ಮರವೊಂದರ ತುದಿ ಯಲ್ಲಿ ನಿಂತುಕೊಂಡು ಮೊಬೈಲ್‍ನಲ್ಲಿ ಮಾತನಾಡುತ್ತಿರುವ ಕಾರ್ಮಿಕ ಹಲೋ...ಹಲೋ.. ನಾನು ಕೂರ್ಗ್‍ನಲ್ಲಿದ್ದೇನೆ. ಸದ್ಯ ಬರೋದಿಕ್ಕೆ ಆಗೋದಿಲ್ಲ.. ದುಡ್ಡಿದೆ ಕಳುಹಿಸಲು ಆಗುತ್ತಿಲ್ಲ. ಹೀಗೆಂದು ತಮಿಳಿನಲ್ಲಿ ತನ್ನೂರು ಸೇಲಂಗೆ ಸಂದೇಶ ರವಾನಿಸುತ್ತಿರುವ ಕಾರ್ಮಿಕನ ದೃಶ್ಯ ಮಡಿಕೇರಿ ಬಳಿಯ ಕಾಫಿ ತೋಟವೊಂದರಲ್ಲಿ ಕಂಡುಬಂತು. ಇಂಥ ಸಂಭಾಷಣೆಗಳು ಕೊಡಗಿನ ಕಾಫಿ ತೋಟಗಳಲ್ಲಿ ಲಾಕ್‍ಡೌನ್ ಸಂದರ್ಭ ಸಾಮಾನ್ಯ ಎಂಬಂತಾಗಿದೆ. ದೂರದ ಅಸ್ಸಾಂ, ಬಿಹಾರ, ಜಾರ್ಖಂಡ್, ಉತ್ತರ ಪ್ರದೇಶ, ತಮಿಳುನಾಡು, ಕೇರಳ, ಆಂಧ್ರ ಸೇರಿದಂತೆ ವಿವಿಧ ರಾಜ್ಯಗಳಿಂದ ಕೊಡಗಿನ ಕಾಫಿ ತೋಟ, ಕಟ್ಟಡ ನಿರ್ಮಾಣ ಸೇರಿದಂತೆ ವಿವಿಧ ರೀತಿಯ ಕೆಲಸಕಾರ್ಯಗಳಿಗೆ ಬಂದ ವಲಸೆ ಕಾರ್ಮಿಕರು ಇದೀಗ ಕೊಡಗಿನ ಕಾಫಿ ತೋಟಗಳ ಮಧ್ಯೆ ಲಾಕ್‍ಡೌನ್ ಆಗಿಬಿಟ್ಟಿದ್ದಾರೆ. ಆತಿಥ್ಯಕ್ಕೆ ಹೆಸರಾಗಿದ್ದ ಕೊಡಗಿನ ಕಾಫಿ ತೋಟ ಮಾಲೀಕರು ಕಳೆದ 1 ತಿಂಗಳಿನಿಂದ ವಲಸೆ ಕಾರ್ಮಿಕರಿಗೂ ಆಶ್ರಯ ನೀಡಿ ಮಾನವೀಯತೆ ಮೆರೆದಿದ್ದಾರೆ.

ಕೊಡಗಿನ ಕಾಫಿ ಉದ್ಯಮ ಅಥವಾ ಬೆಳೆಗಾರ ವಲಯಕ್ಕೆ ಕಳೆದ ಮೂರು ವರ್ಷಗಳಿಂದ ಅಪಾಯದ ಸರಮಾಲೆಯೇ ಎದುರಾಗಿದೆ. ಮಹಾಮಳೆ, ಪ್ರವಾಹದಿಂದಾಗಿ ಸಂಕಷ್ಟ ಎದುರಿಸಿದ್ದ ಕಾಫಿ ಕೃಷಿಕರು ಈ ವರ್ಷ ಮಳೆಗೂ ಮುನ್ನವೇ ಕೊರೊನಾ ಸೋಂಕಿನ ಲಾಕ್‍ಡೌನ್‍ನಿಂದಾಗಿ ಸಮಸ್ಯೆ ಎದುರಿಸುವಂತಾಗಿದೆ. ತೋಟಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದ ಸಾವಿರಾರು ಕಾರ್ಮಿಕರಿಗೂ ಲಾಕ್‍ಡೌನ್ ಬಿಸಿ ತೀವ್ರವಾಗಿಯೇ ತಟ್ಟಿದೆ. ಕಾಫಿ ತೋಟಗಳಿಗೆ ಸರಾಸರಿ ಶೇ. 60 ರಷ್ಟು ವಲಸೆ ಕಾರ್ಮಿಕರ ಅಗತ್ಯ ಇದ್ದೇ ಇದೆ. ಅಕ್ಟೋಬರ್ ಮಧ್ಯಭಾಗದಲ್ಲಿ ಕೊಡಗಿಗೆ ಬರುವ ಹೊರರಾಜ್ಯದ ಕಾರ್ಮಿಕರು ಕಾಫಿ, ಕರಿಮೆಣಸು ಕೆಲಸ ಮುಗಿಸಿ ಏಪ್ರಿಲ್ ಮೊದಲ ವಾರದಲ್ಲಿ ತಮ್ಮೂರಿಗೆ ತೆರಳುತ್ತಿದ್ದರು. ಆದರೆ ಈ ವರ್ಷ ಲಾಕ್‍ಡೌನ್‍ನಿಂದಾಗಿ ತಮ್ಮೂರಿಗೆ ಹೋಗಲಾಗದೇ ಕೊಡಗಿನಲ್ಲಿಯೇ ಸಾವಿರಾರು ಸಂಖ್ಯೆಯಲ್ಲಿ ವಲಸೆ ಕಾರ್ಮಿಕರು ನೆಲೆಸುವಂತಾಗಿದೆ. ಎಷ್ಟೇ ಕಷ್ಟವಾಗಿದ್ದರೂ ಬೆಳೆಗಾರರು ತಮ್ಮ ತೋಟದಲ್ಲಿ ಕೆಲಸ ನಿರ್ವಹಿಸಿದ ಕಾರ್ಮಿಕರ ಹಿತಕಾಯುತ್ತಿದ್ದಾರೆ ಎಂದು ಕಾಫಿ ಉದ್ಯಮ ವಿಶ್ಲೇಷಕ ಕೆ. ಕೆ. ವಿಶ್ವನಾಥ್ ಹೇಳುತ್ತಾರೆ.

ಕೊಡಗಿನ ಶೇ. 60 ರಷ್ಟು ತೋಟಗಳಲ್ಲಿ ವಲಸೆ ಕಾರ್ಮಿಕರಿದ್ದಾರೆ. ದೂರದ ತಮ್ಮೂರಿಗೆ ಹೋಗಲೂ ಆಗದೆ ಕಳೆದ ಕೆಲವು ತಿಂಗಳಿನಲ್ಲಿ ದುಡಿದ ಲಕ್ಷಗಟ್ಟಲೆ ಹಣವನ್ನು ತಮ್ಮ ಬಳಿಯೇ ಜೋಪಾನವಾಗಿರಿಸಿಕೊಂಡು ಈ ಕಾರ್ಮಿಕ ಕುಟುಂಬಗಳು ಮಾನಸಿಕವಾಗಿ ತಳಮಳದಲ್ಲಿವೆ. ಕೊಡಗಿನ ಎಲ್ಲಾ ಗಡಿಗಳೂ ಬಂದ್ ಆಗಿದ್ದು ಮಾತ್ರವಲ್ಲದೇ ಕರ್ನಾಟಕದಿಂದ ಹೊರ ರಾಜ್ಯಗಳಿಗೆ ತೆರಳಬೇಕಾದ ಗಡಿಗಳೂ ಮುಚ್ಚಲ್ಪಟ್ಟಿರುವುದರಿಂದಾಗಿ ಸದ್ಯಕ್ಕೆ ಊರಿಗೆ ಹೋಗಲು ಸಾಧ್ಯವಿಲ್ಲ ಎಂಬುದು ಈ ಕಾರ್ಮಿಕ ವರ್ಗಕ್ಕೆ ಮನದಟ್ಟಾಗಿದೆ. ತಮಿಳುನಾಡಿನಿಂದ ಕರಿಮೆಣಸು ಕೊಯ್ಲಿಗೆ ಬಂದಿದ್ದ ಕಾರ್ಮಿಕರು ಹಲವು ತೋಟಗಳಲ್ಲಿ ಮರ ಕಪಾತು ಕೂಡ ಮಾಡುತ್ತಾ ಕೆಲಸ ಕಂಡುಕೊಂಡಿದ್ದಾರೆ.

ಈ ವರ್ಷ ಕೊಡಗಿನಲ್ಲಿ ಕಾಫಿ, ಕರಿಮೆಣಸು ಕೆಲಸಗಳು ಸುಮಾರು 15 ದಿನಗಳಷ್ಟು ವಿಳಂಭವಾಗಿದೆ. ಹೀಗಾಗಿಯೇ ಈ ಕಾರ್ಮಿಕರು ಇಲ್ಲಿ ಸಿಲುಕುವುಂತಾಗಿದೆ ಎಂದು ಹೇಳಿದ ಕೆ. ಕೆ. ವಿಶ್ವನಾಥ್, ಭಾರತದಲ್ಲಿ ದಿನವೊಂದಕ್ಕೆ 3.25 ಲಕ್ಷ ಕಾರ್ಮಿಕರು ಕಾಫಿ ವಲಯದಲ್ಲಿ ಕಾರ್ಯನಿರ್ವಹಿಸುತ್ತಾರೆ. ಈ ಎಲ್ಲಾ ಕಾರ್ಮಿಕರೂ ಲಾಕ್‍ಡೌನ್‍ನಿಂದಾಗಿ ಅಡಕತ್ತರಿಯಲ್ಲಿ ಸಿಲುಕಿದ್ದಾರೆ ಎಂದು ವಿಶ್ಲೇಷಿಸಿದರು.

ತಾವು ಕೆಲಸಕ್ಕಾಗಿ ಬಂದಿದ್ದ ತೋಟದಲ್ಲಿ ಕೆಲಸ ಮುಗಿದರೂ ಬೇರೊಂದು ತೋಟದಲ್ಲಿ ಕೆಲಸ ಸಿಕ್ಕಿದರೂ ಅಲ್ಲಿಗೆ ಹೋಗಲು ಸೂಕ್ತ ವಾಹನಗಳಿಲ್ಲದೇ ನಿರ್ಬಂಧ ಇರುವುದರಿಂದಾಗಿ ಅಲ್ಲಲ್ಲಿಯೇ ಕಾರ್ಮಿಕ ವರ್ಗ ಇರುವಂತಾಗಿದೆ. ಇಂಥ ವಿಚಿತ್ರ ಸ್ಥಿತಿಯನ್ನು ಕಾಫಿ ಉದ್ಯಮ ಇದೇ ಮೊದಲ ಬಾರಿಗೆ ಎದುರಿಸುತ್ತಿದೆ. ಫಸಲೂ ಇಲ್ಲ ಬೆಲೆಯೂ ಇಲ್ಲದ ಸ್ಥಿತಿಯಲ್ಲಿ ತೋಟ ಕಾರ್ಮಿಕರಿಗೆ ತಮ್ಮ ನೆಲದಲ್ಲಿ ದುಡಿಯುವ ಕಾರ್ಮಿಕ ವರ್ಗದ ಹಿತಕಾಯುವ ಹೊಣೆಗಾರಿಕೆ ಇದ್ದೇ ಇದೆ ಎಂದೂ ವಿಶ್ವನಾಥ್ ಅಭಿಪ್ರಾಯಪಟ್ಟರು.

ತೋಟಕಾರ್ಮಿಕರ ಸಮಸ್ಯೆ ಒಂದೆಡೆಯಾದರೆ ಲೋಡಿಂಗ್ ಕಾರ್ಮಿಕರು, ಆಸ್ಪತ್ರೆಗಳಲ್ಲಿ ದಿನಗೂಲಿ ನಿರ್ವಹಿಸುವ ಅಸಂಘಟಿತ ವಲಯಕ್ಕೆ ಸೇರಿದ ಕಾರ್ಮಿಕರ ಸಮಸ್ಯೆ ಹಲವಾರಿದೆ. ಗ್ರಾಮೀಣ ಪ್ರದೇಶಗಳಿಂದ ಜಿಲ್ಲೆಯ ವಿವಿಧ ಆಸ್ಪತ್ರೆಗಳಿಗೆ ದಿನಗೂಲಿ ಆಧಾರದ ಮೇಲೆ ಕೆಲಸ ನಿರ್ವಹಿಸುವ ಕಾರ್ಮಿಕರು ಬಸ್ ಸಂಚಾರವಿಲ್ದೇ ದುಬಾರಿ ದರ ನೀಡಿ ಆಟೋಗಳಲ್ಲಿ ಕೆಲಸದ ಸ್ಥಳ ತಲುಪುತ್ತಿದ್ದಾರೆ. ದಿನಕ್ಕೆ 200 ರೂ. ಸಿಕ್ಕಿದರೆ ಅದು ವಾಹನ ಬಾಡಿಗೆಗೇ ಸಾಕು ಎಂಬಂತಾಗಿದೆ. ಕೆಲಸಕ್ಕೆ ಹೋಗದಿದ್ದರೆ ಕೆಲಸದಿಂದ ತೆಗೆದುಹಾಕುತ್ತಾರೆ ಎಂಬ ಭಯದಿಂದ ಆರ್ಥಿಕ ಸಂಕಷ್ಟದಲ್ಲಿಯೂ ಕೆಲಸಕ್ಕೆ ತೆರಳುತ್ತಿರುವ ಪ್ರಕರಣ ಹಲವಾರು ಇದೆ ಎಂದು ಕೊಡಗು ಕಾರ್ಮಿಕ ಸಂಘಟನೆಯ ಅಧ್ಯಕ್ಷ ಪಿ. ಆರ್. ಭರತ್ ಕಾರ್ಮಿಕರ ಸಮಸ್ಯೆ ಹೇಳಿಕೊಂಡರು.

ಕಟ್ಟಡ ಕಾರ್ಮಿಕರಿಗೇನೋ ಸರ್ಕಾರ ಮಾಸಿಕ 2 ಸಾವಿರ ರೂ. ಸಹಾಯಧನ ನೀಡುತ್ತೇವೆ ಎಂದಿದೆ. ಕಂಪೆನಿಗಳ ಕಾಫಿ ತೋಟಗಳ ಕಾರ್ಮಿಕರಿಗೂ ಸಮಸ್ಯೆಯಿಲ್ಲ. ಆದರೆ, ಸಣ್ಣ ಮತ್ತು ಮಧ್ಯಮ ಹಿಡುವಳಿಯಲ್ಲಿ ಕಾರ್ಮಿಕರಾಗಿರುವವರಿಗೆ ಸಮಸ್ಯೆ ಮುಗಿಯುತ್ತಿಲ್ಲ. ಸಣ್ಣ ಬೆಳೆಗಾರರೇ ಕಷ್ಟದಲ್ಲಿರುವಾಗ ಕಾರ್ಮಿಕರನ್ನೂ ಲಾಕ್‍ಡೌನ್ ಸಂದರ್ಭ ನೋಡಿಕೊಳ್ಳಬೇಕಾದ ಸ್ಥಿತಿಯಿದೆ. ಸುಮಾರು 50 ಸಾವಿರ ತೋಟಕಾರ್ಮಿಕರು ಲಾಕ್‍ಡೌನ್‍ನಿಂದಾಗಿ ಸಮಸ್ಯೆ ಎದುರಿಸುವಂತಾಗಿದೆ ಎಂದೂ ಭರತ್ ಮಾಹಿತಿ ನೀಡಿದರು.

ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಮನೆ ಹಾಗೂ ಹೋಂಸ್ಟೇಗಳಲ್ಲಿ ನೂರಾರು ಕಾರ್ಮಿಕರು ಮನೆಕೆಲಸ ಮಾಡಿಕೊಂಡಿದ್ದರು, ಸೋಂಕು ಹರಡುತ್ತೆ ಎಂದು ಬಹುತೇಕ ಮಂದಿ ಮನೆಕೆಲಸದವರಿಗೆ ಕೆಲಸ ನೀಡಿಲ್ಲ. ಇಂಥ ಕಾರ್ಮಿಕರ ಸಂಕಷ್ಟ ಯಾರ ಬಳಿ ಹೇಳೋದು ಎಂದು ಪ್ರಶ್ನಿಸಿದ ಭರತ್, ಸರ್ಕಾರ ಅಕ್ಕಿ, ಗೋಧಿ ನೀಡಿದರೆ ಅದು ಎಲ್ಲಿಗೆ ಸಾಕು ? ಅಡುಗೆ ತಯಾರಿಕೆಗೆ ಬೇಕಾದ ಮಸಾಲೆ ಪದಾರ್ಥಗಳಿಗೆ ದುಬಾರಿ ಬೆಲೆ ತೆರಬೇಕಾಗಿದೆ. ಕೊಡಗಿನ ಬಹುತೇಕ ಗ್ರಾಮೀಣ ಪ್ರದೇಶಗಳಿಗೆ ಸರ್ಕಾರ ಉಚಿತವಾಗಿ ನೀಡುವ ಹಾಲು ವಿತರಣೆಯಾಗುತ್ತಿಲ್ಲ. ಕಾರ್ಮಿಕರು ಹೇಗೆ ಸಂಕಷ್ಟ ಪರಿಸ್ಥಿತಿ ನಿಭಾಯಿಸಬೇಕೆಂದು ಭರತ್ ಪ್ರಶ್ನಿಸಿದರು. ಕಾರ್ಮಿಕ ಇಲಾಖೆ ವತಿಯಿಂದ, ಮಾಧ್ಯಮ ಸ್ಪಂದನ ವತಿಯಿಂದ ಜಿಲ್ಲೆಯ ವಿವಿಧೆಡೆ ಸಂಕಷ್ಟದಲ್ಲಿದ್ದ ವಲಸೆ ಕಾರ್ಮಿಕರಿಗೆ ದಿನಸಿ ವಿತರಣೆ ಮಾಡಲಾಗಿದೆ. ಇದು ಸಮಸ್ಯೆಯಲ್ಲಿದ್ದ ಕಾರ್ಮಿಕರಲ್ಲಿ ಒಂದಿಷ್ಟು ಆಶಾಭಾವನೆಗೆ ಕಾರಣವಾಗಿದೆ.

ಕಾರ್ಮಿಕರನ್ನು ತೋಟಗಳಿಗೆ ಕೊಂಡೊಯ್ಯುತ್ತಿದ್ದ ಬಾಡಿಗೆ ಜೀಪ್, ವ್ಯಾನ್, ಆಟೋಗಳೂ ರಸ್ತೆಗಿಳಿಯುತ್ತಿಲ್ಲ. ಮಳೆಗಾಲ ಎದುರಿಸಲು ಸಜ್ಜಾಗುತ್ತಿರುವ ತೋಟ ಮಾಲೀಕರು ಯಾವ ಕೆಲಸ ನೀಡುವುದು ಎಂಬ ಚಿಂತೆಯಲ್ಲಿದ್ದಾರೆ. ತೋಟ ಕಾರ್ಮಿಕರನ್ನು ಕೆಲಸ ಮುಗಿಯಿತು ನೀವು ಹೋಗಿ ಎಂದರೆ ಎಲ್ಲಿಗೆ ಮತ್ತು ಹೇಗೆ ಹೋಗೋಣ. ನೀವೇ ಆಶ್ರಯದಾತರು ಎಂಬ ಉತ್ತರ ಬರುತ್ತಿದೆ. ವಲಸಿಗ ಕಾರ್ಮಿಕರು ಅನೇಕ ತೋಟಗಳಲ್ಲಿ ಕಡಿಮೆ ವೇತನಕ್ಕೆ ಕೆಲಸ ನಿರ್ವಹಿಸುತ್ತಾ ಲಾಕ್‍ಡೌನ್ ದಿನಗಳು ಮುಗಿದು ಯಾವಾಗ ತಮ್ಮೂರಿಗೆ ಮರಳುತ್ತೇವೆ ಎಂದು ಚಾತಕಪಕ್ಷಿಯಂತೆ ಕಾಯುತ್ತಿದ್ದಾರೆ.

ಕೊನೇಹನಿ

.....

ದೇಶದ ಬಹುತೇಕ ರಾಜ್ಯಗಳಲ್ಲಿ ಕರೋನಾ ಸೋಂಕು ತಾಂಡವವಾಡಿದೆ. ಈ ವಿಚಾರ ಅರಿತಿರುವ ವಲಸಿಗ ಕಾರ್ಮಿಕರಿಗೆ ತಮ್ಮೂರಿಗೆ ಈಗ ಹೋದರೂ ಸೋಂಕಿನ ಮಹಾಮಾರಿಯ ಜೀವಭಯ ಇದ್ದದ್ದೇ. ಕೊಡಗು ಕೊರೊನಾ ಸೋಂಕು ಮುಕ್ತ ಜಿಲ್ಲೆಯಾಗಿರುವುದರಿಂದಾಗಿ ಇದಕ್ಕಿಂತ ನೆಮ್ಮದಿಯ ಜಿಲ್ಲೆ ಮತ್ತೊಂದಿಲ್ಲ ಎಂಬ ಭಾವನೆ ಬಂದಿದೆ. ಕೊಡಗು ಕಾರ್ಮಿಕರ ಪಾಲಿಗೂ ಎಲ್ಲಾ ರೀತಿಯಲ್ಲಿಯೂ ಸುರಕ್ಷಿತ ಎಂಬ ಭಾವನೆ ಮೂಡಿಸಿದೆ. ಇಂಥ ಭಾವನೆ ಯನ್ನು ತೋಟ ಮಾಲೀಕರು, ಕೃಷಿಕರು ಕಾರ್ಮಿಕರಲ್ಲಿ ಮೂಡಿಸುವಲ್ಲಿ ಸಫಲರಾಗಿದ್ದಾರೆ.