ನಾಪೋಕ್ಲು, ಏ. 26: ಕೊರೊನಾ ಲಾಕ್‍ಡೌನ್ ನಡುವೆ ಕೊಳಕೇರಿ ಜಮಾಯತ್‍ನ ಸಲಹಾ ಸಮಿತಿ ಸದಸ್ಯ ನಿಯಮ ಉಲ್ಲಂಘನೆ ಮಾಡಿದ್ದಕ್ಕೆ ಜಮಾಯತ್‍ನಿಂದ ಸದಸ್ಯತ್ವ ರದ್ದು ಪಡಿಸಿದ ಘಟನೆ ನಡೆದಿದೆ. ಕೊಳಕೇರಿಯ ಸುನ್ನಿಮುಸ್ಲಿಂ ಜಮಾಯತ್‍ನ ಸದಸ್ಯ ಹಾಗೂ ಸಲಹಾ ಸಮಿತಿ ಸದಸ್ಯ ಎಂ.ಎಂ. ರಜಾಕ್ ಎಂಬವರು ಮದ್ಯಪಾನ ಮಾಡಿರುವ ಬಗ್ಗೆ ಜಮಾಯತ್ ಸಮಿತಿಗೆ ದೃಢಪಟ್ಟ ಹಿನ್ನೆಲೆಯಲ್ಲಿ ಜಮಾಯತ್‍ನ ಬೈಲಾ ಅನುಸಾರ ಮುಂದಿನ ಮಹಾಸಭೆವರೆಗೆ ಸದಸ್ಯತ್ವ ರದ್ದುಪಡಿಸಿ ಜಮಾಯತ್ ಆದೇಶಿಸಿದೆ.

ಜಮಾಯತ್ ಬೈಲಾ ಅನುಸಾರ ಸದಸ್ಯತ್ವ ರದ್ದುಪಡಿಸಲಾಗಿದೆ. ರಜಾಕ್ ಅವರ ಮನವಿಯನ್ನು ಪರಿಶೀಲಿಸಲು ಕೊರೊನಾ ಲಾಕ್‍ಡೌನ್ ಅಡ್ಡಿಯಾಗಿರುವುದರಿಂದ ಲಾಕ್‍ಡೌನ್ ಮುಗಿದ ಬಳಿಕ ಸಮಿತಿಯಲ್ಲಿ ಚರ್ಚಿಸಲಾಗುವುದು ಎಂದು ಜಮಾಯತ್ ಅಧ್ಯಕ್ಷ ನಾಸೀರ್ ತಿಳಿಸಿದ್ದಾರೆ.

ಕಿರುಕುಳ

ಜಮಾಯತ್ ಸದಸ್ಯತ್ವ ರದ್ದುಪಡಿಸಿರುವುದರಿಂದ ನನ್ನ ಮನೆಗೆ ಜಮಾಯತ್ ಸದಸ್ಯರು ಯಾರೂ ಬರುವ ಹಾಗಿಲ್ಲ. ನಾವು ಯಾರ ಮನೆಗೂ ಹೋಗುವ ಹಾಗಿಲ್ಲ. ನನ್ನ ಮನೆಯಲ್ಲಿ ವಯಸ್ಕ ತಾಯಿ ಇದ್ದಾರೆ. ಈ ಬಗ್ಗೆ ಲಿಖಿತ ಮನವಿ ಮಾಡಿದರೂ ಕಿರುಕುಳ ನೀಡಲಾಗುತ್ತಿದೆ. ಮದ್ಯಪಾನದ ಬಗ್ಗೆ ಜಮಾಯತ್ ಕ್ರಮ ಕೈಗೊಳ್ಳುವುದಾದರೆ ಬಹುತೇಕರ ಜಮಾಯತ್‍ನ ಸದಸ್ಯತ್ವ ರದ್ದುಪಡಿಸಬೇಕಾದೀತು ಎಂದು ಎಂ.ಎಂ. ರಜಾಕ್ ಅಳಲು ತೋಡಿಕೊಂಡಿದ್ದಾರೆ.

-ದುಗ್ಗಳ