ಚೆಟ್ಟಳ್ಳಿ: ಕೊರೊನಾ ಲಾಕ್‍ಡೌನ್ ನಡುವೆ ಕೆಲಸ ಕಾರ್ಯವಿಲ್ಲದ ಚೆಟ್ಟಳ್ಳಿ ಪಂಚಾಯಿತಿ ವ್ಯಾಪ್ತಿಯ ಸಂಕಷ್ಟದಲ್ಲಿರುವ 115 ಕಾರ್ಮಿಕರಿಗೆ ಚೆಟ್ಟಳ್ಳಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಡೆನ್ನಿ ಬರೋಸ್ ದಾನಿಗಳಿಂದ ದೇಣಿಗೆ ಪಡೆದು ದಿನನಿತ್ಯದ ದಿನಸಿ ಸಾಮಗ್ರಿಗಳನ್ನು ಖರೀದಿಸಿ ನೀಡುವ ಮೂಲಕ ನೆರವಾದರು.

ಚೆಟ್ಟಳ್ಳಿಯ ದಿಯಾ ಫೌಂಡೇಶನ್, ಕಂಬೀರಂಡ ನಿತಿನ್ ಹಾಗೂ ಹಲವರಿಂದ ದೇಣಿಗೆಯನ್ನು ಸಂಗ್ರಹಿಸಿದ ಡೆನ್ನಿ ಬರೋಸ್ ದಿನನಿತ್ಯದ ವಸ್ತುವಾದ ಸಕ್ಕರೆ, ಈರುಳ್ಳಿ, ಬೇಳೆ, ಎಣ್ಣೆ, ಸೋಪು, ಉಪ್ಪು ಹಲವು ಬಗೆಯ ವಸ್ತುಗಳನ್ನು ಖರೀದಿಸಿ 115ಕಿಟ್ ತಯಾರಿಸಿ ಸಂಕಷ್ಟದಲ್ಲಿದ್ದ ಸ್ಥಳೀಯ ಹಾಗೂ ವಲಸೆ ಕಾರ್ಮಿಕರಿಗೆ ನೀಡುವ ಮೂಲಕ ನೆರವಾದರು.

ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನಂದೀಶ್‍ಕುಮಾರ್, ಕಾರ್ಯದರ್ಶಿ ಜಿ. ಮಂಜುಳ, ಸಿಬ್ಬಂದಿಗಳಾದ ಚಂದ್ರ, ಸಾಹಿರ, ಚೆಟ್ಟಳ್ಳಿ ಪೊಲೀಸ್ ಉಪಠಾಣೆ ಸಿಬ್ಬಂದಿಗಳಾದ ಮಧು, ಸಿದ್ದು ಸ್ಥಳೀಯರಾದ ಅಲೆಕ್ಸ್ ಮುಖಾಂತರ ಕಿಟ್ಟನ್ನು ವಿತರಿಸಿದರು.ಸಿದ್ದಾಪುರ: ಬಡ ಜೇನುಕುರುಬರ ಸಂಕಷ್ಟಕ್ಕೆ ಗುಲ್ಬರ್ಗ ವಿಭಾಗದ ಕಾಗಿನೆಲೆ ಮಹಾಸಂಸ್ಥಾನದ ಕನಕ ಗುರು ಶ್ರೀ ಸಿದ್ದರಾಮನಂದ ಮಹಾಸ್ವಾಮಿಗಳು ಅಗತ್ಯ ವಸ್ತುಗಳನ್ನು ನೀಡಿ ಮಾನವೀಯತೆ ಮೆರೆದಿದ್ದಾರೆ.

ಮಾಲ್ದಾರೆ ಸಮೀಪದ ದಿಡ್ಡಳ್ಳಿ ನಿವಾಸಿ ಹಾಗೂ ಆದಿವಾಸಿ ಹೋರಾಟಗಾರ್ತಿ ಜೆ.ಕೆ. ಮುತ್ತಮ್ಮ ಸಿದ್ದರಾಮನಂದ ಸ್ವಾಮಿಗಳ ಬಳಿ ಜಿಲ್ಲೆಯ ಬಡ ಜೇನುಕುರುಬರ ಸಮಸ್ಯೆಗಳನ್ನು ಗಮನಕ್ಕೆ ತಂದರು. ಈ ಹಿನ್ನೆಲೆ ಸ್ವಾಮೀಜಿ ಕೂಡಲೇ ಸ್ಪಂದಿಸಿ ಅಗತ್ಯ ಸಾಮಗ್ರಿಗಳ 600 ಕಿಟ್‍ಗಳನ್ನು ಜಿಲ್ಲೆಗೆ ಕಳಿಸಿಕೊಟ್ಟಿದ್ದಾರೆ.

ಈ ಕಿಟ್‍ಗಳನ್ನು ಜಿಲ್ಲೆಯ ಮಾಲ್ದಾರೆ, ತಟ್ಟಳ್ಳಿ, ದಿಡ್ಡಳ್ಳಿ, ತಿತಿಮತಿಯ ಆನೆಕಾಡು, ಕುಶಾಲನಗರದ ಬಸವನಹಳ್ಳಿ ಭಾಗದ ಜೇನುಕುರುಬ ಕುಟುಂಬಗಳಿಗೆ ಸಿದ್ದರಾಮನಂದ ಸ್ವಾಮೀಜಿಗಳ ಬಳಗದವರು ವಿತರಣೆ ಮಾಡಿದರು. ಈ ಸಂದರ್ಭ ಹೋರಾಟಗಾರ್ತಿ ಜೆ.ಕೆ. ಮುತ್ತಮ್ಮ ಇತರರು ಪಾಲ್ಗೊಂಡಿದ್ದರು.*ಸಿದ್ದಾಪುರ: ಕೊರೊನಾ ಸೋಂಕು ಹರಡದಂತೆ ತಡೆಯಲು ಲಾಕ್ ಡೌನ್ ಆದೇಶ ಜಾರಿಯಲ್ಲಿರುವುದರಿಂದ ಜಿಲ್ಲೆಯ ಮಲೆಯಾಳಿ ಬಂಧುಗಳು ವಿಶು ಹಬ್ಬವನ್ನು ಸರಳ ರೀತಿಯಲ್ಲಿ ಆಚರಿಸಿದರು.

ಕೊಡಗು ಎಸ್‍ಎನ್‍ಡಿಪಿ ಯೂನಿಯನ್ ಪ್ರಮುಖರು ಸಿದ್ದಾಪುರ ಗ್ರಾ.ಪಂ. ವ್ಯಾಪ್ತಿಯ ವಿಕಲಚೇತನರಿಗೆ ದಿನಸಿ ಕಿಟ್, ಪೌಷ್ಟಿಕ ಆಹಾರ ಮತ್ತು ಅಗತ್ಯ ವಸ್ತುಗಳನ್ನು ವಿತರಿಸುವ ಮೂಲಕ ಹಬ್ಬವನ್ನು ಅರ್ಥಪೂರ್ಣಗೊಳಿಸಿದರು.

ಸಿದ್ದಾಪುರ, ಕರಡಿಗೋಡು, ಗುಹ್ಯ, ಹಳೆ ಸಿದ್ದಾಪುರ, ಕರಡಿಗೋಡು, ಅವರೇಗುಂದ, ಕೂಡುಗದ್ದೆ ವ್ಯಾಪ್ತಿಯ 50ಕ್ಕೂ ಹೆಚ್ಚು ಮಂದಿಗೆ ಕಿಟ್ ವಿತರಿಸಲಾಯಿತು. ಎಸ್‍ಎನ್‍ಡಿಪಿ ಅಧ್ಯಕ್ಷ ವಿ.ಕೆ. ಲೋಕೇಶ್, ಉಪಾಧ್ಯಕ್ಷ ಆರ್. ರಾಜನ್, ಸಂಘಟನೆಯ ಪಂಚಾಯಿತಿ ಘಟಕದ ಸದಸ್ಯ ಟಿ.ಸಿ. ನಾರಾಯಣ, ಪ್ರಮುಖರಾದ ಎಂ.ಎ. ಆನಂದ, ಕೆ.ಎಂ. ಮನೋಹರ್, ಗಿರೀಶ್ ಮಟ್ಟಂ, ಎನ್.ಸಿ. ಸಂದೀಪ್ ಮತ್ತಿತರರು ಈ ಸಂದರ್ಭ ಹಾಜರಿದ್ದರು.ಕೂಡಿಗೆ: ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕತ್ತೂರು ಸಮೀಪದ ಬೆಂಡೆಬೆಟ್ಟ ಹಾಡಿಯಲ್ಲಿರುವ 19 ಕುಟುಂಬದವರಿಗೆ ಪಡಿತರ ಕಿಟ್ ವಿತರಣೆ ಮಾಡಲಾಯಿತು.

ಕೂಡಿಗೆ ಕ್ಷೇತ್ರದ ಕೃಷಿ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಮಂಜುಳಾ ವಿತರಿಸಿದರು. ನಂತರ ಮಾತನಾಡಿ, ಕೊರೊನಾ ವೈರಸ್ ಹಿನ್ನೆಲೆ ಸರಕಾರ ಅನೇಕ ಯೋಜನೆಗಳ ಜೊತೆಗೆ ಉಚಿತವಾಗಿ ಪಡಿತರ ಆಹಾರ ಕಿಟ್‍ಗಳನ್ನು ನೀಡುವಂತೆ ಸೂಚನೆ ನೀಡಿದೆ. ಅದರ ಉಪಯೋಗ ಸಮರ್ಪಕವಾಗಿ ಬಳಸಿಕೊಳ್ಳುವ ಮೂಲಕ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವಂತೆ ಮನವಿ ಮಾಡಿದರು. ಈ ಸಂದರ್ಭ ತಾಲೂಕು ಪಂಚಾಯಿತಿ ಸದಸ್ಯ ಗಣೇಶ, ಕೂಡುಮಂಗಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲಕ್ಮಿರವಿ, ಸದಸ್ಯರುಗಳಾದ ಸುರೇಶ್, ದೇವರಾಜ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅಯಿಷಾ ಸೇರಿದಂತೆ ಗ್ರಾಮದ ಪ್ರಮುಖರಾದ ಕುಮಾರಸ್ವಾಮಿ, ಕೃಷ್ಣ, ಹಾಡಿಯ ಪ್ರಮುಖರು ಹಾಜರಿದ್ದರು.