ಮಡಿಕೇರಿ, ಏ. 27: ಕೊಡಗು ಜಿಲ್ಲಾ ಕೇಂದ್ರ ಮಡಿಕೇರಿಯೂ ಸೇರಿದಂತೆ, ಇಂದು ಬಹುತೇಕ ಪಟ್ಟಣಗಳಲ್ಲಿ ವಾಹನಗಳ ದಟ್ಟಣೆಯ ನಡುವೆ, ಕೃಷಿ ಉಪಕರಣ, ಗೊಬ್ಬರ, ಕಟ್ಟಡ ಸಾಮಗ್ರಿ, ಔಷಧಿಗಳು, ದಿನಸಿ ಪದಾರ್ಥ ಸೇರಿದಂತೆ ಸೊಪ್ಪು, ತರಕಾರಿ, ಹಣ್ಣು ಹಂಪಲು, ಬೇಕರಿ ತಿಂಡಿಗಳ ವ್ಯಾಪಾರ ಬಿರುಸಿನಿಂದ ಕೂಡಿತ್ತು. ಅಧಿಕ ಸಂಖ್ಯೆಯಲ್ಲಿ ವಾಹನಗಳು ರಸ್ತೆಗಿಳಿದಿದ್ದರೂ, ಎಲ್ಲಿಯೂ ಅಷ್ಟಾಗಿ ಜನದಟ್ಟಣೆ ಕಂಡುಬರಲಿಲ್ಲ.ಮಡಿಕೇರಿಯ ನೂತನ ಖಾಸಗಿ ಬಸ್ ನಿಲ್ದಾಣ, ರಾಜ್ಯ ಸಾರಿಗೆ ಸಂಸ್ಥೆಯ ಬಸ್ ನಿಲ್ದಾಣಗಳು ಸೇರಿ ದಂತೆ ಸಂತೆ ಬೀದಿ, ಮಾರುಕಟ್ಟೆಗಳಲ್ಲಿ ತರಕಾರಿ ಇತ್ಯಾದಿಗಳ ವರ್ತಕರೇ ಅಧಿಕವಿದ್ದು, ಅಷ್ಟಾಗಿ ಗ್ರಾಹಕರು ಕಂಡುಬರಲಿಲ್ಲ. ಈ ನಡುವೆ ಇಂದಿನಿಂದ ನಿರ್ಬಂಧ ಸಡಿಲಿಕೆಯೊಂದಿಗೆ ಕಟ್ಟಡ ಸಾಮಗ್ರಿ, ಇತರ ಕಿರಾಣಿ ಮಳಿಗೆಗಳ ಬಾಗಿಲು ತೆರೆದುಕೊಂಡಿದ್ದರಿಂದ ಅಂತಹ ಸಾಮಗ್ರಿಗಳ ಖರೀದಿಯಲ್ಲಿ ಹೆಚ್ಚಿನವರು ತೊಡಗಿಸಿಕೊಂಡಿದ್ದರು. ಈ ವಸ್ತುಗಳ ಸಾಗಾಟಕ್ಕೆ ವಾಹನಗಳು ಅಗತ್ಯವಾಗಿದ್ದರಿಂದ ಹೆಚ್ಚು ಸಂಖ್ಯೆಯ ಓಡಾಟ ಎದುರಾಗಿ ವಾಹನಗಳ ನಿಲುಗಡೆಗೂ ಜಾಗವಿಲ್ಲದೆ, ಪೊಲೀಸರು ಪರಿಶ್ರಮಪಟ್ಟರೆ, ಅನೇಕರು ತಮ್ಮ ವಾಹನ ನಿಲುಗಡೆಗೆ ಜಾಗಸಿಗದೆ ಪರಿತಪ್ಪಿಸುತ್ತಿದ್ದ ದೃಶ್ಯ ಗೋಚರಿಸಿತು.ಕೊನೆಗೂ ಪೊಲೀಸರು, ಮಹಿಳಾ ತಂಡ ಸಹಿತ ಸಂಚಾರ ವ್ಯವಸ್ಥೆ ಸುಗಮಗೊಳಿಸುವಲ್ಲಿ ಒತ್ತಡ ನಡುವೆ ಪ್ರಯತ್ನ ಪಡುತ್ತಿದ್ದ ಸನ್ನಿವೇಶ ಗೋಚರಿಸಿತು. ಜಿಲ್ಲೆಯ ಇತರ ತಾಲೂಕು ಕೇಂದ್ರಗಳು, ಮುಖ್ಯ ಪಟ್ಟಣಗಳಲ್ಲಿ ಇದೇ ದೃಶ್ಯ ಸಾಮಾನ್ಯ ವಾಗಿತ್ತು.

(ಮೊದಲ ಪುಟದಿಂದ) ಹಗಲು ಮೋಡದೊಂದಿಗೆ ಕೆಲವೆಡೆ ಮಳೆಯ ವಾತಾವರಣವಿದ್ದರೂ, ಗಂಟೆಗಳು ಉರುಳಿದಂತೆ ಸೂರ್ಯ ತನ್ನ ಪ್ರಖರತೆ ಹೆಚ್ಚಿಸಿಕೊಂಡ. ಹೀಗಾಗಿ ಮೋಡ ಸರಿದು ವಾತಾವಣವೂ ತಿಳಿಯಾಯಿತು.ಒಟ್ಟಿನಲ್ಲಿ ಜಿಲ್ಲೆಯೆಲ್ಲೆಡೆ ಶಾಂತಿಯುತವಾಗಿ ವ್ಯಾಪಾರ ವಹಿವಾಟು ನಡೆದು ಪೊಲೀಸರು ನಿಟ್ಟುಸಿರು ಬಿಟ್ಟರು. ಅಗ್ನಿ ಶಾಮಕದಳ ಸ್ಥಳೀಯ ಆಡಳಿತದ ನೆರವಿನೊಂದಿಗೆ ಸಾಂಕ್ರಮಿಕ ರೋಗ ಹರಡದಂತೆ ಔಷಧಿ ಸಿಂಪಡಿಸಿ ಸ್ವಚ್ಛತೆಗೆ ಒತ್ತು ನೀಡಿದ್ದ ದೃಶ್ಯವೂ ಕಂಡುಬಂತು.