ಸಿದ್ದಾಪುರ, ಏ.28: ಅರಣ್ಯ ಸಿಬ್ಬಂದಿಗಳ ಅನುಮತಿಯ ಮೇರೆಗೆ ಗುಡಿಸಲು ಕಟ್ಟಲು ಹಾಗೂ ಸೌದೆಗಾಗಿ ಮರದ ಕೊಂಬೆಗಳನ್ನು ಕಡಿದು ತಂದ ಆದಿವಾಸಿ ಯುವಕರ ಮೇಲೆ ಕಳವು ಆರೋಪ ಹೊರಿಸಿ ಮಾರಣಾಂತಿಕ ಹಲ್ಲೆ ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಸಿದ್ದಾಪುರ ಸಮೀಪದ ಚೆನ್ನಯ್ಯನಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದಿಡ್ಡಳ್ಳಿ ಹಾಡಿಯ ಆದಿವಾಸಿ ಯುವಕರಾದ ಮಹೇಶ್ ಹಾಗೂ ಸೋಮಣ್ಣ ಪಕ್ಕದ ಅರಣ್ಯದಿಂದ ಸೌದೆಗೆ ಹಾಗೂ ವಾಸದ ಗುಡಿಸಲನ್ನು ನಿರ್ಮಿಸಲಿಕ್ಕಾಗಿ ಮರದ ಕೊಂಬೆಗಳನ್ನು ಹೊತ್ತು ತರುವ ಸಂದರ್ಭದಲ್ಲಿ ಅರಣ್ಯ ಅಧಿಕಾರಿಗಳು ದಾಳಿ ಮಾಡಿ ಕಳವು ಪ್ರಕರಣ ದಾಖಲಿಸಿದ್ದಾರೆ. ಆದಿವಾಸಿ ಯುವಕರ ಪೈಕಿ ಮಹೇಶ್ ಎಂಬಾತ ಬೆಂಕಿ ನಂದಿಸುವ ಅರಣ್ಯ ಇಲಾಖೆಯ ತಂಡದಲ್ಲಿ ಕೆಲಸ ನಿರ್ವಹಿಸುತ್ತಿದ್ದಾನೆ. ಇಲಾಖೆ ಸಿಬ್ಬಂದಿಗಳ ಅನುಮತಿ ಪಡೆದು ಮರದ ಕೊಂಬೆಗಳನ್ನು ಇವರುಗಳು ಕಾಡಿನಿಂದ ಕಾಡಿನಿಂದ ಕಡಿದು ತಂದಿದ್ದಾರೆ. ಆದರೆ ತಾ. 23 ರಂದು ಯುವಕರನ್ನು ವಶಕ್ಕೆ ಪಡೆದ ಅರಣ್ಯ ಇಲಾಖೆಯ ತಂಡ ದಿನ ಪೂರ್ತಿ ಯುವಕರ ಮೇಲೆ ಮನಬಂದಂತೆ ಹಲ್ಲೆ ಮಾಡಿದ್ದಾರೆ ಎಂದು ಆದಿವಾಸಿ ಮುಖಂಡರುಗಳು ಆರೋಪಿಸಿದ್ದಾರೆ.

ಅರಣ್ಯ ಇಲಾಖೆಯ ವಾಚರ್ ಹಾಗೂ ಗಾರ್ಡನ್ ಸೇರಿ ರಾತೋರಾತ್ರಿ ಮರಗಳನ್ನು ಕತ್ತರಿಸಿ ಯುವಕರ ಮೇಲೆ ಸುಳ್ಳು ಕಳವು ಪ್ರಕರಣ ದಾಖಲಿಸಿದ್ದಾರೆ ಎಂದು ಆದಿವಾಸಿ ಮುಖಂಡ ಜೆ.ಕೆ ರಾಮು ಆರೋಪಿಸಿದ್ದಾರೆ. ಅಲ್ಲದೆ ಯುವಕರ ಮೇಲೆ ಕಾನೂನು ಕ್ರಮ ಕೈಗೊಳ್ಳುವ ಬದಲು ಯುವಕರ ಬಟ್ಟೆ ಬಿಚ್ಚಿ ಅಮಾನವೀಯವಾಗಿ ಹಲ್ಲೆ ಮಾಡಿರುವುದು ಖಂಡನೀಯ. ಇಲಾಖೆಯ ಸಿಬ್ಬಂದಿಗಳಾದ ತಿಮ್ಮ ಹಾಗೂ ನಾಗೇಶ್ ಎಂಬವರು ಯುವಕರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿರುವುದಾಗಿ ಆರೋಪಿಸಿರುವ ರಾಮು, ಇಬ್ಬರು ಸಿಬ್ಬಂದಿಗಳನ್ನು ಅಮಾನತುಗೊಳಿಸಬೇಕೆಂದು ಒತ್ತಾಯಿಸಿದ್ದಾರೆ.

ಗಂಭೀರವಾಗಿ ಹಲ್ಲೆಗೊಳಗಾಗಿರುವ ಯುವಕರ ಪೈಕಿ ಮಹೇಶ್ ಎಂಬಾತನಿಗೆ ನಡೆದಾಡಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆ ಕಾರಣರಾದ ಅರಣ್ಯ ಇಲಾಖೆಯ ತಪ್ಪಿತಸ್ಥರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಹಾಗೂ ಎರಡು ಕುಟುಂಬಗಳಿಗೆ ಪರಿಹಾರ ನೀಡಬೇಕೆಂದು ಮುತ್ತಮ್ಮ ಒತ್ತಾಯಿಸಿದ್ದಾರೆ.

ಕಾಡಿನಲ್ಲಿರುವ ಆದಿವಾಸಿಗಳು ದಿನಕ್ಕೊಂದು ಮರ ಕಡಿದರೆ ಅರಣ್ಯವೇ ಉಳಿಯುತ್ತಿರಲಿಲ್ಲ. ಆದರೆ ಆದಿವಾಸಿಗಳು ಕಾಡನ್ನು ಕಡಿಯುವ ಬದಲು ಕಾಡನ್ನು ಬೆಳೆಸುವುದರ ಜೊತೆಗೆ ಅರಣ್ಯವನ್ನು ಉಳಿಸುವವರಾಗಿದ್ದಾರೆ. ಕೆಲವು ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಆದಿವಾಸಿಗಳಿಗೆ ನಿರಂತರವಾಗಿ ಕಿರುಕುಳ ನೀಡುತ್ತಿರುವುದಾಗಿ ಆರೋಪಿಸಿರುವ ಆದಿವಾಸಿ ಮುಖಂಡರು ಯುವಕರ ಮೇಲೆ ಹಲ್ಲೆ ಮಾಡಿರುವ ಪ್ರಕರಣದಲ್ಲಿ ಕೂಡಲೇ ನ್ಯಾಯ ಸಿಗದಿದ್ದರೆ ಅರಣ್ಯ ಇಲಾಖೆಯ ಕಚೇರಿ ಮುಂದೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದ್ದಾರೆ.

- ವಾಸು