20ನೇ ಶತಮಾನದ ಜೀವನ ಶೈಲಿಗೂ 21ನೇ ಶತಮಾನದ ಜೀವನ ಶೈಲಿಗೂ ಬಹಳಷ್ಟು ವ್ಯತ್ಯಾಸ ವನ್ನು ಕಾಣಬಹುದು. ಈ ವ್ಯತ್ಯಾಸದ ಅನುಭವವನ್ನು ಮರುನೆನಪು ಮಾಡಿಕೊಳ್ಳೋಣ. ಹಾಗೂ 21ನೇ ಶತಮಾನದ ಯುವ ಜನರಿಗೆ ಈ ಜೀವನ ಶೈಲಿಯ ಮಹತ್ವವನ್ನು ತಿಳಿಯಪಡಿಸಿದಂತಾಗುತ್ತದೆ. ಈಗ ಲಾಕ್ಡೌನ್‍ನಲ್ಲಿ ಇರುವುದರಿಂದ ವಿಧಿಯಿಲ್ಲದೆ ದಿನಪತ್ರಿಕೆಯ ಪ್ರತಿಯೊಂದು ಗೆರೆಯನ್ನು ಕೂಡ ಬಿಡದೆ ಎಲ್ಲರೂ ಓದುತ್ತಿದ್ದಾರೆ. ಲಾಕ್‍ಡೌನ್ ಮುನ್ನ ಒಂದೇ ಅವಧಿಯಲ್ಲಿ ಎರೆಡೆರೆಡು ಕಲಿಕೆ, ಉದಾಃ ಶಾಲಾ ಕಾಲೇಜಿನ ಓದು, ಕಂಪ್ಯೂಟರ್ ಕ್ಲಾಸ್, ಡ್ರೈವಿಂಗ್ ಕ್ಲಾಸ್, ನಾಟ್ಯದ ಕ್ಲಾಸ್, ಸಂಗೀತ ಕ್ಲಾಸ್, ಕರಾಟೆ ಕ್ಲಾಸ್, ಯೋಗ ಕ್ಲಾಸ್, ಜಿಮ್‍ಕ್ಲಾಸ್, ಆದ್ದರಿಂದ ಪುಸ್ತಕ ಓದಲು, ಕಥೆ ಕೇಳಲು, ಮನೆ ಮಂದಿಯೊಂದಿಗೆ ಹರಟೆ ಹೊಡೆಯಲು ಅವರ ಬಳಿ ಸಮಯವಿಲ್ಲ. ಮನೆಗೆ ಬಂದರೆ ಹಾಯ್, ಆಯಿತು, ನಂತರ ಅವರವರ ಕೋಣೆಯೊಳಗೆ ಹೋದರೆ ಅಲ್ಲೆ ಎಲ್ಲಾ. ಸ್ನಾನ, ಕಲಿಕೆ, ಕಂಪ್ಯೂಟರ್, ಮೊಬೈಲ್ ಇತ್ಯಾದಿ. ಸಮಯ ಇದ್ದರೆ ಊಟಕ್ಕೆ ಹೊರಗೆ ಬರುತ್ತಾರೆ, ಇಲ್ಲವಾದರೆ ತಾಯಿ ಊಟವನ್ನು ಕೋಣೆಗೆ ಕೊಡಬೇಕು. ಬೆಳಗ್ಗಿನಿಂದ ಮಗ, ಮಗಳು, ಗಂಡ ಈಗ ಬರುತ್ತಾರೆ, ಈಗ ಬರುತ್ತಾರೆ ಎಂದು ಕಾಯುತ್ತಾ ಎಲ್ಲಾ ಕೆಲಸ ಮುಗಿಸಿ ರುಚಿಕರ ಅಡುಗೆ ಮಾಡಿ ಒಟ್ಟಿಗೆ ಕುಳಿತು ಮಾತನಾಡುತ್ತಾ ಊಟ ಮಾಡುವ ಹಂಬಲ ತಾಯಿಗೆ ಆದರೆ ಇದಕ್ಕೆ ಅವರಿಗೆ ಸಮಯ ಬೇಕಲ್ಲ ? ಆದರೆ, 30-40 ವರ್ಷಕ್ಕೆ ಹಿಂದಿನವರ ದಿನಚರಿ ಹೇಗಿತ್ತೆಂದರೆ ಬೆಳಿಗ್ಗೆ ಎದ್ದು ದೇವರ ಪೂಜೆ ಮುಗಿಸಿ, ದೂರದ ಬಾವಿಯಿಂದ ನೀರು ಸೇದಿ ತಂದು ಹಿತ್ತಲಿನ ಗಿಡಗಳಿಗೆ ಹಾಕಿ, ಮನೆಗೆ ನೀರು ತುಂಬಿಸಿ, ಅಂಗಳದ ಕಸ ಗುಡಿಸಿ ತಾಯಿಯ ಜೊತೆಯಲ್ಲಿ ದನದ ಕೊಟ್ಟಿಗೆಗೆ ಹೋಗಿ ಹಾಲು ಕರೆಯುವ ಕೆಲಸಕ್ಕೆ ಸಹಾಯ ಮಾಡಿ, ಮಳೆಗಾಲವಾದರೆ ಗದ್ದೆ ಉಳುವವರಿಗೆ ರೊಟ್ಟಿ, ಕಾಫಿ, ತೆಗೆದುಕೊಂಡು ಹೋಗಿ ಕೊಟ್ಟು ಬಂದು ತಿಂಡಿತಿಂದು ಪುಸ್ತಕ ಜೋಡಿಸಿಕೊಂಡು ಶಾಲೆಗೆ ಹೊರಡುತ್ತಿದ್ದೆವು. ದಾರಿಯುದ್ಧಕ್ಕೂ ಗೆಳೆಯರೆಲ್ಲ ಸೇರಿಕೊಳ್ಳುತ್ತಿದ್ದರು. ಶಾಲೆಯಲ್ಲಿ ಪಾಠದ ಮಧ್ಯದಲ್ಲಿ ಒಂದು ಅವಧಿಗೆ ತೋಟಗಾರಿಕೆ ಪಿರಿಯಡ್ ಇರುತ್ತಿತ್ತು. ಈ ಅವಧಿಯಲ್ಲಿ ಶಾಲಾ ತೋಟದಲ್ಲಿ ಗದ್ದೆಯಲ್ಲಿ ಅಥವಾ ಶಾಲಾ ಕೈತೋಟದಲ್ಲಿ ಕೆಲಸ ಮಾಡುತ್ತಿದ್ದೆವು. ಸಾಯಂಕಾಲ ಮನೆಗೆ ಬಂದು ಶಾಲೆಯಲ್ಲಿ ನಡೆದದನ್ನೆಲ್ಲ ಅಮ್ಮ-ಅಪ್ಪನ ಮುಂದೆ ವರದಿ ಒಪ್ಪಿಸಿ ಊಟ ಮಾಡಿ, ಮನೆಗೆ ನೀರು ತುಂಬಿಸಿ, ಪಕ್ಕದ ಕಾಡಿಗೆ ಬುಟ್ಟಿ (ಕೊಕ್ಕಲೆ ಬರಂಜಿ) ತೆಗೆದುಕೊಂಡು ಹೋಗಿ ಉದುರಿದ ತರಗಲೆಗಳನ್ನು ತಂದು ಗೊಬ್ಬರದ ಗುಂಡಿಗೆ ಸುರಿದು (ಗೊಬ್ಬರ ಮಾಡಲು) ನಂತರ ಸ್ನಾನ ಮಾಡಿ ಓದಲು ಕೂರುತ್ತಿದ್ದೆವು.

ನಮ್ಮ ಹಿರಿಯರು ಯಾವ ಕೆಲಸಕ್ಕೂ ಕೆಲಸದವರನ್ನು ಅವಲಂಬಿಸಿರಲಿಲ್ಲ. ಎರಡು, ಮೂರು ಮನೆಯವರು ಒಟ್ಟಿಗೆ ಸೇರಿಕೊಂಡು ಪರಸ್ಪರ ಕೆಲಸ ಮುಗಿಸುತ್ತಿದ್ದರು. ನಾಟಿ ಕೆಲಸದ ಸಮಯಕ್ಕೆ ಮಕ್ಕಳು ಗದ್ದೆಯಲ್ಲಿ ಓಡಾಡಲು ಕಾಯುತ್ತಿದ್ದರು. ಕೆಲಸದ ಕೊನೆಗೆ ಪೈರಿನ ಗದ್ದೆ ನಾಟಿಯನ್ನು ಭಾನುವಾರವೇ ಮಾಡಲಾಗುತ್ತಿತ್ತು. ಈ ದಿನ ಈ ಮೂರು ಮನೆಯವರು ಎಲ್ಲಾ ಮಕ್ಕಳು ಸೇರಿಕೊಂಡು ನಾಟಿ ನೆಡುತ್ತಿದ್ದೆವು. ಈಗ ಹೊರ ರಾಜ್ಯದ ಕಾರ್ಮಿಕರು ಕೆಲಸಕ್ಕೆ ಬರದೆ ಇದ್ದರೆ ಗದ್ದೆ ನಡುವದೇ ಇಲ್ಲ, ಕಾಫಿ, ಕುಯ್ಯಲು ಸಾಧ್ಯವೇ ಇಲ್ಲ ತೋಟವನ್ನು ಗುತ್ತಿಗೆಗೆ ಕೊಡಬೇಕು ಅಷ್ಟೇ. ಗದ್ದೆ ಕೆಲಸ ಮುಗಿದ ಮೇಲೆ ತಾಯಂದಿರು ಉಳಿದ ಭತ್ತವನ್ನು ಎರಡು ಮೂರು ಚೀಲಗಳಲ್ಲಿ ತುಂಬಿಸಿ ಇಡುತ್ತಿದ್ದರು. ಆ ಸಮಯದಲ್ಲಿ ಹೊರ ಜಿಲ್ಲೆಯ ರೈತರು ತಾವು ಬೆಳೆಸಿದ ದಾನ್ಯಗಳನ್ನು (ಕಡಲೆ, ರಾಗಿ, ಸಂಬಾರ, ಹುಣಸೆಹಣ್ಣು) ಎಲ್ಲವನ್ನು ಎತ್ತಿನ ಗಾಡಿಯಲ್ಲಿ ತುಂಬಿಸಿಕೊಂಡು ಊರು ಊರಿಗೆ ಬರುತ್ತಿದ್ದರು. ಹೀಗೆ ಐದು, ಆರು ಗಾಡಿಗಳು ಒಂದು ಊರಿಗೆ ಬರುತ್ತಿದ್ದವು. ಅವರು ತಂದ ಧಾನ್ಯಗಳು ವ್ಯಾಪಾರ ಆಗುವತನಕ ಊರಿನಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಮಾಡಿಕೊಡಲಾಗುತ್ತಿತ್ತು. ಅವರು ಈ ವಸ್ತುಗಳನ್ನು ಹೊತ್ತುಕೊಂಡು ಮನೆ-ಮನೆಗೆ ಒಂದು ಸೇರು ಧಾನ್ಯಕ್ಕೆ ಇಂತಿಷ್ಟು ಭತ್ತ ಎಂದು ವ್ಯಾಪಾರ ಮಾಡುತ್ತಿದ್ದರು. ಆಗ ಸನಾವು ಬೆಳೆದ ಭತ್ತವನ್ನು ಅವರಿಗೆ ನೀಡಿ ಮನೆ ತುಂಬಾ ದವಸಧಾನ್ಯಗಳನ್ನು ಶೇಖರಿಸುತ್ತಿದ್ದೆವು. ಹಾಗೆಯೇ ವ್ಯಾಪಾರದವರು ಅವಲಕ್ಕಿ, ತೆಂಗಿನಕಾಯಿ, ಬೆಲ್ಲ., ಒಣಮೀನು, ಹಪ್ಪಳ ಎಲ್ಲವನ್ನು ಮನೆಗೆ ತಂದುಕೊಟ್ಟು ಭತ್ತವನ್ನು ಬಾಳೆಗೊನೆಯನ್ನು ತೆಗೆದುಕೊಂಡು ಹೋಗುತ್ತಿದ್ದರು. ಈ ಸಮಯದಲ್ಲಿ ಮಕ್ಕಳಿಗೆ ಸುಗ್ಗಿಯೇ ಸರಿ. ಅಕ್ಕ-ತಂಗಿಯರ, ಅಣ್ಣ-ತಮ್ಮಂದಿರ ಮಕ್ಕಳೆಲ್ಲ ಒಂದೆಡೆ ಸೇರುತ್ತಿದ್ದೆವು. ಕುಂಟೆಬಿಲ್ಲೆ, ಚಿಣ್ಣಿದಾಂಡು, ಗೋಲಿ, ಲಗೋರಿ, ಕಬ್ಬಡಿ ಇಂತಹ ಆಟವನ್ನು ಆಡುತ್ತಿದ್ದೆವು. ಗದ್ದೆಯಲ್ಲಿ ಬೇಲಿಹಾಕಿ ಜಾಗ ಹಂಚಿಕೊಂಡು ತರಕಾರಿ ತೋಟ ಮಾಡುತ್ತಿದ್ದೆವು. ಅಮ್ಮ ಮನೆಯಲ್ಲಿ ಮಾಡುವ ರುಚಿಕರ ತಿಂಡಿಗೆ ಕಾಯುತ್ತಿ ದ್ದೆವು. ಆದರೆ ಈಗಿನ ಮಕ್ಕಳಿಗೆ ಅಮ್ಮ ಮನೆಯಲ್ಲಿ ಮಾಡಿದ ತಿಂಡಿಗಳೇ ಇಷ್ಟವಾಗೊಲ್ಲ. ಇದು ಏಕೆ ಮಾಡಿದೆ ಅಮ್ಮ ? ಇದಕ್ಕಿಂತ ಹೊರಗಡೆ ಹೋಗಿ ಫಿಜಾó, ಬರ್ಗರ್, ಪಾನಿಪೂರಿ, ಬಜ್ಜಿ, ಗೋಬಿ ತಿಂದು ಬರಬಹುದಿತ್ತು ಎನ್ನುತ್ತಾರೆ. ತಾಯಿ ಸೆಖೆಯಲ್ಲಿ ಬೆಂದು ಪ್ರೀತಿಯನ್ನು ಬೆರೆಸಿ ಕಷ್ಟಪಟ್ಟು ಮಾಡಿದ ತಿಂಡಿಗೆ ಬೆಲೆಯೇ ಇಲ್ಲ. ಈಗ ಎಲ್ಲದಕ್ಕೂ ಪೂರ್ಣವಿರಾಮ. ಆದರೆ, ಕೊರೊನಾ ಈಗ ಮತ್ತೆ ಹಳೆಯದ್ದನ್ನೆಲ್ಲ ಕಲಿಯುವಂತೆ ಮಾಡುತ್ತಿದೆ.

?ಅಲ್ಲಾರಂಡ ಭಾರತಿ, ನೆಲಜಿ ಗ್ರಾಮ.