ಸೋಮವಾರಪೇಟೆ, ಏ.25: ಮುಸಲ್ಮಾನರ ಅತ್ಯಂತ ಪವಿತ್ರವಾದ ರಂಜಾನ್ ತಿಂಗಳು ಆಗಮಿಸುತ್ತಿದ್ದು ಸಾಮಾನ್ಯವಾಗಿ ರಂಜಾನ್ ತಿಂಗಳಲ್ಲಿ ಮಸೀದಿಗಳು ಅತ್ಯಂತ ಸಕ್ರಿಯವಾಗುತ್ತವೆ. ಆದರೆ ಕೊರೊನಾ ಭೀತಿಯಿಂದ ಸರ್ಕಾರ ಘೋಷಿಸಿರುವ ಲಾಕ್ ಡೌನ್ ಆದೇಶಕ್ಕೆ ಬದ್ಧರಾಗಿ ಎಲ್ಲಾ ಆರಾಧನೆಗಳನ್ನು ತಮ್ಮ ಮನೆಗಳಲ್ಲೇ ನಿರ್ವಹಿಸಬೇಕು ಎಂದು ಕರ್ನಾಟಕ ಮುಸ್ಲಿಂ ಜಮಾಅತ್ ಕಾರ್ಯದರ್ಶಿ, ಸೋಮವಾರಪೇಟೆ ಮಸೀದಿ ಧರ್ಮಗುರು ಮೌಲಾನಾ ಕೆ.ಎಂ. ಅಬೂಬಕರ್ ಸಿದ್ದೀಕ್ ಮನವಿ ಮಾಡಿದ್ದಾರೆ.
ರಂಜಾನಿನ ವಿಶೇಷ ಪ್ರಾರ್ಥನೆಯಾದ ತರಾವೀಹ್ ಸೇರಿದಂತೆ ಎಲ್ಲಾ ಆರಾಧನೆಗಳನ್ನು ಮನೆಗಳಲ್ಲಿ ಕುಟುಂಬ ಸಮೇತ ನಿರ್ವಹಿಸಬೇಕು. ಸಾಮಾಜಿಕ ಅಂತರ ಪಾಲಿಸದೆ ಸಾಮೂಹಿಕ ಪ್ರಾರ್ಥನೆ ನಡೆಸಲು, ಇಫ್ತಾರ್ ಕೂಟ ಮಾಡಲು ಯಾರೂ ಮುಂದಾಗಬಾರದು ಎಂದು ಮೋಂಟುಗೋಳಿ ತಿಳಿಸಿದ್ದಾರೆ.
ಕಳೆದ ಐದು ವಾರಗಳಂತೆ ರಂಜಾನಿನಲ್ಲಿ ಕೂಡ ಸರಕಾರದ ಮುಂದಿನ ಆದೇಶ ಬರುವ ತನಕ ಶುಕ್ರವಾರದ ಜುಮಾ ಪ್ರಾರ್ಥನೆಯನ್ನು ನಡೆಸುವಂತಿಲ್ಲ. ಆರಾಧನೆಗಾಗಿ ಮಸೀದಿಗೆ ತೆರಳುವದು ಪ್ರವಾದಿಗಳ ಚರ್ಚೆಯಾಗಿರುವಂತೆ ಪ್ರತಿಕೂಲ ಸನ್ನಿವೇಶದಲ್ಲಿ ಮನೆಯಲ್ಲಿ ಉಳಿಯುವುದು ಕೂಡ ಪ್ರವಾದಿ ಚರ್ಯೆಯೇ ಆಗಿರುತ್ತದೆ ಎಂದು ಅಬೂಬಕರ್ ಅಭಿಪ್ರಾಯಿಸಿದ್ದಾರೆ.
ಲಾಕ್‍ಡೌನ್ ಹಿನ್ನೆಲೆಯಲ್ಲಿ ಸಮಾಜದ ಆರ್ಥಿಕ ಪರಿಸ್ಥಿತಿ ಸಂಕಷ್ಟಕರವಾಗಿರುವದರಿಂದ ರಂಜಾನಿನಲ್ಲಿ ಸರಳತೆಯನ್ನು ಮೈಗೂಡಿಸುವಂತೆಯೂ ಕರೆ ನೀಡಿರುವ ಅವರು, ಕಷ್ಟಕ್ಕೀಡಾಗಿರುವ ಬಡ ಜನರಿಗೆ ನೆರವಾಗಲು ಹೆಚ್ಚಿನ ಗಮನ ಹರಿಸಬೇಕೆಂದು ಹೇಳಿದ್ದಾರೆ.
ಇಫ್ತಾರ್ ಹಾಗೂ ಸಹರಿಯಲ್ಲಿ ಮಿತಾಹಾರ ಹಾಗೂ ಸರಳತೆಯನ್ನು ಪಾಲಿಸಬೇಕು. ವೈಭವದ ಇಫ್ತಾರ್ ಗಳನ್ನು ತ್ಯಜಿಸಿ ಆಹಾರಕ್ಕಾಗಿ ತ್ರಾಸ ಪಡುತ್ತಿರುವ ಕುಟುಂಬಗಳಿಗೆ ಔದಾರ್ಯ ತೋರಬೇಕು ಎಂದರು.
ಕರ್ನಾಟಕ ಮುಸ್ಲಿಂ ಜಮಾತ್ ಈಗಾಗಲೇ ರಾಜ್ಯಾದ್ಯಂತ ಸುಮಾರು ಒಂದು ಕೋಟಿ ರೂಪಾಯಿ ಮೌಲ್ಯದ ಆಹಾರ ಸಾಮಗ್ರಿಗಳ ಕಿಟ್‍ಗಳನ್ನು ವಿತರಿಸಲು ಮುಂದಾಗಿದ್ದು, ಕೊಡಗು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ವಿತರಣೆ ಆರಂಭಗೊಂಡಿದೆ ಎಂದು ಅಬೂಬಕರ್ ತಿಳಿಸಿದ್ದಾರೆ.
ಶನಿವಾರಸಂತೆ
ಶನಿವಾರಸಂತೆ ಪೊಲೀಸ್ ಠಾಣೆಯ ಆವರಣದಲ್ಲಿ ರಂಜಾನ್ ಮಾಸಾಚರಣೆಗೆ ಸಂಬಂಧಿಸಿದಂತೆ ಪೊಲೀಸ್ ಠಾಣಾಧಿಕಾರಿ ಕೃಷ್ಣನಾಯಕ್ ಅಧ್ಯಕ್ಷತೆಯಲ್ಲಿ ಶಾಂತಿ ಸಭೆ ನಡೆಯಿತು.
ರಂಜಾನ್ ಹಬ್ಬವನ್ನು ಮನೆಯಲ್ಲಿಯೇ ಎಲ್ಲರೂ ಅಂತರವನ್ನು ಕಾಪಾಡಿಕೊಂಡು ಮುಸ್ಲಿಂ ಬಾಂಧವರು ಆಚರಿಸುವಂತೆ ತಿಳಿಸಿ ಮಸೀದಿ ಬಳಿ ಯಾರೂ ಕೂಡ ತೆರಳಬಾರದು. ಲಾಕ್‍ಡೌನ್ ಹಿನ್ನೆಲೆಯಲ್ಲಿ ಸರಕಾರದ ಆದೇಶವನ್ನು ತಪ್ಪದೆ ಪಾಲಿಸುವಂತೆ ಕೃಷ್ಣನಾಯಕ್ ಮನವಿ ಮಾಡಿದರು. ಶನಿವಾರಸಂತೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಎಂ.ಎ. ಆದಿಲ್‍ಪಾಶಾ, ಪ್ರಮುಖ ರಾದ ಬಿ.ಟಿ. ರಂಗಸ್ವಾಮಿ ಅವರುಗಳು ಮಾತನಾಡುತ್ತಾ, ರಂಜಾನ್ ಹಬ್ಬದ ಉಪವಾಸ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಸಹಕರಿಸಬೇಕಾಗಿ ಮುಸ್ಲಿಂ ಬಾಂಧವರಿಗೆ ವಿನಂತಿಸಿದರು.
ಪ್ರಮುಖರಾದ ಕೆ.ಎಂ. ಅಮೀರ್, ಅಕ್ಮಲ್, ಸರ್ದಾರ ಅಹಮ್ಮದ್, ಶುಕೂರ್, ಲಾರೆನ್ಸ್, ಮಹ್ಮದ್, ಅಬ್ದುಲ್ ಹಾಗೂ ಇಲಾಖೆಯ ಬೋಪಣ್ಣ, ಗೋವಿಂದ್, ವಿನಯ, ಶಫೀರ್, ವೆಂಕಟೇಶ್, ರಾಧ, ಪೂರ್ಣಿಮ, ಉಷಾ ಹಾಜರಿದ್ದರು.