ಮಡಿಕೇರಿ, ಏ. 21: ಕೊಡಗು ಜಿಲ್ಲೆಯಲ್ಲಿ ಕೊರೊನಾ ಸೋಂಕಿನ ನಡುವೆಯೂ; ಸಮಗ್ರ ಗಿರಿಜನ ಅಭಿವೃದ್ಧಿ ಇಲಾಖೆಯ ವತಿಯಿಂದ ಸರಕಾರದ ನಿರ್ದೇಶನದಂತೆ 9200ಕ್ಕೂ ಅಧಿಕ ಪರಿಶಿಷ್ಟ ಪಂಗಡಕ್ಕೆ ಸೇರಿದ ಕುಟುಂಬಗಳಿಗೆ ಉಚಿತವಾಗಿ ಪೌಷ್ಟಿಕ ಆಹಾರ ಪೂರೈಕೆ ಕೈಗೊಳ್ಳಲಾಗಿದೆ. ಈ ಮಾಸಾಂತ್ಯಕ್ಕೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಳ್ಳಲಿದ್ದು; ಮುಂದೆ ಮರು ಟೆಂಡರ್ ಕೈಗೊಳ್ಳುವದರೊಂದಿಗೆ ಸರಕಾರದ ನಿರ್ದೇಶನದಂತೆ ಆಹಾರವನ್ನು ಕಲ್ಪಿಸಲಾಗುವದು ಎಂದು ಜಿಲ್ಲಾ ಐಟಿಡಿಪಿ ಅಧಿಕಾರಿ ಶಿವಕುಮಾರ್ ಖಚಿತಪಡಿಸಿದ್ದಾರೆ.ಕೊಡಗಿನಲ್ಲಿ ಗಿರಿಜನ ಕುಟುಂಬಗಳಿಗೆ ಸರಕಾರದಿಂದ ಉಚಿತವಾಗಿ ಪೌಷ್ಟಿಕ ಆಹಾರ ಪೂರೈಕೆ ಕೈಗೊಂಡಿದ್ದು; ಇದುವರೆಗೆ ಯಾವದೇ ಕೊರತೆ ಉಂಟಾಗದಂತೆ ಏಜೆನ್ಸಿ ಮೂಲಕ ಪಡಿತರ ಸಾಮಗ್ರಿಗಳನ್ನು ಹಾಡಿಗಳ ಮಂದಿಯ ಮನೆ ಬಾಗಿಲಿಗೆ ತಲಪಿಸಲಾಗಿದೆ ಎಂದು ಅವರು ‘ಶಕ್ತಿ’ಯೊಂದಿಗೆ ಪ್ರತಿಕ್ರಿಯಿಸಿದ್ದಾರೆ.ಆಹಾರ ಕಿಟ್: ಕೊಡಗಿನಲ್ಲಿ 9247 ಗಿರಿಜನ ಕುಟುಂಬುಗಳನ್ನು ಇದುವರೆಗೆ ಗುರುತಿಸಿದ್ದು; ಮಡಿಕೇರಿ ತಾಲೂಕಿನಲ್ಲಿ 512, ವೀರಾಜಪೇಟೆ ತಾಲೂಕಿನಲ್ಲಿ 6924 ಕುಟುಂಬಗಳು, ಸೋಮವಾರಪೇಟೆ ತಾಲೂಕಿನಲ್ಲಿ 1811 ಕುಟುಂಬಗಳಿದ್ದು; ಈ ಎಲ್ಲರಿಗೆ ಮಾಸಿಕ ಪೌಷ್ಟಿಕ ಆಹಾರ ಕಿಟ್‍ಗಳನ್ನು ಕಳೆದ ನವೆಂಬರ್‍ನಿಂದ ಇದೇ ಏಪ್ರಿಲ್ ಅಂತ್ಯದ ತನಕ ಪೂರೈಸಲು ಕ್ರಮಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಉಚಿತ ಪೂರೈಕೆ : ಪ್ರತಿ ಕುಟುಂಬಕ್ಕೆ 8 ಕೆ.ಜಿ. ಅಕ್ಕಿ, 3 ಕೆ.ಜಿ. ತೊಗರಿಬೇಳೆ, 1 ಕೆ.ಜಿ. ಕಡ್ಲೆಕಾಳು, 1 ಕೆ.ಜಿ. ಕಡ್ಲೆಬೀಜ, 1 ಕೆ.ಜಿ. ಅಲಸಂಡೆ, 1 ಕೆ.ಜಿ. ಹುರುಳಿ ಸೇರಿದಂತೆ ಸಕ್ಕರೆ, ಬೆಲ್ಲ, ಎಣ್ಣೆ, ತುಪ್ಪ, ಕೋಳಿಮೊಟ್ಟೆ ಸರಬರಾಜುಗೊಳಿಸಲಾಗುತ್ತಿದೆ.