ದೇವಾಲಯಗಳಲ್ಲಿ ಅರ್ಚನೆ, ಮಂಗಳಾರತಿ, ಪೂಜೆ, ಪ್ರಾರ್ಥನೆ ನಡೆಯುತ್ತಿದೆ. ಆದರೆ ತೀರ್ಥ ಪ್ರಸಾದ ತೆಗೆದುಕೊಳ್ಳುವವರಿಲ್ಲ, ದೂಪದಾರತಿ ಕಂಪಿಲ್ಲ, ಗಂಧ-ಕುಂಕುಮ ಹಾಕಿಕೊಳ್ಳಲು ಯಾರೂ ಬರುತ್ತಿಲ್ಲ, ಭಕ್ತ ಸಮೂಹದಿಂದ ಗಿಜಿಗುಡುತ್ತಿದ್ದ ಪ್ರಾರ್ಥನಾ ಮಂದಿರಗಳು ಬಿಕೋ ಎನ್ನುತ್ತಿದೆ, ಭಕ್ತರು ಮಾತ್ರ ಕಾಲಿಡುತ್ತಿಲ್ಲ. ಮಸೀದಿಗಳಲ್ಲಿ ಶುಕ್ರವಾರದ ನಮಾಜ್, ಚರ್ಚ್‍ಗಳಲ್ಲಿನ ಭಾನುವಾರದ ಪ್ರಾರ್ಥನೆಗೂ ಜನ ಬರುತ್ತಿಲ್ಲ. ಭಕ್ತರ ಪ್ರತೀ ಮನೆಯೂ ದೇವಾಲಯವಾಗಿ ಪರಿವರ್ತನೆಯಾಗಿದೆ. ಕುಟುಂಬದ ಸದಸ್ಯರೆಲ್ಲರೂ ತಮ್ಮ ಮನೆಯಲ್ಲಿಯೇ ಗುಡಿಗಳನ್ನು ಕಂಡುಕೊಂಡಿದ್ದಾರೆ. ದೇವಾಲಯಗಳಲ್ಲಿ, ಪ್ರಾರ್ಥನಾ ಮಂದಿರಗಳಲ್ಲಿ ದೇವರು ಇದ್ದಾನೆ. ಆದರೆ ಭಕ್ತರೆಲ್ಲಿದ್ದಾರೆ ? ಲಾಕ್‍ಡೌನ್ ಸಂದರ್ಭ ದೇವರು ಕೂಡ ತನ್ನನ್ನು ಮುಖತಾ ಆರಾಧಿಸುವವರೇ ಇಲ್ಲದ ವಿಚಿತ್ರ ಸ್ಥಿತಿ ಎದುರಿಸುವಂತಾಗಿದೆ. ದೇವರೇ.. ನೀನೇಕೆ ನನ್ನಿಂದ ದೂರವಾದೆ ಎಂದು ಸಂಕಷ್ಟದ ಸಮಯಗಳಲ್ಲಿ ಭಕ್ತರು ಕೇಳುತ್ತಿದ್ದದ್ದು ಸಾಮಾನ್ಯವಾಗಿತ್ತು. ಈಗ ಭಕ್ತನೇ ನೀನೇಕೆ ನನ್ನಿಂದ ದೂರವಾದೆ ಎಂದು ದೇವರೇ ಕೇಳುವಂತಾಗಿದೆ.

............

ಕೊಡಗಿನಲ್ಲಿ ಮಾರ್ಚ್, ಏಪ್ರಿಲ್, ಮೇ ತಿಂಗಳಲ್ಲಿ ಗ್ರಾಮೀಣ ದೇವಾಲಯಗಳಲ್ಲಿ ಭಕ್ಕರು ಕಿಕ್ಕಿರಿದು ಸೇರುತ್ತಿದ್ದರು. ಅನೇಕ ಊರುಗಳ ಉತ್ಸವಗಳೂ ಈ ದಿನಗಳಲ್ಲಿ ನಡೆಯುತ್ತಿದ್ದವು. ಆದರೆ, ಕೊರೊನಾ ಮಹಾಮಾರಿಯಿಂದಾಗಿ ಜಿಲ್ಲೆಯ ದೇವಾಲಯಗಳಲ್ಲಿಯೂ ಎಲ್ಲಾ ರೀತಿಯ ಸೇವೆಗಳು, ಉತ್ಸವಗಳಿಗೂ ಲಾಕ್‍ಡೌನ್ ಪರಿಣಾಮ ಬೀರಿದೆ. ಭಕ್ತರಿಂದ ಕೊರೊನಾ ಸೋಂಕು ಹಬ್ಬಬಹುದು ಎಂಬ ಆತಂಕದಿಂದಾಗಿ ಕೊಡಗಿನ ಎಲ್ಲಾ ಧರ್ಮಗಳ ದೇವಾಲಯಗಳನ್ನೂ ಬಂದ್ ಮಾಡಲಾಗಿದೆ. ದೇವರ ದರ್ಶನಕ್ಕೆ, ಪೂಜೆಗೆ ಅವಕಾಶ ನಿರ್ಭಂಧಿಸಲಾಗಿದೆ. ದಿನನಿತ್ಯ ನೂರಾರು ಭಕ್ತರಿಂದ ಪೂಜಿಸಲ್ಪಡುತ್ತಿದ್ದ ನಮ್ಮ ದೇವಾನುದೇವತೆಯರು ಭಕ್ತರ ಸಂಭ್ರಮವಿಲ್ಲದೆ, ಭಕ್ತಿಯ ಸ್ವರೂಪವಿಲ್ಲದೇ ಅನಾಥ ಭಾವದಿಂದ ಇದ್ದಾರೆ.

ಮಡಿಕೇರಿಯ ಪುರಾತನ ಹಿನ್ನಲೆಯ ಶ್ರೀ ಓಂಕಾರೇಶ್ವರನ ಸನ್ನಿಧಿಯಲ್ಲಿ ತ್ರಿಕಾಲ ಪೂಜೆಗಳು ಎಂದಿನಂತೆ ನಡೆಯುತ್ತಿದೆ. ಮೂವರು ಅರ್ಚಕರು ದಿನದಲ್ಲಿ ಎಲ್ಲಾ ರೀತಿಯ ಪೂಜೆಗಳನ್ನೂ ಸಂಪ್ರದಾಯಬದ್ಧವಾಗಿ ನಡೆಸಿಕೊಂಡು ಬರುತ್ತಿದ್ದಾರೆ. ಜಾಗಟೆ, ಗಂಟೆ ಹೊಡೆಯಲಾಗುತ್ತಿದೆ. ಪುಪ್ಪಾರ್ಚನೆ ಮಾಡಲಾಗುತ್ತಿದೆ. ನೈವೇದ್ಯ ಮಾಡಲಾಗುತ್ತಿದೆ. ಆದರೆ ಈ ಎಲ್ಲಾ ಶಾಸ್ತ್ರಗಳನ್ನು ದೇವಾಲಯದ ಗರ್ಭಗುಡಿಯಲ್ಲಿ ಅರ್ಚಕರು ಮುಚ್ಚಿದ ಬಾಗಿಲಿನೊಳಗೆ ಮಾಡುವಂತಾಗಿದೆ. ದೇವಾಲಯದ ಬೃಹತ್ ಬಾಗಿಲೇ ಮುಚ್ಚಿದೆ. ಅರ್ಚಕರೇ ದೇವಾಲಯದ ಹಿಂಬದಿಯ ಬಾಗಿಲಿನಿಂದ ಬಂದು ಪೂಜೆ ಸಲ್ಲಿಸುತ್ತಿದ್ದಾರೆ.

ಇಂಥ ಪರಿಸ್ಥಿತಿಯನ್ನು ಯಾರೂ ನಿರೀಕ್ಷಿಸಿರಲಿಲ್ಲ. ದಿನನಿತ್ಯ ವಿವಿಧ ಪೂಜೆಗಳಿಗಾಗಿ ದೇವಾಲಯದಲ್ಲಿ ಸಾಲಿನಲ್ಲಿ ಭಕ್ತರು ನಿಂತಿರುತ್ತಿದ್ದರು. ಈಗ ಯಾರೂ ಬಾರದಂತಾಗಿದೆ. ನಾನೇ ಜಾಗಟೆ ಹೊಡೆದು ನಾನೇ ಪೂಜೆ ಸಲ್ಲಿಸುತ್ತಿದ್ದೇನೆ ಎಂದವರು ಮಡಿಕೇರಿಯ ಶ್ರೀ ಆಂಜನೇಯ ದೇವಾಲಯದ ಅರ್ಚಕ ಸಂತೋಷ್‍ಭಟ್. ಯುಗಾದಿಯಂಥ ಹೊಸವರ್ಷಾಚರಣೆಯೂ ಭಕ್ತರಿಲ್ಲದ ದೇವಾಲಯಗಳಲ್ಲಿ ಪೂಜೆಗೆ ಮಾತ್ರ ಸೀಮಿತವಾಗಿ ನಡೆದಿದೆ. ಶ್ರೀರಾಮನವಮಿ, ಶ್ರೀ ಹನುಮಜಯಂತಿ ಕೂಡ ಮನೆಯಲ್ಲಿಯೇ ಭಕ್ತರು ಆಚರಿಸಿಯಾಗಿದೆ. ಶ್ರೀ ಓಂಕಾರೇಶ್ವರ, ಶ್ರೀ ಆಂಜನೇಯ, ಶ್ರೀ ಕೋಟೆ ಮಹಾಗಣಪತಿ ದೇವಾಲಯಗಳಲ್ಲಿ ಮಹಾಪೂಜೆ ನಿತ್ಯದಂತೆ ಸಾಗಿದೆ. ಸಂಕಷ್ಟಿ ಪೂಜೆ, ಸತ್ಯನಾರಾಯಣ ಪೂಜೆ ಸೇರಿದಂತೆ ಮುಖ್ಯ ಸೇವೆಗಳು ನಡೆಯುತ್ತಿಲ್ಲ. ಇದರಿಂದಾಗಿ ದೇವಾಲಯಕ್ಕೆ ಬರುತ್ತಿದ್ದ ವರಮಾನವೂ ತೀವ್ರವಾಗಿ ಕುಸಿದಿದೆ. ಸಾಮಾನ್ಯವಾಗಿ ಮೂರು ತಿಂಗಳಲ್ಲಿ ದೇವಾಲಯಕ್ಕೆ 4-5 ಲಕ್ಷ ಆದಾಯ ಬರುತ್ತಿತ್ತು ಎಂದು ಮಾಹಿತಿ ನೀಡಿದ ಶ್ರೀ ಓಂಕಾರೇಶ್ವರ ದೇವಾಲಯ ಸಮಿತಿ ಅಧ್ಯಕ್ಷ ಪುಲಿಯಂಡ ಜಗದೀಶ್, ದೇವಾಲಯಕ್ಕೆ ಸೇರಿದ 4 ಗೋವುಗಳನ್ನು ದಿನನಿತ್ಯ ಆಹಾರ ನೀಡಿ ಆರೈಕೆ ಮಾಡುತ್ತಿದ್ದೇವೆ ಎಂದರು. ಮಧ್ಯಾಹ್ನದ ಮಹಾಪೂಜೆಯನ್ನು ತಂತ್ರಿಗಳ ಅನುಮತಿಯೊಂದಿಗೆ ಬೆಳಗ್ಗಿನ ಪೂಜೆ ಆದ ಕೆಲವೇ ಹೊತ್ತಿನಲ್ಲಿ ನೆರವೇರಿಸ ಲಾಗುತ್ತಿದೆ ಎಂದೂ ಜಗದೀಶ್ ತಿಳಿಸಿದರು. ಕಾವೇರಿ ಉಗಮತಾಣ ತಲಕಾವೇರಿ, ಭಗಂಡಕ್ಷೇತ್ರವಾದ ಭಾಗಮಂಡಲ ಕೂಡ ಭಕ್ತರನ್ನು ಕಾಣದೇ ತಿಂಗಳಾಗಿದೆ. ಕಾವೇರಿ ಕ್ಷೇತ್ರದಲ್ಲಿ ಭಕ್ತರಿಲ್ಲದೇ ನೀರವಮೌನ ಆವರಿಸಿದೆ. ಮಹಾಮಳೆಯ ಸಂದರ್ಭವೂ ಹತ್ತಾರು ಭಕ್ತರು ಇಲ್ಲಿಗೆ ಬರುತ್ತಿದ್ದರು. ಆದರೀಗ ಕ್ಷೇತ್ರದಲ್ಲಿ ಅರ್ಚಕರನ್ನು ಬಿಟ್ಟರೆ ದಿನವಿಡೀ ಯಾರೂ ಕಾಣುತ್ತಿಲ್ಲ ಎಂದು ಮುಜರಾಯಿ ಇಲಾಖೆಯ ವ್ಯವಸ್ಥಾಪಕ ಜಗದೀಶ್ ಬೇಸರದಿಂದಲೇ ಹೇಳಿಕೊಂಡರು. ಸೋಂಕು ತಗುಲೀತು ಎಂಬ ಮುನ್ನೆಚ್ಚರಿಕೆಯಾಗಿ ಓಂಕಾರೇಶ್ವರನ ಸನ್ನಿಧಿಯಲ್ಲಿ ಮೊದಲೇ ಗಂಧಕುಂಕುಮ ನಿಷೇಧಿಸಲಾಗಿತ್ತು. ದೇವಾಲಯದ ಬ್ರಹ್ಮಕಲಶೋತ್ಸವಕ್ಕೂ ಎಲ್ಲಾ ಸಿದ್ದತೆ ಕೈಗೊಂಡಿದ್ದೆವು. ಆದರೆ ಅದೂ ಮುಂದೂಡಲ್ಪಟ್ಟಿದೆ ಎಂದರು ಜಗದೀಶ್.

ಜಿಲ್ಲೆಯ ಇರ್ಪು ಶ್ರೀ ರಾಮೇಶ್ವರ, ಪಾಡಿ ಶ್ರೀ ಇಗ್ಗುತ್ತಪ್ಪ, ಪಾಲೂರು ಶ್ರೀ ಮಹಾಲಿಂಗೇಶ್ವರ, ಪಾಲೂರು ಶ್ರೀ ಅಗಸ್ತ್ಯೇಶ್ವರ ಹರಿಶ್ಚಂದ್ರ, ಮಡಿಕೇರಿಯ ರಾಜರ ಗದ್ದುಗೆ, ಸೇರಿದಂತೆ ಎಲ್ಲಾ ಮುಜರಾಯಿ ದೇವಾಲಯಗಳಲ್ಲಿಯೂ ದೈನದಿಂದ ಪೂಜೆಯನ್ನು ಭಕ್ತರ ಹೊರತಾಗಿ ಅರ್ಚಕರೇ ನೆರವೇರಿಸುತ್ತಿದ್ದಾರೆ. ಇದು ಖಂಡಿತಾ ಮುಂದಿನ ಭಾರೀ ದುರಂತದ ಮುನ್ಸೂಚನೆ ಎಂಬಂತಿದೆ. ದೇವತಾ ಕಾರ್ಯಗಳಿಗೆ ಭಕ್ತರೇ ಪ್ರಧಾನ. ಆದರೀಗ ಭಕ್ತರೇ ಇಲ್ಲದೇ ದೇವತಾ ಪೂಜೆಗಳು ನಡೆಯುತ್ತಿದೆ. ನಾನೆಂದೂ ಇಂಥ ಘಟನೆ ಕೇಳಿಲ್ಲ ಎಂದವರು ತಲಕಾವೇರಿ ದೇವಾಲಯದ ಪ್ರಧಾನ ಅರ್ಚಕರಾದ ಟಿ.ಎಸ್. ನಾರಾಯಣಾಚಾರ್. ತಲಕಾವೇರಿ, ಭಾಗಮಂಡಲಗಳಲ್ಲಿ ದೇವರಿಗೆ ನಿತ್ಯ ಅಭಿಷೇಕ ಪೂಜೆಗಳು ಸಾಂಗವಾಗಿ ನೆರವೇರುತ್ತಿದೆ. ಭಗಂಡೇಶ್ವರನಲ್ಲಿ ಗ್ರಾಮಸ್ಥರು ಕೊರೊನಾ ಮಹಾಮಾರಿ ತೊಲಗಲಿ ಎಂದು ವಿಶೇಷ ಪೂಜೆ ಕೂಡ ಸಲ್ಲಿಸಿದ್ದಾರೆ. ಸದ್ಯಕ್ಕೆ ಇಡೀ ಜಗತ್ತಿಗೇ ಕಾರ್ಗತ್ತಲು ಕವಿದಂತಾಗಿದ್ದು, ದೇವರೇ ವಿಳಂಭರಹಿತ ವಾಗಿ ಕಂಟಕ ನಿವಾರಣೆಯ ಬೆಳಕು ತೋರಬೇಕು. ಏನೇ ಹೇಳಿ ದೇಶದಲ್ಲಿ ಭಕ್ತರೇ ಇಲ್ಲದೇ ದೇವರಿಗೆ ಪೂಜೆ ಪುನಸ್ಕಾರ ಸಲ್ಲುತ್ತಿರುವುದು ಶುಭಸೂಚನೆ ಯಲ್ಲ ಎಂದೂ ನಾರಾಯಣಾಚಾರ್ ಕಳವಳದಿಂದಲೇ ಹೇಳಿದರು.

............

ಕೊಡಗಿನಾದ್ಯಂತ ವಿವಿಧ ಪಂಗಡಗಳಿಗೆ ಸೇರಿದ 34 ಚರ್ಚ್ ಗಳಿವೆ. ಗುಡ್‍ಫ್ರೈಡೇ, ಈಸ್ಟರ್‍ಗಳನ್ನು ಮೊತ್ತ ಮೊದಲ ಬಾರಿಗೆ ಈ ಚರ್ಚ್‍ಗಳಲ್ಲಿ ಭಕ್ತರು ಆಚರಿಸಿಲ್ಲ. ಪ್ರತೀ ಭಾನುವಾರ ಮನೆ ಹತ್ತಿರದ ಚರ್ಚ್‍ಗಳಿಗೆ ಸಂಭ್ರಮ ದಿಂದ ಹೆಜ್ಜೆ ಹಾಕುತ್ತಿದ್ದ ಕ್ರೈಸ್ತ ಸಮುದಾಯದವರೂ ಮನೆಯಲ್ಲಿಯೇ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ. ಮನೆಯನ್ನೇ ದೇವಾಲಯವಾಗಿ ಸ್ವೀಕರಿಸಲಾಗಿದೆ. ಕೊಡಗಿನ ಕೆಲವು ಧರ್ಮಗುರುಗಳು ನೀಡುವ ಪ್ರಾರ್ಥನಾ ಸಂದೇಶಗಳನ್ನು ಮಡಿಕೇರಿಯ ಕೇಬಲ್ ಟಿವಿ ವಾಹಿನಿಗಳು, ವಾಟ್ಸಪ್ ಮೂಲಕವೂ ಭಕ್ತರಿಗೆ ತಲುಪಿಸಲಾಗು ತ್ತಿದೆ. ವಿಶ್ವಗುರು ಪೆÇೀಪ್ ಮತ್ತು ವಿವಿಧ ಧರ್ಮಾಧ್ಯಕ್ಷರ ಸಂದೇಶಗಳನ್ನು ಯುಟ್ಯೂಬ್ ಮೂಲಕ ಜಿಲ್ಲೆಯ 26 ಸಾವಿರದಷ್ಟು ಕ್ರೈಸ್ತರಿಗೆ ತಲುಪಿಸಲಾಗುತ್ತಿದೆ ಎಂದು ಕೊಡಗು ಕ್ರೈಸ್ತ ಸೇವಾ ಸಂಘದ ಜಿಲ್ಲಾಧ್ಯಕ್ಷ ಕೆ.ಟಿ.ಬೇಬಿ ಮ್ಯಾಥ್ಯು ಮಾಹಿತಿ ನೀಡಿದರು. ಚರ್ಚ್ ಬಾಗಿಲು ಹಾಕಿ ಪೂಜೆ ನೆರವೇರಿಸಿದ ಉದಾಹರಣೆಯೇ ಇಲ್ಲ ಎಂದು ಹಿರಿಯರೂ ಹೇಳುತ್ತಾರೆ. ಆದರೀಗ ಲಾಕ್‍ಡೌನ್ ನಿಂದಾಗಿ ಚರ್ಚ್‍ಗಳಲ್ಲಿ ಮುಚ್ಚಿದ ಬಾಗಿಲಿನೊಳಗೆ ಆಯಾ ಚರ್ಚ್ ಧರ್ಮಗುರುಗಳು ಮತ್ತು ಸಹಾಯಕರು ಸಾಂಪ್ರದಾಯಿಕ ಪ್ರಾರ್ಥನೆ ಸಲ್ಲಿಸಿ ಕೊರೊನಾ ಸಂಕಷ್ಟ ನಿವಾರಣೆಯಾಗಲಿ, ವಿಶ್ವಕ್ಕೇ ಶಾಂತಿ ದೊರಕಲಿ ಎಂದು ಪ್ರಾರ್ಥಿಸುತ್ತಿ ದ್ದಾರೆ ಎಂದು ಬೇಬಿ ಮ್ಯಾಥ್ಯು ತಿಳಿಸಿದರು. ಚರ್ಚ್‍ಗಳ ಒಳಗೂ ಹೊರಗೂ ಮೊದಲಿನ ಸಂಭ್ರಮ, ಸಡಗರವಿಲ್ಲದೇ ತಿಂಗಳು ಕಳೆದಿದೆ.

........

ಕೊಡಗಿನಲ್ಲಿ ಇದೇ ಶುಕ್ರವಾರ ಅಥವಾ ಶನಿವಾರದಿಂದ ಮುಸಲ್ಮಾನರ ಪವಿತ್ರವಾದ ರಂಜಾನ್ ಹಬ್ಬ ಪ್ರಾರಂಭವಾಗಲಿದೆ. ಆದರೆ, ರಂಜಾನ್ ಸಂದರ್ಭ ಸಂಜೆ ಪ್ರಾರ್ಥನೆಗಾಗಿ ಮಸೀದಿಗಾಗಿ ಈ ಬಾರಿ ತೆರಳುವಂತಿಲ್ಲ. ಮನೆಯಲ್ಲಿಯೇ ರಂಜಾನ್ ಪ್ರಾರ್ಥನೆಗೆ ಮುಸಲ್ಮಾನರು ಸಿದ್ದಗೊಳ್ಳುತ್ತಿದ್ದಾರೆ. ಕೊಡಗು ಜಿಲ್ಲೆಯಲ್ಲಿನ 164 ಮಸೀದಿಗಳಲ್ಲಿ ಕೂಡ ಈಗ ಶುಕ್ರವಾರದ ನಮಾಜ್ ಜನರಿಂದ ಸಾಮೂಹಿಕವಾಗಿ ನಡೆಯುತ್ತಿಲ್ಲ. ಆಯಾ ಮಸೀದಿಯ ಗುರುಗಳು, ಸಹಾಯಕರು ಮಾತ್ರ ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ. ಮಹಿಳೆಯರೂ ಒಳಗೊಂಡಂತೆ ಜಿಲ್ಲೆಯಲ್ಲಿನ 1 ಲಕ್ಷದಷ್ಟು ಮುಸಲ್ಮಾನರು ರಂಜಾನ್‍ಗೆ ಸಿದ್ದರಾಗುತ್ತಿದ್ದು, 60 ಸಾವಿರ ಪುರುಷರು ಮಸೀದಿಗೆ ತೆರಳದೇ ಮನೆಯಲ್ಲಿಯೇ ಪ್ರಾರ್ಥನೆ ಸಲ್ಲಿಸಲು ಮುಂದಾಗುತ್ತಿದ್ದಾರೆ. ಕೊರೊನಾ ಸೋಂಕಿನಿಂದ ನಾಡು ಮುಕ್ತಿಯಾಗಲಿ ಎಂಬ ಆಶಯವೂ ಈ ಸಲದ ರಂಜಾನ್ ಪ್ರಾರ್ಥನೆಯಲ್ಲಿರುತ್ತದೆ ಎಂದು ಕೊಡಗು ಜಿಲ್ಲಾ ವಕ್ಫ್ ಮಂಡಳಿ ಅಧ್ಯಕ್ಷ ಕೆ.ಎ.ಯಾಕೂಬ್ ಹೇಳಿದರು.

ಕೊನೇ ಹನಿ.

......

ದೇವಾಲಯ, ಚರ್ಚ್‍ಗಳಲ್ಲಿ ಪೂಜಾವೇಳೆಗೆ ಗಂಟೆಗಳು ಮೊಳಗುತ್ತಿದೆ. ಮಸೀದಿಗಳಲ್ಲಿ ಬಾಂಗ್ ಕೇಳಿಬರುತ್ತಿದೆ. ಎಲ್ಲಾ ಧರ್ಮಗಳ ಪ್ರಾರ್ಥನಾ ಮಂದಿರಗಳಲ್ಲಿ ದೈವ ನೆಲೆಯಿದೆ. ಆದರೆ, ದೈವಾನುಗ್ರಹಕ್ಕಾಗಿ ಪ್ರಾರ್ಥನಾ ಮಂದಿರಗಳನ್ನು ಆಶ್ರಯಿಸುತ್ತಿದ್ದ ಭಕ್ತಸ್ತೋಮ ಮಾತ್ರ ಎಲ್ಲಾ ಧರ್ಮೀಯರ ಮಂದಿರಗಳಿಂದ ದೂರವಾಗಿದ್ದಾರೆ.

ಕೊರೊನಾ ತಂದ ಲಾಕ್‍ಡೌನ್ ಸಂಕಷ್ಟ ವಿವಿಧ ಧರ್ಮೀಯರ ದೇವರನ್ನೂ ಬಿಟ್ಟಿಲ್ಲ. ಜಗತ್ತಿನಾದ್ಯಂತ ಹಲವಾರು ಧರ್ಮಗಳ ದೇವಾನುದೇವತೆಯರು ಬೇರೇ ಬೇರೆಯಾಗಿರಬಹುದು. ಆದರೆ ಜೀವಕ್ಕೇ ಕುತ್ತು ತಂದಿರುವ ವೈರಸ್ ಮಾತ್ರ ಒಂದೇ, ಅದುವೇ... ಕೋವಿಡ್ 19 !.