ಮಡಿಕೇರಿ, ಏ. 26: ಸೋಮವಾರಪೇಟೆ ಪೊಲೀಸ್ ಠಾಣಾ ಸರಹದ್ದಿನ ಸೂರ್ಲಬ್ಬಿ ಗ್ರಾಮದ ಮುಟ್ಲು ಹಮ್ಮಿಯಾಲ ಮಾಂದಲ್‍ಪಟ್ಟಿ ಕಡೆಗೆ ಹೋಗುವ ಸಾರ್ವಜನಿಕ ರಸ್ತೆಯ ಬದಿಯಲ್ಲಿ ಸೂರ್ಲಬ್ಬಿ ಅಂಚೆ ಕಚೇರಿಗೆ ವಿಲೇವಾರಿ ಮಾಡಲು ಬಂದಂತಹ ಸಾರ್ವಜನಿಕರ ಆಧಾರ್ ಕಾರ್ಡ್‍ಗಳು, ಬ್ಯಾಂಕ್ ಡೆಬಿಟ್ ಕಾರ್ಡ್‍ಗಳು, ಬ್ಯಾಂಕ್ ಚೆಕ್ ಪುಸ್ತಕಗಳು, ಶಾಲಾ ಮಕ್ಕಳ ವಿವಿಧ ದಾಖಲಾತಿಗಳು, ಎಲ್.ಐ.ಸಿ. ಇಲಾಖೆಯ ವಿವಿಧ ಕಾಗದ ಪತ್ರಗಳು, ಆರ್ಮಿಯಿಂದ ಬಂದಂತಹ ಕಾಗದ ಪತ್ರಗಳು ಇರುವಂತಹ ಪ್ಲಾಸ್ಟಿಕ್ ಚೀಲ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಸೂರ್ಲಬ್ಬಿಯ ಎ.ಯು. ಮಹೇಶ್ ಎಂಬಾತನಿಗೆ ನೋಟೀಸ್ ಜಾರಿ ಮಾಡಿ ವಿಚಾರಣೆ ಮಾಡಲಾಯಿತು.

ಈ ವೇಳೆ ಅಂಚೆ ಕಚೇರಿಗೆ ವಿಳಾಸದಾರರಿಗೆ ವಿಲೇವಾರಿ ಮಾಡಲು ಬಂದಿದ್ದ ವಿವಿಧ ಇಲಾಖೆಗಳ ಕಾಗದ ಪತ್ರಗಳು, ಆಧಾರ್ ಕಾರ್ಡ್‍ಗಳು, ಬ್ಯಾಂಕ್ ಡೆಬಿಟ್ ಕಾರ್ಡ್‍ಗಳು, ಎಲ್.ಐ.ಸಿ.ಗೆ ಸಂಬಂಧಿಸಿದ ಕಾಗದ ಪತ್ರಗಳನ್ನು ಪ್ಲಾಸ್ಟಿಕ್ ಚೀಲದಲ್ಲಿ ತುಂಬಿ ಬೇಜವಾಬ್ದಾರಿ ಮತ್ತು ನಿರ್ಲಕ್ಷ್ಯತನದಿಂದ ರಸ್ತೆಯ ಬದಿಯಲ್ಲಿ ಬಿಸಾಡಿರುವುದಾಗಿ ಆತ ಒಪ್ಪಿಕೊಂಡಿದ್ದಾನೆ. ಹಾಗೂ ಭಾರತೀಯ ಸೈನ್ಯದಿಂದ ಬಂದಂತಹ ಪ್ರಶಂಸನಾ ಸೇವಾ ಮೆಡಲ್‍ನ್ನು ಪಾರ್ಸಲ್ ಕವರ್ ಓಪನ್ ಮಾಡಿ ತೆಗೆದುಕೊಂಡಿದ್ದು; ಕೆಲವೊಂದು ವಿಲೇವಾರಿಯಾಗದ ಕಾಗದ ಪತ್ರಗಳನ್ನು ಕಕ್ಕಬ್ಬೆ ಗ್ರಾಮದ ತನ್ನ ಮನೆಯಲ್ಲಿ ಇಟ್ಟಿರುವುದಾಗಿ ತಿಳಿಸಿದ ಮೇರೆಗೆ ಪ್ರಶಂಸನಾ ಸೇವಾ ಮೆಡಲ್ ಮತ್ತು ಆರೋಪಿ ವಾಸವಿದ್ದ ಮನೆಯಿಂದ ಪಿ.ಎಲ್.ಐ.ಗೆ ಸಂಬಂಧಿಸಿದ ಕೆಲವೊಂದು ಕಾಗದ ಪತ್ರಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ.