ನನಗೆ ವಯಸ್ಸಾಗಿದೆ. ಕಣ್ಣು ಸರಿಯಾಗಿ ಕಾಣಿಸುವುದಿಲ್ಲ. ಕಿವಿ ಸ್ವಲ್ಪ ದೂರ. ಕ್ಯಾನ್ಸರ್ ಇದೆ ಎಂದು ಕೂಡ ವೈದ್ಯರು ಹೇಳಿದ್ದಾರೆ. ಬಹಳ ಕಡಿಮೆ ತ್ರಾಣ, ಊಟ ಮಾಡಲೂ ಶಕ್ತಿ ಇಲ್ಲ. ಕಂತ್ರಿ ನಾಯಿಗಳೇನೊ ಬೀದಿಯಲ್ಲೇ ಹುಟ್ಟಿ ಬೆಳೆದು, ಎಂತಹ ಕಷ್ಟ ಕಾಲವನ್ನೂ ಎದುರಿಸುತ್ತವೆ. ಆದರೆ ಹಲವು ವರ್ಷಗಳಿಂದ ಮನೆಯ ಸಾಕು ನಾಯಾಗಿ ಬೆಳೆದು, ಆಹಾರ ಪೂರೈಕೆ ಇಂದ ಹಿಡಿದು ಸಣ್ಣ ಪುಟ್ಟ ಗಾಯಗಳಾದರೂ ವೈದ್ಯರ ಬಳಿ ಕರೆದುಕೊಂಡು ಹೋಗುತ್ತಿದ್ದ ನನ್ನ ಮಾಲೀಕ, ಅವರನ್ನೇ ಸಂಪೂರ್ಣವಾಗಿ ಅವಲಂಭಿಸುತಿದ್ದೆ ನಾನು. ಆದರೆ ನನಗೆ ಕಾಯಿಲೆ ಎಂದು ಮಾಲೀಕ ಬೀದಿಯಲ್ಲಿ ಬಿಟ್ಟುಬಿಟ್ಟರು. ನಗರದ ಇಂದಿರಾ ಕ್ಯಾಂಟೀನ್ ಬಳಿ ಸುತ್ತಾಡುತ್ತಿದ್ದೆ. ವಾಹನಗಳ ಚಕ್ರಗಳಿಗೆ ಸಿಕ್ಕಿ ಸತ್ತು ಹೋಗಬಹುದೆಂದು ಅರಿತು ಮಿತ್ರನು ರಸ್ತೆಯ ಬದಿ ಕರೆದುಕೊಂಡು ಬಂದನು.

ನನಗೆ ಹೇಗೆ ಗೊತ್ತು ಅವನು ಒಳ್ಳೆಯವನು ಎಂಬುದು. ನನ್ನ ಮಾಲೀಕ ನನ್ನನ್ನು ಬೀದಿಗೆ ಬಿಟ್ಟಿದ್ದಾರೆ. ಇವನು ಅದೇ ಮನೋಭಾವದವನು ಎಂದು ತಿಳಿದು, ಗುಂಡಿಗೆ ಬಿದ್ದು ಬಿm.É್ಟ ನಾಲ್ಕು ಜನ ಮಿತ್ರರು ನಾನು ಕಚ್ಚಬಾರದೆಂದು ಬಾಯಿಗೆ ಹಗ್ಗ ಕಟ್ಟಿ ಗುಂಡಿಯಿಂದ ಎತ್ತಿ ತೆಗೆದರು. ಕಾಲಿನಲ್ಲಿ ಬಲ ಇಲ್ಲ, ಈ ಮಿತ್ರರ ಮೇಲೆ ನಂಬಿಕೆಯೂ ಇಲ್ಲ. ಸೀದ ಹೋಗಿ ಚರಂಡಿಗೆ ಬಿದ್ದು ಬಿಟ್ಟೆ. ಮಿತ್ರರು ಚರಂಡಿಗೂ ಇಳಿದು ನನ್ನನ್ನು ಮೇಲೆತ್ತಿದರು.

ಮಿತ್ರರು ಸಮೀಪದಲ್ಲೇ ಇದ್ದ ಒಂದು ಮನೆಗೆ ತೆರಳಿ ನನ್ನ ಮಾಲೀಕರ ಬಗ್ಗೆ ವಿಚಾರಿಸಿದರು. ಅವರಿಗೆ ಗೊತ್ತಿಲ್ಲ ಎಂದು ತಿಳಿಸಿದರು. ಆ ಮನೆಯ ಮಕ್ಕಳು ಅವರದ್ದಿರಬಹುದು, ಇವರದ್ದಿರ ಬಹುದು ಎಂದು ಕುರುಹುಗಳು ನೀಡಿದಾಗ, ಮಕ್ಕಳ ತಾಯಿಯು “ಅದನೆಲ್ಲ ನೀವು ಹೇಳಬೇಡಿ” ಎಂದು ಮಕ್ಕಳಿಗೆ ಬಯ್ದಿದ್ದು ವಿಚಿತ್ರವೆನಿಸಿತು.

ನಾನೇ ಬೀದಿಗೆ ಬಂದೆನೋ? ಅಥವಾ ನನ್ನ ಮಾಲೀಕರು ನನ್ನನ್ನು ಬಿಟ್ಟದ್ದಾರೋ? ನನಗೆ ಗೊತ್ತಿಲ್ಲ. ಆದರೆ ಚರಂಡಿಯಲ್ಲಿ ಬಿದ್ದ ನನ್ನನ್ನು, ಮಿತ್ರರು ವೈದ್ಯರ ಬಳಿ ಕರೆದುಕೊಂಡು ಹೋಗಿ ಸ್ನಾನ ಮಾಡಿಸಿ, ಹಸಿವು ನೀಗಿಸಲು ಡ್ರಿಪ್ಸ್ ಕೊಡಿಸಿದರು. ಮರುದಿನವೂ ನಾನು ಏನೂ ತಿನ್ನದ ಕಾರಣ ಪುನಃ ಡ್ರಿಪ್ಸ್ ನೀಡಿದರು. ಪ್ರತಿದಿನವೂ ಡ್ರಿಪ್ಸ್ ನೀಡಲು ಅಸಾಧ್ಯ. ಹಾಗೆಯೇ ತಿನ್ನಲು ನನ್ನಲ್ಲಿ ತ್ರಾಣವಿಲ್ಲ. ತಿನ್ನದೇ ಇದ್ದರೆ ಬದುಕಲು ಅಸಾಧ್ಯ.

ಈಗ ನಾನು ಈ ಮಿತ್ರರ ಬಳಿಯೇ ಇದ್ದೇನೆ. ನನ್ನ ಮಾಲೀಕರ ಗಮನಕ್ಕೆ ತರಲು ‘ಶಕ್ತಿ’ ಯಲ್ಲಿ ಉಚಿತ ಜಾಹಿರಾತು ನೀಡಿದರೂ ಯಾರು ಬಂದಿಲ್ಲ. ಈ ಮಾಲೀಕರಿಗೆ ನಾನು ಬೇಡವಾದನೇ? ಕಾದು ನೋಡಬೇಕಷ್ಟೆ. ಭೂಲೋಕವನ್ನು ಬಿಟ್ಟು ಹೋಗುವ ಮುನ್ನ ಒಮ್ಮೆ ನನ್ನ ಮಾಲೀಕನನ್ನು ನೋಡಲು ಸಿಕ್ಕಿದರೆ ಸಾಕು ಅಷ್ಟೆ; ನನ್ನಂತ ಯಾವದೇ ಮೂಕ ಪ್ರಾಣಿಗೆ ಇಂತಹಾ ಸ್ಥಿತಿ ಬಾರದಿರಲಿ ಎಂಬುದೇ ನಾನು ಇಹಲೋಕ ತ್ಯಜಿಸುವದಕ್ಕಿಂತ ಮೊದಲು ಮಾಡುವ ಒಂದೇ ಒಂದು ಪ್ರಾರ್ಥನೆ. -‘ಪೊಮೆರೇನಿಯನ್’