ಕುಶಾಲನಗರ, ಏ. 25: ಲಾಕ್‍ಡೌನ್ ನಡುವೆ ಕೊಡಗು-ಮೈಸೂರು ಜಿಲ್ಲಾ ಗಡಿಭಾಗ ಕುಶಾಲನಗರ-ಕೊಪ್ಪ ವ್ಯಾಪ್ತಿಯಲ್ಲಿ ಜನರ ಓಡಾಟ ತಪ್ಪಿಸುವಲ್ಲಿ ಸ್ಥಳೀಯ ಪೊಲೀಸರು ಪರದಾಡುವ ಸ್ಥಿತಿ ಉಂಟಾಗಿದೆ. ಮಾರ್ಚ್ 23 ರಿಂದ ಜಿಲ್ಲೆಯ ಗಡಿಭಾಗ ಕುಶಾಲನಗರ-ಮೈಸೂರು ಹೆದ್ದಾರಿಯ ಪೊಲೀಸ್ ತಪಾಸಣಾ ಕೇಂದ್ರ ದಿನದ 24 ಗಂಟೆ ಎರಡು ಪಾಳಿಗಳಲ್ಲಿ ಪೊಲೀಸರು ಕಟ್ಟುನಿಟ್ಟಾಗಿ ಕಾರ್ಯ ನಿರ್ವಹಿಸುತ್ತಿದ್ದು ಯಾವುದೇ ಅಪರಿಚಿತ ವ್ಯಕ್ತಿಗಳು ಜಿಲ್ಲೆಯ ಗಡಿಯೊಳಗೆ ಬರದಂತೆ ಎಚ್ಚರವಹಿಸುವಲ್ಲಿ ಬಹುತೇಕ ಯಶಸ್ವಿಯಾಗಿದ್ದಾರೆ. ಅನಾವಶ್ಯಕ ಓಡಾಟ ಮಾಡುವ ನೂರಾರು ವಾಹನಗಳನ್ನು ಪೊಲೀಸ್ ವಶಕ್ಕೆ ಪಡೆದುಕೊಂಡು ಕಾನೂನು ಕ್ರಮಕೈಗೊಳ್ಳುವುದರೊಂದಿಗೆ ಜನರ ಓಡಾಟಕ್ಕೆ ನಿಯಂತ್ರಣ ಮಾಡಲಾಗಿದೆ ಎಂದು ಡಿವೈಎಸ್ಪಿ ಶೈಲೇಂದ್ರ ತಿಳಿಸಿದ್ದಾರೆ.

ಕುಶಾಲನಗರ ಡಿವೈಎಸ್ಪಿ ಶೈಲೇಂದ್ರ ಮಾರ್ಗದರ್ಶನದಲ್ಲಿ ವೃತ್ತ ನಿರೀಕ್ಷಕ ಮಹೇಶ್ ಮತ್ತು ಪಟ್ಟಣ ಠಾಣಾಧಿಕಾರಿ ವೆಂಕಟರಮಣ ನೇತೃತ್ವದಲ್ಲಿ ಕುಶಾಲನಗರ ಮತ್ತು ಸುಂಟಿಕೊಪ್ಪ ವ್ಯಾಪ್ತಿಯ 50 ಕ್ಕೂ ಅಧಿಕ ಪೊಲೀಸರು ನಿತ್ಯ ಭದ್ರತಾ ವ್ಯವಸ್ಥೆಯಲ್ಲಿ ತೊಡಗಿದ್ದಾರೆ. ಇವರೊಂದಿಗೆ ಆರೋಗ್ಯ ಇಲಾಖೆ, ಕಂದಾಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗಳು ಕೂಡ ಕೈಜೋಡಿಸು ತ್ತಿದ್ದಾರೆ. ಪ್ರಸಕ್ತ ಕುಶಾಲನಗರ ಪೊಲೀಸ್ ತಪಾಸಣಾ ಕೇಂದ್ರದಲ್ಲಿ ಕಳೆದ ಕೆಲವು ದಿನಗಳಿಂದ ಜಿಲ್ಲೆಗೆ ಬಂದಿರುವ 200 ಕ್ಕೂ ಅಧಿಕ ಮಂದಿಗೆ ಕ್ವಾರಂಟೈನ್ ಸೀಲ್ ಹಾಕಿ ಕಳುಹಿಸಲಾಗಿದೆ ಎಂದು ಕುಶಾಲನಗರ ಪೊಲೀಸ್ ವೃತ್ತ ನಿರೀಕ್ಷಕ ಮಹೇಶ್ ಮಾಹಿತಿ ನೀಡಿದ್ದಾರೆ.

ಪ್ರಾರಂಭದಲ್ಲಿ ಲಾಠಿ ಚಾರ್ಜ್ ಮೂಲಕ ಜನರ ಅನಾವಶ್ಯಕ ಓಡಾಟ ಸ್ಥಗಿತಗೊಳಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು ನಂತರದ ದಿನಗಳಲ್ಲಿ ಅಗತ್ಯ ವಸ್ತುಗಳ ಹೆಸರಿನಲ್ಲಿ ಗಡಿ ಭಾಗದ ಜನರ ಓಡಾಟ ಕಂಡುಬಂತು. ಜಿಲ್ಲೆಯ ಕುಶಾಲನಗರದ ಬಹುತೇಕ ಜನರ ವ್ಯಾಪಾರ ವಹಿವಾಟು ನೆರೆಯ ಕೊಪ್ಪ, ಬೈಲುಕೊಪ್ಪದಲ್ಲಿದ್ದರೆ ಇನ್ನು ಕೆಲವರ ಕೃಷಿ ಭೂಮಿ ಮೈಸೂರು ಜಿಲ್ಲೆಯಲ್ಲಿ ಕಾಣಬಹುದು.

ಅತ್ತ ಕೊಪ್ಪ, ಬೈಲುಕೊಪ್ಪ ಜನರ ಹೆಚ್ಚಿನ ಪ್ರಮಾಣದ ವಾಣಿಜ್ಯ ವಹಿವಾಟು ಕುಶಾಲನಗರವನ್ನು ಅವಲಂಬಿಸಿದೆ. ಈ ನಿಟ್ಟಿನಲ್ಲಿ ಅತ್ತಿಂದಿತ್ತ ಓಡಾಡಲು ಪೊಲೀಸರು ಅಡ್ಡಿಯುಂಟು ಮಾಡುತ್ತಿದ್ದಾರೆ ಎನ್ನುವುದು ಜನರ ದೂರಾಗಿದ್ದರೆ ಕೊರೊನಾ ಮುಕ್ತ ಜಿಲ್ಲೆಯನ್ನಾಗಿಸುವ ನಿಟ್ಟಿನಲ್ಲಿ ಪೊಲೀಸರು ಪಣತೊಟ್ಟು ನಿಂತಿದ್ದಾರೆ.

ಕುಶಾಲನಗರದ ಅಪರಾಧ ಪತ್ತೆದಳದ ಮುಖ್ಯಮಂತ್ರಿ ಪದಕ ವಿಜೇತ ಪೊಲೀಸ್ ಸಿಬ್ಬಂದಿ ಸಜಿ ಎಂಬವರು ಕಳೆದ 4 ವಾರಗಳಿಂದ ತಪಾಸಣಾ ಕೇಂದ್ರದಲ್ಲಿ ನಿರಂತರವಾಗಿ ಸ್ವಯಂ ಇಚ್ಚೆಯಿಂದ ಕಾರ್ಯನಿರ್ವಹಿಸುತ್ತಿರುವುದು ಎಲ್ಲರ ಪ್ರಶಂಸೆಗೆ ಕಾರಣವಾಗಿದೆ.

ಇನ್ನುಳಿದಂತೆ ಮಹಿಳಾ ಎಎಸ್‍ಐಗಳು ಹಾಗೂ ಸಿಬ್ಬಂದಿಗಳು ಕೂಡ ರಾತ್ರಿ ಪಾಳಿಯಲ್ಲಿ ರಸ್ತೆ ಬದಿಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆಗಳ ನಡುವೆ ಕೆಲಸ ನಿರ್ವಹಿಸು ತ್ತಿರುವುದನ್ನು ಕಾಣಬಹುದು.

ಇಷ್ಟೆಲ್ಲಾ ಪೊಲೀಸರು ಕಟ್ಟುನಿಟ್ಟಾಗಿ ಕರ್ತವ್ಯ ನಿರ್ವಹಿಸು ತ್ತಿದ್ದರೂ ಇತ್ತ ಗಡಿಭಾಗದ ಜನರು ಕಳ್ಳದಾರಿಯಲ್ಲಿ ಓಡಾಟ ಮಾಡುತ್ತಿರುವುದು ಪೊಲೀಸರಿಗೆ ತಲೆನೋವಾಗಿ ಪರಿಗಣಿಸಿದೆ. ಕೊಪ್ಪ, ಆವರ್ತಿ, ರಾಣಿಗೇಟ್, ಗಿರಗೂರು, ಕುಶಾಲನಗರ ಭಾಗಗಳಲ್ಲಿ ಕಾವೇರಿ ನದಿ ಮೂಲಕ ಜನರ ಓಡಾಟ ನಿರಂತರವಾಗಿ ನಡೆಯುತ್ತಿದೆ. ಈ ಸಂಬಂಧ ವೃತ್ತ ನಿರೀಕ್ಷಕ ಮಹೇಶ್ ಅವರು ಆಯಕಟ್ಟಿನ ಜಾಗಗಳಲ್ಲಿ ಸಿಬ್ಬಂದಿಗಳನ್ನು ನೇಮಿಸಿದರೂ ಜನರ ಓಡಾಟ ಮುಂದುವರೆದಿದೆ.

ಇನ್ನೊಂದೆಡೆ ಮೈಸೂರು, ಕೊಡಗು ಗಡಿಭಾಗದ ಕೊಪ್ಪ ಬಳಿ ಮೈಸೂರು ಜಿಲ್ಲಾ ವ್ಯಾಪ್ತಿಯ ಪೊಲೀಸ್, ಆರೋಗ್ಯ, ಕಂದಾಯ ಇಲಾಖೆಯ ಅಧಿಕಾರಿಗಳು ಕೂಡ ಮೈಸೂರು ಕಡೆಗೆ ಮತ್ತು ಕೊಡಗು ಕಡೆಗೆ ಅನಾವಶ್ಯಕ ವಾಹನಗಳ ಓಡಾಟಕ್ಕೆ ಕಡಿವಾಣ ಹಾಕುವಲ್ಲಿ ಕಾರ್ಯತತ್ಪರರಾಗಿದ್ದಾರೆ. ಮೈಸೂರು ಜಿಲ್ಲೆಯ ನಂಜನಗೂಡು, ಮೈಸೂರು ನಗರ ವ್ಯಾಪ್ತಿಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಏರತೊಡಗಿದ್ದು ಈ ನಿಟ್ಟಿನಲ್ಲಿ ಗಡಿಭಾಗದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.

- ಚಂದ್ರಮೋಹನ್