ಶನಿವಾರಸಂತೆ, ಏ. 27: ಸಮೀಪದ ದುಂಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೊಡ್ಡ ಬಿಳಾಹ, ಕಿರುಬಿಳಾಹ ಗ್ರಾಮಗಳಲ್ಲಿ ಚಿರತೆ ದಾಳಿ ಮುಂದುವರೆದಿದ್ದು, ಭಯಭೀತರಾಗಿರುವ ಗ್ರಾಮಸ್ಥರು ಯಸಳೂರು ಅರಣ್ಯ ಇಲಾಖೆ ಮೇಲೆ ಅಸಮಾಧಾನ ವ್ಯಕ್ತಪಡಿಸಿರುತ್ತಾರೆ.

ಗಡಿಭಾಗ ಯಸಳೂರು ಅರಣ್ಯದಲ್ಲಿ ಇತ್ತೀಚೆಗೆ ಲೆಕ್ಕಹನಲು ಗ್ರಾಮದ ಜಾನುವಾರುಗಳನ್ನು ಬಲಿ ಪಡೆದ ಚಿರತೆ ಇದೀಗ ಗ್ರಾಮಗಳ ಕಾಫಿ ತೋಟಗಳಿಗೆ ಲಗ್ಗೆ ಇಡುತ್ತಿದೆ. ಭಾನುವಾರ ಮಧ್ಯಾಹ್ನ ದೊಡ್ಡಬಿಳಾಹ ಗ್ರಾಮದ ರೇಣುಕಾ-ಮಂಜುನಾಥ್ ದಂಪತಿ ತಮ್ಮ ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿರುವಾಗ ಇದ್ದಕ್ಕಿದ್ದಂತೆ ಚಿರತೆ ಕಾಣಿಸಿಕೊಂಡಿದೆ. ರೇಣುಕಾರ ಮೇಲೆ ನೆಗೆಯುತ್ತಿದ್ದಂತೆ ಅವರು ಕಿರುಚಿ ಕೈಯಲ್ಲಿದ್ದ ಕತ್ತಿಯನ್ನು ಬೀಸಿದಾಗ ಬೆದರಿ ಸ್ವಲ್ಪ ದೂರದಲ್ಲಿದ್ದ ಮಂಜುನಾಥರ ಬಳಿ ಹಾರಿದೆ. ಮಂಜುನಾಥ್ ಕೈಯಲ್ಲಿದ್ದ ಗುದ್ದಲಿಯನ್ನು ಬೀಸಿ ಎಸೆದಾಗ ಚಿರತೆ ಅಲ್ಲಿಂದ ಓಡಿ ಹೋಯಿತು ಎಂದು ದಂಪತಿ ತಿಳಿಸಿದ್ದಾರೆ.

ದಂಪತಿಯ ಕಿರುಚಾಟ ಕೇಳಿ ಅಕ್ಕಪಕ್ಕದ ತೋಟದಲ್ಲಿದ್ದ ಗ್ರಾಮಸ್ಥರು ಕತ್ತಿ, ಕೋವಿ ಹಿಡಿದು ಬಂದಾಗ ಚಿರತೆ ಪಲಾಯನ ಮಾಡಿತ್ತು. ವಿಚಾರ ತಿಳಿದು ಅರಣ್ಯ ಇಲಾಖೆಯವರು ಸ್ಥಳಕ್ಕೆ ಬಂದು ಪರಿಶೀಲಿಸಿದರು.

ಕೋವಿಡ್-19ರ ಲಾಕ್‍ಡೌನ್ ಹಿನ್ನೆಲೆ ಗದ್ದೆ-ತೋಟಗಳ ಕೆಲಸಗಳಲ್ಲಿ ತೊಡಗಿಸಿಕೊಂಡ ಗ್ರಾಮಸ್ಥರಿಗೆ ಚಿರತೆ ದಾಳಿ ಪ್ರಾಣಭಯ ಮೂಡಿಸಿದೆ. ದೊಡ್ಡಬಿಳಾಹ, ಕಿರುಬಿಳಾಹ, ಲೆಕ್ಕೆಹನಲು ಗ್ರಾಮಗಳು ಕೊಡಗು ಜಿಲ್ಲೆಯ ಕೊಡ್ಲಿಪೇಟೆ ಹೋಬಳಿಗೆ ದುಂಡಳ್ಳಿ ಗ್ರಾಮ ಪಂಚಾಯಿತಿಗೆ ಸೇರಿದ ಗ್ರಾಮಗಳಾಗಿದ್ದು, ಗ್ರಾಮಸ್ಥರ ತೋಟಗಳ ಪಕ್ಕವೇ ಗಡಿಭಾಗದಲ್ಲಿ ಹಾಸನ ಜಿಲ್ಲೆಯ ಯಸಳೂರು ವಲಯ ಅರಣ್ಯವಿದೆ. ಕಾಡಾನೆಗಳ ದಾಳಿಯ ಜೊತೆ ಇದೀಗ ಚಿರತೆಯ ದಾಳಿ ಆರಂಭವಾಗಿದೆ.

ಹಾಡುಹಗಲಿನಲ್ಲೇ ಚಿರತೆಯ ದಾಳಿಯಿಂದ ತೋಟ-ಗದ್ದೆಗಳಲ್ಲಿ ಕೆಲಸ ಮಾಡಲು, ಮನೆಯಿಂದ ಹೊರ ಬರಲೇ ಭಯಪಡುವಂತಾಗಿದೆ. ಎಮ್ಮೆ, ಹಸುವನ್ನು ಬಲಿಪಡೆದ ಚಿರತೆ ಇದೀಗ ಮನುಷ್ಯರ ಬಲಿಗಾಗಿ ಹೊಂಚು ಹಾಕುತ್ತಿದೆ. ಯಸಳೂರು ಅರಣ್ಯ ಇಲಾಖೆಯವರು ಚಿರತೆಯನ್ನು ಹಿಡಿಯಲು ಶೀಘ್ರ ಕ್ರಮಕೈಗೊಳ್ಳಬೇಕು ಎಂದು ಗ್ರಾಮದ ಪ್ರಮುಖರಾದ ಬಿ.ಎ. ಆನಂದ್, ಬಿ.ಸಿ. ಜಯಪ್ಪ, ಬಿ.ಎಂ. ಪ್ರಕಾಶ್, ಬಿ.ಎಸ್. ಗಿರೀಶ್, ಬಿ.ಎಸ್. ಮೋಹನ್ ಹಾಗೂ ಪ್ರಣೀತ್ ಕುಮಾರ್ ಆಗ್ರಹಿಸಿದ್ದಾರೆ. -ನರೇಶ್ಚಂದ್ರ