ಸಿದ್ದಾಪುರ, ಏ. 26: ನೆಲ್ಯಹುದಿಕೇರಿ ಗ್ರಾಮ ವ್ಯಾಪ್ತಿಯಲ್ಲಿ ಕಾಡಿಗೆ ಅಟ್ಟಲ್ಪಟ್ಟಿದ್ದ ಕಾಡಾನೆಗಳು ಮತ್ತೆ ಕಾಫಿ ತೋಟದಲ್ಲಿ ಬೀಡುಬಿಟ್ಟಿದ್ದು ಗ್ರಾಮಸ್ಥರು ಭಯಭೀತರಾಗಿದ್ದಾರೆ ಕಳೆದ ಕೆಲವು ದಿನಗಳಿಂದ ನೆಲ್ಲಿಹುದಿಕೇರಿ ಸುತ್ತಮುತ್ತಲಿನ ಮೇರಿಲ್ಯಾಂಡ್ ಹಾಗೂ ಅರೆಕಾಡು ರಸ್ತೆಯ ಕೆಲವು ಕಾಫಿ ತೋಟಗಳಲ್ಲಿ ಕಾಡಾನೆಗಳು ಬೀಡುಬಿಟ್ಟು ದಾಂಧಲೆ ನಡೆಸುತಿದ್ದವು ಈ ಹಿನ್ನೆಲೆಯಲ್ಲಿ ಗ್ರಾಮಸ್ಥರು ಅರಣ್ಯ ಇಲಾಖೆಗೆ ದೂರು ನೀಡಿದ ಮೇರೆಗೆ ಅರಣ್ಯ ಇಲಾಖೆ ಅಧಿಕಾರಿ ಹಾಗೂ ಸಿಬ್ಬಂದಿ ಸೇರಿ ಒಂದು ವಾರಗಳ ಹಿಂದೆ ಕಾಫಿ ತೋಟಗಳಲ್ಲಿ ಬೀಡುಬಿಟ್ಟಿದ್ದ 25 ಕಾಡಾನೆಗಳನ್ನು ಕಾರ್ಯಾಚರಣೆ ನಡೆಸಿ ಮಾಲ್ದಾರೆ ಅರಣ್ಯಕ್ಕೆ ಅಟ್ಟಿದರು ಎರಡು ದಿನಗಳ ಕಾಲ ಸತತವಾಗಿ ಉಪವಲಯ ಅರಣ್ಯಾಧಿಕಾರಿ ಸುಬ್ರಾಯ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿತು.

ಆದರೆ ಕಾಡಾನೆಗಳು ಇದೀಗ ಕಳೆದೆರಡು ದಿನಗಳಿಂದ ಕಾಫಿ ತೋಟಗಳಲ್ಲಿ ಮತ್ತೆ ಬೀಡುಬಿಟ್ಟಿವೆ. ಒಂದು ಗುಂಪಿನಲ್ಲಿ 18 ಹಾಗೂ ಇನ್ನೊಂದು ಗುಂಪಿನಲ್ಲಿ 8 ಕಾಡಾನೆಗಳು ಕಂಡು ಬಂದಿದೆ ಎನ್ನಲಾಗಿದೆ. ಕಾಫಿ ತೋಟದಲ್ಲಿ ಹಲಸಿನ ಕಾಯಿ ತಿನ್ನಲು ಕಾಡಾನೆಗಳು ಬರುತ್ತಿದ್ದು; ಆಹಾರವನ್ನು ಅರಸಿಕೊಂಡು ಕಾಡಿನಿಂದ ನಾಡಿಗೆ ಲಗ್ಗೆ ಇಟ್ಟಿವೆ. ಕಾಡಾನೆಗಳ ಹಾವಳಿಯಿಂದಾಗಿ ಗ್ರಾಮಸ್ಥರಲ್ಲಿ ಆತಂಕ ಮನೆಮಾಡಿದೆ. ಬೀಡು ಬಿಟ್ಟಿರುವ ಕಾಡಾನೆಗಳನ್ನು ಓಡಿಸುವದರಿಂದ ಕಾಫಿ ತೋಟಗಳಿಗೆ ಹಾನಿಯಾಗುತ್ತದೆ ಎಂಬ ಕಾರಣಕ್ಕಾಗಿ ತೋಟದ ಮಾಲೀಕರು ಕಾಫಿ ತೋಟಗಳಲ್ಲಿ ಬೀಡುಬಿಟ್ಟಿರುವ ಕಾಡಾನೆಗಳನ್ನು ಕಾರ್ಯಾಚರಣೆ ನಡೆಸದಂತೆ ತಿಳಿಸಿದ್ದಾರೆ ಎನ್ನಲಾಗಿದೆ.

-ವಾಸು