ಸೋಮವಾರಪೇಟೆ, ಏ.27: ಕೊರೊನಾ ಲಾಕ್‍ಡೌನ್ ಹಿನ್ನೆಲೆ ಪ್ರಸ್ತುತ ವಾರದ ಮೂರು ದಿನಗಳಲ್ಲಿ ಬೆಳಿಗ್ಗೆ 6 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಲಾಕ್‍ಡೌನ್ ಸಡಿಲಿಸಿ ಕೆಲವೊಂದು ಅಂಗಡಿಗಳನ್ನು ತೆರೆಯಲು ಜಿಲ್ಲಾಡಳಿತ ಅನುವು ಮಾಡಿಕೊಟ್ಟಿದ್ದು, ಈ ಸಮಯದಲ್ಲಿ ಕೇಂದ್ರದ ಮಾರ್ಗಸೂಚಿಯಂತೆ ಇತರ ಅಂಗಡಿಗಳನ್ನೂ ತೆರೆಯಲು ಕ್ರಮ ಕೈಗೊಳ್ಳುವಂತೆ ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರು ಜಿಲ್ಲಾಧಿಕಾರಿಗಳಿಗೆ ಸಲಹೆ ನೀಡಿದ್ದಾರೆ.ಪ್ರಸ್ತುತ ಸೋಮವಾರ, ಬುಧವಾರ ಮತ್ತು ಶುಕ್ರವಾರ ಬೆಳಿಗ್ಗೆ 6 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಲಾಕ್‍ಡೌನ್ ಸಡಿಲಿಸಿ ದಿನಸಿ, ತರಕಾರಿ, ಹಾರ್ಡ್‍ವೇರ್, ಮೊಬೈಲ್ ರೀಚಾರ್ಜ್, ಪುಸ್ತಕ ಅಂಗಡಿ, ಬೇಕರಿ ಸೇರಿದಂತೆ ಕೆಲವೊಂದು ಅಂಗಡಿಗಳನ್ನು ಮಾತ್ರ ತೆರೆಯಲು ಅವಕಾಶ ನೀಡಲಾಗಿದೆ. ಉಳಿದಿರುವ ಅಂಗಡಿಗಳ ಮಾಲೀಕರೂ ಸಹ ಈ ಅವಧಿಯಲ್ಲಿ ತಮ್ಮ ಅಂಗಡಿಗಳನ್ನು ತೆರೆಯಲು ಅವಕಾಶ ನೀಡಬೇಕೆಂದು ಶಾಸಕರ ಗಮನ ಸೆಳೆದ ಹಿನ್ನೆಲೆ, ಶಾಸಕ ರಂಜನ್ ಅವರು ಮೊಬೈಲ್ ಮೂಲಕ ಜಿಲ್ಲಾಧಿಕಾರಿಗಳೊಂದಿಗೆ ಈ ಬಗ್ಗೆ ಚರ್ಚೆ ನಡೆಸಿದರು.ಹಲವಷ್ಟು ಅಂಗಡಿಗಳು ಕಳೆದೊಂದು ತಿಂಗಳಿನಿಂದ ಬಂದ್ ಆಗಿದ್ದು, ವರ್ತಕರು ವ್ಯಾಪಾರ ವಹಿವಾಟಿನ ನಷ್ಟ ಅನುಭವಿಸುತ್ತಿದ್ದಾರೆ. ಈ ಹಿನ್ನೆಲೆ ವಾರದ ನಿಗದಿತ ದಿನಗಳಂದು ಲಾಕ್‍ಡೌನ್ ಸಡಿಲಿಕೆ ಇರುವ ಸಮಯದಲ್ಲಿ ಕೇಂದ್ರ ಸರ್ಕಾರದ ಮಾರ್ಗಸೂಚಿಯನ್ವಯ ಅಂಗಡಿ ಮುಂಗಟ್ಟುಗಳನ್ನು ತೆರೆಯಲು ವರ್ತಕರಿಗೆ ಅವಕಾಶ ಕಲ್ಪಿಸಬೇಕೆಂದು ಶಾಸಕರು, ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರಿಗೆ ಸಲಹೆ ನೀಡಿದರು.

ತಾ. 28ರಂದು (ಇಂದು) ಜಿಲ್ಲಾ ಉಸ್ತುವಾರಿ ಸಚಿವರು ಕೊಡಗಿಗೆ ಆಗಮಿಸುವ ಸಂದರ್ಭ ಈ ಬಗ್ಗೆ ಚರ್ಚೆ ನಡೆಸಿ ಮುಂದಿನ ಕ್ರಮ ಕೈಗೊಳ್ಳುವದಾಗಿ ಜಿಲ್ಲಾಧಿಕಾರಿಗಳು ಭರವಸೆ ನೀಡಿದರು.