ಹಾಟ್‍ಸ್ಪಾಟ್‍ಗಳಲ್ಲಿ ಲಾಕ್‍ಡೌನ್ ಮುಂದುವರಿಕೆ

ನವದೆಹಲಿ, ಏ. 21: ಆರೆಂಜ್ ವಲಯಗಳಲ್ಲಿ 14 ದಿನಗಳಲ್ಲಿ ಹಾಗೂ ಗ್ರೀನ್ ಜೋನ್‍ಗಳಲ್ಲಿ 28 ದಿನಗಳಲ್ಲಿ ಯಾವುದೇ ಒಂದು ಪ್ರಕರಣಗಳು ಕಂಡುಬಾರದಿದ್ದಲ್ಲಿ ಅಂತಹ ಕಡೆಗಳಲ್ಲಿ ಲಾಕ್‍ಡೌನ್ ಸಡಿಲಿಸುವ ನಿರ್ಧಾರ ಕೈಗೊಳ್ಳುವಂತೆ ರಾಜ್ಯಗಳಿಗೆ ಬರೆದಿರುವ ಪತ್ರದಲ್ಲಿ ಕೇಂದ್ರ ಆರೋಗ್ಯ ಕಾರ್ಯದರ್ಶಿ ಪ್ರೀತಿ ಸುದಾನ್ ತಿಳಿಸಿದ್ದಾರೆ. ಹೆಚ್ಚಿನ ಸಂಖ್ಯೆಯ ಕೊರೊನಾ ವೈರಸ್ ಪ್ರಕರಣಗಳಿಂದಾಗಿ ರೆಡ್‍ಜೊನ್ ಅಥವಾ ಹಾಟ್‍ಸ್ಪಾಟ್‍ಗಳೆಂದು ಜಿಲ್ಲೆಗಳು ಗುರುತಿಸಿರುವ ಪ್ರದೇಶಗಳಲ್ಲಿ ಸೋಂಕಿತರ ಸಂಖ್ಯೆ ದುಪ್ಪಾಟ್ಟಾಗುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಮೇ 3ರ ನಂತರವೂ ಲಾಕ್‍ಡೌನ್ ಮುಂದುವರೆಸುವಂತೆ ಕೋವಿಡ್-19 ನಿರ್ವಹಣೆಗಾಗಿ ರಚನೆಯಾಗಿರುವ ರಾಷ್ಟ್ರೀಯ ಕಾರ್ಯಪಡೆ ಸಲಹೆ ನೀಡಿದೆ. ಪ್ರಸ್ತುತ 20 ರಾಜ್ಯಗಳು ಅಥವಾ ಕೇಂದ್ರಾಡಳಿತ ಪ್ರದೇಶಗಳ 170 ಜಿಲ್ಲೆಗಳು ಹಾಟ್‍ಸ್ಪಾಟ್‍ಗಳೆಂಬ ಹಣೆಪಟ್ಟಿ ಕಟ್ಟಿಸಿಕೊಂಡಿವೆ. ಸ್ಥಳೀಯವಾಗಿ ಕಂಟೈನ್‍ಮೆಂಟ್ ಜೋನ್‍ಗಳೆಂದು ವರ್ಗೀಕರಿಸುವ ಮೂಲಕ ಸೋಂಕು ಹರಡದಂತೆ ಪ್ರಯತ್ನ ನಡೆಸಲಾಗುತ್ತಿದೆ. ಈ 170 ಜಿಲ್ಲೆಗಳಲ್ಲಿ ಹೆಚ್ಚಿನ ಪ್ರಮಾಣದ ಸೋಂಕು ಕಂಡುಬಂದಿರುವ 123 ಜಿಲ್ಲೆಗಳು ಹಾಗೂ ಕ್ಲಸ್ಟರ್‍ಗಳೊಂದಿಗೆ 47 ಜಿಲ್ಲೆಗಳು ಇವೆ. ಹೆಚ್ಚುವರಿಯಾಗಿ 200 ಜಿಲ್ಲೆಗಳಲ್ಲಿ ತಲಾ ಒಂದೊಂದು ಪ್ರಕರಣಗಳು ವರದಿಯಾಗಿವೆ. ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸದಂತೆ ಹಾಟ್‍ಸ್ಪಾಟ್ ಜಿಲ್ಲೆಗಳಲ್ಲಿ ಲಾಕ್‍ಡೌನ್ ಮುಂದುವರೆಸುವಂತೆ ಶಿಫಾರಸು ಮಾಡಲಾಗಿದೆ ಎಂದು ಕೋವಿಡ್-19 ಟಾಸ್ಕ್ ಫೋರ್ಸ್‍ನ ಸದಸ್ಯರೊಬ್ಬರು ತಿಳಿಸಿದ್ದಾರೆ.

ಟೆಸ್ಟ್ ಕಿಟ್‍ಗಳನ್ನು ಬಳಸದಂತೆ ಸೂಚನೆ

ನವದೆಹಲಿ, ಏ. 21: ಕೊವಿಡ್-19 ಟೆಸ್ಟ್ ಬಗ್ಗೆ ಅನುಮಾನ ವ್ಯಕ್ತಪಡಿಸಿ ಹಲವು ದೂರುಗಳು ಬಂದ ಹಿನ್ನೆಲೆಯಲ್ಲೇ ಮುಂದಿನ ಎರಡು ದಿನಗಳ ಕಾಲ ರಾಪಿಡ್ ಯಾಂಟಿಬಾಡಿ ಟೆಸ್ಟ್ ಕಿಟ್‍ಗಳನ್ನು ಬಳಸದಂತೆ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಎಲ್ಲಾ ರಾಜ್ಯಗಳಿಗೆ ಸೂಚನೆ ನೀಡಿದೆ. ಫಲಿತಾಂಶದಲ್ಲಿ ವ್ಯತ್ಯಾಸವಾಗುತ್ತಿದೆ ಎಂಬ ದೂರು ಬಂದ ಹಿನ್ನೆಲೆ ರಾಪಿಡ್ ಟೆಸ್ಟ್ ಕಿಟ್‍ಗಳನ್ನು ಬಳಸದಂತೆ ಐಸಿಎಂಆರ್ ರಾಜ್ಯಗಳಿಗೆ ನಿರ್ದೇಶನ ನೀಡಿದೆ. ಅಲ್ಲದೆ ಎರಡು ದಿನದ ಬಳಿಕ ಈ ಕುರಿತು ಸಲಹೆ ನೀಡುವುದಾಗಿ ತಿಳಿಸಿದೆ. ಇತ್ತೀಚೆಗಷ್ಟೇ ಕೇಂದ್ರ ಸರ್ಕಾರ ಹಾಟ್ ಸ್ಪಾಟ್ ಪ್ರದೇಶಗಳಲ್ಲಿ ರಾಪಿಡ್ ಟೆಸ್ಟ್ ನಡೆಸುವಂತೆ ದೇಶಾದ್ಯಂತ ಐದು ಲಕ್ಷ ರಾಪಿಡ್ ಟೆಸ್ಟ್ ಕಿಟ್‍ಗಳನ್ನು ವಿತರಿಸಿತ್ತು. ಆದರೆ ರಾಜಸ್ಥಾನ ಸೇರಿದಂತೆ ಕೆಲವು ರಾಜ್ಯಗಳಲ್ಲಿ ಚೀನಾದಿಂದ ಬಂದಿರುವ ರಾಪಿಡ್ ಟೆಸ್ಟ್ ಕಿಟ್‍ಗಳ ಗುಣಮಟ್ಟದ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ರಾಜಸ್ಥಾನ ಸರ್ಕಾರ ಐಸಿಎಂಆರ್‍ಗೆ ದೂರು ನೀಡಿತ್ತು. ರಾಜಸ್ಥಾನ ಸರ್ಕಾರ ರಾಪಿಡ್ ಟೆಸ್ಟ್ ಕಿಸ್ಟ್ ಬಳಕೆ ನಿಲ್ಲಿಸಿದೆ. ಕಾರಣ ರಾಪಿಡ್ ಟೆಸ್ಟ್ ಕಿಟ್ ಫಲಿತಾಂಶದ ನಿಖರತೆ ಕೇವಲ ಶೇ.5ರಷ್ಟು ಎಂದು ತಿಳಿಸಿದೆ. ರಾಪಿಡ್ ಟೆಸ್ಟ್ ಕಿಟ್ಸ್ ಬಳಸಿ ಜೈಪುರದ ಸವಾಯಿ ಮಾನ್ ಸಿಂಗ್ ಆಸ್ಪತ್ರೆಯ (ಎಸ್ ಎಂಎಸ್) ವೈದ್ಯರು ಕೋವಿಡ್-19 ರೋಗಿಗಳನ್ನು ಪರೀಕ್ಷಿಸಿದಾಗ ಶೇ.95 ರಷ್ಟು ಪ್ರಕರಣಗಳಲ್ಲಿ ನೆಗೆಟಿವ್ ವರದಿ ನೀಡಿತ್ತು. ಜೈಪುರದ ಎಸ್‍ಎಂಎಸ್ ಆಸ್ಪತ್ರೆಯ ಮೈಕ್ರೊ ಬಯೋಲಜಿ ಮತ್ತು ಮೆಡಿಸಿನ್ ವಿಭಾಗ ಈ ಕಿಟ್ಸ್ ಬಳಸಿ ಕೋವಿಡ್-19 ಸೋಂಕು ದೃಢಪಟ್ಟಿದ್ದ ನೂರು ರೋಗಿಗಳನ್ನು ಪರೀಕ್ಷೆಗೊಳಪಡಿಸಿದ್ದರು. ಆದರೆ ವೈದ್ಯರಿಗೆ ಫಲಿತಾಂಶ ನೋಡಿ ಆಘಾತ ಆಗಿತ್ತು. ಅದಕ್ಕೆ ಕಾರಣ ಕೇವಲ ಐದು ಮಂದಿಗೆ ಮಾತ್ರ ಕೋವಿಡ್-19 ಸೋಂಕು ಪಾಸಿಟಿವ್ ಎಂದು ಫಲಿತಾಂಶ ನೀಡಿ, ಉಳಿದ 95 ಜನರಿಗೆ ನೆಗೆಟಿವ್ ಎಂದು ಫಲಿತಾಂಶ ನೀಡಿತ್ತು. ಹೀಗಾಗಿ ಫಲಿತಾಂಶ ನೈಜತೆಯಿಂದ ಕೂಡಿಲ್ಲ, ಅದರ ನಿಖರತೆಯೂ ಸಮರ್ಪಕವಾಗಿಲ್ಲ ಎಂದು ರಾಜ್ಯದ ಆರೋಗ್ಯ ಸಚಿವ ರಘು ಶರ್ಮಾ ತಿಳಿಸಿದ್ದಾರೆ.

ಜಮೀರ್ ಅಹಮ್ಮದ್ ಶೀಘ್ರ ಕ್ವಾರೆಂಟೈನ್‍ಗೆ

ಬಳ್ಳಾರಿ, ಏ. 21: ಕೋವಿಡ್-19 ಸೋಂಕು ನಿಯಂತ್ರಣ ವಿಚಾರದಲ್ಲಿ ಸಹಕಾರ ನೀಡದೇ ದುರ್ವರ್ತನೆ ತೋರಿರುವ ಹಾಗೂ ಸೋಂಕಿತ ಮಹಿಳೆಯ ಅಂತ್ಯ ಸಂಸ್ಕಾರದಲ್ಲಿ ಭಾಗವಹಿಸಿದ್ದ ಮಾಜಿ ಸಚಿವ, ಚಾಮರಾಜಪೇಟೆ ಶಾಸಕ ಜಮೀರ್ ಅಹಮ್ಮದ್ ಅವರನ್ನು ಶೀಘ್ರ ಕ್ವಾರೆಂಟೈನ್‍ಗೆ ಒಳಪಡಿಸ ಲಾಗುವುದು ಎಂದು ಆರೋಗ್ಯ ಸಚಿವ ಬಿ. ಶ್ರೀರಾಮುಲು ಹೇಳಿದ್ದಾರೆ. ಮಾರ್ಗಸೂಚಿ ಪ್ರಕಾರ ಜಮೀರ್ ಅವರನ್ನು ಕ್ವಾರಂಟೈನ್‍ಗೆ ಒಳಪಡಿಸುವ ಅಗತ್ಯವಿದ್ದು, ಈ ಪ್ರಕ್ರಿಯೆ ಶೀಘ್ರ ಆರಂಭವಾಗಲಿದೆ ಎಂದಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೊನಾ ವೈರಸ್ ನಿಯಂತ್ರಣ ವಿಚಾರದಲ್ಲಿ ಜಾತಿ, ಧರ್ಮ, ಬಡವರು, ಶ್ರೀಮಂತರು ಎಂಬ ಯಾವುದೇ ತಾರತಮ್ಯವಿಲ್ಲ. ಸೋಂಕು ನಿಯಂತ್ರಣವೇ ಎಲ್ಲರ ಗುರಿಯಾಗಬೇಕು. ಇಂತಹ ಸಂದರ್ಭದಲ್ಲಿ ಶಾಸಕ ಜಮೀರ್ ಪಾದರಾಯನಪುರದಲ್ಲಿ ಗಲಾಟೆ ಮಾಡಿದವರ ಪರವಾಗಿ ಮಾತನಾಡಿದ್ದು ಸರಿಯಲ್ಲ ಎಂದರು.

ಮುಸ್ಲಿಮರಿಗೆ ಭಾರತ ಸ್ವರ್ಗವಾಗಿದೆ

ನವದೆಹಲಿ, ಏ. 21: ಮುಸ್ಲಿಮರಿಗೆ ಭಾರತ ಸ್ವರ್ಗವಾಗಿದೆ, ಅವರನ್ನು ‘ದಾರಿ ತಪ್ಪಿಸಲು’ ಪ್ರಯತ್ನಿಸುವವರು ಅವರ ಸ್ನೇಹಿತರಾಗಲು ಸಾಧ್ಯವಿಲ್ಲ ಎಂದು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ಹೇಳಿದ್ದಾರೆ. ಮುಸ್ಲಿಮರ ಹಕ್ಕುಗಳನ್ನು ರಕ್ಷಿಸುವ ದೃಷ್ಟಿಯಿಂದ ತುರ್ತು ಕ್ರಮ ಕೈಗೊಳ್ಳುವಂತೆ ಮತ್ತು ಅವರ ವಿರುದ್ಧದ ದಾಳಿಯ ಘಟನೆಗಳನ್ನು ತಡೆಯುವಂತೆ ಒಐಸಿ (ಆರ್ಗನೈಸೇಶನ್ ಆಫ್ ಇಸ್ಲಾಮಿಕ್ ಕೋಆಪರೇಷನ್) ಭಾರತವನ್ನು ಒತ್ತಾಯಿಸಿದ ನಂತರ ನಖ್ವಿ ಅವರ ಈ ಹೇಳಿಕೆ ಹೊರಬಿದ್ದಿದೆ. ಒಐಸಿಯ ಈ ಟೀಕೆಗೆ ಸಂಬಂಧಿಸಿದ ಪ್ರಶ್ನೆಗೆ ಉತ್ತರಿಸಿದ ನಖ್ವಿ, ಪ್ರಧಾನಿ ನರೇಂದ್ರ ಮೋದಿ ಮಾತನಾಡುವಾಗಲೆಲ್ಲಾ 130 ಕೋಟಿ ಭಾರತೀಯರ ಹಕ್ಕುಗಳು ಮತ್ತು ಕಲ್ಯಾಣದ ಬಗ್ಗೆ ಮಾತನಾಡುತ್ತಾರೆ. ಅವರು ಜನರನ್ನು ಯಾವಾಗಲೂ ಸಮಾನವಾಗಿ ಕಾಣುತ್ತಾರೆ ಎಂದು ಹೇಳಿದರು. ಅಂತಹ ಆರೋಪಗಳನ್ನು ಮಾಡುವ ಜನರಿಗೆ ಇಲ್ಲಿನ ನೈಜತೆಗಳ ಬಗ್ಗೆ ತಿಳಿದಿಲ್ಲ ಎಂದು ಅವರು ತಿರುಗೇಟು ನೀಡಿದ್ದಾರೆ.

ಬಂಟ್ವಾಳದಲ್ಲಿ ಸೋಂಕಿತರ ಸಂಖ್ಯೆ 16

ಮಂಗಳೂರು, ಏ. 21: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ 67 ವರ್ಷ ಪ್ರಾಯದ ವೃದ್ಧೆಯೊಬ್ಬರಿಗೆ ಕೋವಿಡ್-19 ಪಾಸಿಟಿವ್ ಇರುವುದು ದೃಢಪಟ್ಟಿದ್ದು, ಇದರೊಂದಿಗೆ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 16ಕ್ಕೆ ಏರಿಕೆಯಾಗಿದೆ ಎಂದು ರಾಜ್ಯ ಆರೋಗ್ಯ ಇಲಾಖೆ ತಿಳಿಸಿದೆ. ಈ ಬಗ್ಗೆ ಮಂಗಳವಾರ ಬೆಳಿಗ್ಗೆ ಬುಲೆಟಿನ್ ಬಿಡುಗಡೆ ಮಾಡಿರುವ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಬಂಟ್ವಾಳ ತಾಲೂಕಿನ ಬಂಟ್ವಾಳ ಪೇಟೆಯ ವೃದ್ಧೆಗೆ ಕೊರೊನಾ ವೈರಸ್ ಸೋಂಕು ದೃಢಪಟ್ಟಿದೆ. ಈ ಮಹಿಳೆ ಕೊರೊನಾ ವೈರಸ್ ಸೋಂಕಿನಿಂದ ಭಾನುವಾರ ವೆನ್‍ಲಾಕ್ ಆಸ್ಪತ್ರೆಯಲ್ಲಿ ಮೃತಪಟ್ಟ ಬಂಟ್ವಾಳ ಪೇಟೆಯ ಮಹಿಳೆಯ ನೆರೆ ಮನೆಯ ಮಹಿಳೆ ಎಂದು ತಿಳಿದು ಬಂದಿದೆ. ಮೃತ ಮಹಿಳೆಯ ಸಂಪರ್ಕದಿಂದ ಇವರಿಗೂ ಸೋಂಕು ತಗುಲಿರಬಹುದು ಎಂದು ಶಂಕಿಸಲಾಗಿದೆ. ತೀವ್ರ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಈ ಮಹಿಳೆಯನ್ನು ತಾ. 18 ರಂದು ಮಂಗಳೂರು ಕೋವಿಡ್-19 ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಪತ್ರಕರ್ತನ ಕುಟುಂಬಕ್ಕೆ ರೂ. 5 ಲಕ್ಷ ನೆರವು

ಬೆಂಗಳೂರು, ಏ. 21: ಪತ್ರಕರ್ತ ಹನುಮಂತು ನಿಧನಕ್ಕೆ ರಾಮನಗರ ಶಾಸಕಿ ಅನಿತಾ ಕುಮಾರಸ್ವಾಮಿ ಕಂಬನಿ ಮಿಡಿದಿದ್ದಾರೆ. ಅಂತೆಯೇ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಕೂಡ ಕಂಬನಿ ಮಿಡಿದಿದ್ದು, ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಅಪಘಾತದಿಂದ ದುರ್ಮರಣಕ್ಕೀಡಾದ ರಾಮನಗರ ಜಿಲ್ಲೆಯ ಪಬ್ಲಿಕ್ ಟಿವಿ ವರದಿಗಾರ ಹನುಮಂತು ಅವರ ಅಕಾಲ ನಿಧನಕ್ಕೆ ಕಂಬನಿ ಮಿಡಿಯುತ್ತೇನೆ. ಅವರ ಕುಟುಂಬ ವರ್ಗದವರಿಗೆ ದುಃಖ ಭರಿಸುವ ಶಕ್ತಿಯನ್ನು ಕರುಣಿಸಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ. ಹನುಮಂತು ಅವರ ಕುಟುಂಬಕ್ಕೆ 5 ಲಕ್ಷ ರೂಪಾಯಿಗಳ ವೈಯಕ್ತಿಕ ನೆರವು ನೀಡುತ್ತೇನೆ ಎಂದು ಹೇಳಿದ್ದಾರೆ.

ಸಿಂಗಾಪುರ್‍ನಲ್ಲಿ ಜೂ. 1 ರವರೆಗೆ ಲಾಕ್‍ಡೌನ್

ಸಿಂಗಪೂರ್, ಏ. 21: ಕೊರೊನಾ ವೈರಸ್‍ಗೆ ತತ್ತರಿಸಿದ ಸಿಂಗಾಪುರ್‍ನಲ್ಲಿ ಜೂ. 1 ವರೆಗೂ ಲಾಕ್‍ಡೌನ್‍ನ್ನು ವಿಸ್ತರಣೆ ಮಾಡಲಾಗಿದೆ. ನಾಲ್ಕು ವಾರಗಳ ಕಾಲದ ಭಾಗಶಃ ಲಾಕ್‍ಡೌನ್ ಇದಾಗಿರಲಿದ್ದು ಕೊರೊನಾ ವೈರಸ್ ತಡೆಯಲು ಸಹಕಾರಿಯಾಗಲಿದೆ ಎಂದು ಅಲ್ಲಿನ ಪ್ರಧಾನಿ ಹೇಳ್ದಿದಾರೆ. ಏ. 7 ರಿಂದ ಮೇ 4 ವರೆಗೆ ಕಚೇರಿಗಳು, ಶಾಲೆಗಳನ್ನು ಪುನಾರಂಭಿಸಲು ಯೋಜನೆ ರೂಪಿಸಲಾಗಿತ್ತು. ಆದರೆ ಈಗ ಲಾಕ್‍ಡೌನ್ ವಿಸ್ತರಣೆಯಾಗಿದೆ.