ಒಂದು ಊರಿನಲ್ಲಿ ಸಂತೋಷ್ ಮತ್ತು ರೂಪ ದಂಪತಿಗಳಿರುತ್ತಾರೆ. ಅವರಿಗೆ ಅಮೋಘ ಎಂಬ ಒಬ್ಬ ಮಗನಿದ್ದನು. ಅವರು ಶ್ರೀಮಂತರೂ ಅಲ್ಲ, ಬಡವರು ಅಲ್ಲದ ಮಧ್ಯಮ ವರ್ಗದವ ರಾಗಿದ್ದರು ಕಾರಣಾಂತರ ಗಳಿಂದ ಅವರಿದ್ದ ಊರನ್ನು ಬಿಟ್ಟು ಬೆಂಗಳೂರಿಗೆ ಬಂದು ನೆಲೆಸಬೇಕಾಗಿ ಬಂತು. ಅಮೋಘ ತಂದೆ-ತಾಯಿಯ ಮುದ್ದಿನ ಮಗನಾಗಿದ್ದ ಅವನನ್ನು ಒಳ್ಳೆಯ ಶಾಲೆಗೆ ಸೇರಿಸಿ ದೊಡ್ಡವನಾದ ಮೇಲೆ ಸಮಾಜದಲ್ಲಿ ಒಬ್ಬ ಒಳ್ಳೆಯ ವ್ಯಕ್ತಿಯನ್ನಾಗಿ ಮಾಡಬೇಕೆಂಬುದು ಅವರ ತಂದೆ-ತಾಯಿಯ ಆಸೆಯಾಗಿತ್ತು ಅವನು ಕೇಳಿದ ಆಟದ ಸಾಮಾನುಗಳನ್ನೆಲ್ಲಾ ಕೊಡಿಸಿ ಯಾವುದಕ್ಕೂ ಕೊರತೆ ಆಗದಂತೆ ನೋಡಿಕೊಳ್ಳುತ್ತಿದ್ದರು. ಅಮೋಘ ಬೆಳೆದು ದೊಡ್ಡವನಾದ ಮೇಲೆ ಸ್ವಲ್ಪ ಬದಲಾಗುತ್ತಾ ಬಂದ. ಅವನಿಗೆ ತಂದೆಯ ಮೇಲೆ ತುಂಬಾ ಪ್ರೀತಿ ಆದರೆ ಅವನ ತಾಯಿಯನ್ನು ಕಂಡರೆ ಎಳ್ಳಷ್ಟು ಪ್ರೀತಿ ತೋರಿಸುತ್ತಿರಲಿಲ್ಲ. ಪ್ರತಿಯೊಬ್ಬ ತಂದೆ-ತಾಯಿಯರು ಅವರ ಮಕ್ಕಳನ್ನು ಶಾಲೆಗೆ ಬಿಟ್ಟು ಅವರಿಗೆ ಬಾಯ್ ಹೇಳಿ ಬರುತ್ತಿದ್ದರು. ಆದರೆ ಅಮೋಘ ತಾಯಿಯನ್ನು ಬರಬೇಡ ಎಂದು ಹೇಳುತ್ತಿದ್ದ, ಪ್ರತಿಯೊಂದಕ್ಕೂ ತಂದೆಯನ್ನೇ ಅವಲಂಭಿಸುತ್ತಿದ್ದ ಇದರಿಂದ ತಾಯಿಗೆ ತುಂಬಾ ನೋವಾಗುತ್ತಿತ್ತು. ಇದನ್ನು ಗಂಡನಿಗೆ ಹೇಳಿದಾಗ ಅವನು ಸಮಾಧಾನಪಡಿಸುತ್ತಿದ್ದ ರೂಪಳಿಗೆ ತನ್ನ ಮಗನ ಕೈಯನ್ನು ಹಿಡಿದುಕೊಂಡು ಶಾಲೆಯ ಗೇಟ್‍ನ ಬಳಿ ಬಿಟ್ಟು ಹಣೆಗೆ, ಕೆನ್ನೆಗೆ ಒಂದು ಮುತ್ತನ್ನು ಕೊಟ್ಟು ಬೀಳ್ಕೊಡಬೇಕೆಂಬ ಆಸೆ ಆದರೆ ಅಮೋಘ ತನ್ನ ಅಮ್ಮನಿಗೆ ನೀನು ಶಾಲೆಗೆ ಬರಬೇಡ ಎಂದು ಹೇಳುತ್ತಿದ್ದನು. ಶಾಲೆಯಲ್ಲಿ ನಡೆಯುವ ಸಭೆ-ಸಮಾರಂಭಗಳಿಗೆ ತನ್ನ ತಂದೆಯನ್ನು ಮಾತ್ರ ಕರೆದುಕೊಂಡು ಹೋಗುತ್ತಿದ್ದ. ಇದರಿಂದ ರೂಪಾಳ ಮನಸ್ಸಿಗೆ ತುಂಬಾ ನೋವಾಗುತ್ತಿತ್ತು. ಅಮೋಘ ಶಾಲೆಯ ಬಳಿ ಆಟ ಆಡುತ್ತಿದ್ದಾಗ ಮರದ ಹಿಂದೆ ನಿಂತು ನೋಡಿ ಸಂತೋಷ ಪಡುತ್ತಿದ್ದಳು ಆ ತಾಯಿ.
ಹೀಗೆ ಒಂದು ದಿನ ಶಾಲೆಯ ವಾರ್ಷಿಕೋತ್ಸವ, ಆಗ ಶಿಕ್ಷಕರು ಪ್ರತಿಯೊಬ್ಬ ಮಕ್ಕಳಿಗೂ ತಮ್ಮ ಪೋಷಕರ ಜೊತೆಯಲ್ಲಿ ಬರಬೇಕೆಂದು ಹೇಳುತ್ತಾರೆ. ಆದರೆ, ಅಮೋಘ ತನ್ನ ತಂದೆಯನ್ನು ಮಾತ್ರ ಕರೆಯುತ್ತಾನೆ. ತನ್ನ ತಾಯಿ ಬರಬಾರದೆಂದು ಹಠ ಹಿಡಿದು ಕುಳಿತುಕೊಳ್ಳುತ್ತಾನೆ. ಅವನು ಹೇಳಿದ ಹಾಗೆ ಆಗಲಿ ಎಂದು ಸಂತೋಷ್ ಒಪ್ಪಿಕೊಳ್ಳುತ್ತಾನೆ. ಇದರಿಂದ ರೂಪಾಳ ಮನಸ್ಸಿಗೆ ಮತ್ತಷ್ಟು ನೋವಾಗುತ್ತದೆ. ಸಂತೋಷ್ ರೂಪಾಳನ್ನು ಸಮಾಧಾನ ಮಾಡುತ್ತಾ ನೀನು ಬಾ ಆದರೆ ಕೊನೆಯ ಹಿಂದಿನ ಸಾಲಿನಲ್ಲಿ ಕುಳಿತುಕೊ. ಎಂದು ಹೇಳಿ ಸಮಾಧಾನ ಮಾಡುತ್ತಾನೆ. ಅಮೋಘನ ಆಸೆಯಂತೆ ಸಂತೋಷ್ ವೇದಿಕೆ ಮುಂದಿನ ಸಾಲಿನಲ್ಲಿ ಕುಳಿತುಕೊಳ್ಳುತ್ತಾನೆ. ಅಮೋಘ ಆಟ-ಪಾಠ ಎಲ್ಲದರಲ್ಲಿಯೂ ಮುಂದಿದ್ದು ಅನೇಕ ಬಹುಮಾನಗಳನ್ನು ತೆಗೆದುಕೊಳ್ಳುತ್ತಾನೆ. ಕಾರ್ಯಕ್ರಮ ಮುಗಿಯ ತೊಡಗಿತು. ಅಮೋಘ ವೇದಿಕೆ ಮೇಲೆ ಭಾಷಣ ಮಾಡುತ್ತಿದ್ದ ಭಾಷಣ ಮಾಡುವಾಗ ಕೊನೆಯ ಹಿಂದಿನ ಸಾಲಿನಲ್ಲಿ ಮುಖ ಪರದೆಯನ್ನು ಹಾಕಿಕೊಂಡು ಕುಳಿತ್ತಿರುವ ತನ್ನ ತಾಯಿಯನ್ನು ನೋಡಿ ಅವನಿಗೆ ಕೋಪ ನೆತ್ತಿಗೇರಿತು, ಭಾಷಣ ಮುಗಿದ ನಂತರ ಸಿಟ್ಟಿನಿಂದ ತಾಯಿಗೆ ಗೊತ್ತಿಲ್ಲದ ರೀತಿಯಲ್ಲಿ ಅವಳ ಬೆನ್ನ ಹಿಂದೆ ಬಂದು ನಿಂತ ಆ ವೇಳೆಗೆ ತಾಯಿಯ ಪಕ್ಕದಲ್ಲಿ ಕುಳಿತ್ತಿದ್ದ ಒಬ್ಬಾಕೆ ರೂಪಾಳೊಂದಿಗೆ ಕೇಳುತ್ತಾಳೆ, ‘‘ನೀವು ಮುಖವನ್ನು ಏಕೆ ಪದರೆಯಿಂದ ಮುಚ್ಚಿಕೊಂಡಿದ್ದೀರ ? ನಿಮ್ಮ ಮುಖದ ಮೇಲೆ ಇರುವ ಗಾಯ ಹೇಗಾಯಿತು ?’’ ಎಂದು ಆಗ ರೂಪ ಹೇಳುತ್ತಾಳೆ ‘‘ನನ್ನ ಮಗ ಒಂದು ವರ್ಷದ ಚಿಕ್ಕ ಮಗು ಆಗಿದ್ದಾಗ ಆಕಸ್ಮಿಕವಾಗಿ ನಮ್ಮ ಮನೆಗೆ ಬೆಂಕಿ ಬಿತ್ತು. ಆಗ ನನ್ನ ಕಂದಮ್ಮ ಹಾಯಾಗಿ ನಿದ್ರೆ ಮಾಡುತ್ತಿದ್ದ, ನನಗೆ ಒಂದು ನಿಮಿಷ ಏನುಮಾಡಬೇಕೆಂದು ಗೊತ್ತಾಗಲೇ ಇಲ್ಲ ಆಗ ನಾನು ನನ್ನ ಕಂದಮ್ಮನನ್ನು ಬಾಚಿ ತಬ್ಬಿಕೊಂಡು ನನ್ನ ಎದೆಗವುಚಿಕೊಂಡೆ, ಮನೆಯ ಆಧಾರಸ್ತಂಭ ಬೀಳ ತೊಡಗಿತು. ಮಗುವಿನ ಮೇಲೆ ಬೀಳಬೇಕಿತ್ತು. ಇದನ್ನು ತಪ್ಪಿಸಲು ಮಗುವನ್ನು ಎಡಭುಜದಿಂದ ಬಲಭುಜಕ್ಕೆ ಮಲಗಿಸಿ ಕೊಂಡಾಗ ಆ ಆಧಾರಸ್ತಂಭ ನನ್ನ ಎಡಭಾಗದ ಮುಖದ ಮೇಲೆ ಬಿತ್ತು, ಆಗ ನನ್ನ ಮುಖದಲ್ಲಿ ಈ ರೀತಿ ಸುಟ್ಟಗಾಯವಾಯಿತು’’ ಎಂದು ಹೇಳಿದಳು. ತಾಯಿಯ ಬೆನ್ನ ಹಿಂದೆ ನಿಂತಿದ್ದ ಅಮೋಘನಿಗೆ ಒಮ್ಮೆಲೆ ದುಃಖ ಉಮ್ಮಳಿಸಿ ಬಂತು, ಬೆನ್ನ ಹಿಂದೆಯಿಂದಲೇ ತನ್ನ ತಾಯಿಯನ್ನು ಗಟ್ಟಿಯಾಗಿ ಹಿಡಿದು ತಬ್ಬಿಕೊಂಡು ಬಿಕ್ಕಿ-ಬಿಕ್ಕಿ ಅಳತೊಡಗಿದ. ನಂತರ ತಾಯಿಯ ಮುಖದ ಪರದೆಯನ್ನು ತೆಗೆದು ಅವಳ ಸುಟ್ಟ ಗಾಯದ ಭಾಗವನ್ನು ನಯವಾಗಿ ಮುಟ್ಟಿ ಕೆನ್ನೆಗೆ ಒಂದು ಮುತ್ತು ಕೊಡುತ್ತಾನೆ. ಆಗ ರೂಪಾಳಿಗೆ ಸಂತೋಷದ ಜೊತೆಗೆ ದುಃಖವು ಉಮ್ಮಳಿಸಿ ಬಂತು. ರೂಪಾಳಿಗೆ ಆದ ಸಂತೋಷ ಅಷ್ಟಿಷ್ಟಲ್ಲ. ಹೀಗೆ ಅಮೋಘ ತನ್ನ ತಾಯಿಯನ್ನು ಪ್ರೀತಿಯಿಂದ ಮಾತನಾಡಿಸಿ ನೋಡಿಕೊಳ್ಳುತ್ತಿದ್ದ ತನ್ನ ತಾಯಿಯ ಜೊತೆಯಲ್ಲಿಯೇ ಶಾಲೆಗೆ ಹೋಗುತ್ತಿದ್ದ ಸಭೆ-ಸಮಾರಂಭಗಳಿಗೆ ತಂದೆ-ತಾಯಿ ಇಬ್ಬರನ್ನೂ ಕರೆದುಕೊಂಡು ಹೋಗುತ್ತಿದ್ದ ಪ್ರತಿದಿನ ಶಾಲೆಗೆ ಹೋಗುವಾಗ ಅಮ್ಮನಿಗೆ ಮುತ್ತುಕೊಟ್ಟು ಬಾಯ್ ಹೇಳುತ್ತಿದ್ದ. ಹೀಗೆ ಪ್ರತಿಯೊಬ್ಬ ತಾಯಂದಿರಿಗೂ ತಮ್ಮ-ತಮ್ಮ ಮಕ್ಕಳ ಮೇಲೆ ಪ್ರೀತಿ-ಮಮತೆ ಇದ್ದೇ ಇರುತ್ತದೆ. ಅಲ್ಲದೆ ಪ್ರತಿಯೊಬ್ಬ ತಾಯಂದಿರೂ ಸಹ ಮಕ್ಕಳಿಗೋಸ್ಕರ ಯಾವ ತ್ಯಾಗಕ್ಕಾದರೂ ಸಿದ್ಧರಾಗಿರುತ್ತಾರೆ.
?ಅಭಿಷೇಕ್ ಕೆಂಚೆಟ್ಟಿ,
ಮಡಿಕೇರಿ.