ರೋಗಗಳಲ್ಲಿ ಹಲವಾರು ವಿವಿಧ ರೋಗಗಳಿವೆ. ರೋಗಗಳು ಇಂದು ನಿನ್ನೆಯದ್ದಲ್ಲ. ಪ್ರಕೃತಿಯ ಹುಟ್ಟಿನಿಂದಲೇ ಪ್ರಕೃತಿಯಲ್ಲಿ ಸೃಷ್ಟಿಯಾಧ ಪ್ರಾಣಿಪಕ್ಷಿಗಳಿಗೂ, ನರಮನುಷ್ಯರಿಗೂ ರೋಗವು ತಗಲುವುದು. ಹಿಂದೆ ಪ್ರಪಂಚದಲ್ಲಿ ಜನಸಂಖ್ಯೆ ಕಡಿಮೆ ಇದ್ದಾಗ ರೋಗಗಳು ಕಡಿಮೆ ಇದ್ದವು. ನಾನು ಭಾರತದ ಸ್ವಾತಂತ್ರ್ಯ ಪೂರ್ವದಲ್ಲಿ ಪ್ರಾಥಮಿಕ ಶಾಲೆಯ ಆರನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾಗ, ನಮ್ಮ ಭಾರತದ ಜನಸಂಖ್ಯೆ ಕೇವಲ 33 ಕೋಟಿ ಇತ್ತು. ಕನ್ನಡ ಪಠ್ಯ ಪುಸ್ತಕದ ಪದ್ಯಭಾಗದಲ್ಲಿ ಒಂದು ಪದ್ಯವೇ ಇತ್ತು. ಮಕ್ಕಳಿವರೇ ನಮ್ಮ ಮಕ್ಕಳಿವರೇ ನಮ್ಮ ಮೂವತ್ತ ಮೂರು ಕೋಟಿ, ಇಂದು 133 ಕೋಟಿಗೆ ತಲುಪಲಿದೆ.
ಭಾರತವು ರೈತರ ಬೆನ್ನೆಲುಬು ಎಂದೇ ಹೆಸರುಗಳಿಸಿರುವುದು. ರೈತರು ತಾವೇ ಬೆಳೆದ ದವಸಧಾನ್ಯಗಳನ್ನು ತಾವೇ ಸಿದ್ಧಪಡಿಸಿ ಆಹಾರವಾಗಿ ಉಪಯೋಗಿಸುತ್ತಿದ್ದರು. ತಾವೇ ಬೆಳೆದ ತರಕಾರಿ ಹಣ್ಣು-ಹಂಪಲುಗಳನ್ನು ಸಾವಯವ ಗೊಬ್ಬರದಿಂದ ಬೆಳೆಸಿ ಉಪಯೋಗಿಸುತ್ತಿದ್ದರು. ಆಗ ರೈತರು ಆರೋಗ್ಯವಂತರಾಗಿ ರೋಗರುಜಿನಗಳಿಂದ ದೂರವಾಗಿ ಸುಖವಾಗಿ ಜೀವಿಸುತ್ತಿದ್ದರು. ಈಗ ಯಂತ್ರಯುಗ. ಎಲ್ಲವೂ ಯಂತ್ರಗಳಿಂದ ಸಿದ್ಧವಾಗಿ ರಾಸಾಯನಿಕ ವಸ್ತುಗಳಿಂದ ಬೆಳೆದ ಪದಾರ್ಥಗಳ ಸೇವನೆಯಿಂದ ರೋಗರುಜಿನಗಳು ಹೆಚ್ಚಾಗ ತೊಡಗಿದವು. ಜನಸಂಖ್ಯೆ ಹೆಚ್ಚಾದಾಗ ವಾಯುಮಾಲಿನ್ಯ, ಜಲಮಾಲಿನ್ಯ ಪರಿಸರ ಮಾಲಿನ್ಯವಾಗಿ ಒಂದಲ್ಲ ಒಂದು ರೀತಿಯ ಕಾಯಿಲೆಗಳು ಹರಡುವುವು. ವಾಹನಗಳ ಹೊಗೆಯಿಂದ ಕಾರ್ಖಾನೆಗಳಿಂದಲೂ ವಾಯುಮಾಲಿನ್ಯವಾಗುವುದು. ವೈಜ್ಞಾನಿಕ ಯುಗದ ಮಾಯೆಯಿಂದ ರೋಗಗಳು ಹೆಚ್ಚಾಗಲು ಕಾರಣವಾಯಿತು.
ವಿಶ್ವದಲ್ಲಿ ಚೀನಾದೇಶವೇ ಅಧಿಕ ಜನಸಂಖ್ಯೆಯ ದೇಶವೆಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಹಾಗೆಯೇ ಇಟಲಿ, ಜರ್ಮನಿ, ಫ್ರಾನ್ಸ್, ಅಮೇರಿಕಾ ಇಂಗ್ಲೆಂಡ್ ಮೊದಲಾದ ದೇಶಗಳಲ್ಲಿಯೂ ಜನಸಂಖ್ಯೆಗೆ ಕೊರತೆ ಇಲ್ಲ. ಈ ದೇಶಗಳು ಯಂತ್ರೋಪಕರಣಗಳಲ್ಲಿ ಹಾಗೂ ಕೈಗಾರಿಕೆಗಳಲ್ಲಿ ಮುಂದುವರಿದ ದೇಶಗಳು. ವಾಯುಮಾಲಿನ್ಯ, ಜಲಮಾಲಿನ್ಯ ಹಾಗೂ ಪರಿಸರ ಮಾಲಿನ್ಯವಾಯಿತು.
ಈ ವರ್ಷದ ಪ್ರಾರಂಭದಲ್ಲಿಯೇ ಚೀನಾ, ಇಟಲಿ, ಯೂರೋಪ್ ದೇಶಗಳಲ್ಲಿ ಕೊರೊನಾ ಖಾಯಿಲೆಯು ಕಾಣಿಸಿಕೊಂಡಿತು. ಆಗಲೇ ಮುನ್ನೆಚ್ಚರಿಕೆಯ ಕ್ರಮಗಳನ್ನು ಕೈಗೊಳ್ಳಬೇಕಿತ್ತು. ಈಗ ಸಮಯವು ಮೀರಿ ಹೋಗಿರುವದರಿಂದ ವಿದೇಶಗಳಿಂದ ಸ್ವದೇಶಗಳಿಗೆ ಜನರನ್ನು ಕಳಿಸುವದರಿಂದ ಸ್ವದೇಶಗಳಲ್ಲಿ ರೋಗವು ಹರಡಲು ಕಾರಣವಾಯಿತು. ಈ ಒಂದು ಕೊರೊನಾ ಎಂಬ ರೋಗವು ಯಾವ ರೀತಿಯಲ್ಲಿ ಹರಡುತ್ತದೆ ಎಂಬದು ಯಾರಿಗೂ ತಿಳಿಯದು. ಇದೊಂದು ಯುದ್ಧ ಭೂಮಿಯಂತಾಗಿದೆ. ರಣರಂಗದಂತಾಗಿದೆ. ಯುದ್ಧ ಭೂಮಿಯಲ್ಲಾದರೂ ಗುಂಡು ಶಬ್ಧಗಳಿಂದ ಕಿರುಚಾಟಗಳಿಂದ ಕೂಡಿ ಜನರನ್ನು ಎಚ್ಚರಿಸುವುದು, ಸುನಾಮಿಯಾದರೂ ಸಮುದ್ರದ ಅಲೆಗಳ ಏರುವಿಕೆಯಿಂದ, ಉಬ್ಬುವಿಕೆಯಿಂದ ಕಣ್ಣಿಗೆ ಗೋಚರಿಸುವುದು. ಭೂಕಂಪವಾದರೂ ಭೂಮಿಯ ಶಬ್ದ ಕಿವಿಗೆ ಕೇಳಿಸುವುದು. ಆದರೆ ಈ ಒಂದು ಮಹಾಮಾರಿ ರೋಗವು ಯಾವ ಸದ್ದು-ಗದ್ದಲವಿಲ್ಲದೆ ಕಣ್ಣಿಗೆ ಕಾಣಿಸದೆ, ಕಿವಿಗೆ ಕೇಳದೆ ಜನರನ್ನು ನಾಶಮಾಡಲು ಹೊರಟಿರುವುದು ಒಂದು ದುರಂತವೇ ಸರಿ. ಈ ಒಂದು ಅಂಟುಜಾಡ್ಯವು ಮುಂಗಾರು ಮಳೆ ಪ್ರಾರಂಭವಾಗುವ ತನಕವೂ ಮುಂದುವರಿಯಲಿದೆ ಎನ್ನಲಾಗಿದೆ. ಜ್ಯೋತಿಷ್ಯದ ಪ್ರಕಾರ ಹೇಳುವದಾದರೆ, ಕಲಿಯುಗವು ಪ್ರಾರಂಭವಾಗಿ ಸುಮಾರು 5121-22 ವರ್ಷಗಳು ಸರಿದವು. ಯುಗವು ಕೊನೆಗೊಳ್ಳುವ ಹಂತಕ್ಕೆ ಬಂದಾಗ ಒಂದು ರೀತಿಯ ಪ್ರಳಯವು ಸಂಭವಿಸುವುದು ಎಂಬದು ಜ್ಯೋತಿಷ್ಯರ ಅಭಿಪ್ರಾಯ. ಆಗ ಜನಸಂಖ್ಯೆ ಕಡಿಮೆಯಾಗುವುದು ಸಹಜ. 2008ನೇ ಸಾಲಿನಲ್ಲಿ ಜಪಾನಿನಲ್ಲಿ ಸುನಾಮಿ ಉಂಟಾಗಿ ಲಕ್ಷಾಂತರ ಮಂದಿ ಪ್ರಾಣ ಕಳೆದುಕೊಂಡರು. ‘‘ಹುಟ್ಟು ಅನಿವಾರ್ಯ, ಸಾವು ನಿಶ್ಚಿತ.’’ ಎಂಬಂತೆ ಒಂದಲ್ಲ ಒಂದು ರೀತಿಯಲ್ಲಿ ಸಾವು ಖಂಡಿತಾ.
ಹವಾಮಾನದ ವೈಪರೀತ್ಯವು ಖಾಯಿಲೆಗಳಿಗೆ ಒಂದು ಕಾರಣವಾಗಿದೆ. ಶಾಲಾ-ಕಾಲೇಜುಗಳಿಗಂತೂ ಬೇಸಿಗೆಯ ರಜಾ ಕಾಲವೂ ಇರುವುದು ಉತ್ತಮವೆ. ‘‘ಕಾಯಕವೇ ಕೈಲಾಸ’’ ಎಂದಂತೆ ಧೈರ್ಯದಿಂದ ತಮ್ಮ ದೈನಂದಿನ ಕೆಲಸ ಕಾರ್ಯಗಳನ್ನು ಪ್ರೀತಿಯಿಂದ, ವಿಶ್ವಾಸದಿಂದ ಮಾಡಿಕೊಂಡು ಪರಿಸರವನ್ನು ಸ್ವಚ್ಛತೆಯಿಂದ ಇಟ್ಟುಕೊಂಡು ಹಿತಮಿತವಾದ ಆಹಾರ ಸೇವನೆ ಮಾಡಿಕೊಂಡು ಆಧ್ಯಾತ್ಮಿಕ ಭಾವನೆಯನ್ನು ಬೆಳೆಸಿಕೊಂಡು, ಬಾಳಿ ಬದುಕೋಣ.
-ಕಟ್ರತನ ಕೆ. ಬೆಳ್ಯಪ್ಪ,
ಬಲಮುರಿ.