ್’ ಏನೇ ಇರಬಹುದು. ಒಂದೊಂದು ಹುದ್ದೆ, ಪದವಿಗೆ ಅದರದ್ದೇ ಆದ ಮಹತ್ವವಿದೆ.
ಅಧಿಕಾರಿಯೊಬ್ಬರ ಕುರ್ಚಿಯಲ್ಲಿ ಕೂರುವದು ಸಹ ತಪ್ಪೇ ಎಂದಿರುವಾಗ ಸಿನಿಮಾ ರೀತಿಯಲ್ಲಿನ ಈ ‘ಪೋಜ್’ ಎಷ್ಟು ಸರಿ ಎಂಬದು ಪ್ರಶ್ನೆಯಾಗಿದೆ.