13 ಜಿಲ್ಲೆಗಳಲ್ಲಿ ಸಹಜ ಜೀವನಕ್ಕೆ ಅವಕಾಶ
ಬೆಂಗಳೂರು, ಏ. 28: ರಾಜ್ಯದ 13 ಜಿಲ್ಲೆಗಳಲ್ಲಿ ಕೊರೊನಾ ಸೋಂಕು ಇಲ್ಲದಿರುವುದರಿಂದ ಅವುಗಳನ್ನು ಗ್ರೀನ್ ಜೋನ್ ಎಂದು ಗುರುತಿಸಲಾಗಿದ್ದು, ಇದೀಗ ಕೆಲ ಷರತ್ತುಗಳ ಮೇಲೆ ಸಹಜ ಜೀವನಕ್ಕೆ ಅವಕಾಶ ಮಾಡಿಕೊಡಲಾಗಿದೆ. ಇದರಿಂದ 14 ಜಿಲ್ಲೆಗಳ ಜನರು 33 ದಿನಗಳ ಲಾಕ್‍ಡೌನ್‍ನಿಂದ ವಿನಾಯಿತಿ ಪಡೆದು ನೆಮ್ಮದಿಯಾಗಿ ಉಸಿರಾಡುವಂತಾಗಿದೆ. ಆದರೆ, ವಿನಾಯಿತಿಯಲ್ಲೂ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳುವುದು ಕಡ್ಡಾಯ ಎಂದು ರಾಜ್ಯ ಸರ್ಕಾರ ಹೊರಡಿಸಿರುವ ಪರಿಷ್ಕೃತ ಮಾರ್ಗಸೂಚಿಗಳಲ್ಲಿ ಸ್ಪಷ್ಟಪಡಿಸಿದೆ. 13 ಜಿಲ್ಲೆಗಳಿಗೆ ಅನ್ವಯವಾಗುವಂತೆ ಹೊಸ ಮಾರ್ಗಸೂಚಿಯನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಿದೆ. ಅದರ ಪ್ರಕಾರ, ಚಾಮರಾಜನಗರ, ಕೊಪ್ಪಳ, ಕೋಲಾರ, ಉಡುಪಿ, ರಾಯಚೂರು, ಹಾವೇರಿ, ಯಾದಗಿರಿ, ದಾವಣಗೆರೆ, ಶಿವಮೊಗ್ಗ, ಹಾಸನ, ಚಿತ್ರದುರ್ಗ, ಚಿಕ್ಕಮಗಳೂರು ಜಿಲ್ಲೆಗಳಿಗೆ ಅನ್ವಯವಾಗಲಿದೆ. ಇನ್ನು ಕೊಡಗು ಜಿಲ್ಲೆಗೂ ವಿನಾಯಿತಿ ಸಿಕ್ಕಿದ್ದು ರಾಮನಗರದಲ್ಲಿ ಕೈಗಾರಿಕೆ ಹೊರತುಪಡಿಸಿ ಉಳಿದ ಅಂಗಡಿ ಮುಂಗಟ್ಟು ತೆರೆಯಲು ಅವಕಾಶ ಸಿಕ್ಕಿದೆ. ಹೆಚ್ಚು ಕೋವಿಡ್ ಪ್ರಕರಣಗಳಿರುವ ಬೆಂಗಳೂರು ನಗರ, ಬೆಳಗಾವಿ, ಮೈಸೂರು, ವಿಜಯಪುರ, ಬಾಗಲಕೋಟೆ, ಕಲಬುರಗಿ, ಬೀದರ್ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಿಗೆ ಈ ಹಿಂದಿನ ಮಾರ್ಗಸೂಚಿಗಳೇ ಮುಂದುವರಿಯಲಿದೆ.
ಜು. 31 ರವರೆಗೆ ಮನೆಯಿಂದಲೇ ಕೆಲಸ
ಬೆಂಗಳೂರು, ಏ. 28: ಕೋವಿಡ್ ಹಿನ್ನೆಲೆ ಐಟಿ ವೃತ್ತಿಪರರು ಮುಂದಿನ ಜುಲೈ 31 ರವರೆಗೆ ಮನೆಯಿಂದಲೇ ಕೆಲಸ ಮಾಡಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ ಎಂದು ಕೇಂದ್ರ ಐಟಿ ಮತ್ತು ದೂರಸಂಪರ್ಕ ಖಾತೆ ಸಚಿವ ರವಿಶಂಕರ್ ಪ್ರಸಾದ್ ಪ್ರಕಟಿಸಿದ್ದಾರೆ. ಕೊರೊನಾ ಲಾಕ್‍ಡೌನ್ ನಿರ್ಬಂಧದಿಂದ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಆಗಿರುವ ಸಮಸ್ಯೆಗಳ ಕುರಿತಂತೆ ಎಲ್ಲ ರಾಜ್ಯಗಳ ಮಾಹಿತಿ ತಂತ್ರಜ್ಞಾನ ಸಚಿವರ ಜತೆ ನಡೆಸಿದ ವೀಡಿಯೋ ಕಾನ್ಫರೆನ್ಸ್‍ನಲ್ಲಿ ರವಿಶಂಕರ್ ಪ್ರಸಾದ್ ಈ ವಿಷಯವನ್ನು ತಿಳಿಸಿದ್ದಾರೆ. ಲಾಕ್‍ಡೌನ್ ಬಳಿಕ ರಾಜ್ಯ ಐಟಿ ವಲಯ ಎದುರಿಸುತ್ತಿರುವ ಸವಾಲುಗಳು, ಕಂಡುಕೊಂಡಿರುವ ಪರಿಹಾರಗಳು ಹಾಗೂ ರಾಜ್ಯ ಸರ್ಕಾರ ಕೈಗೊಂಡಿರುವ ಪರಿಹಾರ ಕ್ರಮಗಳ ಕುರಿತು ಕೇಂದ್ರ ಸಚಿವರಿಗೆ ವಿವರಿಸಿದ ಐಟಿ-ಬಿಟಿ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ, ರಾಜ್ಯದ ಐಟಿ ವೃತ್ತಿ ಪರರಿಗೆ ಮುಂದಿನ ವರ್ಷ ಮಾರ್ಚ್‍ವರೆಗೂ ಮನೆಯಿಂದಲೇ ಕೆಲಸ ಮಾಡಲು ಅವಕಾಶ ಕಲ್ಪಿಸಬೇಕೆಂದು ಕೋರಿದರು. ಈ ಮನವಿಗೆ ಸ್ಪಂದಿಸಿದ ಕೇಂದ್ರ ಸಚಿವರು, ಸದ್ಯ ಜು. 31 ರವರೆಗೆ ವರ್ಕ್‍ಫ್ರಮ್ ಹೋಂ ಸೌಲಭ್ಯ ವಿಸ್ತರಣೆ ಮಾಡಲಾಗುವುದು. ಪರಿಸ್ಥಿತಿ ನೋಡಿಕೊಂಡು ನಂತರ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿದರು.
ಯೋಧನಿಗೆ ಜಾಮೀನು ಮಂಜೂರು
ಚಿಕ್ಕೋಡಿ, ಏ. 28: ಇತ್ತೀಚೆಗೆ ಯಕ್ಸಂಬಾದಲ್ಲಿ ಇಬ್ಬರು ಪೊಲೀಸ್ ಪೇದೆಗಳ ಜೊತೆ ನಡೆದ ಗಲಾಟೆಗೆ ಸಂಬಂಧಿಸಿದಂತೆ ಹಲ್ಲೆ ಮಾಡಿದ ಆರೋಪದ ಮೇಲೆ ಬಂಧನಕ್ಕೊಳಗಾಗಿದ್ದ ಸಿಆರ್‍ಪಿಎಫ್ ಯೋಧನಿಗೆ ಜಾಮೀನು ಮಂಜೂರು ಆಗಿದೆ. ಚಿಕ್ಕೋಡಿ 1ನೇ ಜೆಎಂಎಫ್‍ಸಿ ನ್ಯಾಯಾಲಯದಿಂದ ಷರತ್ತು ಬದ್ದ ಜಾಮೀನು ಮಂಜೂರಾಗಿದೆ. ತಾ. 23 ರಂದು ಪೊಲೀಸರು ಹಾಗೂ ಯೋಧನ ನಡುವೆ ಗಲಾಟೆ ನಡೆದಿತ್ತು. ಮಾಸ್ಕ್ ಹಾಕದ ವಿಚಾರಕ್ಕೆ ಪೇದೆ - ಸಿಆರ್‍ಪಿಎಫ್ ಯೋಧನ ಮಧ್ಯೆ ಗಲಾಟೆ ನಡೆದಿತ್ತು. ಕರ್ತವ್ಯನಿರತ ಪೇದೆ ಮೇಲೆ ಹಲ್ಲೆ ಆರೋಪದಡಿ ಸಿಆರ್‍ಪಿಎಫ್ ಯೋಧನ ಬಂಧನವಾಗಿತ್ತು.
ರೂ. 5.5 ಕೋಟಿಗಳಲ್ಲಿ ದಿನಸಿ ಕಿಟ್
ರಾಮನಗರ, ಏ. 28: ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಪತ್ನಿ ಅನಿತಾ ಕುಮಾರಸ್ವಾಮಿ ಅವರೊಡನೆ ಪುತ್ರ-ಸೊಸೆ ನವದಂಪತಿ ನಿಖಿಲ್-ರೇವತಿ ಕೈಯಿಂದ ಜಿಲ್ಲೆಯ ಜನರಿಗೆ ಉಚಿತ ಆಹಾರ ಕಿಟ್ ವಿತರಿಸಿದರು. ಮಗನ ಮದುವೆಗೆ ಆಹ್ವಾನಿಸುವ ಮೂಲಕ ಜನತೆಯ ಋಣಕ್ಕೆ ಕೃತಜ್ಞತೆ ಸಲ್ಲಿಸುವ ಆಸೆಯನ್ನು ಲಾಕ್‍ಡೌನ್‍ನಿಂದಾಗಿ ಸಂಕಷ್ಟಕ್ಕೊಳಗಾಗಿರುವ ರಾಮನಗರ ಮತ್ತು ಚನ್ನಪಟ್ಟಣ ತಾಲೂಕಿನ ಸುಮಾರು ಒಂದು ಲಕ್ಷ ಕುಟುಂಬಕ್ಕೆ ರೂ. 5.5 ಕೋಟಿ ವೆಚ್ಚದಲ್ಲಿ ದಿನಸಿ ಕಿಟ್ ನೀಡುವ ಮೂಲಕ ಧನ್ಯವಾದ ಸಲ್ಲಿಸಿದ್ದಾರೆ. ಇಂದು ಅನ್ನಂ ಪರಬ್ರಹ್ಮ ದಿನಸಿ ಕಿಟ್ ನೀಡುವ ಮೂಲಕ ಕಾರ್ಯಕ್ಕೆ ಸಾಂಕೇತಿಕ ಚಾಲನೆ ನೀಡಲಾಯಿತು. ಹೆಚ್.ಡಿ. ಕುಮಾರಸ್ವಾಮಿ ಮತ್ತು ರಾಮನಗರ ಶಾಸಕಿ ಅನಿತಾ ಕುಮಾರಸ್ವಾಮಿ ಹಾಗೂ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹಾಗೂ ರೇವತಿ ನಿಖಿಲ್ ಕುಮಾರ್ ಅನ್ನಂ ಪರಬ್ರಹ್ಮ ದಿನಸಿ ವಸ್ತುಗಳ ಕಿಟ್ ವಿತರಣೆಗೆ ರಾಮನಗರದಲ್ಲಿ ಸಾಂಕೇತಿಕವಾಗಿ ಚಾಲನೆ ನೀಡಿದರು.
ಪ್ಲಾಸ್ಮಾ ದಾನ ಮಾಡಿದ ತಬ್ಲೀಘಿಗಳು
ನವದೆಹಲಿ, ಏ. 28: ಕೊರೊನಾ ವೈರಸ್‍ನಿಂದ ಗುಣಮುಖರಾಗಿರುವ 10 ಮಂದಿ ತಬ್ಲೀಘಿ ಜಮಾಅತ್ ಸದಸ್ಯರು ನಗರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಇತರ ಕೋವಿಡ್-19 ರೋಗಿಗಳಿಗಾಗಿ ಅವರ ರಕ್ತವನ್ನು (ಪ್ಲಾಸ್ಮಾ) ದಾನ ಮಾಡಿದ್ದಾರೆ. ಭಾನುವಾರ ಇನ್ಸ್ಟಿಟ್ಯೂಟ್ ಆಫ್ ಲಿವರ್ ಅಂಡ್ ಬಿಲಿಯರಿ ಸೈನ್ಸ್ (ಐಎಲ್‍ಬಿಎಸ್) ಸಂಸ್ಥೆಯ ತಂಡ ತಬ್ಲೀಘಿಗಳಿಂದ ರಕ್ತವನ್ನು ಸಂಗ್ರಹಿಸಿದೆ. ನರೇಲಾ ಕ್ವಾರಂಟೈನಲ್ಲಿರುವ ನಾಲ್ವರಿಂದ ಮತ್ತು ಸುಲ್ತಾನ್ ಪುರಿಯಲ್ಲಿನ ಐಸೋಲೇಷನ್ ಸೆಂಟರ್‍ನಲ್ಲಿರುವ ಆರು ಮಂದಿಯಿಂದ ರಕ್ತವನ್ನು (ಪ್ಲಾಸ್ಮಾ) ಸಂಗ್ರಹಿಸಲಾಗಿದೆ. ಐಸೋಲೇಷನ್ ಕೇಂದ್ರದಲ್ಲಿ ಕ್ವಾರಂಟೈನ್‍ನಲ್ಲಿರುವ ತಬ್ಲೀಘಿಗಳಿಂದ ರಕ್ತವನ್ನು ಸಂಗ್ರಹಿಸಲು ಮೂರು ತಂಡವನ್ನು ರಚಿಸಲಾಗಿತ್ತು. ಅಗತ್ಯಬಿದ್ದರೆ ದಾನಿಗಳನ್ನು ಐಎಲ್‍ಬಿಎಸ್‍ಗೆ ಕರೆದೊಯ್ಯಲಾಗುವುದು ಎಂದು ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್ ತಿಳಿಸಿದ್ದಾರೆ.