ಸೋಮವಾರಪೇಟೆ, ಏ. 22: ಬಿಸಿಲಿನ ಬೇಗೆಯಿಂದಾಗಿ ಅರಣ್ಯದೊಳಗಿನ ವನ್ಯಪ್ರಾಣಿಗಳಿಗೆ ಕುಡಿಯುವ ನೀರು ಹಾಗೂ ಆಹಾರದ ಕೊರತೆ ಎದುರಾಗಿದೆ.

ಅರಣ್ಯದಲ್ಲಿರುವ ಕಾಡಾನೆಗಳಿಗೆ ಕುಡಿಯುವ ನೀರಿನ ಕೊರತೆ ಎದುರಾಗಿರುವದರಿಂದ ಐಗೂರು-ಕಾಜೂರು-ಕೋವರ್‍ಕೊಲ್ಲಿಯಲ್ಲಿರುವ ಟಾಟಾ ಕಾಫಿ ಸಂಸ್ಥೆಗೆ ಸೇರಿದ ಕಾಫಿ ತೋಟಕ್ಕೆ ಹಾಕಲಾಗಿದ್ದ ಸೋಲಾರ್ ಬೇಲಿಯನ್ನು ಕೆಲವು ಭಾಗಗಳಲ್ಲಿ ತೆರವುಗೊಳಿಸಲಾಗಿದೆ.

ಟಾಟಾ ಕಾಫಿ ಸಂಸ್ಥೆಗೆ ಸೇರಿದ ಕಾಫಿ ತೋಟದೊಳಗೆ ಇರುವ ಕೆರೆಗಳಿಂದ ಕಾಡಾನೆಗಳು ಬೇಸಿಗೆಯಲ್ಲಿ ನೀರು ಕುಡಿಯುತ್ತಿದ್ದವು. ಆದರೆ ಕಳೆದೆರಡು ವರ್ಷಗಳ ಹಿಂದೆ ಕಾಜೂರಿನಿಂದ ಕೋವರ್‍ಕೊಲ್ಲಿ ಯವರೆಗೆ ಟಾಟಾ ಕಾಫಿ ತೋಟಕ್ಕೆ ಸೋಲಾರ್ ಬೇಲಿ ಅಳವಡಿಸಲಾ ಯಿತು. ಇದರೊಂದಿಗೆ ಅರಣ್ಯದ ಅಂಚಿನಲ್ಲಿ ಆನೆ ಕಂದಕ ನಿರ್ಮಿಸಿ, ಕಾಡಾನೆಗಳು ರಸ್ತೆ ದಾಟಿ ಇತ್ತ ಕಡೆ ಆಗಮಿಸದಂತೆ ತಡೆಯೊಡ್ಡಲಾಗಿತ್ತು. ಇದರಿಂದಾಗಿ ಕಾಡಾನೆಗಳಿಗೆ ಆಹಾರ ಮತ್ತು ಕುಡಿಯುವ ನೀರಿಗೆ ಸಮಸ್ಯೆಯಾಗಿತ್ತು.

ಇದೀಗ ಬಿರು ಬೇಸಿಗೆಯಾಗಿ ರುವದರಿಂದ ಟಾಟಾ ಕಾಫಿ ಸಂಸ್ಥೆ ಅಳವಡಿಸಿದ್ದ ಸೋಲಾರ್ ಬೇಲಿ ಯನ್ನು ಕೆಲವು ಭಾಗಗಳಲ್ಲಿ ತೆರವುಗೊಳಿಸಲಾಗಿದ್ದು, ಕಾಡಾನೆಗಳು ತೋಟದೊಳಗೆ ತೆರಳಿ ನೀರು ಕುಡಿದು ವಾಪಸ್ ಆಗುತ್ತಿವೆ. ಅರಣ್ಯದ ಅಂಚಿನಲ್ಲಿ ತೆಗೆದಿದ್ದ ಆನೆಕಂದಕಕ್ಕೆ ಮಣ್ಣು ತಳ್ಳಿ ಮರಿಯಾನೆಯನ್ನು ದಾಟಿಸಿಕೊಂಡು ಆನೆಗಳ ಹಿಂಡು ತೋಟದೊಳಗೆ ತೆರಳುತ್ತಿವೆ.

ಕೋವರ್‍ಕೊಲ್ಲಿ-ಐಗೂರು ಮಾರ್ಗದ ಕಾಜೂರು ಜಂಕ್ಷನ್ ವ್ಯಾಪ್ತಿಯಲ್ಲಿ ಕಾಡಾನೆಗಳು ರಸ್ತೆ ದಾಟುತ್ತಿದ್ದು, ಈ ರಸ್ತೆಯಲ್ಲಿ ಸಂಚರಿಸುವ ಸಾರ್ವಜನಿಕರು ಜಾಗ್ರತೆಯಿಂದ ತೆರಳಬೇಕಾಗಿದೆ.