ವೀರಾಜಪೇಟೆ, ಏ. 27: ಅಪರಾಹ್ನ 2 ಗಂಟೆಯವರೆಗೆ ನಿರ್ಬಂಧ ಸಡಿಲಿಕೆಯ ಸಮಯದಲ್ಲೂ ವೀರಾಜಪೇಟೆಯಲ್ಲಿ ಜನ, ವಾಹನ ಸಂಚಾರ ವಿರಳವಾಗಿತ್ತು. ದಿನಸಿ ಅಂಗಡಿ ಖಾಸಗಿ ಬಸ್ಸು ನಿಲ್ದಾಣದ ತರಕಾರಿ ಅಂಗಡಿಗಳಲ್ಲು ಗ್ರಾಹಕರ ಸಂಖ್ಯೆ ಕಡಿಮೆಯಾಗಿತ್ತು. ಹಾರ್ಡ್‍ವೇರ್ ಮಳಿಗೆಗಳು ಸೇರಿದಂತೆ ಇತರ ಅಂಗಡಿ ಮುಂಗಟ್ಟುಗಳು ತೆರೆದಿದ್ದವು.

ಲಾಕ್‍ಡೌನ್ ನಿರ್ಬಂಧದಿಂದ ಮನೆಯಲ್ಲಿಯೇ ಇರುವವರು ಎಂದಿನಂತೆ ತರಕಾರಿ ಖರೀದಿಸುವರೆಂಬ ವ್ಯಾಪಾರಿಗಳ ನಿರೀಕ್ಷೆ ಹುಸಿಯಾಯಿತು. ತಾಲೂಕು ಆಡಳಿತ ನೀಡಿದ ಪಾಸ್‍ಗಳನ್ನು ಬಳಸಿ ಹಣ್ಣು ಹಂಪಲು ಹಾಗೂ ತರಕಾರಿ ವ್ಯಾಪಾರಿಗಳು ತರಕಾರಿಗಳನ್ನು ಮೈಸೂರು ಆರ್.ಎಂ.ಸಿಯಿಂದ ಅಧಿಕ ದಾಸ್ತಾನಿನಲ್ಲಿ ವ್ಯಾಪಾರಕ್ಕಾಗಿ ತಂದಿದ್ದರು. ಸುಮಾರು 20 ಗೂಡ್ಸ್ ವಾಹನಗಳು ವೀರಾಜಪೇಟೆ ಪಟ್ಟಣ ಸೇರಿದಂತೆ ಸುತ್ತ ಮುತ್ತಲ ಗ್ರಾಮಗಳಲ್ಲಿ ಬೇಡಿಕೆಗೆ ತಕ್ಕಂತೆ ತಾಲೂಕು ಆಡಳಿತ ನಿಗಧಿ ಪಡಿಸಿದ ದರದಲ್ಲಿ ತರಕಾರಿ ವಿತರಣೆ ಮಾಡುತ್ತಿರುವುದರಿಂದ ಇಲ್ಲಿನ ಖಾಸಗಿ ಹಾಗೂ ಸಾರಿಗೆ ಸಂಸ್ಥೆ ಬಸ್ಸು ನಿಲ್ದಾಣದಲ್ಲಿದ್ದ ತರಕಾರಿ ವ್ಯಾಪಾರ ಕುಂಠಿತ ಕಂಡಿತು. ಗ್ರಾಹಕರ ಸಂಖ್ಯೆ ಕಡಿಮೆ ಇದ್ದುದರಿಂದ ಮಾರ್ಜಿನ್ ಫ್ರಿ ಮಳಿಗೆಗಳು, ಎಲ್ಲ ದಿನಸಿ ಅಂಗಡಿಗಳು, ತರಕಾರಿ ಅಂಗಡಿಗಳು ಪೊಲೀಸರು ಸೂಚನೆ ನೀಡುವ ಮೊದಲೇ ಎರಡು ಗಂಟೆಗೆ ಸರಿಯಾಗಿ ಮುಚ್ಚಲ್ಪಟ್ಟವು.

ವೀರಾಜಪೇಟೆ ಮತ್ಸ್ಯಭವನದಲ್ಲಿ ಇಂದು ಹೊಳೆ ಮೀನು ಮಾರಾಟಕ್ಕೆ ವ್ಯಾಪಾರಿಗಳ ನಡುವೆ ತೀವ್ರ ಪೈಪೋಟಿ ಉಂಟಾಗಿತ್ತು. ಆದರೆ ಹೊಳೆ ಮೀನನ್ನು ಖರೀದಿಸುವ ಗಿರಾಕಿಗಳು ಕಡಿಮೆ ಇದ್ದರು. ಸಮುದ್ರದ ಹಸಿ ಮೀನಿಗೆ ಪರವಾನಗಿ ಪಡೆದ ವ್ಯಾಪಾರಿಗಳು ಕೇರಳದ ಸಮುದ್ರ ಮೀನಿಗೆ ನಿರ್ಬಂಧ ಹಾಗೂ ಕೊಡಗಿನ ಎಲ್ಲ ಚೆಕ್‍ಪೋಸ್ಟ್‍ಗಳನ್ನು ಬಂದ್ ಮಾಡಿದ್ದರಿಂದ ಸಮುದ್ರದ ಹಸಿ ಮೀನು ಸರಬರಾಜು ಆಗದೆ ಎಲ್ಲಾ ವ್ಯಾಪಾರಿಗಳು ಹೊಳೆ ಮೀನಿನ ಮೇಲೆ ಅವಲಂಭಿತರಾಗಿದ್ದರು.

ತಾಲೂಕು ಆಡಳಿತ ನಿಗದಿ ಪಡಿಸಿದಂತೆ ಹೊಳೆ ಮೀನನ್ನು ಕೆ.ಜಿ.ಗೆ ರೂ 200ರಂತೆ ಮಾರಾಟ ಮಾಡುವಂತೆ ಮಾರಾಟ ದರ ನಿಗದಿಪಡಿಸಲಾಗಿದೆ. ಕೋಳಿ, ಕುರಿ ಮಾಂಸದ ಖರೀದಿಯು ಕುಂಠಿತವಾಗಿತ್ತು. ಪಟ್ಟಣ ಪಂಚಾಯಿತಿ ಎಲ್ಲ ಅಂಗಡಿಗಳ ಮುಂದೆ ನ್ಯಾಯ ಸಮ್ಮತ ದರವನ್ನು ನಮೂದಿಸಿ ನಾಮಫಲಕ ಹಾಕಿದ್ದರಿಂದ ವ್ಯಾಪಾರಿಗಳಿಗೆ ದುಬಾರಿ ಬೆಲೆಗೆ ಮಾರಾಟಕ್ಕೆ ಅವಕಾಶವಿರಲಿಲ್ಲ.

ಪೆÇನ್ನಂಪೇಟೆ: ಇಲ್ಲಿನ ಕೊಡವ ಸಮಾಜ ಸಮೀಪ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ತರಕಾರಿ ಮಾರಾಟ ಜೋರಾಗಿತ್ತು. ಒಂದೇ ಕಡೆ ಹೆಚ್ಚು ತರಕಾರಿ ಮಳಿಗೆಗಳು ಇದ್ದ ಕಾರಣ ಮಳಿಗೆಗಳ ಮುಂದೆ ಹೆಚ್ಚು ಜನದಟ್ಟಣೆ ಕಂಡು ಬರಲಿಲ್ಲ. ಗ್ರಾಹಕರು ತಮಗಿಷ್ಟ ಬಂದ ಮಳಿಗೆಯಲ್ಲಿ ತರಕಾರಿ ಖರೀದಿಸಿದರು.

ಪೆÇನ್ನಂಪೇಟೆ ಪಟ್ಟಣದಲ್ಲಿ ಜನದಟ್ಟಣೆ ತಡೆಗಟ್ಟುವ ನಿಟ್ಟಿನಲ್ಲಿ ಪಟ್ಟಣದಲ್ಲಿದ್ದ ತರಕಾರಿ ಅಂಗಡಿಗಳನ್ನು ಕಿರಿಯ ಪ್ರಾಥಮಿಕ ಶಾಲಾ ಮೈದಾನಕ್ಕೆ ಸ್ಥಳಾಂತರಿಸಲಾಗಿತ್ತು. ಕೆಲವರ ಸಣ್ಣದಾದ ಅಸಮಾಧಾನದ ನಡುವೆಯೂ ಜನ ಮೆಚ್ಚುಗೆ ಪಡೆಯುವ ಮೂಲಕ ಪೆÇನ್ನಂಪೇಟೆ ಗ್ರಾಮ ಪಂಚಾಯಿತಿಯ ಈ ಪ್ರಯೋಗ ಬಹುತೇಕ ಯಶಸ್ವಿಯಾ ಯಿತು. ವರ್ತಕರು ಬಿಸಿಲಿಗೆ ತರಕಾರಿ ಬಾಡಿಹೋಗುತ್ತಿವೆ, ಮಳೆ ಬಂದರೆ ಮಾರಾಟ ಮಾಡಲು ಕಷ್ಟ ಎಂದು ತಮ್ಮ ಅಳಲು ತೋಡಿಕೊಂಡರೂ ಕೂಡ ಸ್ಥಳ ಬದಲಾವಣೆ ಮಾಡುವ ಮೂಲಕ ಪಂಚಾಯಿತಿ ಉತ್ತಮ ಕೆಲಸ ಮಾಡಿದೆ ಎಂದರು. ಗ್ರಾಹಕರಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಪಂಚಾಯಿತಿ ವತಿಯಿಂದ ಮೈದಾನದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಹಾಗೂ ಸ್ಯಾನಿಟೈಸರ್ ವ್ಯವಸ್ಥೆ ಮಾಡಲಾಗಿತ್ತು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮೂಕಳೇರ ಸುಮಿತ್ರ, ಪಿಡಿಓ ಪುಟ್ಟರಾಜು, ಗ್ರಾಮ ಪಂಚಾಯಿತಿ ಸದಸ್ಯರು ತರಕಾರಿ ಮಾರಾಟ ಮಾಡುತಿದ್ದ ಮೈದಾನಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸಾಮಾಜಿಕ ಅಂತರ ಕಾಯ್ದು ಕೊಳ್ಳುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದರು.

ಸಿದ್ದಾಪುರದಲ್ಲಿ ಜನಜಂಗುಳಿ

ಸಿದ್ದಾಪುರ: ಲಾಕ್‍ಡೌನ್ ಸಡಿಲಿಕೆ ಮಾಡಿರುವ ಹಿನ್ನೆಲೆಯಲ್ಲಿ ಸಿದ್ದಾಪುರದಲ್ಲಿ ಅಗತ್ಯ ಸಾಮಗ್ರಿಗಳನ್ನು ಖರೀದಿಸಲು ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸಿದ್ದರು. ಸಂತೆಗಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಜನ ಕಂಡುಬಂದಿದರು. ಬ್ಯಾಂಕುಗಳ ಮುಂದೆ ಹಣ ಪಡೆಯಲು ಜನರು ಸರದಿ ಸಾಲಿನಲ್ಲಿ ನಿಂತಿದ್ದರು. ಅಲ್ಲದೆ ಮೊಬೈಲ್ ಅಂಗಡಿಗಳ ಎದುರು ಮುಗಿಬಿದ್ದಿದ್ದರು. ಆಟೋರಿಕ್ಷಾಗಳು ಇಲ್ಲದೆ ದೂರಕ್ಕೆ ತೆರಳುವ ಜನರು ಸಾಮಗ್ರಿಗಳನ್ನು ತಲೆಯ ಮೇಲೆ ಹೊತ್ತುಕೊಂಡು ಕಾಲ್ನಡಿಗೆಯಲ್ಲಿ ತೆರಳುತ್ತಿರುವ ದೃಶ್ಯ ಕಂಡುಬಂದಿತು. ಜಿಲ್ಲಾಡಳಿತ ಸಡಿಲಿಕೆ ಸಮಯವನ್ನು ಹೆಚ್ಚು ಮಾಡಿರುವ ಕಾರಣ ದೂರದಿಂದ ಬರುವ ಗ್ರಾಮಸ್ಥರಿಗೆ ಅನುಕೂಲವಾಗಿತ್ತು.