ಆರ್ಥಿಕತೆ ಪುನಶ್ಚೇತನಕ್ಕೆ ಹೋರಾಟ

ನವದೆಹಲಿ, ಏ.27 : ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ವಿಡಿಯೋ ಕಾನ್ಫರೆನ್ಸ್ ನಡೆಸಿದ್ದು ಈ ವೇಳೆ ಅವರು ಕೋವಿಡ್-19 ಪ್ರಭಾವ ಇನ್ನಷ್ಟು ತಿಂಗಳು ಮುಂದುವರೆಯಲಿದೆ. ಇದರಿಂದ ಆರ್ಥಿಕತೆ ಕುಸಿಯಲಿದ್ದು ಮತ್ತೆ ಪುನಶ್ಚೇತನಕ್ಕಾಗಿ ಹೋರಾಡಬೇಕಿದೆ ಎಂದು ಹೇಳಿದ್ದಾರೆ. ಈ ಸಭೆಯಲ್ಲಿ ಪ್ರಧಾನಿ ಹಾಗೂ ಮುಖ್ಯಮಂತ್ರಿಗಳು 40 ದಿನಗಳ ಲಾಕ್ ಡೌನ್ ನಂತರ ಕೋವಿಡ್ ವಿರುದ್ಧ ಭಾರತದ ಹೋರಾಟದ ರೂಪುರೇಷೆ ಕುರಿತು ಚರ್ಚಿಸಿದ್ದಾರೆ. ಇದೇ ವೇಳೆ ರಾಜ್ಯಗಳ ಮುಖ್ಯಮಂತ್ರಿಗಳಿಗೆ ರೆಡ್ ಜೋನ್ ಗಳಲ್ಲಿ ಲಾಕ್ ಡೌನ್ ಅನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಆದೇಶಿಸಿದ್ದಾರೆ. ಹಲವರು ರಾಜ್ಯಗಳು ಸೋಂಕು ಕಡಿಮೆಯಿರುವ ಹಾಗೂ ಸುರಕ್ಷಿತ ವಲಯಗಳಲ್ಲಿ ಲಾಕ್ ಡೌನ್ ಸಡಿಲಗೊಳಿಸಬೇಕು ಎಂದು ಮನವಿ ಮಾಡಿವೆ. ಆದರೆ, ಸಾರ್ವಜನಿಕ ಸಭೆಗಳು, ಶೈಕ್ಷಣಿಕ ಸಂಸ್ಥೆಗಳ ಮೇಲೆ ನಿರ್ಬಂಧ ಮುಂದುವರಿಯಬೇಕು, ಅಂತಾರಾಜ್ಯ ಸಾರಿಗೆ ನಿಷೇಧಿಸಬೇಕು ಮತ್ತು ಕೇವಲ ವಲಸಿಗ ಕಾರ್ಮಿಕರಿಗೆ ಸಂಚಾರಕ್ಕೆ ಅವಕಾಶ ಕಲ್ಪಿಸಬೇಕು ಮತ್ತು ಸಾಮಾಜಿಕ ಅಂತರವನ್ನು ಕಠಿಣವಾಗಿ ಪಾಲಿಸಬೇಕು ಎಂದು ಸಲಹೆ ನೀಡಿದ್ದಾರೆ.

ಮೇ 15ರ ವರೆಗೆ ಲಾಕ್ ಡೌನ್ ಮುಂದುವರಿಕೆ !

ಬೆಂಗಳೂರು, ಏ.27 : ಕೋವಿಡ್-19 ನಿಯಂತ್ರಿಸುವ ನಿಟ್ಟಿನಲ್ಲಿ ದೇಶದಾದ್ಯಂತ ಜಾರಿಗೊಳಿಸಿರುವ ಲಾಕ್ ಡೌನ್ ಅನ್ನು ಮೇ.15ರ ವರೆಗೆ ಮುಂದುವರೆಸಬೇಕಾಗಬಹುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸುಳಿವು ನೀಡಿದ್ದಾರೆ. ಇಂದು ಪ್ರಧಾನಿ ನರೇಂದ್ರ ಮೋದಿ ನಡೆಸಿದ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗಿನ ವಿಡಿಯೋ ಸಂವಾದದಲ್ಲಿ ಯಡಿಯೂರಪ್ಪ ಪಾಲ್ಗೊಂಡಿದ್ದರು. ಬಳಿಕ ಯಡಿಯೂರಪ್ಪ ಮಾತನಾಡಿ,ಪ್ರಧಾನಿ ನರೇಂದ್ರ ಮೋದಿ ಕೊರೊನಾ ನಿಯಂತ್ರಣ ಲಾಕ್ ಡೌನ್ ಪರಿಸ್ಥಿತಿ ರಾಜ್ಯದ ಸ್ಥಿತಿಗತಿಗಳ ಬಗ್ಗೆ ವಿಡಿಯೋ ಸಂವಾದ ನಡೆಸಿ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಚರ್ಚೆ ನಡೆಸಿದ್ದಾರೆ.ರಾಜ್ಯದಲ್ಲಿ ಸೋಂಕು ಹರಡದಂತೆ ಎಲ್ಲಾ ರೀತಿಯ ಕ್ರಮಕೈಗೊಂಡಿದ್ದೇವೆ. ಮುಂದೆಯೂ ಇವುಗಳನ್ನು ವಿಸ್ತರಿಸುತ್ತೇವೆ. ಹೀಗಾಗಿ ಮೇ 3ರ ಬಳಿಕವೂ ಎರಡು ವಾರಗಳ ಕಾಲ ಲಾಕ್ ಡೌನ್ ವಿಸ್ತರಣೆಯಾಗುವ ಸಾಧ್ಯತೆ ಇದೆ ಎಂದರು. ಮೇ 15ರ ವರೆಗೂ ಲಾಕ್‍ಡೌನ್ ಇರಲಿದೆ. ಇನ್ನೂ ವಲಯವಾರು ವಿನಾಯಿತಿ ಬೇಕು ಎಂಬ ರಾಜ್ಯ ಸರ್ಕಾರದ ಅಭಿಪ್ರಾಯಕ್ಕೆ ತಕ್ಷಣಕ್ಕೆ ಪ್ರಧಾನಿ ಕಡೆಯಿಂದ ಯಾವುದೇ ಉತ್ತರ ಇಲ್ಲ. ಆದರೆ, ಮೋದಿ ಅವರ ನಿರ್ಧಾರಕ್ಕೆ ಸಂಪೂರ್ಣ ಬೆಂಬಲ ಇದೆ ಎಂದರು.

ತಬ್ಲಿಘಿ ಜಮಾತ್ ಮುಖ್ಯಸ್ಥನಿಗೆ ಸೋಂಕಿಲ್ಲ

ನವದೆಹಲಿ, ಏ.27 : ತಬ್ಲಿಘಿ ಜಮಾತ್ ಮುಖ್ಯಸ್ಥ ಮೌಲಾನಾ ಸಾದ್ ಗೆ ಕೊರೊನಾ ಇಲ್ಲವೆಂದು ಖಚಿತವಾಗಿದೆ. ಸಾದ್ ಅವರಿಗೆ ಕೋವಿಡ್-19 ಸೋಂಕು ಇಲ್ಲ ಎಂದು ಅವರ ವಕೀಲರು ಹೇಳಿದ್ದಾರೆ. ತಮ್ಮ ಕಕ್ಷಿದಾರ ಸಾದ್ ಪರಾರಿಯಾಗಿಲ್ಲ. ಆದರೆ ಅವರನ್ನು ತಮ್ಮೆದುರು ಹಾಜರಾಗುವಂತೆ ದೆಹಲಿ ಪೊಲೀಸರು ಕೇಳಿಲ್ಲ. ಈ ಕುರಿತು ನನಗೆ ಇದುವರೆಗೆ ಯಾವ ಸಮನ್ಸ್ ಬಂದಿಲ್ಲ. ಆದರೆ ನಾವಿದುವರೆಗೆ ದೊರೆತ ಎಲ್ಲಾ ಮೂರು ನೋಟೀಸ್‍ಗಳಿಗೆ ಸ್ಪಂದಿಸಿದ್ದೇವೆ ವಕೀಲ ಫಝೈಲ್ ಅಯೂಬಿ ಹೇಳಿದ್ದಾರೆ. ಮರ್ಕಜ್ ಹಾಗೂ ತಬ್ಲಿಘಿ ಜಮಾತ್ ನಲ್ಲಿ ಭಾಗವಹಿಸಿದ್ದ ಜನರು ದೆಹಲಿ ಪೊಲೀಸರೊಂದಿಗೆ ಸಂಪೂರ್ಣವಾಗಿ ಸಹಕರಿಸುತ್ತಿದ್ದಾರೆ ಎಂದು ಅವರು ಹೇಳಿದರು. ಇತ್ತೀಚೆಗೆ ಮರ್ಕಜ್ ನಲ್ಲಿರುವ ಮೌಲಾನಾ ಸಾದ್ ಅವರ ಕಚೇರಿ ಮತ್ತು ಇತರ ಆರೋಪಿಗಳ ಕಚೇರಿಗಳು ಹಾಗೂ ನಿವಾಸಗಳಲ್ಲಿ ದೆಹಲಿ ಪೊಲೀಸರು ಶೋಧ ಕಾರ್ಯಾಚರಣೆ ನಡೆಸಿದ್ದರು.

ಮಂಗಳೂರಿನ ತಾಯಿ, ಮಗನಿಗೆ ಸೋಂಕು

ಮಂಗಳೂರು, ಏ.27 : ಕೊರೋನಾ ಸೋಂಕಿತರೊಬ್ಬರು ಮೃತಪಟ್ಟ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಹಿಳೆ ಮತ್ತು ಅವರ ಪುತ್ರನಲ್ಲಿ ಸೋಂಕು ಇರುವುದು ದೃಢಪಟ್ಟಿದೆ. ಮಂಗಳೂರಿನ ಪಡೀಲ್‍ನಲ್ಲಿರುವ ಫಸ್ಟ್ ನ್ಯೂರೋ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದ ಬಂಟ್ವಾಳದ ಕಸಬಾ ನಿವಾಸಿ 78 ವರ್ಷದ ಮಹಿಳೆ (ರೋಗಿ-432) ಕೋವಿಡ್-19 ಸೋಂಕಿನಿಂದ ಮೃತಪಟ್ಟಿದ್ದರು. ಅದೇ ಆಸ್ಪತ್ರೆಯಲ್ಲಿ ಕುಲಶೇಖರದ 80 ವರ್ಷದ ಮಹಿಳೆ ಕೂಡ ಚಿಕಿತ್ಸೆ ಪಡೆಯುತ್ತಿದ್ದರು. ಮೃತ ಮಹಿಳೆಯ ಪಕ್ಕದ ಹಾಸಿಗೆಯಲ್ಲೇ ಈಗ ಸೋಂಕು ದೃಢಪಟ್ಟಿರುವ ಮಹಿಳೆ ಇದ್ದರು. ತಾಯಿ ಮತ್ತು ಮಗನಿಗೆ ಅಲ್ಲಿಂದಲೇ ಸೋಂಕು ತಗಲಿದೆ ಎಂದು ಆರೋಗ್ಯ ಇಲಾಖೆ ಹೇಳಿಕೆಯಲ್ಲಿ ತಿಳಿಸಿದೆ. ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿರುವ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಕುಲಶೇಖರದ ನಿವಾಸಿ 80 ವರ್ಷದ ಮಹಿಳೆ ಮತ್ತು ಅವರ ಪುತ್ರ 45 ವರ್ಷದ ಇಬ್ಬರು ವ್ಯಕ್ತಿಗಳ ಗಂಟಲು ದ್ರವ ಪರೀಕ್ಷೆಯ ವರದಿಗಳು ಇಂದು ಸ್ವೀಕೃತವಾಗಿದ್ದು, ವರದಿ ಕೊರೋನ ಸೋಂಕು ಇರುವುದು ದೃಢಪಟ್ಟಿದೆ ಎಂದು ದ.ಕ. ಜಿಲ್ಲಾಧಿಕಾರಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಕೇಂದ್ರ ಸರ್ಕಾರಕ್ಕೆ ಸುಪ್ರೀಂ ನೋಟೀಸ್

ನವದೆಹಲಿ, ಏ.27 : ಕೊರೋನಾ ವೈರಸ್ ಲಾಕ್ ಡೌನ್ ಸಂದರ್ಭದಲ್ಲಿ ಮುದ್ರಣ ಮತ್ತು ವಿದ್ಯುನ್ಮಾನ ಮಾಧ್ಯಮ ಸಂಸ್ಥೆಗಳಲ್ಲಿ ಸಂಬಳ ಕಡಿತ, ಬಲವಂತದ ರಜೆ ಮುಂತಾದ ಕ್ರಮಗಳನ್ನು ತೆಗೆದುಕೊಳ್ಳುತ್ತಿರುವುದರ ವಿರುದ್ಧ ಪತ್ರಕರ್ತರ ಸಂಘಗಳು ಜಂಟಿಯಾಗಿ ಸಲ್ಲಿಸಿದ್ದ ಕೈಗೆತ್ತಿಕೊಂಡ ಸುಪ್ರೀಂ ಕೋರ್ಟ್ ಈ ಸಂಬಂಧ ಕೇಂದ್ರ ಸರ್ಕಾರಕ್ಕೆ ವಿವರ ಕೇಳಿ ನೋಟಿಸ್ ಜಾರಿ ಮಾಡಿದೆ. ಕೋವಿಡ್‍ತಡೆಗಟ್ಟುವಿಕೆಗೆ ಲಾಕ್‍ಡೌನ್‍ಜಾರಿಗೊಳಿಸಿದ ನಂತರ, ಮುದ್ರಣ ಮತ್ತು ವಿದ್ಯುನ್ಮಾನ ಮಾಧ್ಯಮ ಸಂಸ್ಥೆಗಳಲ್ಲಿ ಸಂಬಳ ಕಡಿತ, ಬಲವಂತದ ರಜೆ ಮುಂತಾದ ಕ್ರಮಗಳನ್ನು ತೆಗೆದುಕೊಳ್ಳುತ್ತಿರುವುದರ ವಿರುದ್ಧ ಪತ್ರಕರ್ತರ ಸಂಘಗಳು ಜಂಟಿಯಾಗಿ ಸಲ್ಲಿಸಿದ್ದ ಮನವಿ ಅರ್ಜಿಯನ್ನು ಆಲಿಸಿರುವ ಸುಪ್ರೀಂ ಕೋರ್ಟ್, ಕೇಂದ್ರ ಸರ್ಕಾರ, ಭಾರತೀಯ ದಿನಪತ್ರಿಕೆಗಳ ಸಂಘ ಐಎನ್‍ಎಸ್) ಮತ್ತು ಸುದ್ದಿ ಪ್ರಸಾರ ಮಾಧ್ಯಮಗಳ ಸಂಸ್ಥೆ(ಎನ್‍ಬಿಎ) ಗೆ ನೋಟಿಸ್ ಜಾರಿ ಮಾಡಿದೆ. `ಈ ವಿಷಯ ಕೆಲ ಗಂಭೀರ ಸಮಸ್ಯೆಗಳನ್ನು ಹುಟ್ಟುಹಾಕಿರುವುದರಿಂದ, ಇದರ ಪರಿಗಣನೆ ಅಗತ್ಯವಾಗಿದೆ ಎಂದು ನ್ಯಾಯಮೂರ್ತಿ ಎನ್ ವಿ ರಮಣ ನೇತೃತ್ವದ ಸುಪ್ರೀಂಕೋರ್ಟ್‍ನ ಮೂವರು ನ್ಯಾಯಮೂರ್ತಿಗಳ ಪೀಠ ಹೇಳಿದೆ. `ಕೇಂದ್ರ ಸರ್ಕಾರ, ಎನ್‍ಬಿಎ ಮತ್ತು ಐಎನ್‍ಎಸ್ ಗಳಿಗೆ ನೋಟಿಸ್ ನೀಡುತ್ತೇವೆ. ಮಾಧ್ಯಮ ಸಂಸ್ಥೆಗಳು ಸಲ್ಲಿಸಿರುವ ಜಂಟಿ ಮನವಿಗಳ ಕುರಿತು ಈ ಸಂಸ್ಥೆಗಳಿಂದ ವಿವರವಾದ ಪ್ರತಿಕ್ರಿಯೆ ಪಡೆಯುತ್ತೇವೆ.' ಎಂದು ನ್ಯಾಯಾಲಯ ಹೇಳಿದೆ.

ಪತ್ರಕರ್ತರಿಗೆ 15 ಲಕ್ಷ ರೂ. ಪರಿಹಾರ

ಭುವನೇಶ್ವರ, ಏ.27 : ದೇಶದಲ್ಲಿ ಮರಣ ಮೃದಂಗ ಭಾರಿಸುತ್ತಿರುವ ಮಾರಕ ಕೊರೋನಾ ವೈರಸ್, ಪತ್ರಕರ್ತರು ಮತ್ತು ವೈದ್ಯರನ್ನೂ ಕಾಡುತ್ತಿರುವ ಹಿನ್ನಲೆಯಲ್ಲಿ ಒಡಿಶಾ ಸರ್ಕಾರ ಕೋವಿಡ್-19 ವೈರಸ್ ಸೋಂಕಿನಿಂದ ಸಾವನ್ನಪ್ಪುವ ಪತ್ರಕರ್ತರಿಗೆ 15 ಲಕ್ಷ ರೂ. ಪರಿಹಾರ ಘೋಷಣೆ ಮಾಡಿದೆ.

ಮಹಾರಾಷ್ಟ್ರ, ಚೆನ್ನೈ ಮತ್ತು ಬೆಂಗಳೂರಿನಲ್ಲಿ ಸುಮಾರು 50ಕ್ಕೂ ಹೆಚ್ಚು ಪತ್ರಕರ್ತರು ಈ ಕೊರೋನಾ ವೈರಸ್ ಗೆ ತುತ್ತಾಗಿದ್ದು, ವೈರಸ್ ಕುರಿತು ಜಾಗೃತಿ ಮೂಡಿಸುವಲ್ಲಿ ಮಾಧ್ಯಮಗಳ ನಡೆಸುತ್ತಿರುವ ಕಾರ್ಯಕ್ಕೆ ಭಾರಿ ಹಿನ್ನಡೆಯಾಗಿದೆ. ಅದಾಗ್ಯೂ ಎದೆಗುಂದ ಪತ್ರಕರ್ತರು ಪ್ರಾಣದ ಹಂಗು ಕಾರ್ಯ ನಿರ್ವಹಿಸುತ್ತಿದ್ದಾರೆ. ಇದೇ ಕಾರಣಕ್ಕೆ ಒಡಿಶಾ ಸರ್ಕಾರ ಕೋವಿಡ್-19 ನಿಂದ ಸಾವನ್ನಪ್ಪುವ ಪತ್ರಕರ್ತರಿಗೆ 15 ಲಕ್ಷ ರೂ ಪರಿಹಾರ ಘೋಷಣೆ ಮಾಡಿದೆ. ಈ ಬಗ್ಗೆ ಮಾಹಿತಿ ನೀಡಿರುವ ಒಡಿಶಾ ಸಿಎಂ ನವೀನ್ ಪಟ್ನಾಯಕ್ ಅವರು, ಕೊರೋನಾ ವೈರಸ್ ವಿರುದ್ಧ ಜಾಗೃತಿ ಮೂಡಿಸುವ ಸಲುವಾಗಿ ಪತ್ರಕರ್ತರು ಪ್ರಾಣದ ಹಂಗು ತೊರೆದು ಕೆಲಸ ಮಾಡುತ್ತಿದ್ದಾರೆ.