3226 ಕಿ.ಮೀ. ರಸ್ತೆಗೆ ಟೆಂಡರ್ ಪ್ರಕ್ರಿಯೆ
ಬೆಂಗಳೂರು, ಏ. 24: ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆ ಮೂಲಕ ರಾಜ್ಯಕ್ಕೆ 5612 ಕಿ.ಮೀ. ರಸ್ತೆ ಕಾಮಗಾರಿ ಹಂಚಿಕೆ ಮಾಡಿದ್ದು, ಇದರಲ್ಲಿ ಮೊದಲ ಹಂತದಲ್ಲಿ 3226 ಕಿ.ಮೀ. ರಸ್ತೆಗೆ ಟೆಂಡರ್ ಪ್ರಕ್ರಿಯೆ ಪ್ರಾರಂಭವಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ತಿಳಿಸಿದ್ದಾರೆ. ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಕೇಂದ್ರದ ಪಾಲು ರೂ. 1274 ಕೋಟಿ ಮತ್ತು ರಾಜ್ಯದ ಪಾಲು ರೂ. 1455 ಕೋಟಿ ಸೇರಿ ರೂ. 2729 ಕೋಟಿ ಯೋಜನೆ ಜಾರಿಗೆ ಅನುಮೋದನೆ ಸಿಕ್ಕಿದೆ. ಯೋಜನೆ ಅನುಷ್ಟಾನಕ್ಕೆ ರೂ. 1100 ಕೋಟಿ ಹಂಚಿಕೆ ಮಾಡಲಾಗಿದೆ. ಕಾಮಗಾರಿ ಪ್ರಾರಂಭಕ್ಕೆ ಟೆಂಡರ್ ಕರೆಯಲು ಅನುಮೋದನೆ ಸಿಕ್ಕಿದೆ ಎಂದು ಹೇಳಿದರು. ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಉದ್ಯೋಗ ಖಾತ್ರಿ ಯೋಜನೆ ಅಡಿ ದಿನಗೂಲಿ 275 ರೂ.ಗೆ ಹೆಚ್ಚಳ ಮಾಡಲಾಗಿದೆ. ಕೇಂದ್ರ ಸರ್ಕಾರ ಕೂಲಿಗಾಗಿ ರೂ. 1039 ಕೋಟಿ ಮತ್ತು ಸಾಮಗ್ರಿಗಾಗಿ ರೂ. 821 ಕೋಟಿ ಸೇರಿ ಒಟ್ಟು ರೂ. 1861 ಕೋಟಿ ಅನುದಾನ ಮಂಜೂರು ಮಾಡಿದೆ ಎಂದು ತಿಳಿಸಿದರು. ಕಳೆದ 2019- 2020ರ ಕೂಲಿ ಬಾಕಿ ರೂ. 346 ಕೋಟಿ ಹಣವನ್ನು ಕಾರ್ಮಿಕರ ಖಾತೆಗೆ ಪಾವತಿ ಮಾಡಲಾಗಿದೆ. ಏಪ್ರಿಲ್‍ನಲ್ಲಿ 1.76 ಲಕ್ಷ ಕೂಲಿ ಕಾರ್ಮಿಕರು ಕೆಲಸ ಮಾಡಿದ್ದಾರೆ. ಇನ್ನಷ್ಟು ಕಾರ್ಮಿಕರು ಕೆಲಸ ಮಾಡಬೇಕು. ಕೆಲಸ ಮಾಡಿದ 15 ದಿನಗಳಲ್ಲಿ ಬ್ಯಾಂಕ್ ಖಾತೆಗೆ ಕೂಲಿ ಹಣ ಜಮೆ ಮಾಡಲಾಗುವುದು ಎಂದು ಮಾಹಿತಿ ನೀಡಿದರು.
ಶೂನ್ಯ ಬಡ್ಡಿ ಸಾಲ ಯೋಜನೆ
ವಿಜಯವಾಡ, ಏ. 24: ಆಂಧ್ರಪ್ರದೇಶದ ಮುಖ್ಯಮಂತ್ರಿ ವೈ.ಎಸ್. ಜಗನ್ ಮೋಹನ್ ರೆಡ್ಡಿ ಅವರು ವೈಎಸ್‍ಆರ್ ಶೂನ್ಯ ಬಡ್ಡಿ ಸಾಲ ಯೋಜನೆಯನ್ನು ದ್ವಾಕ್ರಾ ಸ್ವಸಹಾಯ ಗುಂಪುಗಳಿಗೆ (ಎಸ್‍ಹೆಚ್‍ಜಿ) ಆರಂಭಿಸಿದ್ದಾರೆ. ಕೋವಿಡ್-19 ಸಾಂಕ್ರಾಮಿಕ ಸಮಯದಲ್ಲಿ ಸುಮಾರು 8.78 ಲಕ್ಷ ಗುಂಪುಗಳ ಬ್ಯಾಂಕ್ ಖಾತೆಗಳಿಗೆ ರೂ. 1,400 ಕೋಟಿ ಹಾಕಿದ್ದು, ಇದರಿಂದ 91 ಲಕ್ಷ ಮಹಿಳೆಯರಿಗೆ ಪ್ರಯೋಜನವಾಗಲಿದೆ. ಈ ಯೋಜನೆಯ ಮೂಲಕ ಪ್ರತಿ ಸ್ವಸಹಾಯ ಸಂಘಕ್ಕೆ ಬಡ್ಡಿ ಇಲ್ಲದೆ 20,000 ರಿಂದ 40,000 ರೂ.ಸಾಲ ದೊರೆಯಲಿದೆ. 8.78 ಲಕ್ಷ ಸ್ವಸಹಾಯ ಗುಂಪುಗಳ ಪೈಕಿ 6.95 ಗುಂಪುಗಳು ಗ್ರಾಮೀಣ ಪ್ರದೇಶದಲ್ಲಿದ್ದರೆ, ಉಳಿದವು ನಗರ ಪ್ರದೇಶಗಳಲ್ಲಿವೆ. ಇಲ್ಲಿನ ತಡೆಪಲ್ಲಿಯಲ್ಲಿರುವ ತನ್ನ ಕಚೇರಿಯಿಂದ ಡಿಡಬ್ಲ್ಯುಸಿಆರ್‍ಎ ಮಹಿಳೆಯರೊಂದಿಗೆ ನಡೆಸಿದ ಸಂವಾದದಲ್ಲಿ ಮುಖ್ಯಮಂತ್ರಿ ಈ ಘೋಷಣೆ ಮಾಡಿದರು. ಸಂವಾದದ ಸಂದರ್ಭದಲ್ಲಿ, ಆರ್ಥಿಕ ಬಿಕ್ಕಟ್ಟಿನ ಹೊರತಾಗಿಯೂ, ವೈಎಸ್‍ಆರ್ ಶೂನ್ಯ ಬಡ್ಡಿ ಸಾಲ ಯೋಜನೆಯ ಮೂಲಕ ಮಹಿಳಾ ಉದ್ಯಮಿಗಳಿಗೆ ಆರ್ಥಿಕ ಸಹಾಯವನ್ನು ನೀಡಲು ಸರ್ಕಾರ ನಿರ್ಧರಿಸಿದೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ.
ಸರ್ಕಾರದ ವಿರುದ್ಧ ಹೆಚ್‍ಡಿಕೆ ಅಸಮಾಧಾನ
ಬೆಂಗಳೂರು, ಏ. 24: ಕೊರೊನಾ ವೈರಸ್ ವಿಚಾರದಲ್ಲಿ ರಾಜ್ಯ ಸರ್ಕಾರ ಹಲವಾರು ತಪ್ಪುಗಳನ್ನು ಮಾಡಿದ್ದು, ಇಂತಹ ಸಂಕಷ್ಟ ಸಂದರ್ಭ ರಾಜಕೀಯ ಮಾಡಲು ಬಯಸುವುದಿಲ್ಲ. ಜನರ ಜೀವನದ ಜತೆ ಚೆಲ್ಲಾಟವಾಡಿದರೆ ಸುಮ್ಮನಿರುವುದೂ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಎಚ್ಚರಿಕೆ ನೀಡಿದ್ದಾರೆ. ಪಾದರಾಯನಪುರದಲ್ಲಿ ಪುಂಡಾಟಿಕೆ ನಡೆಸಿ ಕ್ವಾರಂಟೈನ್‍ಗೆ ಒಳಗಾಗಿರುವರನ್ನು ರಾಮನಗರ ಜೈಲಿಗೆ ಸ್ಥಳಾಂತರಿಸಿ ಮತ್ತೆ ಬೆಂಗಳೂರಿಗೆ ಕರೆ ತಂದಿರುವ ಬೆಳವಣಿಗೆ ಬಗ್ಗೆ ಕೆಂಡಮಂಡಲವಾಗಿರುವ ಕುಮಾರಸ್ವಾಮಿ, ಸರ್ಕಾರದ ತಪ್ಪುಗಳನ್ನು ಬಹಿರಂಗಪಡಿಸಿಲ್ಲ. ಹಾಗೆಂದ ಮಾತ್ರಕ್ಕೆ ಇದು ನಮ್ಮ ದೌರ್ಬಲ್ಯವಲ್ಲ. ಸರ್ಕಾರ ಇಂತಹ ವಿಚಾರದಲ್ಲಿ ಎಚ್ಚರಿಕೆಯಿಂದ ವರ್ತಿಸಬೇಕು ಎಂದರು. ಪದ್ಮನಾಭನಗರ ವಿಧಾನಸಭಾ ಕ್ಷೇತ್ರದ ಕೆಂಪೇಗೌಡ ಮೆಡಿಕಲ್ ಕಾಲೇಜು ಬಳಿ ಅಂತರರಾಷ್ಟ್ರೀಯ ಕ್ರೀಡಾಪಟು ಹಾಗೂ ಜೆಡಿಎಸ್ ಮುಖಂಡ ಕಬಡ್ಡಿ ಬಾಬು ನೇತೃತ್ವದಲ್ಲಿ, ಆನಂದ ಗುರೂಜಿ ಸಮ್ಮುಖದಲ್ಲಿ ಬಡವರು, ಕಾರ್ಮಿಕರು, ಅರ್ಚಕರು, ನಿರ್ಗತಿಕರಿಗೆ ಪಡಿತರ ವಿತರಿಸಿ ಮಾತನಾಡಿದ ಕುಮಾರಸ್ವಾಮಿ, ಇಡೀ ಜಗತ್ತು ಕೊರೊನಾ ವೈರಸ್ ವಿರುದ್ಧ ಹೋರಾಟ ಮಾಡುತ್ತಿದೆ. ಇಂತಹ ಸಂದರ್ಭ ರಾಜಕಾರಣ ಮಾಡಬಾರದು ಎಂದು ಸುಮ್ಮನಿದ್ದೇವೆ. ಸರ್ಕಾರಕ್ಕೆ ಸಂಪೂರ್ಣ ಬೆಂಬಲ ನೀಡಿದ್ದು, ಇದನ್ನು ಅರ್ಥಮಾಡಿಕೊಂಡು ಆಡಳಿತ ನಡೆಸಬೇಕು ಎಂದರು.
ಒಂದೇ ದಿನ 29 ಮಂದಿಗೆ ಕೊರೊನಾ
ಬೆಂಗಳೂರು, ಏ. 24: ಕರ್ನಾಟಕದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಶುಕ್ರವಾರ ಒಂದೇ ದಿನ ಬರೋಬ್ಬರಿ 29 ಮಂದಿಗೆ ಕೋವಿಡ್-19 ಪಾಸಿಟಿವ್ ದೃಢಪಟ್ಟಿದೆ. ಇದರೊಂದಿಗೆ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 474ಕ್ಕೆ ಏರಿಕೆಯಾಗಿದೆ. ಇಂದು ಬೆಂಗಳೂರಿನಲ್ಲಿಯೇ 19 ಮಂದಿಗೆ ಕೊರೊನಾ ಸೋಂಕು ತಗುಲಿ ರೋದು ದೃಢಪಟ್ಟಿದೆ. ಇಂದು ಬೆಳಿಗ್ಗೆ 11 ಮತ್ತು ಸಂಜೆ ಬುಲೆಟಿನ್‍ನಲ್ಲಿ 8 ಸೇರಿ ಒಟ್ಟು 19 ಮಂದಿ ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ. ಇಂದು ಬೆಳಿಗ್ಗೆ 18 ಮಂದಿಗೆ ಹಾಗೂ ಸಂಜೆ 11 ಮಂದಿಗೆ ಕೋವಿಡ್-19 ಪಾಸಿಟಿವ್ ದೃಢಪಟ್ಟಿದೆ. ಸೋಂಕಿನಿಂದ ಇಲ್ಲಿಯವರೆಗೆ 18 ಜನರು ಮೃತಪಟ್ಟಿದ್ದು, 145 ಮಂದಿ ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಬಿಹಾರ ಮೂಲದ ಕಾರ್ಮಿಕ ಬೆಂಗಳೂರಿನ ಸೋಂಕಿತ 419ರ ಸಂಪರ್ಕದಿಂದ ಬರೋಬ್ಬರಿ 20 ಜನರಿಗೆ ಸೋಂಕು ಹರಡಿದೆ. ಇವರೆಲ್ಲರೂ ಬೆಂಗಳೂರಿನಲ್ಲಿರುವ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕರ್ನಾಟಕದಲ್ಲಿ ಪ್ಲಾಸ್ಮಾ ಥೆರಪಿ ಚಿಕಿತ್ಸೆ
ಬೆಂಗಳೂರು, ಏ. 24: ಕರ್ನಾಟಕದಲ್ಲಿ ಇದೇ ಮೊದಲ ಬಾರಿಗೆ ಕೊರೊನಾ ರೋಗಿಗೆ ಪ್ಲಾಸ್ಮಾ ಥೆರಪಿ ಚಿಕಿತ್ಸೆ ನಡೆಸಲಾಗುತ್ತಿದೆ. ಈ ಬಗ್ಗೆ ಆರೋಗ್ಯ ಸಚಿವ ಬಿ. ಶ್ರೀರಾಮುಲು ಟ್ವೀಟ್ ಮೂಲಕ ತಿಳಿಸಿದ್ದಾರೆ. ಬಿಎಂಸಿ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಪ್ಲಾಸ್ಮಾ ಥೆರಪಿ ನಡೆಸಲಾಗುತ್ತಿದ್ದು ಇದಕ್ಕಾಗಿ ಪ್ಲಾಸ್ಮಾ ನೀಡಲು ದಾನಿಯೂ ಸಿಕ್ಕಿದ್ದಾರೆ ಎಂದು ಸಚಿವರು ಹೇಳಿದ್ದಾರೆ.
ಗರ್ಭಿಣಿ ಮಹಿಳೆ ಸಂಪೂರ್ಣ ಗುಣಮುಖ
ಉಡುಪಿ, ಏ. 24: ಕೊರೊನಾ ವೈರಸ್ ಸೋಂಕಿನಿಂದ ಬಳಲುತ್ತಿದ್ದ ಉತ್ತರ ಕನ್ನಡ ಭಟ್ಕಳ ಮೂಲದ ಗರ್ಭಿಣಿ ಮಹಿಳೆ ಸಂಪೂರ್ಣ ಗುಣಮುಖ ಆಗಿದ್ದು ಶುಕ್ರವಾರ ಮಣಿಪಾಲದ ಡಾ ಟಿ.ಎಂ.ಎ. ಪೈ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಗರ್ಭಧಾರಣೆಯ ಐದನೇ ತಿಂಗಳಲ್ಲಿದ್ದ 26 ವರ್ಷದ ಮಹಿಳೆಗೆ ಕೊರೊನಾ ಸೋಂಕು ಕಾಣಿಸಿಕೊಂಡಿತ್ತು. ಈ ಹಿನ್ನೆಲೆ ಕಳೆದ 15 ದಿನಗಳ ಹಿಂದೆ ಮಣಿಪಾಲದ ಆಸ್ಪತ್ರೆಗೆ ದಾಖಲಾಗಿದ್ದರು. ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ಜಿಲ್ಲಾಧಿಕಾರಿ ಜಿ. ಜಗದೀಶ್, ಕೊರೊನಾ ಪಾಸಿಟಿವ್ ರೋಗಿಯನ್ನು ಆಸ್ಪತ್ರೆಯಿಂದ ಬಿಡುಗಡೆಗೊಳಿಸುವ ಈ ದಿನ ಜಿಲ್ಲೆಯ ಪಾಲಿಗೆ ಉತ್ತಮ ದಿನವಾಗಿದೆ. ಉತ್ತರ ಕನ್ನಡ ಜಿಲ್ಲೆಯ ಗರ್ಭಿಣಿ ಮಹಿಳೆಗೆ ಚಿಕಿತ್ಸೆ ನೀಡುವುದು ಕಷ್ಟಕರವಾಗಿತ್ತು. ಮಗುವನ್ನು ಉಳಿಸುವುದು ವೈದ್ಯರಿಗೆ ಸವಾಲಾಗಿತ್ತು. ಇದೇ ಕಾರಣಕ್ಕೆ ಬೇರೆಲ್ಲಾ ಆಸ್ಪತ್ರೆಗಳಲ್ಲಿ ಆಕೆಗೆ ಚಿಕಿತ್ಸೆ ನೀಡಲು ನಿರಾಕರಿಸಲಾಗಿತ್ತು.
ಗಲಭೆಕೋರರು ಹಜ್ ಭವನಕ್ಕೆ ಸ್ಥಳಾಂತರ
ಬೆಂಗಳೂರು, ಏ. 24: ಕೊರೊನಾ ಹರಡುವ ಆತಂಕದ ಹಿನ್ನೆಲೆ ರಾಮನಗರ ಜಿಲ್ಲಾ ಕಾರಾಗೃಹದಲ್ಲಿರುವ ಪಾದರಾಯನಪುರ ದಾಂಧಲೆ ಪ್ರಕರಣದ ಆರೋಪಿಗಳನ್ನು ಶುಕ್ರವಾರ ನಗರದ ಹಜ್ ಭವನಕ್ಕೆ ಸ್ಥಳಾಂತರಿಸ ಲಾಗಿದೆ. ಆರೋಪಿಗಳನ್ನು ಸ್ಥಳಾಂತರಿಸಲು ಬೆಳಿಗ್ಗೆ ಮಳೆ ಅಡ್ಡಿಯಾಗಿತ್ತು. ಮಧ್ಯಾಹ್ನದ ವೇಳೆಗೆ ಮಳೆ ನಿಂತಿದ್ದರಿಂದ ಸಾಮಾಜಿಕ ಅಂತರ ಕಾಯ್ದುಕೊಂಡು 14 ಬಸ್‍ಗಳಲ್ಲಿ ಅವರನ್ನು ಸ್ಥಳಾಂತರಿಸಲಾಯಿತು. ರಾಮನಗರ ಡಿಪೋದಿಂದ ಬಂದಿದ್ದ 14 ಬಸ್‍ಗಳನ್ನು ಜಿಲ್ಲಾ ಕಾರಾಗೃಹಕ್ಕೆ ಕರೆಸಿಕೊಂಡು, ಅಲ್ಲಿದ್ದ 119 ಆರೋಪಿಗಳನ್ನು ಮತ್ತೆ ಬೆಂಗಳೂರಿಗೆ ಸ್ಥಳಾಂತರ ಮಾಡಲಾಗಿದೆ. ಬೆಂಗಳೂರಿನ ಪಾದರಾಯನಪುರದಲ್ಲಿ ದಾಂಧಲೆ ನಡೆಸಿದ 121 ಆರೋಪಿಗಳನ್ನು ರಾಮನಗರ ಜೈಲಿಗೆ ತಾ. 21 ರಂದು ಸ್ಥಳಾಂತರ ಮಾಡಲಾಗಿತ್ತು. ಅವರಲ್ಲಿ ಮೂವರಿಗೆ ನಿನ್ನೆ ಕೋವಿಡ್-19 ಸೋಂಕು ದೃಢಪಟ್ಟಿದ್ದು, ಇಂದು ಮತ್ತೆ ಮೂವರಿಗೆ ಸೋಂಕು ಇರುವುದು ಕಂಡುಬಂದಿದೆ. ಸೋಂಕಿತ ಮೂವರನ್ನು ನಿನ್ನೆ ರಾತ್ರಿಯೇ ವಿಕ್ಟೋರಿಯಾ ಆಸ್ಪತ್ರೆಗೆ ಸಾಗಿಸಲಾಗಿದೆ. ಉಳಿದವರನ್ನೂ ಹಜ್ ಭವನಕ್ಕೆ ಸ್ಥಳಾಂತರ ಮಾಡಿ, ಕ್ವಾರಂಟೈನ್‍ನಲ್ಲಿ ಇಡಲಾಗಿದೆ.