ಕೊಡಗು ಸಂಪೂರ್ಣ ಲಾಕ್‍ಡೌನ್ ಆಗಿದೆ. ಕೊಡಗಿನ ಜನ ಮನೆ ಸೇರಿಕೊಂಡಿದ್ದಾರೆ. ಹೊರಗಡೆ ಹೋದರೆ. ಇವರ ಹೆದರಿಕೆ ಇದ್ದೇ ಇದೆ. ಕೊಡಗಿನ ಗಡಿಗಳು ಸಂಪೂರ್ಣ ಬಂದ್ ಆಗಿದೆ. ಹೊರ ಜಿಲ್ಲೆಗಳಿಂದಲೂ ಬರುವ ಹಾಗಿಲ್ಲ, ಹೊರ ಜಿಲ್ಲೆಗೂ ಹೋಗೋ ಹಾಗಿಲ್ಲ. ಗಡಿಗಳಲ್ಲಿ ಇವರು ಹಗಲೂ-ರಾತ್ರಿ ಕಾವಲಿದ್ದಾರೆ. ಸಂತೆ ವ್ಯಾಪಾರ ಇಡೀ ದೇಶವೇ ಮೆಚ್ಚುವಂತೆ ಸುಸೂತ್ರವಾಗಿ ಕೊಡಗಿನಲ್ಲಿ ನಡೆಯುತ್ತಿದೆ. ಇಲ್ಲಿಯೂ ಇವರ ಪಹರೆ ಇದೆ. ಸಾಮಾಜಿಕ ಅಂತರ ಕಾಯುವಲ್ಲಿಯಿಂದ ತರಕಾರಿ ದರ ನಿಗದಿಪಡಿಸುವವರೆಗೂ ಇವರ ಪಾತ್ರವಿದೆ. ನಿಯಮ ಉಲ್ಲಂಘಿಸಿ ಪುಂಡರು ರಸ್ತೆಗಿಳಿಯುತ್ತಾರೆ. ವಾಹನಗಳಲ್ಲಿ ಅತ್ತಿಂದಿತ್ತ ಸಂಚರಿಸುವ ಪ್ರಯತ್ನ ಕೆಲವರಿಂದ ನಡೆಯುತ್ತಿದೆ. ಆದರೆ, ಇವರನ್ನು ಕಂಡೊಡನೇ ಪಲಾಯನ ಮಾಡಿ ಮನೆ ಸೇರಿಕೊಂಡು ಬಿಡುತ್ತಾರೆ. ಕೊಡಗಿನ ಲಾಕ್‍ಡೌನ್ ಸಫಲತೆಯಲ್ಲಿ ಪೊಲೀಸರ ಪಾತ್ರ ಅತ್ಯಂತ ಪ್ರಮುಖವಾದದ್ದು, ನಿಜಕ್ಕೂ ಜನರನ್ನು ಇವರು ಮನೆ ಒಳಗೆ ಹಾಕಿದ್ದಾರೆ!
........
ಕೊಡಗು ಪೆÇಲೀಸ್-ಈ ಹೆಸರಿನಲ್ಲಿಯೇ ಒಂದು ಥ್ರಿಲ್ ಇದೆ. ಪ್ರಾಮಾಣಿಕ, ದಕ್ಷ ಅಧಿಕಾರಿಗಳು, ಸಿಬ್ಬಂದಿಗಳು ಕೊಡಗು ಪೆÇಲೀಸ್ ಇಲಾಖೆಯ ಮುಕುಟಮಣಿಗಳು. ಮಳೆ, ಪ್ರವಾಹ, ಅಪಘಾತ, ವಿಕೋಪ, ಹತ್ಯೆ, ಗಲಭೆ ಹೀಗೆ ಎಲ್ಲಾ ಘಟನೆಗಳನ್ನೂ ಸಮರ್ಥವಾಗಿ ನಿಭಾಯಿಸಿದ ಹಿರಿಮೆ ಕೊಡಗು ಪೆÇಲೀಸರದ್ದು ಕಳೆದೊಂದು ತಿಂಗಳಿನಿಂದ ಕೊಡಗು ಪೆÇಲೀಸರಿಗೆ ಹೊಸ ಹೊಣೆ. ಅದುವೇ ಲಾಕ್‍ಡೌನ್ ನಿರ್ವಹಣೆ. ಜನರನ್ನು ಮನೆಯಿಂದ ಹೊರಕ್ಕೆ ಬಾರದಂತೆ ಮನೆಯೊಳಗೆ ಇರುವಂತೆ ಮಾಡುವ ವಿನೂತನ ಮತ್ತು ಹೊಸ ಹೊಣೆಗಾರಿಕೆ. ಪೆÇಲೀಸರು ಸಮರ್ಪಕವಾಗಿ ನಿರ್ವಹಿಸಿ ದ್ದರಿಂದಾಗಿಯೇ ಕೊಡಗು ಇಂದು ಕೊರೊನಾ ಮುಕ್ತ ಜಿಲ್ಲೆಯಾಗಿದೆ. ಕೊಡಗಿನಲ್ಲಿ ಮೊದಲ ಕೊರೊನಾ ಸೋಂಕು ಪತ್ತೆಯಾದಾಗ ಸೋಂಕಿತನ ಗ್ರಾಮವನ್ನೇ ಕಂಟೈನ್ಮೆಂಟ್ ಮತ್ತು ಬಫರ್‍ಜೋನ್ ಮಾಡಲಾಗಿತ್ತು. ಸುಮಾರು 1200 ಗ್ರಾಮಸ್ಥರು ಗ್ರಾಮದಿಂದ ಹೊರಬಾರದಂತೆ 3 ಚೆಕ್‍ಪೆÇೀಸ್ಟ್ ಮೂಲಕ ಕಾದವರು ಇದೇ ಪೆÇಲೀಸರು. ಗೃಹಸಂಪರ್ಕ ತಡೆ ಮಾಡಲಾದ ನೂರಾರು ಜನರನ್ನು ಕಣ್ಣಲ್ಲಿ ಕಣ್ಣಿಟ್ಟು ಗಮನಿಸುತ್ತಿರುವುದೂ ಇದೇ ಪೆÇಲೀಸರು. ಸೋಂಕು ಶಂಕಿತರನ್ನೂ ಆಸ್ಪತ್ರೆಗೆ ಕರೆದೊಯ್ದುವುದಲ್ಲದೇ, ಆಸ್ಪತ್ರೆಯಲ್ಲಿಯೂ ಅವರು ತಪ್ಪಿಸಿಕೊಂಡು ಹೋಗದಂತೆ ಕಾಯುವ ಹೊಣೆಯೂ ಇವರದ್ದೇ. ಸಂಪರ್ಕ ತಡೆಯಲ್ಲಿದ್ದವರು ಮನೆ ಬಿಟ್ಟು ಉಂಡಾಡಿಗಳಂತೆ ಬೀದಿ ಬೀದಿ ಸುತ್ತುವುದನ್ನು ತಪ್ಪಿಸುವುದೂ ಪೆÇಲೀಸರ ಕರ್ತವ್ಯ. ರಸ್ತೆಗೆ ಬರಬೇಡಿ, ಮನೆಯಲ್ಲಿಯೇ ಇರಿ ಎಂದು ಜನಜಾಗೃತಿ ಉಂಟು ಮಾಡುವುದು. ಮನೆಯಿಂದ ಹೊರಬಂದ ಜನರಿಗೆ ಲಾಠಿ ಪ್ರಸಾದ ನೀಡಿ ಮನೆಗೆ ಕಳುಹಿಸುವುದು. ವಾಹನಗಳ ಅನಗತ್ಯ ಸಂಚಾರ ಗಮನಿಸಿ ಅಗತ್ಯವಿದ್ದಲ್ಲಿ ಕೇಸ್ ದಾಖಲಿಸುವುದು. ಗ್ರಾಮಗಳ ಮೈದಾನದಲ್ಲಿ ಪುಂಡಾಟಿಕೆ ಮಾಡುವವರಿಗೆ ಸರಿಯಾಗಿ ಬುದ್ದಿ ಕಲಿಸುವುದು ವೈದ್ಯಕೀಯ ಸೇವಾ ಸಿಬ್ಬಂದಿಗಳಿಗೆ ಅಗತ್ಯ ಭದ್ರತೆ ನೀಡುವುದು. ಇದರ ಜತೆಯಲ್ಲಿಯೇ ಕೊಡಗು ಪ್ರವೇಶಿಸುವ 15 ಚೆಕ್‍ಪೆÇೀಸ್ಟ್‍ಗಳ ಹಗಲೂ ರಾತ್ರಿ ನಿರ್ವಹಣೆಯ ಸವಾಲು. ಸಾಕಷ್ಟು ಪ್ರಭಾವ ಬಳಸಿ ಕೊಡಗು ಪ್ರವೇಶಿಸಲು ಮುಂದಾಗುವವರ ಮನವೊಲಿಸುವಾಗ ನಡೆಯುವ ವಾಗ್ವಾದ ಸಾಕಾಗುತ್ತದೆ. ನಮ್ಮ ಬುದ್ಧಿಯನ್ನೆಲ್ಲಾ ಬಳಸಿ ಜನರನ್ನು ಮನೆಯಿಂದ ಹೊರ ಬಾರದಂತೆ ನೋಡಿ ಕೊಳ್ಳುತ್ತಿದ್ದೇವೆ ಎಂದು ಪೆÇಲೀಸ್ ಅಧಿಕಾರಿ ಯೋರ್ವರು ಹೇಳಿ ದರು. ಪ್ರಸ್ತುತ ಜಿಲ್ಲೆ ಯಲ್ಲಿ ಸಿವಿಲ್, ರಾಜ್ಯ ಸಶಸ್ತ್ರಪಡೆ, ಮೀಸಲು ಪಡೆ. ಕಂಟ್ರೋಲ್ ರೂಂ, ವೈರ್‍ಲೆಸ್, ಹೋಂಗಾರ್ಡ್ ಸೇರಿದಂತೆ 1200 ಪೆÇಲೀಸರು, 35 ಅಧಿಕಾರಿಗಳು ಸಂಪೂರ್ಣವಾಗಿ ಲಾಕ್‍ಡೌನ್ ಕರ್ತವ್ಯದಲ್ಲಿ ತೊಡಗಿಸಿ ಕೊಂಡಿದ್ದಾರೆ. ಕೊಡಗು ಪೆÇಲೀಸರಿಗೆ ಇದು ಬಹಳ ದೊಡ್ಡ ಸವಾಲಾಗಿತ್ತು. ಇದನ್ನು ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ನನ್ನ ಇಲಾಖೆ ಸಿಬ್ಬಂದಿಗಳು ಅತ್ಯಂತ ವ್ಯವಸ್ಥಿತ ವಾಗಿ ನಿಭಾಯಿಸಿದ್ದಾರೆ ಎಂಬ ಹೆಮ್ಮೆ ನನಗಿದೆ. ಲಾಕ್‍ಡೌನ್ ಮುಗಿಯುವರೆಗೂ ನಮ್ಮ ಕರ್ತವ್ಯ ಮುಂದುವರಿಯುತ್ತದೆ ಎಂದು ಹೇಳಿದ ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಡಿ.ಪಿ ಅನೇಕ ಬಾರಿ ಗಡಿಭಾಗದ ಚೆಕ್ ಪೆÇೀಸ್ಟ್‍ಗಳಿಗೆ ನಡುರಾತ್ರಿಯೂ ತೆರಳಿ ಪರಿಶೀಲನೆ ನಡೆಸಿದ್ದಾರೆ.
ಕೊಡಗಿನ ವಿವಿಧೆಡೆ ವಾರದ ಮೂರು ದಿನ ನಡೆಯುತ್ತಿರುವ ಸಂತೆ ವಹಿವಾಟಿನ ಹೊಣೆಯೂ ಪೆÇಲೀಸರದ್ದೇ, ತರಕಾರಿ ಬೆಲೆ ನಿಗದಿಯಿಂದ ಮೊದಲ್ಗೊಂಡು ಸಂತೆಯಲ್ಲಿ ಗ್ರಾಹಕರು ಸಾಮಾಜಿಕ ಅಂತರ ಕಾಯ್ದುಕೊಳ್ಳು ವವರೆಗೂ ಪೆÇಲೀಸರೇ ನೋಡಿಕೊಳ್ಳಬೇಕು. ವೈರ್‍ಲೆಸ್ ಸಿಬ್ಬಂದಿಗಳು ಹಗಲೂ ರಾತ್ರಿ ತಮಗೆ ಬರುವ ಮಾಹಿತಿಗಳನ್ನು ಪೆÇಲೀಸ್ ಅಧಿಕಾರಿ ಗಳೊಂದಿಗೆ ವಿನಿಮಯ ಮಾಡಿಕೊಳ್ಳಬೇಕು. ಸುಳ್ಳು ಸಂದೇಶಗಳ ಬಗ್ಗೆಯೂ ಗಮನ ಹರಿಸಬೇಕು. ಇಷ್ಟೆಲ್ಲಾ ಹೊಣೆಯೊಂದಿಗೆ ಕೊಡಗು ಪೆÇಲೀಸರು ರಾಜ್ಯಕ್ಕೆ ಮಾದರಿಯಾಗುವಂತೆ ಬಡವರು, ಅಗತ್ಯವುಳ್ಳವರಿಗಾಗಿ ಧವಸ ಧಾನ್ಯ ಸಂಗ್ರಹಿಸಲು ಮುಂದಾಗಿದ್ದಾರೆ. ಹಸಿವು ಹೊಟ್ಟೆಗೆ ತಣಿವು ಪೆಟ್ಟಿಗೆ ಯೋಜನೆಗೆ ಅತ್ಯುತ್ತಮ ಸ್ಪಂದನ ದೊರಕಿದೆ. ಪೆÇಲೀಸರ ಮಾನವೀಯ ಗುಣಕ್ಕೆ ಸಾರ್ವಜನಿಕರಿಂದ ಪ್ರಶಂಸೆ ವ್ಯಕ್ತವಾಗಿದೆ. ಈ ನಡುವೇ ಸಹದ್ಯೋಗಿ ಗಳಿಗೆ ಊಟ ನೀಡುವ ಪೆÇಲೀಸ್. ಬಡವರಿಗೆ ದಿನಸಿ ನೀಡಿದ ಪೆÇಲೀಸ್, ಕೂಲಿಕಾರ್ಮಿಕರಿಗೆ ಆಹಾರ ನೀಡಿದ ಪೆÇಲೀಸ್...ಹೀಗೆ ಪೆÇಲೀಸರ ಹೊಸ ರೂಪಗಳೂ ಅನಾವರಣಗೊಂಡಿದೆ.
ಗಂಟೆಗಟ್ಟಲೆ ಕರ್ತವ್ಯ ನಿರ್ವಹಿಸಿ ಮನೆಗೆ ತೆರಳುವ ಪೆÇಲೀಸರು ಮನೆ ಪ್ರವೇಶಿಸಿದ ಕೂಡಲೇ ಬಿಸಿನೀರು ಸ್ನಾನ ಮಾಡಿ ಆರೋಗ್ಯದ ಮುನ್ನೆಚ್ಚರಿಕೆ ವಹಿಸುತ್ತಾರೆ. ತಿಳಿದೋ ತಿಳಿಯದೆಯೋ ಸೋಂಕಿತರನ್ನು ನಾವು ಸಂಪರ್ಕಿಸಿದ್ದರೆ ಎಂಬ ಭಯ ಮನದಲ್ಲಿ ಸದಾ ಕಾಡುತ್ತಲೇ ಇರುತ್ತದೆ. ನೆಮ್ಮದಿಯಾಗಿ ಮಕ್ಕಳೊಂದಿಗೆ ಆಟವಾಡುವಾಗಲೂ ಈ ಅವ್ಯಕ್ತ ಭಯ ಮನದಲ್ಲಿರುತ್ತದೆ ಎಂದರು ಅಧಿಕಾರಿಯೋರ್ವರು. ಜನಸ್ನೇಹಿ ಮನೋಭಾವದ ಪೆÇಲೀಸರು ಕೊಡಗಿನ ಲಾಕ್‍ಡೌನ್ ಯಶಸ್ಸಿನ ಪ್ರಮುಖ ರೂವಾರಿಗಳು. ಲಾಕ್‍ಡೌನ್ ಉಲ್ಲಂಘಿಸದೇ ನಿಯಮಪಾಲಿಸುತ್ತಾ ಮನೆಯಲ್ಲಿ ಇರುವುದೇ ಕೊಡಗಿನ ಜನತೆ ನಮ್ಮ ಪೆÇಲೀಸರಿಗೆ ನೀಡುವ ಬಹುದೊಡ್ಡ ಗೌರವ.
ಕೊನೇ ಹನಿ.
....
‘‘ಅಪ್ಪಾ ಅಪ್ಪಾ.. ನೀನು ಯಾವಾಗ ಮನೆಗೆ ಬರುತ್ತೀಯಾ ಅಪ್ಪಾ ?’’
‘‘ಬೇಗನೇ ಬರುತ್ತೇನೆ ಮಗಳೇ.. ಕಾಯುತ್ತಿರು’’
‘‘ಬೇಗ ಅಂದ್ರೆ ಯಾವಾಗ ಅಪ್ಪ. ಕತ್ತಲಾದ ಮೇಲಾ ? ಬೇಗ ಬಾ ಅಪ್ಪಾ...’’
‘‘ನೋಡೋಣ ಮಗಳೇ.. ಬರಲು ಟ್ರೈ ಮಾಡ್ತೇನೆ.’’
‘‘ಅಪ್ಪಾ.. ನಿಂಗೊಂದು ಪ್ರಶ್ನೆ ಕೇಳಲಾ...?’’
‘‘ಕೇಳು ಮಗಳೇ...’’
‘‘ನನ್ನ ಫ್ರೆಂಡ್ಸ್ ಅಪ್ಪಂದಿರೆಲ್ಲಾ ಮನೆಯಲ್ಲಿಯೇ ಮಕ್ಕಳ ಜತೆ ಆಟವಾಡ್ತಾ ಇದ್ದಾರೆ, ಎಲ್ರೂ ಮನೆಯಲ್ಲಿಯೇ ಇರಬೇಕಂತೆ.. ನೀನ್ಯಾಕೇ ಅಪ್ಪಾ ಹೊರಹೋಗೋದು...?’’
‘‘ಬೇರೆಯವರನ್ನು ಮನೆಯಲ್ಲಿ ಕೂರಿಸಬೇಕಲ್ಲಾ ಮಗಳೇ... ಅದಕ್ಕಾಗಿ ನಾನು ಹೊರಹೋಗಲೇ ಬೇಕು...’’
‘‘ಖಾಕಿ ಯೂನಿಫಾರ್ಮ್ ಬಟನ್ ಹಾಕುತ್ತಿದ್ದ ಅಪ್ಪನ ಕಣ್ಣಂಚಿನಿಂದ ಉದುರಿದ ನೀರನ್ನು ಪುಟ್ಟ ಮಗಳು ಗಮನಿಸಿದಳಾ ?
ಮಗಳಿಗೆ ಗೊತ್ತಾಯಿತೋ ಇಲ್ಲವೋ ಗೊತ್ತಿಲ್ಲ.. ಆದರೆ ಆ ಕಣ್ಣೀರಿನ ಹಿಂದಿನ ಪರಿಶ್ರಮವನ್ನು ಮಾತ್ರ ಕೊಡಗಿನ ಜನ ಮರೆಯಬಾರದು.