ಮಡಿಕೇರಿ, ಏ. 22: ಕೊರೊನಾ ಆತಂಕದ ಕಾರಣದ ‘ಲಾಕ್‍ಡೌನ್’ ನಿರ್ಬಂದಧ ನಡುವೆ ವಿವಿಧ ಇಲಾಖೆಗಳ ಮೂಲಕ ಇದರ ವಿರುದ್ಧ ಹೋರಾಟ ನಡೆಸುತ್ತಿರುವ ಸೇವಾ ನಿರತರಿಗೆ ಮಡಿಕೇರಿ ಕೊಡವ ಸಮಾಜದ ವತಿಯಿಂದ ಅಪರಾಹ್ನದ ಭೋಜನ ವ್ಯವಸ್ಥೆಯನ್ನು ಒದಗಿಸಲಾಗುತ್ತಿದ್ದು ಇದು 6 ದಿನ ಪೂರೈಸಿದೆ.

ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆ, ಪೌರ ಕಾರ್ಮಿಕರು ಸೇರಿದಂತೆ ಮಡಿಕೇರಿ ನಗರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸುಮಾರು 100 ರಿಂದ 120 ಮಂದಿಗೆ ಕೊಡವ ಸಮಾಜದ ಮೂಲಕ ಮೇ 3 ರ ತನಕ ಉಚಿತ ಭೋಜನವನ್ನು (ಅಪರಾಹ್ನ) ಒದಗಿಸಲು ತೀರ್ಮಾನಿಸಲಾಗಿದ್ದು ಪೂರ್ವ ಯೋಜನೆಯಂತೆ ಇದಕ್ಕೆ ನಿಗದಿತ ಮೊತ್ತವನ್ನು ಆಡಳಿತ ಮಂಡಳಿ ನಿಗದಿಪಡಿಸಿಕೊಂಡಿತ್ತು.

ಇದೀಗ ಸಮಾಜ ಈ ವ್ಯವಸ್ಥೆಗೆ ಮುಂದಾಗಿ 6 ದಿನ ಕಳೆದಿದ್ದು, ಈತನಕ ಸುಮಾರು ಒಂದು ಸಾವಿರದ ಇನ್ನೂರಕ್ಕೂ ಅಧಿಕ ಮಂದಿಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಕೊರೊನಾ ಕಾರಣದಿಂದಾಗಿ ಹೊಟೇಲ್, ಕ್ಯಾಂಟೀನ್, ಮೆಸ್‍ಗಳು ಮುಚ್ಚಲ್ಪಟ್ಟಿದ್ದು ವಿವಿಧ ಇಲಾಖೆಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಹಲವಾರು ಸಿಬ್ಬಂದಿಗೆ ಸೂಕ್ತ ಊಟೋಪಚಾರ ವಿಲ್ಲದೆ ಪರಿತಪಿಸುತ್ತಿರುವದು ಒಂದೆಡೆಯಾಗಿದೆ. ಈ ಕಾರಣದಿಂದಾಗಿ ದಿನದಿಂದ ದಿನಕ್ಕೆ ಭೋಜನ ಅರಸಿ ಬರುವ ಕರ್ತವ್ಯ ನಿರತರ ಸಂಖ್ಯೆ ಹೆಚ್ಚಾಗುತ್ತಿದೆ. ಪೊಲೀಸ್ ಸಿಬ್ಬಂದಿಗಳು, ಆರೋಗ್ಯ ಇಲಾಖಾ ಸಿಬ್ಬಂದಿಗಳು, ವೈದ್ಯರು, ಶುಶ್ರೂಷಕಿಯರು, ಲ್ಯಾಬ್ ಟೆಕ್ನಿಷಿಯನ್ಸ್, ಪೌರ ಕಾರ್ಮಿಕರು, ಆಹಾರ ಇಲಾಖಾ ಸಿಬ್ಬಂದಿಗಳು... ಈ ರೀತಿಯಾಗಿ ಉತ್ತಮ ರೀತಿಯಲ್ಲಿ ಸಿಗುತ್ತಿರುವ ಈ ಸೇವೆಯನ್ನು ಪಡೆಯಲು ಕರ್ತವ್ಯ ನಿರತರು ಹೆಚ್ಚಾಗುತ್ತಿರುವ ಹಿನ್ನೆಲೆ ದಾನಿಗಳು ಸ್ವಇಚ್ಛೆಯಿಂದ ನೀಡುವ ನೆರವನ್ನು ಪಡೆದುಕೊಳ್ಳಲು ಸಮಾಜ ಮುಂದಾಗಿದೆ. ನಿನ್ನೆ ಒಂದೇ ದಿನ ಸುಮಾರು 300ಕ್ಕೂ ಹಾಗೂ ತಾ. 22 ರಂದು ಸುಮಾರು 400ಕ್ಕೂ ಅಧಿಕ ಮಂದಿ ಭೋಜನಕ್ಕಾಗಿ ಆಗಮಿಸಿದ್ದು, ಮುಂದಿನ ದಿನಗಳಲ್ಲಿ ಈ ಉದ್ದೇಶಿತ ಮೊತ್ತ ಅಧಿಕವಾಗುವ ಸಾಧ್ಯತೆ ಹೆಚ್ಚಿದ್ದು ದಾನಿಗಳ ನೆರವು ಪಡೆಯಲು ಚಿಂತನೆ ನಡೆಸಿದೆ.

ವಿಧಾನ ಪರಿಷತ್ ಸದಸ್ಯ ಎಂ.ಪಿ. ಸುನಿಲ್ ಸುಬ್ರಮಣಿ ಅವರು ವೈಯಕ್ತಿಕವಾಗಿ ರೂ. 10 ಸಾವಿರ ಹಣ ನೀಡಿದ್ದು, ಇನ್ನು ಕೆಲವರು ತಮ್ಮಿಂದಾದ ಸಹಾಯ ನೀಡಿದ್ದಾರೆ. ಆದರೆ ಲಾಕ್‍ಡೌನ್ ನಿರ್ಬಂಧ ಮೇ 3 ರ ತನಕವೂ ಇರುವದರಿಂದ ದಾನಿಗಳ ಸಹಕಾರವೂ ಅಗತ್ಯವಾಗಿದೆ ಎಂದು ಸಮಾಜದ ಆಡಳಿತ ಮಂಡಳಿ ಪ್ರಮುಖರು ವಿನಂತಿಸಿದ್ದಾರೆ.