ಕೇಂದ್ರ ಗೃಹ ಇಲಾಖೆ ವಿನಾಯಿತಿ

ನವದೆಹಲಿ, ಏ. 22: ಕೊರೊನಾ ವೈರಸ್ ಲಾಕ್‍ಡೌನ್ ನಿಯಮಾವಳಿಗೆ ಕೇಂದ್ರ ಗೃಹ ಇಲಾಖೆ ಪರಿಷ್ಕರಣೆ ತಂದಿದ್ದು, ಲಾಕ್‍ಡೌನ್‍ನಿಂದ ಶೈಕ್ಷಣಿಕ ಪುಸ್ತಕ ಅಂಗಡಿ, ಫ್ಯಾನ್ ಮಾರಾಟ ಮಳಿಗೆಗಳಿಗೆ ವಿನಾಯಿತಿ ನೀಡಿದೆ. ಈ ಕುರಿತಂತೆ ಗೃಹ ಇಲಾಖೆ ಟ್ವೀಟ್ ಮಾಡಿದ್ದು, ಈ ಹಿಂದಿನಂತೆಯೇ ಲಾಕ್‍ಡೌನ್‍ನಿಂದ ಎಲ್ಲ ರೀತಿಯ ಕೃಷಿ ಚಟುವಟಿಕೆಗಳಿಗೆ ನೀಡಿರುವ ವಿನಾಯಿತಿ ಮುಂದುವರೆಯಲಿದ್ದು, ಇದಲ್ಲದೆ ಶೈಕ್ಷಣಿಕ ಪುಸ್ತಕ ಅಂಗಡಿ, ಫ್ಯಾನ್ ಮಾರಾಟ ಮಳಿಗೆಗಳಿಗೂ ವಿನಾಯಿತಿ ನೀಡಲಾಗಿದೆ ಎಂದು ಹೇಳಿದೆ. ಇದಲ್ಲದೆ ಕೃಷಿ ಸಂಶೋಧನಾ ಸಂಸ್ಥೆಗಳು, ತೋಟಗಾರಿಕಾ ಸಂಸ್ಥೆಗಳು ಮತ್ತು ತೋಟಗಾರಿಕಾ ಸಂಬಂಧಿತ ಕೆಲಸಗಳಿಗೆ ವಿನಾಯಿತಿ ನೀಡಲಾಗಿದೆ. ಅಂತರ್ ರಾಜ್ಯ ಗಿಡ-ಮರ ನೆಡುವ ಸಾಮಗ್ರಿಗಳ ರವಾನೆ, ಜೇನುತುಪ್ಪ ಉತ್ಪಾದನೆ ಮತ್ತು ಇತರ ಜೇನುಗೂಡಿನ ಉತ್ಪನ್ನಗಳ ರವಾನೆಗೂ ವಿನಾಯಿತಿ ನೀಡಲಾಗಿದೆ.

ಕಠಿಣ ಶಿಕ್ಷೆ ಸುಗ್ರೀವಾಜ್ಞೆಗೆ ಅಂಕಿತ

ಬೆಂಗಳೂರು, ಏ. 22: ಮನುಕುಲಕ್ಕೆ ಕಂಟಕವಾಗಿರುವ ಮಹಾಮಾರಿ ನಿಯಂತ್ರಣಕ್ಕಾಗಿ ಹೋರಾಟ ಮಾಡುತ್ತಿರುವ ವೈದ್ಯರು, ನರ್ಸ್‍ಗಳು, ಆಶಾ ಕಾರ್ಯಕರ್ತೆಯರು, ಪೊಲೀಸರು, ಅಧಿಕಾರಿಗಳ ಮೇಲೆ ಹಲ್ಲೆ ಮಾಡಿದರೆ ಅವರಿಗೆ ಮೂರು ವರ್ಷಗಳ ಕಠಿಣ ಶಿಕ್ಷೆ ವಿಧಿಸುವ ಸುಗ್ರೀವಾಜ್ಞೆಗೆ ರಾಜ್ಯಪಾಲ ವಜೂಭಾಯ್ ವಾಲಾ ಅಂಕಿತ ಹಾಕಿದ್ದಾರೆ. ಕೊರೊನಾ ವಾರಿಯರ್ಸ್ ಮತ್ತು ಸರ್ಕಾರಿ ಅಧಿಕಾರಿಗಳ ಮೇಲೆ ಹಲ್ಲೆ ನಡೆಸುವ ಪುಂಡರನ್ನು ಮಟ್ಟ ಹಾಕುವ ಸುಗ್ರೀವಾಜ್ಞೆಗೆ ರಾಜ್ಯಪಾಲ ವಜೂಭಾಯಿ ವಾಲಾ ಒಪ್ಪಿಗೆ ನೀಡಿದ್ದಾರೆ. ಸಾರ್ವಜನಿಕರ ಆಸ್ತಿ ನಷ್ಟ ಮಾಡಿದವರ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲು ಕಾನೂನಿನಲ್ಲಿ ಅವಕಾಶವಿದ್ದು, ಒಂದುವೇಳೆ ಪುಂಡರ ಹೆಸರಿನಲ್ಲಿ ಆಸ್ತಿ ಇಲ್ಲದಿದ್ದರೆ ಜೈಲು ಶಿಕ್ಷೆ ಹಾಗೂ ಭಾರೀ ದಂಡ ವಿಧಿಸುವ ಮಹತ್ವದ ತೀರ್ಮಾನವನ್ನು ಸುಗ್ರೀವಾಜ್ಞೆ ಒಳಗೊಂಡಿದೆ. ಕೇರಳ ಮತ್ತು ಉತ್ತರ ಪ್ರದೇಶದಲ್ಲಿ ಈ ಕಾಯ್ದೆಯನ್ನು ಸುಗ್ರೀವಾಜ್ಞೆ ಮೂಲಕ ಜಾರಿಗೊಳಿಸಲಾಗಿತ್ತು. ಅದೇ ಮಾದರಿಯಲ್ಲಿ ರಾಜ್ಯ ಸರ್ಕಾರವು ಕೂಡ ಈ ಕಾಯ್ದೆಯನ್ನು ಜಾರಿಗೊಳಿಸಲು ನಿರ್ಧರಿಸಿ ರಾಜ್ಯಪಾಲರ ಅಂಕಿತಕ್ಕೆ ಕಳುಹಿಸಲಾಗಿತ್ತು.

ಹತ್ತನೇ ತರಗತಿ ಪರೀಕ್ಷೆ ಬಗ್ಗೆ ಚಿಂತನೆ

ತುಮಕೂರು, ಏ. 22: ಲಾಕ್‍ಡೌನ್ ಮುಗಿಯುವ ಮೇ 3ರ ನಂತರ ಸರ್ಕಾರ ಹಾಗೂ ಶಿಕ್ಷಣ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಎಸ್.ಎಸ್.ಎಲ್.ಸಿ. ಪರೀಕ್ಷೆ ನಡೆಸುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ. ವಿದ್ಯಾರ್ಥಿಗಳು ಯಾವುದೇ ವದಂತಿಗಳಿಗೆ ಕಿವಿಗೊಡದೆ ಪರೀಕ್ಷೆ ಬರೆಯಲು ನಿರಂತರ ಅಧ್ಯಯನಶೀಲರಾಗಿರಿ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದರು. ಅವರು ತುಮಕೂರು ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿ ಶ್ರೀ ಸಿದ್ಧಲಿಂಗಸ್ವಾಮೀಜಿ ಅವರ ದರ್ಶನ ಮಾಡಿ ವಸತಿ ಶಾಲೆಯಲ್ಲಿರುವ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ ಮಾತನಾಡಿದರು. ಶ್ರೀ ಮಠದಲ್ಲಿ 1320 ಎಸ್.ಎಸ್.ಎಲ್.ಸಿ. ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು ಇರುವುದನ್ನು ಖಚಿತಪಡಿಸಿಕೊಂಡು ಈ ವಿದ್ಯಾರ್ಥಿಗಳಲ್ಲಿರುವ ಸಂಶಯ ಮತ್ತು ಸಂದೇಹಗಳಿಗೆ ಪರಿಹಾರ ಸೂಚಿಸುವ ಸಲುವಾಗಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ ಅವರಲ್ಲಿ ಆತ್ಮಸ್ಥೈರ್ಯ ತುಂಬುವುದರ ಜೊತೆಗೆ ಉತ್ಸಾಹದಿಂದ ಓದಿನಲ್ಲಿ ಪ್ರವೃತ್ತರಾಗುವಂತೆ ಮನವೊಲಿಸುವ ಸಲುವಾಗಿ ಮಠಕ್ಕೆ ಭೇಟಿ ನೀಡಿದ್ದೇನೆಂದು ಅವರು ತಿಳಿಸಿದರು.

ರೂ. 15 ಸಾವಿರ ಕೋಟಿ ಪ್ಯಾಕೇಜ್

ನವದೆಹಲಿ, ಏ. 22: ಭಾರತದ ಕೋವಿಡ್-19 ತುರ್ತು ಪ್ರತಿಕ್ರಿಯೆ ಮತ್ತು ಆರೋಗ್ಯ ವವಸ್ಥೆ ಸಿದ್ಧತೆಗಾಗಿ ಕೇಂದ್ರ ಸಂಪುಟ ಸಭೆ ಬುಧವಾರ 15 ಸಾವಿರ ಕೋಟಿ ರೂಪಾಯಿಗಳ ಪ್ಯಾಕೇಜ್ ವಿನಿಯೋಗಕ್ಕೆ ಅನುಮೋದನೆ ನೀಡಿದೆ. ಸುದ್ದಿಗೋಷ್ಠಿಯಲ್ಲಿ ವಿವರ ನೀಡಿದ ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವ ಪ್ರಕಾಶ್ ಜಾವಡೇಕರ್, ಮಂಜೂರಾಗಿರುವ ಹಣವನ್ನು ಮೂರು ಹಂತಗಳಲ್ಲಿ ಬಿಡುಗಡೆಗೊಳಿಸಲಾಗುವುದು ಮತ್ತು ತ್ವರಿತ ಕೋವಿಡ್-19 ತುರ್ತು ಪ್ರತಿಕ್ರಿಯೆಗಾಗಿ, ರೂ. 7774 ಕೋಟಿ ವಿನಿಯೋಗಿಸಲಾಗುವುದು. ಉಳಿದ ಮೊತ್ತವನ್ನು ಒಂದರಿಂದ ನಾಲ್ಕು ವರ್ಷಗಳ ಅವಧಿಯ ಮಧ್ಯಮ ಅವಧಿಯ ಬೆಂಬಲಕ್ಕಾಗಿ ಮೀಸಲಿರಿಸಲಾಗುವುದಾಗಿ ತಿಳಿಸಿದ್ದಾರೆ. ರೋಗ ನಿರ್ಣಯ ಮತ್ತು ಸಿಒವಿ 1 ಡಿ-ಮೀಸಲಾದ ಚಿಕಿತ್ಸಾ ಸೌಲಭ್ಯಗಳ ಅಭಿವೃದ್ಧಿ, ಸೋಂಕಿತ ರೋಗಿಗಳ ಚಿಕಿತ್ಸೆಗೆ ಅಗತ್ಯವಾದ ವೈದ್ಯಕೀಯ ಉಪಕರಣಗಳು ಮತ್ತು ಔಷಧಿಗಳ ಕೇಂದ್ರೀಕೃತ ಖರೀದಿ, ಬಲಪಡಿಸುವುದು ಮತ್ತು ಭವಿಷ್ಯದ ರೋಗ ತಡೆಗಟ್ಟುವಿಕೆ ಮತ್ತು ಸನ್ನದ್ಧತೆಯನ್ನು ಬೆಂಬಲಿಸಲು, ಸ್ಥಿತಿಸ್ಥಾಪಕ ರಾಷ್ಟ್ರೀಯ ಮತ್ತು ರಾಜ್ಯ ಆರೋಗ್ಯ ವ್ಯವಸ್ಥೆಗಳನ್ನು ನಿರ್ಮಿಸುವುದು ಈ ಪ್ಯಾಕೇಜ್‍ನ ಪ್ರಮುಖ ಉದ್ದೇಶಗಳಾಗಿವೆ.

ನಾಲ್ವರು ಪತ್ರಕರ್ತರಿಗೆ ಸೋಂಕು ಪಾಸಿಟಿವ್

ಚೆನ್ನೈ, ಏ. 22: ತಮಿಳುನಾಡಿನಲ್ಲಿ ಮಹಾಮಾರಿ ಕೊರೊನಾ ವೈರಸ್ ವ್ಯಾಪಕವಾಗಿ ಹರಡುತ್ತಿದ್ದು, ಬುಧವಾರ ಚೆನ್ನೈನಲ್ಲಿ ಮತ್ತೆ ನಾಲ್ವರು ಪತ್ರಕರ್ತರಿಗೆ ಕೋವಿಡ್-19 ಪಾಸಿಟಿವ್ ದೃಢಪಟ್ಟಿದೆ. ಈ ನಾಲ್ವರು ಪತ್ರಕರ್ತರ ಪೈಕಿ ಮೂವರು ಒಂದು ತಮಿಳು ಸುದ್ದಿ ವಾಹಿನಿಯಲ್ಲಿ ಕೆಲಸ ಮಾಡುತ್ತಿದ್ದು, ಮತ್ತೊಂದು ಸುದ್ದಿ ವಾಹಿನಿಯ ಓರ್ವ ಪತ್ರಕರ್ತನಿಗೆ ಸೋಂಕು ತಗುಲಿದೆ ಎಂದು ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮಂಗಳವಾರವಷ್ಟೇ ಸುದ್ದಿ ವಾಹಿನಿಯೊಂದರ 26 ಸಿಬ್ಬಂದಿಗೆ ಕೊರೊನಾ ವೈರಸ್ ಪಾಸಿಟಿವ್ ಬಂದಿತ್ತು. ಹೀಗಾಗಿ ನಗರದ ಹಲವು ಪತ್ರಕರ್ತರು ಸ್ವಯಂ ಪ್ರೇರಿತರಾಗಿ ಕೋವಿಡ್-19 ಪರೀಕ್ಷೆಗೆ ಒಳಗಾಗುತ್ತಿದ್ದಾರೆ.

ಅಂತ್ಯಕ್ರಿಯೆ ನಡೆಸಿದ ತಹಶೀಲ್ದಾರ್

ಭೋಪಾಲ್, ಏ. 22: ಕೋವಿಡ್-19 ರಿಂದ ಮೃತಪಟ್ಟ ವ್ಯಕ್ತಿಯ ಅಂತ್ಯಕ್ರಿಯೆ ನಡೆಸಲು ಮಗ ನಿರಾಕರಿಸಿದಾಗ ತಹಶೀಲ್ದಾರ್ ಒಬ್ಬರು ಪಾರ್ಥಿವ ಶರೀರದ ಚಿತೆಗೆ ಅಗ್ನಿಸ್ಪರ್ಶ ಮಾಡಿ, ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ. ಭೋಪಾಲ್‍ನಲ್ಲಿ ಈ ಘಟನೆ ನಡೆದಿದ್ದು, ಪ್ರೇಮ್ ಸಿಂಗ್ ಎಂಬ ವ್ಯಕ್ತಿ ತಾ. 20 ರಂದು ಕೋವಿಡ್-19 ಸೋಂಕಿನಿಂದಾಗಿ ಮೃತಪಟ್ಟಿದ್ದರು. ಪತ್ನಿ, ಪುತ್ರ, ಪುತ್ರಿ, ಅಳಿಯ ಮರು ದಿನ ಅಂತ್ಯ ಸಂಸ್ಕಾರ ಮಾಡುವುದಾಗಿ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿದ್ದರು. ಆದರೆ ಮರುದಿನ ಅಂತ್ಯಕ್ರಿಯೆ ನಡೆಸಲು ಹಿಂದೇಟು ಹಾಕಿದರು. ಹಾಗಾಗಿ ತಹಶೀಲ್ದಾರ್ ಗುಲಾಬ್ ಸಿಂಗ್ ಅಂತ್ಯಕ್ರಿಯೆ ನಡೆಸಿದ್ದಾರೆ. ಎಎನ್‍ಐ ಜೊತೆ ಈ ಬಗ್ಗೆ ಮಾತನಾಡಿರುವ ಗುಲಾಬ್ ಸಿಂಗ್ ಪಿಪಿಇ ಧರಿಸಿ ಅಂತ್ಯಕ್ರಿಯೆ ನಡೆಸುವಂತೆ ಮನವೊಲಿಸಲು ಯತ್ನಿಸಿದ್ದೆ. ಆದರೆ ಸೋಂಕು ತಗುಲುವ ಭಯದಲ್ಲಿ ಆತ ತಂದೆಯ ಅಂತ್ಯಕ್ರಿಯೆ ನಡೆಸಲು ನಿರಾಕರಿಸಿದ. ಆತನ ತಾಯಿಯೂ ಮಗನ ನಿರ್ಧಾರಕ್ಕೆ ಬೆಂಬಲ ಸೂಚಿಸಿದ್ದರು ಎಂದಿದ್ದಾರೆ.