ಕೈ-ಕಾಲು ತೊಳೆದು ಬಾ ಆಮೇಲೆ ತಿಂಡಿ ತಿನ್ನು ಅನ್ನುತ್ತಿದ್ದರೂ ಶೂ ಬಿಚ್ಚದೆ, ಬಟ್ಟೆ ಬದಲಾಯಿಸದೆ, ಸ್ಕೂಲ್ ಬ್ಯಾಗ್ ಎಲ್ಲೆಂದರಲ್ಲಿ ಬಿಸಾಕಿ ಅಮ್ಮನ ಮಾತು ಕಿವಿಗೆ ಹಾಕದೆ ತಿಂಡಿ ಡಬ್ಬಕ್ಕೆ ಕೈಹಾಕುವ ಮಕ್ಕಳೆಲ್ಲಾ ಇದೀಗ ಅಮ್ಮ ಹೇಳಲಿ ಎಂದು ಕಾಯದೆ ತಾವೇ ಆಗಾಗ ಸ್ಯಾನಿಟೈಸರ್ ಅಥವಾ ಸೋಪ್‍ನಿಂದ ಕೈಕಾಲು, ಮುಖ ತೊಳೆಯುವದನ್ನು ಕಂಡು ಮನದಲ್ಲೇ ಅಮ್ಮಂದಿರು ಕೊರೊನಾಕ್ಕೆ ಥ್ಯಾಂಕ್ಸ್ ಹೇಳುತ್ತಿದ್ದಾರೆಂದರೆ ಅಚ್ಚರಿಯಿಲ್ಲ. ಚಿಕ್ಕವರಿಂದ ದೊಡ್ಡವರವರೆಗೂ ಕಲಿಸಿದ ಸ್ವಚ್ಛತೆಯ ಪಾಠ. ಐಸ್‍ಕ್ರೀಮ್, ಕೂಲ್‍ಡ್ರಿಂಕ್ಸ್, ಹೆಸರು ಕೇಳಿದಾಗ ಬೇಡವೆಂದು ಹಿಂದೆ ಸರಿಯುತ್ತಿದ್ದಾರೆ, ಅಷ್ಟೇ ಏಕೆ ಚಿಪ್ಸ್, ಬೇಕರಿ ತಿಂಡಿಗಳಿಗೂ ಅನೇಕರು ಬಾಯ್, ಬಾಯ್ ಹೇಳಿಯಾಗಿದೆ. ಚಿಕನ್, ಮಟನ್ ಎಂದು ಇಷ್ಟಪಟ್ಟು ತಿನ್ನುವ ಮಾಂಸಪ್ರಿಯರು ತರಕಾರಿಯನ್ನೇ ಮೆಚ್ಚಿಕೊಳ್ಳುವಂತೆ ಮಾಡಿದೆ ಈ ಕೊರೊನಾ.

ಮೊನ್ನೆ ಧೂಳಿನ ಅಲರ್ಜಿಯಾಗಿ ಒಂದೆರೆಡು ಸಲ ಸೀನಿ ಯಾಕೋ ಗಂಟಲು ಕರಕರ ಆಗ್ತಿದೆ ಅನ್ನುತ್ತಿದ್ದಂತೆ ಮನೆ ಮಂದಿ ನನ್ನನ್ನು ಭಯದಿಂದ ನೋಡಿ ದೂರ ಸರಿದಿದ್ದರು. ಸಣ್ಣ ಮಗಳು ಇದನ್ನು ಧರಿಸು ಎಂದು ಮಾಸ್ಕ್ ತಂದು ಕೊಡಬೇಕೆ, ಪತಿ ಮಹಾಶಯರು ಮಕ್ಕಳೊಂದಿಗೆ ಸೇರಿ ಅಡುಗೆ ಕೆಲಸ, ಮನೆಯ ಇತರ ಕೆಲಸ ಮಾಡಿದಾಗ ಕೊರೊನಾ ಏನಪ್ಪಾ ನಿನ್ನ ಲೀಲೆ ಎಂದೆನಿಸದೆ ಇರಲಿಲ್ಲ. ಟಿವಿ ಚಾನೆಲ್‍ವೊಂದರಲ್ಲಿ ಪೇಪರ್‍ನವನು, ಹಾಲಿನವರ್ರು, ಮನೆಕೆಲಸದವ್ರು, ತರಕಾರಿಯವರು, ನೆರೆಕರೆಯವರು ಹೀಗೆ ಯಾರೆಲ್ಲಾ ಬಂದು ಹೋಗಿರುತ್ತಾರೋ, ಅಥವಾ ನೀವು ಅವರೊಂದಿಗೆ ವ್ಯವಹರಿಸಿದರೆ ಕೈಯನ್ನು ಚೆನ್ನಾಗಿ ತೊಳೆಯಿರಿ ಎಂಬ ಸಲಹೆ ಕೊಡುತ್ತಿದ್ದರು. ಈ ಸ್ವಚ್ಛತೆಯನ್ನು ನಮ್ಮ ಹಿರಿಯರು ಮಡಿ ಎಂದರು. ಬಹುಶಃ ಹಿರಿಯರು ಹೇಳುವ ಮಡಿ ಅಥವಾ ಶುದ್ಧವನ್ನು ನಾವುಗಳು ಗೊಡ್ಡು ಸಂಪ್ರದಾಯ, ಮೂಢನಂಬಿಕೆ ಎಂದು ಮೂಗೆಳೆಸಿದ್ದೇವೆ, ಬೆಳಗ್ಗೆ ಏಳುವದರೊಂದಿಗೆ ರಾತ್ರಿ ಮಲಗುವವರೆಗೂ ಹಾಗಿರಬೇಕು, ಹೀಗಿರಬೇಕು ಎಂದು ಶುದ್ಧತೆಯ ಹೆಸರಿನಲ್ಲಿ ಶಿಷ್ಟಾಚಾರವನ್ನು ಪಾಲಿಸುತ್ತಿದ್ದರು.

ಚಿಕ್ಕವರಿದ್ದಾಗ ಸ್ಕೂಲ್ ಮತ್ತಿತರೆಡೆಗಳಿಗೆ ಹೋಗಿ ಬಂದರೂ ಮನೆಯ ಮುಂದೆ ಇಟ್ಟಿರುತ್ತಿದ್ದ ನೀರಿನಲ್ಲಿ ಕೈಕಾಲು ತೊಳೆದು ಮನೆ ಒಳಪ್ರವೇಶ ಮಾಡುವಂತೆ ತಾತ ಕೋಲು ಹಿಡಿದು ಎಚ್ಚರಿಸುತ್ತಿದ್ದುದ್ದು ನೆನಪಾಗುವದು. ಇಷ್ಟಕ್ಕೆ ಬಿಡದೆ ಸ್ಕೂಲಿನಿಂದ ಬಂದವರಾದರೆ ಬಟ್ಟೆ ಬದಲಾಯಿಸಿ ಮತ್ತೊಮ್ಮೆ ಬಚ್ಚಲು ಮನೆಗೆ ಹೋಗಿ ಸೋಪು ಹಾಕಿ ಕೈಕಾಲು ತೊಳೆದು ಬಂದು ತಿಂಡಿ-ಕಾಫಿ ಸೇವಿಸಬೇಕಿತ್ತು. ಬೆಳಗ್ಗೆ ಎದ್ದ ಕೂಡಲೇ ಯಾರೊಂದಿಗೂ ಮಾತಾಡುವುದು ನಿಷಿದ್ಧ ಮುಖ ತೊಳೆದ ನಂತರವೇ ನಮ್ಮಗಳ ಕಂಠದಿಂದ ಸ್ವರ ಹೊರ ದಾಟುತ್ತಿತ್ತು. ಆದರೀಗ ಮುಖ ತೊಳೆಯದೆ ಬೆಡ್ಡಲ್ಲೇ ಕಾಫಿ ಕುಡಿದು ಬೆಡ್‍ಕಾಫಿ ಹೆಸರಿನಲ್ಲಿ ದಿನ ಪ್ರಾರಂಭಿಸುವವರಿದ್ದಾರೆ. ಹೆಂಗಸರು ಬೆಳಗ್ಗೆ ಅಡುಗೆ ಮನೆಗೆ ನುಗ್ಗಬೇಕಾದರೆ ತಲೆಕೂದಲು ಎತ್ತು ಕಟ್ಟಿ, ಕೆಲಸ ಮಾಡಲು ಶುರು ಮಾಡುತ್ತಿದ್ದರು. ಕೂದಲು ಹರಡಿ ಅಡುಗೆ ಮಾಡುವ ಮಾತೇ ಇಲ್ಲ. ಮನೆಯ ಹಿರಿಯ ಹೆಂಗಸು ಊಟ ಬಡಿಸಿದಾಗ ಇತರರು ಊಟ ಮಾಡುತ್ತಿದ್ದರು. ತಾವೇ ಎಡಗೈಯಿಂದ ಬೇಕಾದುದನ್ನು ಬಡಿಸಿಕೊಂಡು ಊಟ ಮಾಡುವಂತಿಲ್ಲ. ಉಣ್ಣುವಾಗ ಮಾತಾಡುವಂತಿಲ್ಲ. ಮಾತಾಡಿದರೆ ಪಕ್ಕದವರ ಮೇಲೆ ಎಂಜಲು ಹಾರಬಹುದು, ಆಹಾರ ನೆತ್ತಿಗೇರಬಹುದೆಂಬ ಕಾಳಜಿಯ ಜೊತೆ ಶುಚಿತ್ವದ ಮಾಹಿತಿ. ಗೋಮೂತ್ರ, ಸಗಣಿಯಲ್ಲಿ ಔಷಧೀಯ ಗುಣ ಇದೆ ಎನ್ನುವುದು ಸಾಮಾನ್ಯವಾಗಿ ಎಲ್ಲರಿಗೂ ಗೊತ್ತಿರುವ ವಿಷಯವೇ. ಹಾಗಾಗಿ ಮನೆ ಶುದ್ಧಿ ಮಾಡಲು ಬಳಸುತ್ತಿದ್ದರು. ಹೋಮ ಹಾಕಿದಾಗ ಮನೆ ಶುದ್ಧಿಯಾಗುವುದರ ಜೊತೆ ದೇಹ ಶುದ್ಧಿಗೆಂದು ಗೋಮೂತ್ರವನ್ನು ತೀರ್ಥರೂಪದಲ್ಲಿ ಕೊಡುತ್ತಾರೆ ಹೋಮಗಳಲ್ಲಿ ಬಳಸುವ ಹಲಸಿನ ಕಟ್ಟಿಗೆಯಲ್ಲಿ ಸೂಕ್ಷ್ಮಜೀವಿಗಳನ್ನು, ನಕಾರಗಳನ್ನು ನಾಶ ಮಾಡುವ ಶಕ್ತಿ ಇದೆಯೆಂದು ಬಳಸುವರು. ದೇಗುಲ ಒಳಪ್ರವೇಶ ಮಾಡುವ ಮೊದಲು ಕೈಕಾಲು ತೊಳೆದು ಹೋಗಬೇಕೆನ್ನುವ ರೂಢಿ ನೂರಾರು ಜನ ಸೇರುವಲ್ಲಿ ಸ್ವಚ್ಛತೆ ಕಾಪಾಡುವದೇ ಆಗಿದೆ. ಹುಟ್ಟು-ಸಾವು ಇದ್ದಾಗಲೂ ಶುದ್ಧವೆಂದು ಮನೆ ಸ್ವಚ್ಛಗೊಳಿಸುವರು. ಜೀವವಿರುವ ವ್ಯಕ್ತಿಯಿಂದ ಸಾಂಕ್ರಾಮಿಕ ರೋಗಗಳು ಹರಡುವಾಗ ಇನ್ನು ಆ ವ್ಯಕ್ತಿ ಸತ್ತಾಗ ಅದೆಷ್ಟು ವೈರಾಣುಗಳು ಹರಡಬಹುದು. ಹಾಗಾಗಿ ಸೂತಕದ ಮನೆಯನ್ನು ಶುದ್ಧ ಹೆಸರಿನಲ್ಲಿ ಮನೆಯ ಎಲ್ಲಾ ವಸ್ತುಗಳನ್ನು ತೊಳೆದು ಸ್ವಚ್ಛ ಮಾಡುವರು.

ಪದೇ ಪದೇ ಈಗ ಕೈ ತೊಳೆಯುವದನ್ನು ಈ ಹಿಂದೆ ಪ್ರತಿಯೊಂದು ಕೆಲಸದಲ್ಲಿ ಸ್ವಚ್ಛತೆಗೆ ಪ್ರಾಮುಖ್ಯತೆ ಕೊಟ್ಟು ಮಡಿ ಅಥವಾ ಶುದ್ಧ ಎಂದು ರೂಢಿ ಮಾಡಿಕೊಂಡಿದ್ದರು. ಈಗಿನಂತೆ ಸ್ಯಾನಿಟೈಸರ್ ಬಳಕೆ ಇರದಿದ್ದರೂ ಪ್ರಕೃತಿದತ್ತವಾಗಿ ಸಿಗುತ್ತಿದ್ದ ವಸ್ತುಗಳಿಂದಲೇ ದೇಹದ ಆಂತರಿಕ ಹಾಗೂ ಬಾಹ್ಯವನ್ನು ಕಾಪಾಡಿಕೊಳ್ಳುತ್ತಿದ್ದರು. ಹುಣಸೆ ಹಣ್ಣನ್ನು ಪಾತ್ರೆ ತೊಳೆಯಲು ಮತ್ತು ಹೆಚ್ಚು ಹೆಚ್ಚಾಗಿ ಆಹಾರದಲ್ಲಿ ಬಳಸುವ ಉದ್ದೇಶ ವೈರಾಣುಗಳಿಂದ ಕಾಪಾಡಿಕೊಳ್ಳುವುದೇ ಆಗಿದೆ. ಮಕ್ಕಳಿಗೆ ತುಳಸಿ, ಒಂದೆಲಗ, ದೊಡ್ಡಪತ್ರೆ, ಜಾಯಿಕಾಯಿ, ಬಜೆ, ಹೀಗೆ ಹತ್ತು ಹಲವು ಔಷಧಿ ಕೊಟ್ಟು ರೋಗ ನಿರೋಧಕ ಶಕ್ತಿ ಹೆಚ್ಚಾಗುವಂತೆ ಮಾಡುತ್ತಿದ್ದರು.

ಹಿಂದೆ ಅವಿಭಕ್ತ ಕುಟುಂಬವನ್ನು ಹದಿನೈದು, ಇಪ್ಪತ್ತು ಜನರಿದ್ದರೂ ಯಾರಾದರೂ ಅನಾರೋಗ್ಯದಿಂದ ಬಳಲುತ್ತಿದ್ದರೆ ಅವರನ್ನು ಪ್ರತ್ಯೇಕ ಕೊಠಡಿಯಲ್ಲಿ ಇರಿಸಿ, ಕಾಳಜಿ ವಹಿಸಿ ಆರೈಕೆ ಮಾಡುತ್ತಿದ್ದುದ್ದರಿಂದ ಮನೆಯಲ್ಲಿ ಇತರರಿಗೆ ಜ್ವರ ಹರಡದಂತೆ ಎಚ್ಚರ ವಹಿಸುತ್ತಿದ್ದರು. ಆದರೀಗ ಮೂರು-ನಾಲ್ಕು ಜನರಿದ್ದರೂ ಒಬ್ಬರ ನಂತರ ಇನ್ನೊಬ್ಬರಿಗೆ ಸಾಲಾಗಿ ಹರಡುತ್ತದೆ. ವ್ಯಾಧಿಗಳು ಪ್ರತೀ ವರ್ಷ ವಿಚಿತ್ರ ಹೆಸರಿನಿಂದ ಜನ್ಮ ತಾಳುತ್ತಿವೆ ಯೆಂದರೆ ತಪ್ಪಾಗಲಾರದು. ಏನೇ ಇರಲಿ ನಮ್ಮ ಹಿರಿಯರು ಹಾಕಿಕೊಟ್ಟ, ತಿಳಿಸಿಕೊಟ್ಟ, ಕಟ್ಟುಪಾಡು ಆರೋಗ್ಯದ ಕಾಳಜಿ, ಶಿಸ್ತನ್ನು ನಾವು ಅನುಸರಿಸಿದರೆ ಮುಂದೆ ಬರುವಂತಹ ಗಂಡಾಂತರವನ್ನು ಎದುರಿಸಬಹುದು.

?ಕುಕ್ಕನೂರು ರೇಷ್ಮಾಮನೋಜ್,

ಕುಶಾಲನಗರ.