ಸೋಮವಾರಪೇಟೆ, ಏ.25: ಪಟ್ಟಣದಲ್ಲಿ ಕಳೆದೆರಡು ವರ್ಷಗಳಿಂದ ಓಡಾಡಿಕೊಂಡಿರುವ ಮಾನಸಿಕ ಅಸ್ವಸ್ಥ ವೃದ್ಧನಿಗೆ ಪಟ್ಟಣ ಪಂಚಾಯಿತಿ ಸಿಬ್ಬಂದಿಗಳು ಊಟೋಪಚಾರ ಒದಗಿಸುವ ಮೂಲಕ ಮಾನವೀಯತೆ ತೋರುತ್ತಿದ್ದಾರೆ.

ಪಟ್ಟಣದ ಅಂಗಡಿ, ಹೊಟೇಲ್‍ಗಳಿಂದ ಬನ್, ಕಾಫಿ, ಟೀ, ಊಟವನ್ನು ಕೇಳಿ ಪಡೆದುಕೊಳ್ಳುತ್ತಿದ್ದ ಮಾನಸಿಕ ಅಸ್ವಸ್ಥ ವೃದ್ಧರೋರ್ವರು, ಕಳೆದ ಒಂದು ತಿಂಗಳಿನಿಂದ ಲಾಕ್‍ಡೌನ್ ಹಿನ್ನೆಲೆ ಹೊಟೇಲ್‍ಗಳು ಬಂದ್ ಆಗಿದ್ದರಿಂದ ಊಟಕ್ಕಾಗಿ ಪರದಾಡುತ್ತಿದ್ದರು.

ಇದನ್ನು ಗಮನಿಸಿದ ಪಟ್ಟಣ ಪಂಚಾಯಿತಿ ಸಿಬ್ಬಂದಿಗಳು ಪ್ರತಿನಿತ್ಯ ವೃದ್ಧನಿಗೆ ಊಟ ನೀಡುತ್ತಿದ್ದರು. ಈ ಮಧ್ಯೆ ಸ್ನಾನ ಮಾಡದೇ ದುರ್ವಾಸನೆ ಬೀರುತ್ತಿದ್ದ ವೃದ್ಧನನ್ನು ಪ.ಪಂ. ಸಿಬ್ಬಂದಿಗಳಾದ ಆದಿಲ್, ಜೆ.ಸಿ. ಶೇಖರ್ ಸೇರಿದಂತೆ ಇತರರು ಸ್ನಾನ ಮಾಡಿಸಿ, ಹೊಸ ಬಟ್ಟೆ ತೊಡಿಸಿ, ಪಟ್ಟಣದಲ್ಲಿ ಮಲಗಲು ಜಾಗ ನೀಡುವ ಮೂಲಕ ಲಾಕ್‍ಡೌನ್ ಸಂದರ್ಭದಲ್ಲಿ ಮಾನವೀಯತೆ ತೋರಿದರು.

ಪಟ್ಟಣ ಪಂಚಾಯಿತಿ ಸಿಬ್ಬಂದಿಗಳ ಈ ಕ್ರಮಕ್ಕೆ ಸಾರ್ವಜನಿಕ ವಲಯದಲ್ಲೂ ಶ್ಲಾಘನೆ ವ್ಯಕ್ತವಾಯಿತು.