ಸಿದ್ದಾಪುರ, ಏ. 25: ಜೀವನದಲ್ಲಿ ಬಡತನ ಹಾಗೂ ಅನಾರೋಗ್ಯದೊಂದಿಗೆ ಹೋರಾಡಿ ಬದುಕುತ್ತಿದ್ದ ಕುಟುಂಬಕ್ಕೆ ಲಾಕ್‍ಡೌನ್ ಆಗಮನ ಗಾಯದ ಮೇಲೆ ಬರೆ ಎಳೆದಂತಾಗಿದೆ. ಇರುವ ಪುಡಿಗಾಸು ಔಷಧಿ ತರಲು ಸಾಧ್ಯವಾಗದೆ, ಇತ್ತ ಆಹಾರ ತರಲು ಸಾಧ್ಯವಾಗದೇ ಕುಟುಂಬವೊಂದು ಮಾನಸಿಕ ಅಸ್ವಸ್ಥನೊಂದಿಗೆ ಬಡತನದಲ್ಲಿ ಪರದಾಡುತ್ತಿರುವ ದೃಶ್ಯ ಸಿದ್ದಾಪುರ ಸಮೀಪದ ಅವರೆಗುಂದ ಹಾಡಿಯಲ್ಲಿ ಕಂಡುಬಂದಿದೆ.

ಸಿದ್ದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅವರೆಗುಂದ ಗ್ರಾಮದ ಹರೀಶ್ ಹಾಗೂ ಲೀಲಾವತಿ ದಂಪತಿ ತನ್ನ ಮೂವರು ಮಕ್ಕಳೊಂದಿಗೆ ಬಡತನದ ಬೇಗೆಯಲ್ಲಿ ನರಳಾಡುತ್ತಿದ್ದು, ಕೊರೊನಾ ಲಾಕ್‍ಡೌನ್ ಸಂಕಷ್ಟದಲ್ಲಿದ್ದ ಕುಟುಂಬಕ್ಕೆ ಖಳನಾಯಕನಾಗಿ ಪೀಡಿಸುತ್ತಿರುವ ಚಿಂತಾಜನಕ ದೃಶ್ಯ ಕಂಡುಬಂದಿದೆ.

ತಂದೆ-ತಾಯಿಯ ಕನಸು ಭಗ್ನ

ಹರೀಶ್ ಹಾಗೂ ಲೀಲಾವತಿ ದಂಪತಿಗೆ ಮೂವರು ಮಕ್ಕಳು. ಇಬ್ಬರು ಹೆಣ್ಣು ಹಾಗೂ ಒಬ್ಬ ಗಂಡು ಮಗ. ಹೆಣ್ಣು ಮಕ್ಕಳು ಹತ್ತನೆ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿರುವ ತಂದೆ, ತನ್ನ ಮಗ ಬೆಳೆದು ತನಗೆ ಆಸರೆಯಾಗುತ್ತಾನೆಂಬ ಕನಸು ಕಟ್ಟಿ ಬೆಳೆಸಿದರು. ಆದರೆ ಮಗ ಬೆಳೆಯುತ್ತಿದ್ದಂತೆ ಮಾನಸಿಕ ಅಸ್ವಸ್ಥನಾಗುವುದರ ಮೂಲಕ ಕುಟುಂಬದ ಕನಸ್ಸನ್ನು ನುಚ್ಚು ನೂರು ಮಾಡಿದೆ.

ಕೂಡಿಟ್ಟ ಹಣ ತುತ್ತಿಗೆ...!

ಅರಣ್ಯ ಹಕ್ಕು ಕಾಯ್ದೆಯಲ್ಲಿ ಕುಟುಂಬವು ಅಲ್ಪಸ್ವಲ್ಪ ಜಾಗವನ್ನು ಹೊಂದಿದ್ದರೂ ವನ್ಯ ಮೃಗಗಳ ಉಪಟಳದಿಂದ ಕೃಷಿ ಮರೀಚಿಕೆಯಾಗಿದೆ. ಕುಟುಂಬದ ನಿರ್ವಹಣೆ ತಂದೆಯ ಮೇಲೆ, ಇದರೊಂದಿಗೆ ಇಬ್ಬರು ಹೆಣ್ಣು ಮಕ್ಕಳ ವಿದ್ಯಾಭ್ಯಾಸ ಹಾಗೂ ಮಾನಸಿಕ ಅಸ್ವಸ್ಥನಾದ ಮಗನ ಚಿಕಿತ್ಸೆ. ಈ ಎಲ್ಲಾ ನೋವುಗಳನ್ನು ಸಹಿಸಿ ಹರೀಶ್ ಸ್ಥಳೀಯವಾಗಿ ಕೂಲಿ ಕೆಲಸಕ್ಕೆ ಹೋಗಿ ಕುಟುಂಬದ ನಿರ್ವಹಣೆ ಮಾಡು ತ್ತಿದ್ದಾರೆ. ಕಳೆದ 14 ವರ್ಷಗಳಿಂದ ಮಗ ಪ್ರವೀಣನ ಚಿಕಿತ್ಸೆಗಾಗಿ ಹಣ ಕೂಡಿಡುವ ಕಾಯಕದಲ್ಲಿ ತೊಡಗಿದರೂ ಕೂಡ ಕೂಡಿಟ್ಟ ಹಣ ಕುಟುಂಬದ ನಿರ್ವಹಣೆಗೂ ಸಾಲದಂತಾಗಿದೆ. ಇನ್ನೆಲ್ಲಿಂದ ಮಗನ ಚಿಕಿತ್ಸೆ ಎಂದು ಕಣ್ಣೀರಾಕುತ್ತಿದೆ ಬಡ ಕುಟುಂಬ.

ಕಂಟಕವಾಗಿದೆ ಲಾಕ್‍ಡೌನ್

ಮಗ ಪ್ರವೀಣನಿಗೆ ಪ್ರತಿ ತಿಂಗಳು ಚಿಕಿತ್ಸೆ ಹಾಗೂ ಔಷಧಿಗಾಗಿ ಮಡಿಕೇರಿಗೆ ತೆರಳಬೇಕು. ಆದರೆ ಲಾಕ್‍ಡೌನ್ ಹಿನ್ನೆಲೆ ದಿನ ಕೆಲಸ ಕಳೆದುಕೊಂಡು ಬಡತನದಲ್ಲಿರುವ ಕುಟುಂಬಕ್ಕೆ ವಾಹನದ ಬಾಡಿಗೆ ಹಾಗೂ ಔ್ಸÀಧಿಗೆ ಹೊಂದಿಸಲು ಹಣದ ಕೊರತೆ ಇರುವುದರಿಂದ ಮಗನ ಚಿಕಿತ್ಸೆಗಾಗಿ ಹರಸಾಹಸ ಪಡುತ್ತಿದ್ದಾರೆ.

ಪಡಿತರ ಅಕ್ಕಿಯೇ ಮೃಷ್ಟಾನ್ನ

ಬಡತನ ಹಾಗೂ ಅನಾರೋಗ್ಯದಿಂದ ಬಳಲುತ್ತಿರುವ ಕುಟುಂಬಕ್ಕೆ ಆಸರೆಯಾಗಿದ್ದ ಹರೀಶ್, ಲಾಕ್‍ಡೌನ್‍ನಿಂದ ಕೂಲಿ ಕೆಲಸವಿಲ್ಲದೆ ಮನೆಯ ನಿರ್ವಹಣೆ ಇಲ್ಲದೆ ಕೇವಲ ಪಡಿತರ ಚೀಟಿಯಲ್ಲಿ ಸಿಗುವ ಅಕ್ಕಿಯನ್ನೇ ಅವಲಂಭಿಸಿ ಜೀವನ ಸಾಗಿಸುತ್ತಿದ್ದಾರೆ. ಅಪ್ಪನಾಗಿ ಮಕ್ಕಳಿಗೆ ಒಳ್ಳೆಯ ಆಹಾರ ನೀಡಲಾಗದೇ, ನಿರ್ಗತಿಕನಾಗಿ ಬದುಕುತ್ತಿದ್ದೇನೆ ಎಂದು ಕಣ್ಣೀರಾಕುತ್ತಿದ್ದಾರೆ.

ಭರವಸೆ ಮರೆತ ವೈದÀ್ಯರು

ಕೆಲವು ದಿನಗಳ ಹಿಂದೆ ಪತ್ರಿಕೆಯೊಂದರಲ್ಲಿ ಬಂದ ಸುದ್ದಿಗೆ ಸಂಬಂಧಿಸಿದಂತೆ, ಮಗನಿಗೆ ಮಡಿಕೇರಿಯಲ್ಲಿ ಚಿಕಿತ್ಸೆ ಕೊಡಿಸಿದರು. ನಂತರ ಪ್ರತಿ ತಿಂಗಳು ಮನೆಗೆ ಬಂದು ಚಿಕಿತ್ಸೆ ಹಾಗೂ ಔಷಧಿ ನೀಡುವುದಾಗಿ ಭರವಸೆ ನೀಡಿದರು. ಆದರೆ ಇದುವರೆಗೂ ಯಾರೂ ಕೂಡ ಇತ್ತ ನೋಡಲಿಲ್ಲ ಎಂದು ಹರೀಶ್ ಅಳಲು ತೋಡಿಕೊಳ್ಳುತ್ತಾರೆ.

ವಿವಸ್ತ್ರನಾಗಿ ತಿರುಗಾಟ

ಬಾಲಕನಿಗೆ ಎಷ್ಟೇ ಬಾರಿ ವಸ್ತ್ರ ಧರಿಸಿಕೊಟ್ಟರೂ ಆತ ಕ್ಷಣಾರ್ಧದಲ್ಲಿ ವಿವಸ್ತ್ರನಾಗಿ ತೋಟದ ಸುತ್ತ ಓಡುತ್ತಾನೆ. ಕೆಲವೊಮ್ಮೆ ಬೊಬ್ಬೆ ಹಾಕುವುದು, ಕಿರುಚಾಡುತ್ತಾನೆ. ಅಲ್ಲದೆ ಕೆಲವು ಬಾರಿ ಹಲ್ಲೆಗೂ ಮುಂದಾಗುತ್ತಾನೆ. ತೋಟದ ಮಣ್ಣನ್ನು ತಿನ್ನುತ್ತಾನೆ. ಒಬ್ಬರು ಮನೆಯಲ್ಲಿ ಮಗನೊಂದಿಗೆ ಇರಬೇಕಾದ ಅನಿವಾರ್ಯತೆಯಿದೆ ಎಂದು ಬಾಲಕನ ತಾಯಿ ಅಳಲು ತೋಡಿಕೊಂಡರು.

ನೆರವು ಯಾಚಿಸಿದ ಪೋಷಕರು

ಮಗ ಮಾನಸಿಕ ಅಸ್ವಸ್ಥನಾಗಿರುವುದರಿಂದ ಇಬ್ಬರು ಹೆಣ್ಣು ಮಕ್ಕಳನ್ನು ವಸತಿ ಸಹಿತ ಸರಕಾರಿ ಶಾಲೆಯಲ್ಲಿ ಓದಿಸುತ್ತಿದ್ದೇವೆ. ಮಗನನ್ನು ನೋಡಿಕೊಳ್ಳಲು, ಉಪಚರಿಸಲು ಒಬ್ಬರು ಜೊತೆಯಲ್ಲೇ ಇರಬೇಕು. ಮಗನಿಗೆ ಚಿಕಿತ್ಸೆ ಕೊಡಿಸಬೇಕು ಆದರೆ ಚಿಕಿತ್ಸೆ ಎಲ್ಲಿ ಹೇಗೆ ಎಂಬುದು ಗೊತ್ತಿಲ್ಲ. ಸಂಘ-ಸಂಸ್ಥೆಗಳು ಸಹಾಯ ಮಾಡಿ ನಮ್ಮ ಮಗನನ್ನು ಪೂರ್ಣ ಆರೋಗ್ಯವಂತ ನಾಗಿಸಿಕೊಡಿ ಎಂದು ಪೋಷಕರು ಸಹೃದಯರಲ್ಲಿ ಬೇಡಿಕೊಂಡಿದ್ದಾರೆ.

- ವಾಸು ಆಚಾರ್ಯ