ಮಡಿಕೇರಿ, ಏ. 22: ಲಾಕ್‍ಡೌನ್ ನಿರ್ಬಂಧದಿಂದಾಗಿ ಬಹಳಷ್ಟು ಅಂಗಡಿ-ಮುಂಗಟ್ಟುಗಳು ಮುಚ್ಚಲ್ಪಟ್ಟಿವೆ. ವಾರದಲ್ಲಿ ಮೂರು ದಿನ ದಿನಸಿ ಪದಾರ್ಥದಂತಹ ವ್ಯಾಪಾರಿಗಳು ಬೆಳಿಗ್ಗೆ 6 ರಿಂದ 12 ರವರೆಗೆ ತೆರೆಯಲು ಅವಕಾಶವಿದೆ ಯಾದರೂ ಎಲ್ಲರಿಗೂ ಎಲ್ಲವೂ ಲಭ್ಯವಾಗುತ್ತಿಲ್ಲ. ಧೂಮಪಾನದ ಚಟ ಇರುವವರಿಗೆ ತಮಗೆ ಅಗತ್ಯವಾಗಿ ಬೇಕಾದಂತಹ ಸಿಗರೇಟು ದೊರೆಯದೆ ಚಡಪಡಿಸುತ್ತಿದ್ದಾರೆ. ಅಂಗಡಿ ಬಾಗಿಲು ತೆರೆದೊಡನೆ ಸಿಗರೇಟ್‍ಗಾಗಿ ‘ಧೂಮ ಪ್ರಿಯ’ರು ಲಗ್ಗೆ ಹಾಕುತ್ತಾರಾದರೂ ಪ್ರಸ್ತುತ ಸಿಗರೇಟು ಬೇಡಿಕೆಗೆ ಸರಿಯಾಗಿ ದೊರೆಯುತ್ತಿಲ್ಲ. ಕೆಲವೊಂದು ಅಂಗಡಿಗಳಲ್ಲಿ ಸಿಗರೇಟು ಸಿಗುತ್ತಿದ್ದರೂ ಹಣ ದುಪ್ಪಟ್ಟಾಗಿದೆ. ರೂ. 10 ರ ಸಿಗರೇಟೊಂದಕ್ಕೆ ರೂ. 15 ರಷ್ಟು ಹಣ ನೀಡಬೇಕಾಗಿದೆ. ಇದೇ ರೀತಿ ರೂ. 100 ರ ಪ್ಯಾಕೆಟ್‍ಗೆ ರೂ. 125, ರೂ. 150 ರ ಪ್ಯಾಕೆಟ್‍ಗೆ ರೂ. 175 ರಿಂದ ರೂ. 200 ರಷ್ಟು ಹಣ ನೀಡಬೇಕಾಗಿದೆ. ಕೆಲವರಿಗೆ ಈ ದರಕ್ಕೆ ಸಿಗುತ್ತಿದ್ದರೂ ಬಹುತೇಕರಿಗೆ ತಮ್ಮ ಚಟಕ್ಕೆ ತಕ್ಕಂತೆ ಸಿಗರೇಟು ಸಿಗದೆ ಪರಿತಪಿಸುತ್ತಿದ್ದಾರೆ. ಇದು ಮಾತ್ರವಲ್ಲ ತಮ್ಮದೇ ‘ಬ್ರ್ಯಾಂಡ್’ ಬೇಕೆಂಬ ಮನೋಭಾವವನ್ನು ಬದಿಗಿಟ್ಟು ಸಿಕ್ಕಿದ್ದನ್ನು ಬಾಚಿಕೊಳ್ಳುತ್ತಿದ್ದಾರೆ. ಕೆಲವರು ಸಿಗರೇಟು ಸಿಗದಿದ್ದರೇನು ಬೀಡಿಯಾದರೂ ಸಿಕ್ಕೀತೇ ಎಂದು ಲಭ್ಯವಾಗುವದಕ್ಕೆ ಒಗ್ಗಿಕೊಳ್ಳುತ್ತಿದ್ದಾರೆ. ಗುಟ್ಕಾ ಚಟವಿರುವವರಿಗೂ ದರ ದುಪ್ಪಟ್ಟಾಗಿದೆ. ಕೊರೊನಾ ಹೆಮ್ಮಾರಿ ಈ ರೀತಿಯಾಗಿ ಮದ್ಯ ಪ್ರಿಯರನ್ನು ಮಾತ್ರವಲ್ಲ. ಧೂಮ ಪ್ರಿಯರನ್ನೂ ಗುಟ್ಕಾ ಪ್ರಿಯರನ್ನೂ ಒದ್ದಾಡಿಸುತ್ತಿದೆ.