ಅರಣ್ಯದ ರಸ್ತೆ ಬದಿಯಲ್ಲಿ ವಾಹನ ಸವಾರರು ನೀಡುವ ಹಣ್ಣುಗಳನ್ನು ತಿಂದು ಹೊಟ್ಟೆ ತುಂಬಿಸಿಕೊಳ್ಳುತಿದ್ದ ಕೋತಿಗಳಿಗೆ ಕೊರೊನಾ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ವಿಧಿಸಲಾಗಿರುವ ಲಾಕ್‍ಡೌನ್‍ನಿಂದಾಗಿ ಆಹಾರ ಸಮಸ್ಯೆ ತಲೆದೋರಿದೆ. ರಸ್ತೆ ಬದಿಯಲ್ಲಿ ಕೋತಿಗಳು ಸಣ್ಣ ಸಣ್ಣ ಮರಿಗಳನ್ನು ಎದೆಗಪ್ಪಿ ಕೊಂಡು ಯಾರಾದರೂ ತಿನ್ನಲು ಹಣ್ಣು ನೀಡಬಹುದೆಂಬ ಆಸೆಗಣ್ಣಿನಿಂದ ವಿರಳವಾಗಿ ತಿರುಗಾಡುವ ವಾಹನ ಗಳತ್ತ ನೋಡುತಿದ್ದವು. ಕೋತಿಗಳ ಈ ದಯನೀಯ ಸ್ಥಿತಿಯನ್ನು ನೋಡಿ ಮರುಕಪಟ್ಟ ಪೊನ್ನಂಪೇಟೆಯ ನಿವಾಸಿ ಅಜ್ಜಿಕುಟ್ಟೀರ ರಂಜಿ ಬೆಳ್ಳಿಯಪ್ಪ 80 ಕೆ.ಜಿ. ನೇಂದ್ರ ಬಾಳೆಹಣ್ಣನ್ನು ಖರೀದಿಸಿ ತಿತಿಮತಿ ಮಜ್ಜಿಗೆಹಳ್ಳ ಸಮೀಪ ಅರಣ್ಯದ ರಸ್ತೆಯಲ್ಲಿ ಕುಳಿತಿದ್ದ ಕೋತಿಗಳಿಗೆ ತಿನ್ನಲು ನೀಡಿದರು. ಹಸಿವಿನಿಂದ ಬಳಲಿದ್ದ ಕೋತಿಗಳು ಬಾಳೆಹಣ್ಣನ್ನು ತಿಂದು ಹೊಟ್ಟೆ ತುಂಬಿಸಿ ಕೊಂಡವು. ಅಪಘಾತಕ್ಕೆ ಒಳಗಾಗಿ ಕಣ್ಣು ಕಳೆದು ಕೊಂಡು, ಮುಖದ ತುಂಬಾ ಗಾಯವಾಗಿದ್ದ ಕೋತಿಯೊಂದು ಹಸಿವಿ ನಿಂದ ಬಡಕಲಾಗಿತ್ತು ಇದಕ್ಕೂ ಹಣ್ಣು ನೀಡಲಾಯಿತು. ಕೋತಿಗಳಿಗೆ ಹೊಟ್ಟೆ ತುಂಬುವಷ್ಟು ಬಾಳೆ ಹಣ್ಣು ನೀಡಿ, ಮಿಕ್ಕಿದ ಬಾಳೆ ಹಣ್ಣುನ್ನು ಕೋತಿಗಳು ಹಸಿವಾದಾಗ ತಿನ್ನಲಿ ಎಂಬ ಉದ್ದೇಶದಿಂದ ರಸ್ತೆ ಬದಿಯ ಮರಕ್ಕೆ ಕಟ್ಟಿ ತೂಗುಹಾಕಲಾಯಿತು. ಮೂರು ನಾಲ್ಕು ದಿನದ ನಂತರ ಮತ್ತೆ ಬಾಳೆ ಹಣ್ಣು ತಂದು ಕೋತಿಗಳಿಗೆ ನೀಡುವುದಾಗಿ ರಂಜಿ ಬೆಳ್ಳಿಯಪ್ಪ ಹೇಳಿದರು. -ಚನ್ನನಾಯಕ