ವೀರಾಜಪೇಟೆ, ಏ. 25: ವೀರಾಜಪೇಟೆ ಪಟ್ಟಣ ಪಂಚಾಯಿತಿ ಯ ಮುಖ್ಯಾಧಿಕಾರಿ ಹಾಗೂ ಆಡಳಿತ ಅಧಿಕಾರಿಗಳು ಒಡೆದು ಆಳುವ ನೀತಿಯನ್ನು ಅನುಸರಿ ಸುತ್ತಿದ್ದಾರೆ. ಕೊರೊನಾ ವೈರಸ್ ಭೀತಿ 45 ದಿನಗಳ ಹಿಂದೆಯೇ ಪ್ರಾರಂಭ ಗೊಂಡಿದ್ದು, 30 ದಿನಗಳಿಂದ ಲಾಕ್‍ಡೌನ್ ಆದೇಶ ಜಾರಿಗೊಂಡಿ ದ್ದರೂ ಪಟ್ಟಣ ಪಂಚಾಯಿತಿಯ ಎಲ್ಲ ಸದಸ್ಯರುಗಳನ್ನು ವಿಶ್ವಾಸಕ್ಕೆ ತೆಗೆದು ಕೊಂಡು ಇಬ್ಬರು ಅಧಿಕಾರಿಗಳು ಒಂದು ಸಭೆಯನ್ನು ನಡೆಸಿಲ್ಲ. ಜಿಲ್ಲಾಧಿಕಾರಿ, ರಾಜ್ಯ ಸರಕಾರದ ಲಾಕ್‍ಡೌನ್ ನಿರ್ಬಂಧದ ನೀತಿ ನಿಯಮಗಳನ್ನು ಸದಸ್ಯರುಗಳ ಗಮನಕ್ಕೆ ತರುತ್ತಿಲ್ಲ ಎಂದು ಅಧಿಕಾರಿಗಳ ಮುಂದೆ ಆರೋಪಿಸಿದರು.

ವೀರಾಜಪೇಟೆ ಪಟ್ಟಣ ಪಂಚಾಯಿತಿ ಸದಸ್ಯರುಗಳು ತಾಲೂಕು ಕಚೇರಿಯ ಸಭಾಂಗಣ ದಲ್ಲಿ ತಹಶೀಲ್ದಾರ್ ಎಂ.ಎಲ್. ನಂದೀಶ್ ಅವರ ಸಮ್ಮುಖದಲ್ಲಿ ಸಭೆ ನಡೆಸಿ ಚುನಾಯಿತಿ ಪ್ರತಿನಿಧಿಗಳನ್ನು ಅಧಿಕಾರಿಗಳು ವಿಶ್ವಾಸಕ್ಕೆ ತೆಗೆದುಕೊಳ್ಳದೆ ತಿರಸ್ಕರಿಸುತ್ತಿರುವ ಕುರಿತು ಆರೋಪಿಸಿದರು. ತಾಲೂಕು ಕಚೇರಿಯಲ್ಲಿ ದಳ್ಳಾಳಿಗಳ ದರ್ಬಾರ್ ಹೆಚ್ಚುತ್ತಿದ್ದು ಸದಸ್ಯರುಗಳ ಸಲಹೆಗೆ ಬೆಲೆ ಇಲ್ಲದಂತಾಗಿದೆ. ಸದಸ್ಯರು ಗಳಿಗಿಂತಲೂ ಮುಖ್ಯಾಧಿಕಾರಿ, ಆಡಳಿತಾಧಿಕಾರಿಗೆ ದಳ್ಳಾಳಿಯೇ ಮೇಲಾಗಿದ್ದಾರೆ. ನಿರ್ಗತಿಕರಿಗೆ ಕಿಟ್ ವಿತರಣೆ ಇತರ ಎಲ್ಲ ಸೌಲಭ್ಯಗಳ ಒದಗಿಸುವಿಕೆಯಲ್ಲಿ ದಳ್ಳಾಳಿಗಳ ಪಾತ್ರ ಹಿರಿದಾಗಿದೆ ಎಂದು ದೂರಿದರು.

ಸದಸ್ಯ ರಂಜಿ ಪೂಣಚ್ಚ ಮಾತನಾಡಿ, ಲಾಕ್‍ಡೌನ್ ಆದೇಶ ಪಾಲನೆಗೆ ಸದಸ್ಯರುಗಳು ಎಲ್ಲ ರೀತಿಯಿಂದಲೂ ಪಟ್ಟಣ ಪಂಚಾ ಯಿತಿಯೊಂದಿಗೆ ಸಹಕಾರ ನೀಡಲಿ ದ್ದಾರೆ. ಏಕಪಕ್ಷೀಯ ನಿರ್ಧಾರಕ್ಕೆ ಯಾವ ಸದಸ್ಯರುಗಳು ಒಪ್ಪುವುದಿಲ್ಲ ಎಂದರು.

ಸದಸ್ಯ ಸಿ.ಕೆ. ಪೃಥ್ವಿನಾಥ್ ಮಾತನಾಡಿ, ಮುಖ್ಯಾಧಿಕಾರಿ ಶ್ರೀಧರ್ ಲಾಕ್‍ಡೌನ್‍ನ ಸಮಯದಲ್ಲಿ ಏಪ್ರಿಲ್ 1 ರಿಂದ ಜಾರಿಗೆ ಬರುವಂತೆ ನಲ್ಲಿ ನೀರಿನ ಪೊರೈಕೆ ದರವನ್ನು ಪರಿಷ್ಕರಿಸಿ ತಿಂಗಳಿಗೆ ರೂ. 100 ಇದ್ದ ದರವನ್ನು ರೂ. 142ಕ್ಕೆ ಪರಿಷ್ಕರಿಸಿ ನಿವಾಸಿಗಳಿಗೆ ತೊಂದರೆ ನೀಡುತ್ತಿದ್ದಾರೆ. ಲಾಕ್‍ಡೌನ್ ಕಳೆದ ಮೇಲೆ ಪರಿಸ್ಥಿತಿ ತಹಬದಿಗೆ ಬಂದ ನಂತರ ಇದನ್ನು ಮಾಡಬಹುದಿತ್ತು. ಈ ಸಮಯದಲ್ಲಿ ಪರಿಷ್ಕರಿಸಿರುವುದು ಸಮಂಜಸವಲ್ಲ. ಸಾರಿಗೆ ಸಂಸ್ಥೆ ಬಸ್ ನಿಲ್ದಾಣ ಹಾಗೂ ಖಾಸಗಿ ಬಸ್ ನಿಲ್ದಾಣದಲ್ಲಿ ನಿರ್ಬಂಧ ಸಡಿಲಿಕೆಯ ಸಮಯದಲ್ಲಿ ಶುಲ್ಕ ಎತ್ತಾವಳಿ ಹರಾಜು ಪ್ರಕ್ರಿಯೆ ನಡೆಯದಿದ್ದರೂ ಪಟ್ಟಣ ಪಂಚಾಯಿತಿಯಿಂದ ಶುಲ್ಕವೆಂದು ತರಕಾರಿ ವ್ಯಾಪಾರಿಗಳಿಂದ ತಲಾ ರೂ. 20 ಸಂಗ್ರಹಿಸಲಾಗುತ್ತಿರುವುದು ಕಾನೂನಿಗೆ ವಿರೋಧವೆಂದು ಆರೋಪಿಸಿದರು.

ಸದಸ್ಯ ಎಸ್.ಹೆಚ್. ಮತೀನ್ ಮಾತನಾಡಿ, ಅಧಿಕಾರಿಗಳು ಇನ್ನು ಮುಂದೆ ಪಟ್ಟಣ ಪಂಚಾಯಿತಿಯ ಎಲ್ಲ ಸದಸ್ಯರುಗಳನ್ನು ಒಗ್ಗೂಡಿಸಿ ಪೊಲೀಸ್ ಇಲಾಖೆಯ ಅಧಿಕಾರಿಗಳ ಸಮ್ಮುಖದಲ್ಲಿ ಸಭೆ ಕರೆಯುವಂತೆ ಸಲಹೆ ನೀಡಿದರು. ನೆಹರೂ ನಗರ ಕ್ಷೇತ್ರದ ಸದಸ್ಯ ಸಬಾಸ್ಟಿನ್ ಮಾತನಾಡಿ, ನ್ಯಾಯ ಬೆಲೆ ಅಂಗಡಿಗಳು ಪಡಿತರ ಚೀಟಿದಾರ ರಿಂದ ಸಾಮಗ್ರಿಗಳನ್ನು ವಿತರಿಸಲು ಪ್ರತಿ ಕಾರ್ಡ್‍ಗೆ ರೂ. 10 ರಿಂದ ರೂ. 20 ಸಂಗ್ರಹ ಮಾಡುತ್ತಿದ್ದಾರೆ ಎಂದು ದೂರಿದರು.

ಸಭೆಯಲ್ಲಿ ಸದಸ್ಯರುಗಳಾದ ಕೆ.ಬಿ. ಹರ್ಷವರ್ಧನ್, ಡಿ.ಪಿ. ರಾಜೇಶ್, ವಿ.ಆರ್. ರಜನಿಕಾಂತ್, ಸುನಿತಾ, ಫಸಿಹ ತಬ್ಸಮ್, ಮಹದೇವ್, ಜಲೀಲ್ ಹಾಗೂ ಮುಖ್ಯಾಧಿಕಾರಿ ಶ್ರೀಧರ್ ಹಾಜರಿದ್ದರು.