ಮಡಿಕೇರಿ, ಏ. 23: ಅಕ್ರಮವಾಗಿ ಜೂಜಾಟದಲ್ಲಿ ತೊಡಗಿದ್ದ ಜೂಜುಕೋರರಲ್ಲಿ ಆರು ಮಂದಿ ಬಂಧನವಾಗಿದ್ದು ಹಣ ವಶಕ್ಕೆ ಪಡೆದ ಪ್ರಕರಣ ವೀರಾಜಪೇಟೆ ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ವೀರಾಜಪೇಟೆ ನಗರದ ಅಯ್ಯಪ್ಪ ಬೆಟ್ಟದ ಬಿದಿರಿನ ಪೊದೆಯ ಹಿಂಬಾಗದಲ್ಲಿ ಯಾರಿಗೂ ಸಂಶಯ ಬಾರದಂತೆ ಲಾಕ್ಡೌನ್ ಹಿನ್ನೆಲೆಯ ಸಮಯವನ್ನು ಸಾಧಕಪಡಿಸಿಕೊಂಡು 14 ಮಂದಿ ಅಕ್ರಮವಾಗಿ ಜೂಜು ಆಟದಲ್ಲಿ ತಲ್ಲೀನರಾಗಿದ್ದರು. ಖಚಿತವಾದ ಮಾಹಿತಿ ಆಧರಿಸಿ ಜೂಜು ನಡೆಯುತಿದ್ದ ಸ್ಥಳಕ್ಕೆ ದಾಳಿ ನಡೆಸಿ ಅಕ್ರಮ ಜೂಜುವಿನಲ್ಲಿ ಭಾಗಿಯಾಗಿದ್ದ ಆರು ಮಂದಿಯನ್ನು ಬಂಧಿಸಿದ್ದಾರೆ. ಬಂಧಿತರಿಂದ ಮೂರು ಸಾವಿರ ಹಣವನ್ನು ವಶಕ್ಕೆ ಪಡೆದಿದ್ದಾರೆ. ದಾಳಿಯ ಸಂದರ್ಭದಲ್ಲಿ ಇತರ ಎಂಟು ಮಂದಿ ಸ್ಥಳದಿಂದ ಪರಾರಿಯಾಗಿದ್ದಾರೆ.
ಬಂಧಿತರ ಮೇಲೆ ವೀರಾಜಪೇಟೆ ನಗರ ಪೊಲೀಸ್ ಠಾಣೆಯಲ್ಲಿ ಪೊಲೀಸರು 87 ಕೆ.ಪಿ ಕಾಯ್ದೆ ಅನ್ವಯ ಪ್ರಕರಣ ದಾಖಲಿಸಿಕೊಂಡು ಪ್ರಕರಣ ದಲ್ಲಿ ಭಾಗಿಯಾಗಿರುವ ಇತರರನ್ನು ಬಂಧನ ಮಾಡಲು ಬಲೆ ಬೀಸಿದ್ದಾರೆ.
ಉಪವಿಭಾಗ ಡಿ.ವೈಎಸ್ಪಿ ಜಯಕುಮಾರ್ ಮತ್ತು ವೃತ್ತ ನಿರೀಕ್ಷಕ ಕ್ಯಾತೆಗೌಡ ಅವರ ಮಾರ್ಗದರ್ಶನದಲ್ಲಿ ನಗರ ಠಾಣಾಧಿಕಾರಿ ಮರಿಸ್ವಾಮಿ ಹಾಗೂ ಸಿಬ್ಬಂದಿಗಳಾದ ರಜನ್ ಕುಮಾರ್, ತನು ಕುಮಾರ್, ಗಿರೀಶ್, ಮುಸ್ತಫಾ, ಆನಂದ್, ಮತ್ತು ಪ್ರೊಬೆಷನರಿ ಪಿ.ಎಸ್.ಐ.ಗಳಾದ ಸಂತೋಷ ಪಾಟೀಲ್ ಮತ್ತು ವಿನಯ್ ಕುಮಾರ್ ಹಾಗೂ ಚಾಲಕ ಯೋಗೆಶ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.