ಕುಶಾಲನಗರ, ಏ. 22 : ಕಂಟೇನರ್ ಮೂಲಕ ಕಾರ್ಮಿಕರನ್ನು ಸಾಗಿಸುತ್ತಿದ್ದ ಸಂದರ್ಭ ವಾಹನ ಸಹಿತ ಪೆÇಲೀಸರು ವಶಕ್ಕೆ ಪಡೆದುಕೊಂಡ ಘಟನೆ ಕುಶಾಲನಗರದಲ್ಲಿ ನಡೆದಿದೆ. ಸೋಮವಾರಪೇಟೆಯಿಂದ ತಮಿಳುನಾಡಿಗೆ ತೆರಳುತ್ತಿದ್ದ ಕಂಟೇನರ್‍ನಲ್ಲಿ ಈ ಪ್ರಕರಣ ನಡೆದಿದೆ. ತಮಿಳುನಾಡಿನ ಸೇಲಂ ಜಿಲ್ಲೆಯ ವ್ಯಾಪ್ತಿಯ 35 ಮಂದಿ ಕಾರ್ಮಿಕರು ಸೋಮವಾರಪೇಟೆಯ ಯಡವಾರೆಯಲ್ಲಿನ ಕಾಫಿ ತೋಟವೊಂದಕ್ಕೆ ಕೆಲಸಕ್ಕಾಗಿ ಕಳೆದ 3 ತಿಂಗಳ ಹಿಂದೆ ಆಗಮಿಸಿದ್ದರು ಎನ್ನಲಾಗಿದೆ. ಲಾಕ್ ಡೌನ್ ಕಾರಣ ಕಳೆದ 1 ತಿಂಗಳಿನಿಂದ ತೋಟದಲ್ಲಿಯೇ ಉಳಿದಿದ್ದ

(ಮೊದಲ ಪುಟದಿಂದ) ಕಾರ್ಮಿಕರಿಗೆ ಕೆಲಸವೂ ಇಲ್ಲದೆ ಆಹಾರ ಕೊರತೆಯಿಂದ ಮರಳಿ ತಮಿಳುನಾಡಿಗೆ ತೆರಳಲು ಸಾಧ್ಯವಾಗಿರಲಿಲ್ಲ.ಜಿಲ್ಲೆಗೆ ಆಗಮಿಸಿದ್ದ ತಮಿಳುನಾಡು ಮೂಲದ ಪರಿಚಿತರ ಕಂಟೇನರ್ ಮೂಲಕ ತೆರಳಲು ಯೋಜನೆ ರೂಪಿಸುವುದರೊಂದಿಗೆ ಮೈಸೂರಿನತ್ತ ತೆರಳುತ್ತಿದ್ದ ಕಂಟೇನರ್ ಅನ್ನು ಮಂಗಳವಾರ ರಾತ್ರಿ ಜಿಲ್ಲೆಯ ಗಡಿಭಾಗ ಕುಶಾಲನಗರದ ಪೊಲೀಸ್ ತಪಾಸಣಾ ಕೇಂದ್ರದಲ್ಲಿ ತಡೆದು ಪರಿಶೀಲಿಸಿದಾಗ ಈ ಸಾಗಾಟ ಪ್ರಕರಣ ಬೆಳಕಿಗೆ ಬಂದಿದೆ. ಕುಶಾಲನಗರ ಪೊಲೀಸರು ಈ ಬಗ್ಗೆ ವಿಚಾರಣೆ ನಡೆಸಿ ನಂತರ ಈ ಎಲ್ಲಾ ಕಾರ್ಮಿಕರನ್ನು ಮರಳಿ ಯಡವಾರೆ ತೋಟಕ್ಕೆ ಕಳುಹಿಸಲು ಕ್ರಮಕೈಗೊಂಡಿದ್ದಾರೆ. ಕಂಟೇನರ್ ವಶಪಡಿಸಿಕೊಂಡು ಕುಶಾಲನಗರ ಪಟ್ಟಣ ಠಾಣೆಯಲ್ಲಿ ಹೆಚ್ಚಿನ ವಿಚಾರಣೆ ನಡೆದಿದೆ.