ಕೊರೊನಾ ಎಂಬ ಹೆಮ್ಮಾರಿ ಜಗದಗಲ-ಮುಗಿಲಗಲ ದಾಂಗುಡಿ ಇಟ್ಟು ಮನುಕುಲವನ್ನು ಬೆಚ್ಚಿ ಬೀಳಿಸಿರುವ ಈ ಹೊತ್ತಿನಲ್ಲಿ ಇಲ್ಲೊಂದು ಗ್ರಾಮದಲ್ಲಿ ಗ್ರಾಮಸ್ಥರೇ ಸೇರಿ ತಾವೇ ಒಂದು ಅಲಿಖಿತ ಶಾಸನವೊಂದನ್ನು ತಮ್ಮ ಊರಿನ ಮೇಲೆ ತಾವೇ ವಿಧಿಸಿಕೊಂಡಿದ್ದಾರೆ. ಅದು ಎಂತಹ ಶಾಸನ ಗೊತ್ತಾ...! ಆ ಊರಿನ ಯಾರದೇ ಮನೆಗೆ ಯಾವುದೇ ವ್ಯಕ್ತಿ ಬಂದರೂ, ಆ ವ್ಯಕ್ತಿ ಬಂದು ಹೋದ ಮನೆಯವರಿಗೆ ಬರೋಬ್ಬರಿ ಹತ್ತು ಸಾವಿರ ರೂ.ಗಳ ದಂಡವನ್ನು ಹಾಕಲಾಗುತ್ತದೆ. ಆ ಗ್ರಾಮಕ್ಕೆ ಸೇರಿದ ಹೆಣ್ಣು ಮಕ್ಕಳು, ಮೊಮ್ಮಕ್ಕಳು ಯಾರೇ ಬಂದರೂ ದಂಡ ಹಾಕದೇ ಹಾಗೇ ಬಿಡುವ ಮಾತೇ ಇಲ್ಲವಂತೆ. ಕಳೆದ ಹದಿನೈದು ದಿನಗಳಿಂದ ಈ ತೀರ್ಮಾನಕ್ಕೆ ಬಂದಿರುವ ಈ ಗ್ರಾಮಸ್ಥರು ಮೊದಲೇ ಇಡೀ ಊರಿನಾದ್ಯಂತ ಮನೆ ಮನೆಗೂ ವಿಷಯ ಮುಟ್ಟುವಂತೆ ಡಂಗುರ ಸಾರಿಸಲಾಗಿದೆಯಂತೆ. ಊರಿನ ಹಿರಿಯರು, ಮುಖ್ಯಸ್ಥರು ಒಟ್ಟಿಗೆ ಸೇರಿ ಊರಿನವರ ಹಿತಾಸಕ್ತಿಗೆ ಮಾಡಿಕೊಂಡಿರುವ ಈ ಗ್ರಾಮಶಾಸನದ ವಿರುದ್ಧ ಯಾರೂ ಕೂಡ ನಡೆದುಕೊಳ್ಳುತ್ತಿಲ್ಲವಂತೆ. ಅಷ್ಟರ ಮಟ್ಟಿಗೆ ಕೊರೊನಾ ಈ ರೀತಿಯ ಭೀತಿಯನ್ನು ಹುಟ್ಟಿಸಿದೆ. ಅದು ಮೈಸೂರಿಗೆ ಹತ್ತಿರವಿರುವ ಬಿಳಿಕೆರೆ ಬಳಿಯ ಉಳ್ಳೇನಹಳ್ಳಿ ಎಂಬ ಗ್ರಾಮ. ಈ ಊರಿನವರು ಮೈಸೂರಿಗೆ ಅಥವಾ ಬೆಂಗಳೂರಿಗೆ ಎಲ್ಲೂ ಹೋಗೋ ಹಾಗಿಲ್ಲವಂತೆ. ಗ್ರಾಮಕ್ಕೆ ಗ್ರಾಮವೇ ಈ ರೀತಿ ತೀರ್ಮಾನಗಳನ್ನು ಕೈಗೊಂಡು ಪಾಲಿಸಿದರೆ ಪೊಲೀಸರಿಗೆ ತಲೆನೋವು ಒಂದಷ್ಟು ತಪ್ಪಿಸಿದಂತಾಗುತ್ತದೆ. ಲಾಕ್‍ಡೌನ್ ಪಾಲಿಸಲು ಕರೆಕೊಟ್ಟ ಪ್ರಧಾನಿ ಹಾಗೂ ಮುಖ್ಯಮಂತ್ರಿಗಳ ಕೋರಿಕೆಗೂ ಗೌರವ ಕೊಟ್ಟಂತಾಗುತ್ತದೆ ಎನ್ನುತ್ತಾರೆ ಆ ಊರಿನ ಹಿರಿಯ ವ್ಯಕ್ತಿಯೊಬ್ಬರು.