ಮಡಿಕೇರಿ, ಏ. 26: ಜಾಗತಿಕ ಕೊರೊನಾ ವಿರುದ್ಧ ಸಮರ ಸಾರಿರುವ ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು, ಯಾವುದೇ ಸಂದರ್ಭ ತುರ್ತು ಕರೆಗೆ ಓಗೊಟ್ಟು ದೇಶ ಸೇವೆಗೆ ಸನ್ನದ್ಧ ರಾಗಿರುವಂತೆ ಮಾಜಿ ಯೋಧರಿಗೆ ಸಂದೇಶ ರವಾನಿಸಿದ್ದಾರೆ.ಈ ಬಗ್ಗೆ ಕೊಡಗು ಜಿಲ್ಲಾ ಸೈನಿಕರ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಜಂಟಿ ನಿರ್ದೇಶಕಿ ಲೆ.ಕ. ಗೀತಾ ಎಂ. ಶೆಟ್ಟಿ ಅವರನ್ನು ‘ಶಕ್ತಿ’ ಸಂಪರ್ಕಿಸಿ ಪ್ರತಿಕ್ರಿಯೆ ಬಯಸಿದಾಗ; ಪ್ರಸ್ತುತ ಸಂದಿಗ್ಧ ಸನ್ನಿವೇಶದಲ್ಲಿ ನಿವೃತ್ತ ಯೋಧರು ತಾವು ಇರುವಲ್ಲಿಯೇ ಅವಶ್ಯಕ ಸೇವೆಗೆ ಸನ್ನದ್ಧರಾಗುವಂತೆ ಪ್ರಧಾನಿ ಕರೆ ನೀಡಿರುವುದನ್ನು ಖಚಿತಪಡಿಸಿದರು.ಕೊರೊನಾ ಸೋಂಕು ತಡೆಗಟ್ಟುವ ದಿಸೆಯಲ್ಲಿ ನಿವೃತ್ತ ಯೋಧರು ಅಗತ್ಯ ಬಿದ್ದರೆ ದೇಶದ ರಕ್ಷಣೆಯೊಂದಿಗೆ; ಸಾಮಾಜಿಕ ಅಂತರ ಕಾಯ್ದುಕೊಳ್ಳುವಲ್ಲಿ ಜನತೆಯ ನಿಯಂತ್ರಣಕ್ಕೆ ಕೈಜೋಡಿಸುವುದು; ತುರ್ತು ರಕ್ತಕ್ಕೆ ಬೇಡಿಕೆ ಬಂದರೆ ರಕ್ತದಾನ ನೀಡುವುದು; ಕೊರೊನಾ ಸೋಂಕಿತರ ತಡೆಗೆ ವಿವಿಧ ಇಲಾಖೆಗಳ ಸೇವೆಯಲ್ಲಿ ಕೈಜೋಡಿಸು ವುದು ಮುಂತಾದ ಕಾರ್ಯದಲ್ಲಿ ಭಾಗಿಯಾಗಲು ಸಲಹೆ ಲಭಿಸಿದೆ ಎಂದರು.ಸುಸೂತ್ರ ನೆರವು: ಮಾಜಿ ಯೋಧರಿಗೆ ನಿವೃತ್ತಿ ವೇತನ; ಬ್ಯಾಂಕ್ ವ್ಯವಹಾರ, ಆರೋಗ್ಯ ಸೇವೆ, ಔಷಧೋಪಚಾರ, ಇತ್ಯಾದಿಗೆ ಯಾವುದೇ ತೊಂದರೆ ಎದುರಾಗದಂತೆ ಸದಾ ನಿಗಾವಹಿಸಿದ್ದು, ನಿವೃತ್ತರು ಸೈನಿಕ ಇಲಾಖೆಯ ಪಾಲಿ ಕ್ಲಿನಿಕ್ ಹೊರತಾಗಿಯೂ ತಮಗೆ ಸಮೀಪವಿರುವ ಚಿಕಿತ್ಸಾಲಯ, ಔಷಧಿ ಮಳಿಗೆಗಳಿಂದ ಪ್ರಯೋಜನ ಪಡೆದು ‘ಬಿಲ್’ ಪಾವತಿಸಿ ಹಣದ ನೆರವಿಗೆ ಸರಕಾರ ಅನುಕೂಲತೆ ಒದಗಿಸಿದೆ ಎಂದು ಅಧಿಕಾರಿ ಗೀತಾ ಮಾಹಿತಿ ನೀಡಿದರು.

ಕ್ಯಾಂಟೀನ್ ಇಲ್ಲ: ಈಗಿನ ಪರಿಸ್ಥಿತಿಯಲ್ಲಿ ಆರ್ಮಿ ಕ್ಯಾಂಟೀನ್ ಸ್ಥಗಿತಗೊಂಡಿದೆ ಎಂದು ವಿವರಿಸಿದ ಅವರು, ಇನ್ನುಳಿದಂತೆ ಎಲ್ಲ ರೀತಿ ಸೇವೆಗಳನ್ನು ಮುಕ್ತವಾಗಿ ಹೊಂದಿಕೊಳ್ಳಲು ಸರಕಾರದಿಂದ ಮಾರ್ಗಸೂಚಿಯನ್ನು ಎಲ್ಲ ಯೋಧರಿಗೆ ಅಂತರ್ಜಾಲ ಸೇವೆಯಲ್ಲಿ ರವಾನಿಸಲಾಗಿದೆ ಎಂದರು.

ಕರ್ತವ್ಯಕ್ಕೆ ತೊಡಕಿಲ್ಲ: ಭಾರತ ಲಾಕ್‍ಡೌನ್ ಸಂದರ್ಭ ಕೆಲವೆಡೆ ಯೋಧರು ರಜೆಯಲ್ಲಿ ಹುಟ್ಟೂರಿಗೆ ಆಗಮಿಸಿದ್ದು; ಕರ್ತವ್ಯಕ್ಕೆ ಸಕಾಲದಲ್ಲಿ ಹಿಂತೆರಳಲು ಸಮಸ್ಯೆಯಾಗಿದ್ದು; ಅಂತಹವರು ತಮ್ಮ ತಮ್ಮ ಹುಟ್ಟೂರಿನ ಮನೆಗಳಲ್ಲಿ ಇದ್ದು; ಲಾಕ್‍ಡೌನ್ ಮುಗಿದು ರೈಲು, ವಿಮಾನ, ಬಸ್ ಸಂಚಾರ ವೇಳೆ ಮರಳಿ ಕರ್ತವ್ಯಕ್ಕೆ ಹಾಜರಾಗಲು ಅನುವು ಮಾಡಿಕೊಟ್ಟಿದ್ದು, ವಾಪಾಸ್ಸಾಗುವಾಗ ಸಮೀಪದ ಮಿಲಿಟರಿ ಶಿಬಿರಗಳಲ್ಲಿ ಮಾಹಿತಿ ಒದಗಿಸಬೇಕೆಂದು ತಿಳಿಸಿದರು.

ಕೊಡಗಿನಲ್ಲಿ ವಿವಿಧ ಹಂತದ 75ಕ್ಕೂ ಅಧಿಕ ನಿವೃತ್ತ ಅಧಿಕಾರಿಗಳು ಹಾಗೂ 6 ಸಾವಿರಕ್ಕೂ ಹೆಚ್ಚು ನಿವೃತ್ತ ಯೋಧರಿದ್ದು, ಕೇಂದ್ರ ಸರಕಾರದ ಸೂಚನೆ ಬಂದರೆ; ಪ್ರಧಾನಿ ಕರೆಗೆ ಓಗೊಟ್ಟು ಸೇವೆಗೆ ತೆರಳಲು ಇದೊಂದು ಉತ್ತಮ ಅವಕಾಶವೆಂದು ಅಧಿಕಾರಿ ಗೀತಾ ಅಭಿಪ್ರಾಯ ಹಂಚಿಕೊಂಡರು.